ಗುರುವಾರ , ನವೆಂಬರ್ 14, 2019
23 °C

`ನಗರದಲ್ಲಿ ಶಬ್ದ ಮಾಲಿನ್ಯ ಹೆಚ್ಚಳ'

Published:
Updated:

ಬೆಂಗಳೂರು: `ನಗರದಲ್ಲಿ ಶಬ್ದ ಮಾಲಿನ್ಯದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾಹನ ಸವಾರರು ವಿನಾಕಾರಣ ಹಾರ್ನ್ ಮಾಡುವುದರಿಂದ ಶಬ್ದಮಾಲಿನ್ಯವು ಹೆಚ್ಚಾಗಿದೆ' ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಹೇಳಿದರು.ಬೆಂಗಳೂರು ಸಂಚಾರ ಪೊಲೀಸ್, ಟ್ರಿಡೆಂಟ್ ಆಟೊಮೊಬೈಲ್, ಸಿನರ್ಜಿ ಪ್ರಾಪರ್ಟಿ ಡೆವೆಲಪಮೆಂಟ್ ಸರ್ವೀಸ್ ಮತ್ತು ಜಿಐಆರ್‌ಇಎಂ ಜಂಟಿಯಾಗಿ `ನಾನು ಹಾರ್ನ್ ಮಾಡುವುದಿಲ್ಲ' ಎಂಬ ಘೋಷ ವಾಕ್ಯದೊಂದಿಗೆ ಶುಕ್ರವಾರ ಕಬ್ಬನ್ ಉದ್ಯಾನದಿಂದ ಆರಂಭಿಸಿದ ಕಾರ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.`ಅಗತ್ಯವಿದ್ದಾಗ ಹಾರ್ನ್ ಮಾಡಿ, ಅನಗತ್ಯವಾಗಿ ಹಾರ್ನ್ ಮಾಡುವುದನ್ನು ವಾಹನ ಸವಾರರು ಬಿಡಬೇಕು. ಈ ಕುರಿತು ಜಾಗೃತಿ ಮೂಡಿಸಲು ಈ ರೀತಿಯ ಜಾಗೃತಿ ಜಾಥಾಗಳು ಸಹಾಯಕವಾಗುತ್ತವೆ' ಎಂದರು.`ಕೆಲವು ದೇಶಗಳಲ್ಲಿ ವಿನಾಕಾರಣ ಹಾರ್ನ್ ಮಾಡುವುದನ್ನು ಅನಾಗರಿಕ ವರ್ತನೆ ಎಂದು ಕರೆಯಲಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ಹಾರ್ನ್ ಮಾಡುವುದು ಸಾಮಾನ್ಯವೆಂಬಂತೆ ಆಗಿದೆ' ಎಂದು ಹೇಳಿದರು.ಜಾಥಾದಲ್ಲಿ 12 ಕಾರುಗಳ ಮೂಲಕ ನಗರದ ಲ್ಯಾವೆಲ್ಲೆ ರಸ್ತೆ, ಮಹಾತ್ಮ ಗಾಂಧಿ ರಸ್ತೆ, ಇಂದಿರಾನಗರ, ಹಳೆಯ ವಿಮಾನ ನಿಲ್ದಾಣ ರಸ್ತೆ, ಕೋರಮಂಗಲ, ಹೊಸೂರು ರಸ್ತೆ, ಮಡಿವಾಳ, ರಿಚ್‌ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು.

ಪ್ರತಿಕ್ರಿಯಿಸಿ (+)