ನಗರದಲ್ಲೂ ಶುದ್ಧ ಕುಡಿಯುವ ನೀರಿನ ಘಟಕ

7

ನಗರದಲ್ಲೂ ಶುದ್ಧ ಕುಡಿಯುವ ನೀರಿನ ಘಟಕ

Published:
Updated:

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರಕ್ಕೆ ಎರಡೂ ನದಿಗಳಿಂದ ನೀರಿನ ಪೂರೈಕೆಯಾಗುತ್ತಿದೆ. ನೀರನ್ನು ಶುದ್ಧೀ­ಕರಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಅಷ್ಟಾ­ದರೂ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ.ನಗರಸಭೆ ಪೂರೈಸುವ ನೀರಿನಿಂದ ಡೆಂಗೆ, ಮಲೇರಿಯಾದಂತಹ ಸಾಂಕ್ರಾ­ಮಿಕ ರೋಗಗಳು ಹರಡುತ್ತಿವೆ. ಶುದ್ಧ ನೀರಿಗಾಗಿ ಜನರು ಹೋರಾಡು­ತ್ತಿ­ದ್ದರೂ, ಕಲುಷಿತ ನೀರು ಕುಡಿ­ಯುವುದು ಮಾತ್ರ ತಪ್ಪಿಲ್ಲ.ನೀರಿನ ಸಮಸ್ಯೆಯಿಂದ ಬೇಸತ್ತಿರುವ ಜನರು ನಗರಸಭೆಗೆ ಹಿಡಿಶಾಪ ಹಾಕು­ತ್ತಿದ್ದರು. ನಲ್ಲಿಯಿಂದ ಬರುವ ನೀರನ್ನು ಜನರು ಕಾಯಿಸಿ ಆರಿಸಿದ ನಂತರ ಕುಡಿ­ಯುತ್ತಿದ್ದರು. ಜನರ ಸಮಸ್ಯೆ­ಯನ್ನು ಮನ­ಗಂಡ ನಗರದ ಸರ್.­ಎಂ.­ವಿಶ್ವೇಶ್ವರಯ್ಯ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾ­ರಿಗಳು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು­ಕೊ­ಳ್ಳಲು ಚಿಂತನೆ ನಡೆಸಿತಲ್ಲದೇ, ಕೊನೆಗೆ ಹುಲಕೋಟಿ ಕೆ.ಎಚ್.­ಪಾಟೀಲ ಪ್ರತಿ­ಷ್ಠಾನ ಸಹಯೋಗದಲ್ಲಿ ಇಲ್ಲಿನ ಬಸವೇ­ಶ್ವರ ನಗರದ ೧೪ನೇ ಕ್ರಾಸ್‌ನಲ್ಲಿರುವ ಸರ್.ಎಂ.­ವಿಶ್ವೇ­ಶ್ವರ­ಯ್ಯ ಶಿಕ್ಷಣ ಸಂಸ್ಥೆ ಶಾಲೆಯ ಮೈದಾನ­ದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿದೆ.ಶಿಕ್ಷಣ ಸಂಸ್ಥೆಯ ವಿಶೇಷ ಆಸಕ್ತಿ: ಹುಲ­ಕೋಟಿಯ ಕೆ.ಎಚ್.ಪಾಟೀಲ ಪ್ರತಿ­ಷ್ಠಾನ ಸಾರ್ವಜನಿಕರ, ಸಂಘ ಸಂಸ್ಥೆಗಳ ಹಾಗೂ ಗ್ರಾ.ಪಂಗಳ ಸಹಕಾರದ ಮೂಲಕ ಈಗಾಗಲೇ ಜಿಲ್ಲೆಯ ಐದಾರು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದೆ. ಆದರೆ, ಹಾವೇರಿ ನಗರದಲ್ಲಿ ಸ್ಥಾಪಿಸ­ಬೇಕೆಂಬ ಅದರ ಆಶಯ ಮಾತ್ರ ಹಾಗೆಯೇ ಉಳಿದಿತ್ತು.ಇಲ್ಲಿನ ಸರ್.