ಸೋಮವಾರ, ಅಕ್ಟೋಬರ್ 21, 2019
23 °C

ನಗರದಲ್ಲಿ 10ಕಿ.ಮೀ.ರಸ್ತೆ ನಿರ್ಮಾಣ: ಶಂಕರ್

Published:
Updated:

ಹಾಸನ:`ನಗರದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ಕಾಮಗಾರಿಯ ಬಳಿಕ ರಸ್ತೆ ಅಗೆಯಲು ಅವಕಾಶ ನೀಡುವುದಿಲ್ಲ. ಮನೆಗಳಿಗೆ ನೀರು, ಒಳಚರಂಡಿ ಸಂಪರ್ಕ ಪಡೆಯುವವರು ಕಾಮಗಾರಿಗಿಂತ ಮೊದಲೇ ಈ ಕಾರ್ಯ ಮುಗಿಸಬೇಕು~ ಎಂದು ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್ ತಿಳಿಸಿದ್ದಾರೆ.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಅವರು ಮಾಹಿತಿ ನೀಡಿದರು. ನಗರದ ರಸ್ತೆಗಳ ಅಭಿವೃದ್ಧಿಗಾಗಿ ಈ ವರ್ಷ ಸಿಎಂಎಸ್ ಎಂಟಿಡಿಸಿ ಯೋಜನೆಯಲ್ಲಿ 30 ಕೋಟಿ ಹಾಗೂ 13ನೇ ಹಣಕಾಸು ಯೋಜನೆಯಲ್ಲಿ 99.45 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಸಿಎಂಎಸ್ ಎಂಟಿಡಿಸಿಯಲ್ಲಿ 14.16 ಕೋಟಿ ರೂಪಾಯಿಯ ಕಾಮಗಾರಿಯಾಗಿದ್ದು, 45.84 ಕೋಟಿ ಕಾಮಗಾರಿ ಉಳಿದಿದೆ. 13ನೇ ಹಣಕಾಸು ಯೋಜನೆಯ ಅನುದಾನದಲ್ಲಿ ರೂ.65 ಲಕ್ಷ ಬಳಸಿಕೊಂಡಿದ್ದು, 34.45 ಕೋಟಿ ಉಳಿದಿದೆ. ವರ್ಷಾಂತ್ಯದೊಳಗೆ ಎಲ್ಲ ಅನುದ್ನಾವನ್ನೂ ಬಳಕೆ ಮಾಡಲಾಗುವುದು ಎಂದರು.ನಗರಸಭೆ ವ್ಯಾಪ್ತಿಯಲ್ಲಿ ಈವರ್ಷ ಒಟ್ಟು 185.30 ಲಕ್ಷ ರೂ. ವೆಚ್ಚದಲ್ಲಿ 10.37 ಕಿ.ಮೀ. ರಸ್ತೆಯನ್ನು ನಿರ್ಮಿಸಿಯಾಗಿದೆ. ಇನ್ನೂ 761.80 ಲಕ್ಷ ರೂಪಾಯಿ ಉಳಿದಿದ್ದು 34.42 ಕಿ.ಮೀ. ರಸ್ತೆ ಕಾಮಗಾರಿ ಮಾಡಬೇಕಾಗಿದೆ. ಇದಲ್ಲದೆ 279.87 ಲಕ್ಷ ವ್ಯಯಿಸಿ 9.82 ಕಿ.ಮೀ. ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಇನ್ನೂ 168.78  ಲಕ್ಷ ರೂಪಾಯಿಯಲ್ಲಿ 5.82 ಕಿ.ಮೀ. ರಸ್ತೆ ಮಾಡಬೇಕಾಗಿದೆ ಎಂದರು.ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ. ವಿವಿಧ ಬಡಾವಣೆಗಳಲ್ಲಿ ಮನೆಗಳ ನಿರ್ಮಾಣವೂ ನಡೆಯುತ್ತಿದ್ದು, ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕ ಪಡೆಯಲು ಬಯಸುವವರು ಕಾಮಗಾರಿ ಆರಂಭವಾಗುವುದಕ್ಕೂ ಮೊದಲು ಸಂಪರ್ಕ ಪಡೆಯಬೇಕು. ಎಷ್ಟೇ ಪ್ರಭಾವಿ ವ್ಯಕ್ತಿಗಳಾದರೂ ಆ ಮೇಲೆ ರಸ್ತೆ ಅಗೆಯಲುವಕಾಶ ನೀಡುವುದಿಲ್ಲ. ರಸ್ತೆಯ ಇನ್ನೊಂದು ಬದಿಯಿಂದ ಸಂಪರ್ಕ ಪಡೆಯಬೇಕಾದವರು ನಗರಸಭೆಗೆ ಮನವಿ ಸಲ್ಲಿಸಿದರೆ ಅತಿ ಶೀಘ್ರದಲ್ಲೇ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು~ ಎಂದರು.ನಿರ್ದಾಕ್ಷಿಣ್ಯವಾಗಿ ಒತ್ತುವರಿ ತೆರವು: ನಗರದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕರು ರಸ್ತೆ, ಉದ್ಯಾನ, ಆಟದ ಮೈದಾನ, ಸಾರ್ವಜನಿಕ ಸೌಕರ್ಯಕ್ಕೆ ಮೀಸಲಿಟ್ಟ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ತಾವಾಗಿಯೇ ಒತ್ತುವರಿ ತೆರವು ಮಾಡುವಂತೆ ಅಂಥವರಿಗೆ ಸೂಚನೆ ನೀಡಲಾಗಿದೆ. ಇದಕ್ಕೆ ಸ್ಪಂಸದಿದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೆ ನಗರಸಭೆ ವತಿಯಿಂದ ತೆರವು ಮಾಡಲಾಗುವುದು. ಹೀಗೆ ತೆರವು ಕಾರ್ಯಾಚರಣೆ ನಡೆಸುವಾಗ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದರೆ ಅದಕ್ಕೆ ಮಾಲೀಕರೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಶಂಕರ್ ಎಚ್ಚರಿಕೆ ನೀಡಿದರು.ಆಯವ್ಯಯ-16ರಂದು ಸಭೆ: 2011-12ನೇ ಸಾಲಿಗೆ ಸಿದ್ಧಪಡಿಸಿದ್ದ ಆಯವ್ಯಯದಲ್ಲಿ ಶೇ 50ರಷ್ಟು ಹಣವನ್ನು ಮಾತ್ರ ಈವರೆಗೆ ವೆಚ್ಚ ಮಾಡಲಾಗಿದೆ. ವಿವಿಧ ಕಾರಣಗಳಿಂದ ಪ್ರತಿ ವರ್ಷವೂ ಪೂರ್ತಿ ಹಣವನ್ನು ವೆಚ್ಚ ಮಾಡಲು ಸಾಧ್ಯವಾಗುವುದಿಲ್ಲ. ಮಾರ್ಚ್‌ವರೆಗೆ ಅವಕಾಶವಿದ್ದು, ಹೆಚ್ಚು ಹಣ ವೆಚ್ಚ ಮಾಡಲು ಪ್ರಯತ್ನಿಸಲಾಗುವುದು ಎಂದರು.2012-13ನೇ ಸಾಲಿನ ಆಯವ್ಯಯ ಸಿದ್ಧಪಡಿಸಲು ನಗರದ ನಾಗರಿಕರು, ಹಿರಿಯ ನಾಗರಿಕರು ಸಂಘ ಸಂಸ್ಥೆಗಳ ಪದಾಧಿಕಾರಿಗಳಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗಿದೆ. ಸಲಹೆ ಪಡೆಯುವ ಸಲುವಾಗಿಯೇ ಜ.16ರಂದು ಬೆಳಿಗ್ಗೆ 11 ಗಂಟೆಗೆ ನಗರಸಭೆಯ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದ್ದು, ನಾಗರಿಕರು ಪಾಲ್ಗೊಂಡು ಸಲಹೆ ಸೂಚನೆ ನೀಡಬಹುದು~ ಎಂದರು.ಆಸ್ಪತ್ರೆ ಮಾಲೀಕರಿಗೆ ಎಚ್ಚರಿಕೆ: ನಗರದ ವಿವಿಧ ಆಸ್ಪತ್ರೆಗಳವರು ತ್ಯಾಜ್ಯಗಳನ್ನು ನೇರವಾಗಿ ಚರಂಡಿಗೆ ಸುರಿಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದರಿಂದಾಗಿ ಒಳಚರಂಡಿ ವ್ಯವಸ್ಥೆ ಹದಗೆಟ್ಟು, ನಾಗರಿಕರಿಗೆ ತೊಂದರೆಯಾಗುತ್ತಿದೆ. ಈಗಾಗಲೇ ಹಲವು ಬಾರಿ ಆಸ್ಪತ್ರೆಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದೇವೆ. ಆದರೆ ಆಸ್ಪತ್ರೆಗಳವರು ಹಿಂದಿನ ವ್ಯವಸ್ಥೆಯನ್ನೇ ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನೊಮ್ಮೆ ನೋಟಿಸ್ ನೀಡಿ, ಜ.17ರಂದು ಸಭೆ ಆಯೋಜಿಸಲಾಗುವುದು. ಆಸ್ಪತ್ರೆಗಳ ಮಾಲೀಕರೇ ಕಡ್ಡಾಯವಾಗಿ ಸಭೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ನಮ್ಮ ನೋಟಿಸ್ ಕಡೆಗಣಿಸಿ ಸಭೆಗೆ ಗೈರುಹಾಜರಾದರೆ ಅಂಥ ಆಸ್ಪತ್ರೆಗಳನ್ನು ಮುಚ್ಚಿಸಲೂ ಹಿಂಜರಿಯುವುದಿಲ್ಲ ಎಂದು ಶಂಕರ್ ಸ್ಪಷ್ಟಪಡಿಸಿದರು.ತಪ್ಪು ಮಾಹಿತಿ - ಆಕ್ಷೇಪ: ಸಂತೆ ಶುಲ್ಕ ಪಾವತಿ ಬಗ್ಗೆ ನಗರಸಭೆ ಸದಸ್ಯ ಯಶವಂತ್ ಅವರು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಒಟ್ಟಾರೆ 17 ಲಕ್ಷ ರೂಪಾಯಿಗೆ ಟೆಂಡರ್ ಆಗಿದ್ದು ಅದರಲ್ಲಿ 3.25 ಲಕ್ಷ ರೂಪಾಯಿ ಮಾತ್ರ ನಗರಸಭೆಗೆ ಬರಲು ಬಾಕಿ ಇದೆ. ಅದಕ್ಕೂ ಗುತ್ತಿಗೆದಾರರು ಚೆಕ್  ನೀಡ್ದ್ದಿದಾರೆ. ಸದ್ಯದಲ್ಲೇ ಆ ಹಣವೂ ನಗರಸಭೆಗೆ ಬರಲಿದೆ. ಈ ಮಾಹಿತಿ ಇಲ್ಲದೆ ಯಶವಂತ್ ನಮ್ಮ ಮೇಲೆ ಆರೋಪ ಮಾಡಿದ್ದಾರೆ ಎಂದರು.ಹಿಂದೆ ನಗರಸಭೆಯಿಂದಲೇ ವಸ್ತು ಪ್ರದರ್ಶನ ಮಾಡಲಾಗುತ್ತಿತ್ತು. ಆದರೆ ಕಾಲಾಂತರದಲ್ಲಿ ಅದಕ್ಕೂ ಟೆಂಡರ್ ವ್ಯವಸ್ಥೆ ಬಂತು. ಈಗ ಕೆಲವರು ಕಡಿಮೆ ಮೊತ್ತಕ್ಕೆ ಬಿಡ್ ಮಾಡುತ್ತಿದ್ದಾರೆ. ಅದನ್ನು ತಪ್ಪಿಸಲು ನಗರಸಭೆಯಿಂದಲೇ ಪ್ರದರ್ಶನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಬಾರಿ ಪ್ರದರ್ಶನ ಬಿಟ್ಟು ಹೊಯ್ಸಳೋತ್ಸವವನ್ನೇ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ್ದೆವು. ಈಗ ಹೊಯ್ಸಳೋತ್ಸವ ರದ್ದಾಗಿರುವ ಹಿನ್ನೆಲೆಯಲ್ಲಿ ಮುಂದೇನು ಮಾಡಬೇಕು ಎಂಬುದನ್ನು 12ರಂದು ನಡೆಸಯುವ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗುವುದು~ ಎಂದು ಶಂಕರ್ ತಿಳಿಸಿದರು.ನಗರಸಭೆ ಆಯುಕ್ತ ನಾಗಭೂಷಣ್, ಸಹಾಯಕ ಕಾರ್ಯಪಾಲ ಅಭಿಯಂತ ನಾಗೇಂದ್ರ ಹಾಗೂ ಇತರ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

Post Comments (+)