ಗುರುವಾರ , ಮೇ 13, 2021
22 °C

ನಗರದಲ್ಲಿ 10 ಡೆಂಗೆ ಪ್ರಕರಣ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ ಡೆಂಗೆ ಭಾದಿತರ ಸಂಖ್ಯೆ ಹೆಚ್ಚಾಗಿದ್ದು, ಕಳೆದ ಎರಡು ದಿನಗಳಲ್ಲಿ ವಿವಿಧೆಡೆ ಸುಮಾರು 10ಕ್ಕೂ ಹೆಚ್ಚು ಡೆಂಗೆ ಪ್ರಕರಣಗಳು ಪತ್ತೆಯಾಗಿವೆ.ನಗರದ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೆಂಗೆ ಪ್ರಕರಣಗಳು ವರದಿಯಾಗುತ್ತಿವೆ. ಸಿ.ವಿ.ರಾಮನ್ ನಗರ ಹಾಗೂ ಮಹದೇವಪುರ ಭಾಗಗಳಲ್ಲಿ ಡೆಂಗೆ ಭಾದಿತರ ಸಂಖ್ಯೆ ಹೆಚ್ಚಿದೆ. ಈ ಭಾಗದಲ್ಲಿ ಕುಡಿಯುವ ನೀರನ್ನು ಅವೈಜ್ಞಾನಿಕ ಮಾದರಿಯಲ್ಲಿ ಶೇಖರಣೆ ಮಾಡುತ್ತಿರುವುದರಿಂದ ಡೆಂಗೆ ಕಾಣಿಸಿಕೊಂಡಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.ಪಾಲಿಕೆಯ ಸಿಬ್ಬಂದಿ ಜೂನ್ ಮೊದಲ ವಾರದಲ್ಲಿಯೇ ಸುಮಾರು ಒಂದು ಲಕ್ಷಕ್ಕೂ ಅಧಿಕ ಮನೆಗಳಿಗೆ ತೆರಳಿ ಡೆಂಗೆ ಕಾಯಿಲೆಯ ಕುರಿತು ಮಾಹಿತಿ ನೀಡಿದ್ದಾರೆ. ಇದರಲ್ಲಿ ಎರಡು ಸಾವಿರ ಮನೆಗಳಲ್ಲಿ ಲಾರ್ವಾ ಇರುವುದು ಪತ್ತೆಯಾಗಿದೆ. ಹಾಗಾಗಿ ಈ ಭಾಗಗಳಲ್ಲಿ ಸೊಳ್ಳೆ ನಾಶ ಸಿಂಪಡೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ. ಬಿಬಿಎಂಪಿ ಆರೋಗ್ಯ ಇಲಾಖೆಯ ಮಾಹಿತಿಯಂತೆ ಜನವರಿ 2013ರಿಂದ ಈಚೆಗೆ ಪರೀಕ್ಷೆಗಾಗಿ ಸುಮಾರು 285 ಮಂದಿಯ ರಕ್ತ ಮಾದರಿಯನ್ನು ರೋಗಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನ ಸಂಸ್ಥೆ ಹಾಗೂ ವಿಕ್ಟೋರಿಯಾದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರಲ್ಲಿ 140 ಮಂದಿಗೆ ಡೆಂಗೆ ರೋಗ ಇರುವುದು ಪತ್ತೆಯಾಗಿತ್ತು.ರಾಜ್ಯಮಟ್ಟದಲ್ಲಿ ಶಿವಮೊಗ್ಗ, ಗದಗ, ಮೈಸೂರು ನಂತರ ಬೆಂಗಳೂರು ನಗರದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಡೆಂಗೆ ಪ್ರಕರಣಗಳು ಕಾಣಿಸಿಕೊಂಡಿದೆ. ಜೂನ್‌ನಿಂದ ಸೆಪ್ಟೆಂಬರ್ ತಿಂಗಳವರೆಗೆ ಡೆಂಗೆ ಪ್ರಕರಣಗಳು ವರದಿಯಾಗುವುದು ಸಾಮಾನ್ಯ. ಈಗಾಗಲೇ ಡೆಂಗೆಯ ನಿಯಂತ್ರಣ, ಚಿಕಿತ್ಸೆಯ ಕುರಿತು ಎಲ್ಲ ಆಸ್ಪತ್ರೆಗಳಿಗೂ ಮಾರ್ಗಸೂಚಿ ನೀಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.