ಎಂ. ವಿಶ್ವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಅವರು ನಗರದಲ್ಲಿ ಘಟಕ ಸ್ಥಾಪನೆಗೆ ವಿಶೇಷ ಆಸಕ್ತಿ ತೋರಿದರಲ್ಲದೇ, ತಮ್ಮ ಶಾಲೆಯ ಆವರಣದಲ್ಲಿ ಘಟಕ ಸ್ಥಾಪ­ನೆಗೆ ಅವಕಾಶ ನೀಡುವದರ ಜತೆಗೆ ಸುಮಾರು ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ಸುಸಜ್ಜಿತ ಕಟ್ಟಡ­ವೊಂ­ದನ್ನು ನಿರ್ಮಿಸಿ­ಕೊಟ್ಟಿದ್ದಾರೆ. ಅದರ ಜತೆಗೆ ಸ್ಥಳೀಯ ವಾರ್ಡ್‌ನ ನಗರಸಭೆ ಸದಸ್ಯೆ ಪಾರ್ವತೆವ್ವ ಹಲಗಣ್ಣನವರ ಕೂಡಾ ₨ ೫೦ ಸಾವಿರ ದೇಣಿಗೆ ನೀಡಿ ಘಟಕ ಸ್ಥಾಪನೆಗೆ ಸಹಕಾರ ನೀಡಿದ್ದಾರೆ.ಕೆ.ಎಚ್.ಪಾಟೀಲ ಪ್ರತಿಷ್ಠಾನ ಸುಮಾರು ₨ ೯ ಲಕ್ಷ  ಖರ್ಚು ಮಾಡಿ ನೀರು ಶುದ್ಧೀಕರಣ ಯಂತ್ರವನ್ನು ಅಳವಡಿಸಿದೆ. ಅವರೆಲ್ಲರ ಆಸಕ್ತಿಯ ಫಲವಾಗಿ ನಗರದ ಕೆಲ ಜನರಾದರೂ ಶುದ್ಧ ನೀರನ್ನು ಕುಡಿಯಲು ಸಾಧ್ಯವಾಗಿದೆ.₨ ೧ಗೆ ಹತ್ತು ಲೀಟರ್: ಖಾಸಗಿ ಕಂಪೆನಿಗಳು ಪೂರೈಸುವ ಒಂದು ಕ್ಯಾನ್ (೨೦ ಲೀಟರ್) ನೀರಿಗೆ ೪೦ರಿಂದ ೫೦ ರೂಪಾಯಿ ತೆಗೆದುಕೊಳ್ಳುತ್ತವೆ. ಅಷ್ಟೊಂದು ಹಣ ಖರ್ಚು ಮಾಡಿ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕದ ನೀರಿಗೆ ಹೆಚ್ಚಿನ ಹಣ ಇರಬಹುದು ಎಂಬ ಸಂಶಯ ಮೂಡು­ವುದು ಸಹಜ. ಆದರೆ, ನಿವಂದು­ಕೊಂಡಂತೆ ಅಲ್ಲಿ ದೊರೆಯುವ ನೀರಿಗೆ ಅತಿ ಕಡಿಮೆ ಬೆಲೆಯಿದೆ. ನೀವು ಯಾರ ಕೈಯಲ್ಲಿಯೂ ಹಣ ನೀಡುವಂತಿಲ್ಲ. ಒಂದು ರೂಪಾಯಿ ನಾಣ್ಯವನ್ನು ನಾಣ್ಯದ ಪೆಟ್ಟಿಗೆಯಲ್ಲಿ ಹಾಕಿದರೆ ಸಾಕು, ಒಂದು ಕ್ಯಾನ್ (ಹತ್ತು ಲೀಟರ್) ನೀರು ನಿಮಗೆ ದೊರೆಯಲಿದೆ.‘ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಹಾಗೂ ಬೀದಿ­ಗಿಳಿದು ಹೋರಾಡುವುದನ್ನು ನಿತ್ಯ ನೋಡಿ ಬೇಸರವಾಗಿ, ನಗರಸಭೆ ಹಿಂದಿನ ಆಡಳಿತ ಮಂಡಳಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹೆಚ್ಚಿನ ಒತ್ತು ನೀಡದಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿತ್ತು. ಜನರ ಸಮಸ್ಯೆಗೆ ಸ್ವಲ್ಪಮಟ್ಟಿನ ಪರಿಹಾರ ಒದಗಿಸುವುದಕ್ಕಾಗಿ ನಮ್ಮೂರು ಅಗಡಿಯಲ್ಲಿ ಸ್ಥಾಪಿಸಿದಂತೆ ಏಕೆ ಇಲ್ಲೊಂದು ಶುದ್ಧ ನೀರಿನ ಘಟಕ ಸ್ಥಾಪಿಸಬಾರದು ಎಂಬ ಚಿಂತನೆ ಮಾಡಿದಾಗ, ತಮ್ಮ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಬೆಂಬಲ ವ್ಯಕ್ತ­ಪಡಿಸಿದರು. ಅದರ ಫಲವಾಗಿ ನಗರ­ದಲ್ಲಿ ಘಟಕ ಸ್ಥಾಪನೆಗೆ ಸಾಧ್ಯವಾಯಿತು ಎಂದು ಹೇಳುತ್ತಾರೆ’ ಸರ್. ಎಂ.­ವಿಶ್ವೇಶ್ವರಯ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ.ಬಸವೇಶ್ವರನಗರದಲ್ಲಿ ಸ್ಥಾಪನೆ ಮಾಡಿರುವುದನ್ನು ನೋಡಿ, ಅಶ್ವಿನಿ­ನಗರ ಹಾಗೂ ದಾನೇಶ್ವರಿನಗರದ ಜನರು ಘಟಕ ಸ್ಥಾಪನೆಗೆ ಮುಂದೆ ಬಂದಿ­ದ್ದಾರೆ. ಶೀಘ್ರದಲ್ಲಿಯೇ ಆ ಎರಡೂ ನಗರದಲ್ಲಿ ಸ್ಥಾಪನೆ ಮಾಡ­ಲಾಗುವುದು ಎಂದು ಹೇಳುವ ಅವರು, ಹಾವೇರಿ ನಗರದಲ್ಲಿ ಕನಿಷ್ಠ ೧೦ ಘಟಕಗಳು, ಅದರಲ್ಲೂ ನಾಗೇಂದ್ರ­ನಮಟ್ಟಿ, ಹೊಸನಗರ ಹಾಗೂ ಸ್ಲಂ ಪ್ರದೇಶದಲ್ಲಿ ಸ್ಥಾಪಿಸಬೇಕಾದ ಅವಶ್ಯಕ­ತೆಯಿದೆ. ಇದಕ್ಕೆ ನಗರಸಭೆ ಹಾಗೂ ಸರ್ಕಾರದ ಸಹಕಾರ ಅತ್ಯವಶ್ಯ ಎಂದು ಹೇಳುತ್ತಾರೆ.ಜನರು ಸಂತಸ: ನಗರದಲ್ಲೂ ಶುದ್ಧ ಕುಡಿಯುವ ನೀರು ಸ್ಥಾಪನೆಯಾಗಿ ಅಂತ್ಯಂತ ಕಡಿಮೆ ಹಣದಲ್ಲಿ ಶುದ್ಧ ಕುಡಿಯುವ ನೀರು ದೊರೆಯುವುದಕ್ಕೆ ಬಸವೇಶ್ವರ ನಗರ ಸೇರಿದಂತೆ ಸುತ್ತ­ಮುತ್ತಲಿನ ಬಡವಾಣೆಗಳ ಜನರಲ್ಲಿ ಸಂತಸ ಮೂಡುವಂತೆ ಮಾಡಿದೆ. ಜನರು ಬೆಳಿಗ್ಗೆ ಸರದಿ ಪ್ರಕಾರ ನಿಂತು ನೀರು ಪಡೆದುಕೊಳ್ಳುತ್ತಿದ್ದಾರಲ್ಲದೇ, ನಗರದ ಬೇರೆ ಬೇರೆ ಪ್ರದೇಶದ ಜನರು ವಾಹನಗಳಲ್ಲಿ ಕ್ಯಾನಗಳನ್ನು ತಂದು ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಪಡೆದುಕೊಳ್ಳುತ್ತಿರುವುದು ನಿತ್ಯ ಕಾಣಸಿಗುತ್ತದೆ.ನಗರಸಭೆ 1೦-–೧೫ ದಿನಕ್ಕೊಮ್ಮೆ ಬಿಡುವ ನೀರಿಗಾಗಿ ಬಕ ಪಕ್ಷಿಯಂತೆ ಕಾಯುತ್ತಾ ಕುಳಿತುಕೊಳ್ಳಬೇಕಿತ್ತು. ಅಲ್ಲದೆ ನಗರಸಭೆ ಬಿಡುವ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಈ ಸಮಸ್ಯೆಗೆ ಶುದ್ಧ ನೀರಿನ ಘಟಕ ತೀಲಾಂ­ಜಲಿ ಇಟ್ಟಿದೆ. ನೀರು ಕೂಡಾ ಬಹಳಷ್ಟು ಸಿಹಿಯಾಗಿದೆ. ಈಗ ನಮಗೆ ಕುಡಿ­ಯುವ ನೀರಿನ ಸಮಸ್ಯೆಯೇ ಆಗುತ್ತಿಲ್ಲ ಎನ್ನುತ್ತಾರೆ ಬಸವೇಶ್ವರ ನಗರದ ನಿವಾಸಿ ಮಲ್ಲಿಕಾರ್ಜುನ ದಬ್ಬನವರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry