ಶನಿವಾರ, ಮೇ 15, 2021
24 °C
ವಾರದಲ್ಲಿ ನಾಲ್ಕನೇ ಕಳ್ಳತನ, ಮನೆಯಿಂದ ಹೊರ ಬರಲು ಹೆದರಿಕೆ

ನಗರದಲ್ಲಿ ಸರಾಗವಾದ ಸರ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರದಲ್ಲಿ ಬುಧವಾರ ಮತ್ತೊಂದು ಸರಗಳ್ಳತನ ನಡೆದಿದ್ದು, ಕಳೆದ ಒಂದು ವಾರದಲ್ಲಿ ಸರಗಳವು ಪ್ರಕರಣಗಳು ಮಿತಿಮೀರಿವೆ. ಮಹಿಳೆಯರು ಮನೆಯಿಂದ ಹೊರ ಬರಲು ಆತಂಕ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.ನಗರದ ವಿದ್ಯಾನಗರದ ಎಸ್.ಗಿರಿಜಾ ಅವರು ಬುಧವಾರ ಬೆಳಿಗ್ಗೆ ಮನೆ ಮುಂದೆ ನಿಂತಿದ್ದಾಗ, ವಿಳಾಸ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಕತ್ತಿನಿಂದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸುಮಾರು 40 ಗ್ರಾಂ ಚಿನ್ನದ ಸರವನ್ನು ಕಿತ್ತೊಯ್ದಿದ್ದಾರೆ.ಒಂದು ವಾರದಲ್ಲಿ ನಾಲ್ಕು ಕಡೆ ಸರಗಳ್ಳತನ ನಡೆದಿದ್ದು, ವಿದ್ಯಾನಗರದಲ್ಲಿ ಇದು 2ನೇ ಕಳವು. ಮಂಗಳವಾರ ಸಹ ಶ್ರೀನಿಧಿ ಬಡಾವಣೆಯಲ್ಲಿ ಸರಗಳ್ಳತನ ನಡೆದಿತ್ತು. ಅದರಲ್ಲಿಯೂ ಎನ್‌ಇಪಿಎಸ್ ಠಾಣೆ ವ್ಯಾಪ್ತಿಯಲ್ಲಿ ನಿರಂತರವಾಗಿ ಸರಗಳ್ಳತನ ಪ್ರಕರಣಗಳು ನಡೆಯುತ್ತಿವೆ. ಆದರೂ ಇದುವರೆಗೆ ಪೊಲೀಸರು ಯಾರನ್ನೂ ಬಂಧಿಸಲು ಸಾಧ್ಯವಾಗಿಲ್ಲ.ನಗರದಲ್ಲಿ ವಿಧಾನಸಭೆ ಚುನಾವಣೆಗೆ ಮೊದಲು ಸರಗಳ್ಳತನ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದವು. ಆದರೆ ಇದ್ದಕ್ಕಿದ್ದಂತೆ ಕಳವು ಪ್ರಕರಣ ತಹಬದಿಗೆ ಬಂದಿತ್ತು.ಚುನಾವಣೆ ನಂತರ ನಗರದಲ್ಲಿ ಮತ್ತೆ ಸರಗಳ್ಳತನ ನಡೆಯುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬೆಂಗಳೂರಿನ ಗುಂಪೊಂದು ನಗರದಲ್ಲಿ ನೆಲೆಸಿದ್ದು, ಹೊಂಚು ಹಾಕಿ ಕಳವು ಮಾಡುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಇದೆ. ಆದರೆ ಕಳವು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.ಈ ಹಿಂದೆ ನಗರದಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚಿದ್ದವು. ಹಣ, ಚಿನ್ನಾಭರಣ ಕಳವು ಮಾಡಲಾಗುತ್ತಿತ್ತು. ಇದು ಸಹ ಎನ್‌ಇಪಿಎಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚಾಗಿ ನಡೆಯುತ್ತಿತ್ತು. ಅದರಲ್ಲಿಯೂ ಕುವೆಂಪುನಗರ, ವಿದ್ಯಾನಗರ, ಆಶೋಕ ನಗರ ಮುಂತಾದ ಪ್ರಮುಖ ಬಡಾವಣೆಗಳಲ್ಲಿಯೇ ಕಳವು ನಡೆಯುತ್ತಿತ್ತು. ಮನೆಗಳ್ಳತನ ಕಡಿಮೆಯಾಗಿದ್ದು, ಈಗ ಸರಗಳ್ಳತನ ಹೆಚ್ಚಿರುವುದು ನಿವಾಸಿಗಳ ನಿದ್ದೆಗೆಡಿಸಿದೆ.ಸರಗಳ್ಳತನ ಮತ್ತೆ ನಡೆಯುತ್ತಿರುವ ಬಗ್ಗೆ ಮುಂಜಾಗ್ರತೆ ವಹಿಸುವಂತೆ ವಿದ್ಯಾನಗರದ ಕೆಲವೆಡೆ ಪ್ಲೆಕ್ಸ್ ಹಾಕಲಾಗಿದೆ. ಆದರೆ ಮನೆ ಮುಂದೆ ನಿಂತವರು, ಜನಸಂದಣಿ ಇರುವ ರಸ್ತೆಯಲ್ಲೇ ಚಿನ್ನಾಭರಣ ದೋಚಲಾಗುತ್ತಿದೆ. ಕಳ್ಳರ ಬಗ್ಗೆ ನಿಗಾವಹಿಸಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಸರ ಕಳವು ಹೆಚ್ಚುತ್ತಿದ್ದರೂ ಅದನ್ನು ತಡೆಯಲು ಪೊಲೀಸರಿಗೆ ಸಾಧ್ಯವಾಗದಿರುವುದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಕ್ಷಣ ಕಳ್ಳರನ್ನು ಬಂಧಿಸಲು ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆಯರು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.