ಭಾನುವಾರ, ಜೂನ್ 13, 2021
21 °C

ನಗರದಲ್ಲಿ ವರ್ಷಕ್ಕೆ 76 ಸಾವಿರ ಟನ್ ಇ-ತ್ಯಾಜ್ಯ ಉತ್ಪತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಜಾಗತೀಕರಣ ಮತ್ತು ತಂತ್ರಜ್ಞಾನದ ಶೀಘ್ರ ಬೆಳವಣಿಗೆಯಿಂದ ದೇಶದಲ್ಲಿ ಇ-ತ್ಯಾಜ್ಯದ ಪ್ರಮಾಣ ತ್ವರಿತಗತಿಯಲ್ಲಿ ಹೆಚ್ಚಾಗಿದ್ದು, ನಗರ ಒಂದರಲ್ಲೇ ಪ್ರತಿವರ್ಷ 76 ಸಾವಿರ ಟನ್ ಇ-ತ್ಯಾಜ್ಯ ಉತ್ಪತ್ತಿಯಾಗುತ್ತಿದೆ~ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ  ಎ.ಎಸ್.ಸದಾಶಿವಯ್ಯ ಹೇಳಿದರು.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶನಿವಾರ `ಕೇಂದ್ರ ಸರ್ಕಾರ ಇ-ತ್ಯಾಜ್ಯದ ಬಳಕೆ ಹಾಗೂ ಮರುಉಪಯೋಗ ಕುರಿತಂತೆ ತಂದಿರುವ ನೂತನ ನಿಯಮದ~ ಕುರಿತು ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಇ-ತ್ಯಾಜ್ಯದ ಕುರಿತು ಕೇಂದ್ರ ಸರ್ಕಾರ ತಂದಿರುವ ನೂತನ ಕಾನೂನು ವಿದ್ಯುನ್ಮಾನ ಉಪಕರಣಗಳ ಉತ್ಪಾದಕರು, ಬಳಕೆದಾರರು, ಖರೀದಿದಾರರು ಹಾಗೂ ಮರುಬಳಕೆದಾರರಿಗೆ ಅನ್ವಯಿಸುತ್ತದೆ~ ಎಂದು ತಿಳಿಸಿದರು.ದುರಸ್ತಿಯಾಗದ ವಿದ್ಯುನ್ಮಾನ ಉಪಕರಣಗಳಾದ ಕಂಪ್ಯೂಟರ್, ಟಿವಿ, ಫ್ರಿಡ್ಜ್, ಮೊಬೈಲ್, ಜೆರಾಕ್ಸ್, ವಾಷಿಂಗ್ ಮೆಷಿನ್, ಏರ್‌ಕಂಡಿಷನರ್, ಪ್ರಿಂಟರ್, ಎಲೆಕ್ಟ್ರಾನಿಕ್ ಟೈಪ್‌ರೈಟರ್ಸ್‌ ಹೀಗೆ 23 ವಿವಿಧ ಬಗೆಯ ಎಲೆಕ್ಟ್ರಾನಿಕ್ಸ್ ಹಾಗೂ ವಿದ್ಯುನ್ಮಾನ ಉಪಕರಣಗಳನ್ನು ಇ-ತ್ಯಾಜ್ಯವೆಂದು ಪರಿಗಣಿಸಲಾಗಿದೆ~ ಎಂದು ಹೇಳಿದರು.`ಇ-ಉಪಕರಣಗಳ ದುರಸ್ತಿ, ಮರುಬಳಕೆ, ಪುನರ್‌ಬಳಕೆ ಮತ್ತು ವಿಲೇವಾರಿ ನಿಜಕ್ಕೂ ಸವಾಲಿನ ವಿಷಯವಾಗಿದ್ದು,  ಶೀಘ್ರ ತಂತ್ರಜ್ಞಾನ ಬೆಳವಣಿಗೆ ಹಾಗೂ ಕಡಿಮೆ ವೆಚ್ಚದ ಹೊಸ ಹೊಸ ಎಲೆಕ್ಟ್ರಾನಿಕ್ಸ್ ಮತ್ತು ವಿದ್ಯುನ್ಮಾನ ಉಪಕರಣಗಳು ಮಾರುಕಟ್ಟೆಗೆ ಬಂದಿರುವುದರಿಂದ ಇ-ತ್ಯಾಜ್ಯ ಹೆಚ್ಚಾಗಿ ಉತ್ಪಾದನೆಗೊಳ್ಳುತ್ತದೆ~ ಎಂದು ಹೇಳಿದ ಅವರು, `ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇ-ತ್ಯಾಜ್ಯವನ್ನು ಸಾಂಪ್ರದಾಯಕವಾಗಿ ಸಂಸ್ಕರಿಸದೆ ಇರುವುದರಿಂದ ಆರೋಗ್ಯ ಹಾಗೂ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.  ವಿದ್ಯುನ್ಮಾನ ಉಪಕರಣಗಳಲ್ಲಿರುವ ಭಾರಲೋಹಗಳಾದ ಸೀಸ, ಪಾದರಸಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ~ ಎಂದು ಹೇಳಿದರು.`ವಿದ್ಯುನ್ಮಾನ ಉಪಕರಣಗಳಲ್ಲಿ ಉಪಯೋಗಿಸುವ ಪ್ಲಾಸ್ಟಿಕ್‌ಗಳನ್ನು ಅವೈಜ್ಞಾನಿಕವಾಗಿ ಸುಡಲಾಗುತ್ತಿದ್ದು, ಇದರಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಹೆಚ್ಚುತ್ತಿವೆ. ಅನಧಿಕೃತ ಹಾಗೂ ಅವೈಜ್ಞಾನಿಕ ಕೈಗಾರಿಕೆಗಳು ಶೀಘ್ರವೇ ಸಂಸ್ಕರಣ ಘಟಕಗಳನ್ನು ಅಳವಡಿಸಿಕೊಳ್ಳಬೇಕು~ ಎಂದು ಒತ್ತಾಯಿಸಿದರು.ಮಂಡಲಿಯ ಸದಸ್ಯ ಕಾರ್ಯದರ್ಶಿ ಎಸ್.ಎಂ.ಪುಟ್ಟಬುದ್ದಿ, ಹಿರಿಯ ಪರಿಸರ ಅಧಿಕಾರಿ ಡಿ.ಆರ್.ಕುಮಾರಸ್ವಾಮಿ, ಜರ್ಮನಿ ದೇಶದ ಜಿ.ಐ.ಝಡ್ ಸಂಸ್ಥೆಯ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡು ಇ-ತ್ಯಾಜ್ಯ ವಿಲೇವಾರಿ ಹಾಗೂ ಮರುಬಳಕೆ ನಿಟ್ಟಿನಲ್ಲಿ ಎದುರಿಸಬೇಕಾಗಿರುವ ಸವಾಲುಗಳನ್ನು ಕುರಿತಂತೆ ಮಾತನಾಡಿದರು. ಕಾರ್ಯಾಗಾರದಲ್ಲಿ ಸುಮಾರು 200 ಮಂದಿ ಐಟಿ ಕಂಪೆನಿ ಹಾಗೂ ಇ-ತ್ಯಾಜ್ಯ ಸಂಸ್ಕರಣ ಕೈಗಾರಿಕೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.