ನಗರದಲ್ಲಿ ಯಡಿಯೂರಪ್ಪ ಬಡಾವಣೆ

7

ನಗರದಲ್ಲಿ ಯಡಿಯೂರಪ್ಪ ಬಡಾವಣೆ

Published:
Updated:

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಸರಿನಲ್ಲಿ ಶಿವಮೊಗ್ಗ ನಗರದಲ್ಲಿ ಹೊಸ ಬಡಾವಣೆಯನ್ನು ನಿರ್ಮಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಪ್ರಕಟಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಶನಿವಾರ ಹಮ್ಮಿಕೊಂಡಿದ್ದ ಶಿವಮೊಗ್ಗ ನಗರದ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.ಶಿವಮೊಗ್ಗ ನಗರ ಸಮೀಪದ ಗೋವಿಂದಪುರದಲ್ಲಿ 48 ಎಕರೆ ಭೂಮಿ ಗುರುತಿಸಿದ್ದು, ರೂ 7 ಕೋಟಿ ವೆಚ್ಚದಲ್ಲಿ ಬಡವಾಣೆ ನಿರ್ಮಿಸಲಾಗುತ್ತಿದೆ. ಇದಕ್ಕೆ ಮೂಲಸೌಕರ್ಯಗಳನ್ನು  ಕಲ್ಪಿಸಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರು ನಾಮಕಾರಣ ಮಾಡಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಬಡಾವಣೆಗೆ ಸಂಬಂಧಿಸಿದ ದಾಖಲಾತಿಗಳನ್ನು ಶಾಸಕ ಕೆ.ಎಸ್. ಈಶ್ವರಪ್ಪ ಅವರಿಗೆ ಹಸ್ತಾಂತರಿಸಿದ ಸಚಿವ ಸೋಮಣ್ಣ, ಶಿವಮೊಗ್ಗದ ಎಲ್ಲಾ ಕೊಳಚೆ ಪ್ರದೇಶದ ನಿವಾಸಿಗಳಿಗೆ ಒಂದೂವರೆ ತಿಂಗಳಲ್ಲಿ ನಿವೇಶನ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದಲ್ಲದೆ, ಗುಣಮಟ್ಟದ ಮನೆ ನಿರ್ಮಿಸಿಕೊಡಲಾಗುವುದು ಎಂದರು.ಸಮಾರಂಭ ಉದ್ಘಾಟಿಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮಾತನಾಡಿ, ನಿರ್ಮಲ ಜ್ಯೋತಿ ಯೋಜನೆಯಡಿಯಲ್ಲಿ ಶಿವಮೊಗ್ಗ ನಗರದ 28 ಕೊಳಚೆ ಪ್ರದೇಶಗಳಿಗ್ಙೆ  6.6 ಕೋಟಿ ವೆಚ್ಚದಲ್ಲಿ ಮೂಲ ಸೌಲಭ್ಯ ಒದಗಿಸಲಾಗಿದೆ. ಉಳಿದ 20 ಕೊಳಚೆ ಪ್ರದೇಶಗಳ 5 ಸಾವಿರ ಮನೆಗಳಿಗೆ ಮೂಲ ಸೌಲಭ್ಯ ಒದಗಿಸಲು ್ಙ  20 ಕೋಟಿ ಅನುದಾನವನ್ನು ಆದ್ಯತೆ ಮೇಲೆ ಒದಗಿಸಲಾಗುವುದು ಎಂದು ಹೇಳಿದರು.

ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಯಾವುದೇ ಒಂದು ಯೋಜನೆ ಆರಂಭಿಸುವುದು ಸುಲಭ. ಆದರೆ, ಅದನ್ನು ಅಂತ್ಯ ಕಾಣಿಸಬೇಕು. ಉದಾಹರಣೆಗೆ ಕೊಳಚೆ ನಿರ್ಮೂಲನೆ ಯೋಜನೆಯನ್ನು ಕಾಲಮಿತಿಯಲ್ಲಿ ಕೈಗೊಂಡು ಹಣ, ಸಿಬ್ಬಂದಿ ಕೊರತೆಯಾಗದಂತೆ ಪೂರ್ಣಗೊಳಿಸಲು ಶ್ರಮಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ಮಾಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆ.ಎಸ್. ಈಶ್ವರಪ್ಪ ಮಾತನಾಡಿ, ನಗರದ ಎಲ್ಲಾ ಕೊಳಚೆ ಪ್ರದೇಶದ ನಿವಾಸಿಗಳಿಗೂ ಹಕ್ಕುಪತ್ರ ವಿತರಿಸಲಾಗುವುದು. ಈ ಬಗ್ಗೆ ಯಾವುದೇ ಸಂಶಯಬೇಡ ಎಂದ ಅವರು, ಒಂದು ಮನೆಗೆ ರೂ3.35 ಲಕ್ಷ  ವೆಚ್ಚವಾಗುತ್ತಿದ್ದು, ಇದರಲ್ಲಿ ಫಲಾನುಭವಿಯು ರೂ  35 ಸಾವಿರ  ಭರಿಸಬೇಕೆಂದು ತಿಳಿಸಿದರು.ಪ್ರಾಸ್ತಾವಿಕ ಮಾತನಾಡಿದ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಘೋಷಿತ 48 ಕೊಳಚೆ ಪ್ರದೇಶಗಳಲ್ಲಿ 7,087 ಕುಟುಂಬಗಳಿದ್ದು, ಸುಮಾರು 34,718 ಜನರು ವಾಸಿಸುತ್ತಿದ್ದಾರೆ. ನಗರದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ವಿವಿಧ ವಸತಿ ಯೋಜನೆ ಅಡಿಯಲ್ಲಿ ಈಗಾಗಲೇ 1,091 ಮನೆಗಳನ್ನು ನಿರ್ಮಿಸಲಾಗಿದ್ದು, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದರು.ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಮಾತನಾಡಿದರು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಜೆ. ನರಸಿಂಹಸ್ವಾಮಿ, ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಶಾಸಕ ಕೆ.ಜಿ. ಕುಮಾರಸ್ವಾಮಿ, ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಜಿ.ಪಂ. ಅಧ್ಯಕ್ಷರಾದ ಶುಭಾಕೃಷ್ಣಮೂರ್ತಿ, ಸೂಡಾ ಅಧ್ಯಕ್ಷ ಎಸ್. ದತ್ತಾತ್ರಿ, ಕಾಡಾ ಅಧ್ಯಕ್ಷ ಕೆ. ಶೇಖರಪ್ಪ, ನಗರ ಆಶ್ರಯ ಸಮಿತಿ ಅಧ್ಯಕ್ಷ ಅನಂತಶಾಸ್ತ್ರಿ, ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಸಂಜಯ್ ಬಿಜ್ಜೂರ್ ಮತ್ತಿತರರು ಉಪಸ್ಥಿತರಿದ್ದರು.ಆಯನೂರು ಗರಂ!

ಆಹ್ವಾನ ಇಲ್ಲದೇ ಕಾರ್ಯಕ್ರಮಕ್ಕೆ ಬಂದಿದ್ದೇನೆ; ನಮ್ಮ ನಾಯಕರ ಮೇಲಿನ ಗೌರವಕ್ಕೆ. ಬಡವರಿಗೆ ಹಕ್ಕುಪತ್ರ ನೀಡುವ ಕಾರಣಕ್ಕೆ ಇಲ್ಲಿದ್ದೇನೆ~ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ತಮ್ಮ ಚುಟುಕು ಭಾಷಣದಲ್ಲಿ ತಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದ ಆಯೋಜಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಈ ಲೋಪ ಕುರಿತಂತೆ ಯಡಿಯೂರಪ್ಪ ಅವರ ಗಮನಕ್ಕೂ ತಂದ ಅವರು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ವೇದಿಕೆಯಲ್ಲಿ ತರಾಟೆ ತೆಗೆದುಕೊಳ್ಳುತ್ತಿರುವುದು ಕಂಡುಬಂತು. ಈ ಹಿಂದೆ ಕೂಡ ನಗರದ ಕಾರ್ಯಕ್ರಮವೊಂದರಲ್ಲಿ, ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಸಂಸತ್ ಸದಸ್ಯರಿಗಿಂತ ಕೆಳಗೆ ಹಾಕಲಾಗಿದೆ ಎಂದು ಪ್ರಸ್ತಾಪಿಸಿದ್ದರಲ್ಲದೆ, ಇದು ಪದೇ ಪದೇ ಆಗುತ್ತಿದೆ ಎಂದು ಹೇಳಿ ಅಧಿಕಾರಿಗಳ ವಿರುದ್ಧ ಆಯನೂರು ಅಸಮಾಧಾನ ವ್ಯಕ್ತಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry