ನಗರದಲ್ಲಿ ಸುಗಮ ಸಂಗೀತದ ಕಂಪು- ಜಿಎಸ್‌ಎಸ್ ಶ್ಲಾಘನೆ

7

ನಗರದಲ್ಲಿ ಸುಗಮ ಸಂಗೀತದ ಕಂಪು- ಜಿಎಸ್‌ಎಸ್ ಶ್ಲಾಘನೆ

Published:
Updated:

ಬೆಂಗಳೂರು:ಆಧುನಿಕತೆಯ ಭರಾಟೆಯಿಂದ ಅತಿ ವೇಗವಾಗಿ ಬೆಳೆದು ಸಂಸ್ಕೃತಿಯೇ ಮರೆಯಾಗುತ್ತಿದ್ದರೂ, ಬೆಂಗಳೂರಿನಲ್ಲಿ ಸುಗಮ ಸಂಗೀತದ ಕಂಪು ಇನ್ನೂ ಜೀವಂತವಾಗಿದೆ ಎಂದು ಕವಿ ಜಿ.ಎಸ್. ಶಿವರುದ್ರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.ನಗರದ ಸಂಸ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದ್ದ ಕವಿ ಸುಬ್ರಾಯ ಚೊಕ್ಕಾಡಿ ಅವರ ಭಾವಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಉಪಾಸನೆ ಮೋಹನ್ ರವರ ‘ಇಂದ್ರಚಾಪ’ ಸಿಡಿ ಮತ್ತು ‘ಉಪಾಸನೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸುಗಮ ಸಂಗೀತ ಕ್ಷೇತ್ರದಲ್ಲಿ ಕಾಳಜಿ ಹೊಂದಿರುವ ಇಂತಹ ಯುವಕರು ಸಂಗೀತ ಸಹೃದಯಿಗಳ ಮನೆ ಬಾಗಿಲಿಗೆ ಸುಗಮ ಸಂಗೀತವನ್ನು ಕೊಡೊಯ್ಯುವ ಕಾರ್ಯದಲ್ಲಿ ನಿರತರಾಗಿರುವುದು ಹೆಮ್ಮೆಯ ಸಂಗತಿ ಎಂದು ಪ್ರಶಂಸಿದರು. ನಗರದಲ್ಲಿ ಸಾಂಸ್ಕೃತಿಕ ಬದುಕು ಇನ್ನೂ ಜೀವಂತವಾಗಿದೆ ಎಂದರೆ ಅದು ಇಂತಹ ಕಾರ್ಯಕ್ರಮಗಳಿಂದ ಮಾತ್ರ ಎಂದರು.ಸಾಹಿತಿ, ಸಂಗೀತ ಸಂಯೋಜಕ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಮಾತನಾಡಿ ಅನಂತಮೂರ್ತಿ, ಅಶ್ವತ್ಥ್ ರವರಂತಹ ಧೀಮಂತ ದಿಗ್ಗಜರನ್ನು ಕಳೆದುಕೊಂಡ ಸುಗಮ ಸಂಗೀತದ ಉಕ್ಕಿನ ಕೋಟೆ ಛಿದ್ರವಾಯಿತು ಎಂದು ಭಾವಿಸಿದ್ದೆವು. ಆದರೆ ಇಂದಿನ ಯುವಕರು ಹೊಂದಿರುವ ಕಾಳಜಿ ಗಮನಿಸಿದರೆ ಸುಗಮ ಸಂಗೀತ ಕ್ಷೇತ್ರ ಆಕಾಶದೆತ್ತರಕ್ಕೆ ಬೆಳೆಯುವುದರಲ್ಲಿ ಸಂದೇಹವಿಲ್ಲ ಎಂದು ಅಭಿಪ್ರಾಯಪಟ್ಟರು.ಕವಿ ಸುಬ್ರಾಯ ಚೊಕ್ಕಾಡಿ ಮಾತನಾದರು. ಕಾರ್ಯಕ್ರಮದಲ್ಲಿ ಕವಿಗಳಾದ ಬಿ.ಆರ್. ಲಕ್ಷ್ಮಣರಾವ್, ಎಂ.ಎನ್. ವ್ಯಾಸರಾವ್, ರಂಜನಿಪ್ರಭು, ಲಹರಿ ಆಡಿಯೋ ಸಂಸ್ಥೆ ಮಾಲಿಕ ತುಳಸೀರಾಮ ನಾಯ್ಡು, ನಿರ್ಮಾಣ್ ಶೆಲ್ಟರ್ಸ್‌ ವ್ಯವಸ್ಥಾಪಕ ನಿರ್ದೇಶಕ ವಿ. ಲಕ್ಷ್ಮೀನಾರಾಯಣ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry