ನಗರದೆಲ್ಲೆಡೆ ನೃಪತುಂಗ ಹೈಟೆಕ್ ಬಸ್ ನಿಲ್ದಾಣ

7

ನಗರದೆಲ್ಲೆಡೆ ನೃಪತುಂಗ ಹೈಟೆಕ್ ಬಸ್ ನಿಲ್ದಾಣ

Published:
Updated:

ಗುಲ್ಬರ್ಗ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಗುಲ್ಬರ್ಗದಲ್ಲಿ ಪ್ರಥಮ ಬಾರಿಗೆ ಪ್ರಾರಂಭವಾದ ಸುಸಜ್ಜಿತವಾದ ನೃಪತುಂಗ ಸಾರಿಗೆಯ ಪ್ರಯಾಣಿಕರಿಗೆ ಸೌಕರ್ಯ ಒದಗಿಸುವ ದೃಷ್ಟಿಯಿಂದ ಬಸ್ ನಿಲ್ದಾಣಗಳ ನಿರ್ಮಿಸುವ ಕಾರ್ಯ ಭರದಿಂದ ನಡೆದಿದೆ.ನಗರದೊಳಗಿನ ಜನರಿಗೆ ಸೌಕರ್ಯ ನೀಡುವ `ನೃಪತುಂಗ ಸಾರಿಗೆ' ಈಗಾಗಲೇ ಮನೆಮಾತಾಗಿದೆ. ಈ ಬಸ್ಸುಗಳ ಸೇವೆಯನ್ನು ನೀಡುತ್ತಿರುವ ಸಂಸ್ಥೆಯು ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತೆ ಜನಪರ ಕೆಲಸಕ್ಕೆ ಮುಂದಾಗಿದೆ.ನಗರದಲ್ಲಿ ಒಟ್ಟು 33 ಸ್ಥಳಗಳನ್ನು ಗುರುತಿಸಿದ್ದು, ಮೊದಲ ಹಂತವಾಗಿ 12 ಬಸ್ ಶೆಲ್ಟರ್‌ಗಳನ್ನು ನಿರ್ಮಿಸುವ ಕಾರ್ಯ ಪ್ರಾರಂಭವಾಗಿದೆ. ನಗರದ ಪ್ರಮುಖ ಬಡಾವಣೆಗಳಲ್ಲಿ ಅತ್ಯಾಧುನಿಕವಾದ ನಿಲ್ದಾಣ ನಿರ್ಮಿಸುವ ಕಾರ್ಯ ನಡೆದಿದೆ. ಸುಸಜ್ಜಿತವಾದ ಆಸನಗಳು,  ಸೋಲಾರ್ ದೀಪಗಳು, ಎಲೆಕ್ಟ್ರಾನಿಕ್ ವೇಳಾಪಟ್ಟಿ ಅಳವಡಿಸಲಾಗುತ್ತಿದೆ.ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯು ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸುಮಾರು ಒಂದು ಕೋಟಿ ರೂಪಾಯಿ ಕೊಟ್ಟಿದ್ದು, ಇದರಿಂದ ಈ ಎಲ್ಲ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.`ಹಸಿರು ಮನೆ' ಯೋಜನೆಯಂತೆ ಪರಿಸರಸ್ನೇಹಿ ನಿಲ್ದಾಣಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ.ಮೊದಲ ಹಂತದ ಬಸ್ ನಿಲ್ದಾಣಗಳು:

ರಾಮಮಂದಿರ, ಜೇವರ್ಗಿ ರಿಂಗ್‌ರೋಡ್, ಕರುಣೇಶ್ವರ ನಗರ, ಕನ್ನಡ ಭವನ, ವಿಧಾನಸೌಧ, ಜಗತ್ ಸರ್ಕಲ್, ಓಂನಗರ, ಸಾರ್ವಜನಿಕ ಆಸ್ಪತ್ರೆ ಮತ್ತು ಸೂಪರ್ ಮಾರ್ಕೆಟ್, ಕೋಠಾರಿ ಭವನದ ಬಳಿ ತಲಾ ಎರಡು ಬಸ್ ಶೆಲ್ಟರ್‌ಗಳನ್ನು ನಿರ್ಮಿಸಲಾಗುತ್ತಿದೆ. ಇನ್ನುಳಿದವುಗಳ ಜಾಗ ಗುರುತಿಸಲಾಗಿದ್ದು ಶೀಘ್ರವಾಗಿ ಅದರ ಕಾಮಗಾರಿಗಳ ಕೈಗೊಳ್ಳಲಾಗುತ್ತಿದೆ.ಹೊಸ ಬಸ್‌ನಿಲ್ದಾಣ:  ರೈಲ್ವೆ ಸ್ಟೇಷನ್ ಹತ್ತಿರ ಇದ್ದ ಹಳೆಯ ಬಸ್‌ನಿಲ್ದಾಣವನ್ನು ಕೆಡವಿ ಹೊಸದಾದ ಬಸ್‌ನಿಲ್ದಾಣ, ಸುಸಜ್ಜಿತವಾದ ಬಸ್‌ನಿಲ್ದಾಣವನ್ನು ಕಟ್ಟಲಾಗಿದೆ. 75 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಈ ನಿಲ್ದಾಣ ಇನ್ನು ಕೆಲವು ದಿನಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.ಈ ನಿಲ್ದಾಣದಲ್ಲಿ ಕ್ಯಾಂಟೀನ್, ಕುಡಿಯುವ ನೀರು, ಶೌಚಾಲಯ, ಆಸನಗಳು, ಕೇಂದ್ರೀಯ ಕಚೇರಿ, ವಿಚಾರಣೆ, ವೇಳಾಪಟ್ಟಿ ಹಾಗೂ ಮಳೆ ಬಂದರೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಸ್ಸನ್ನು ನಿಲ್ದಾಣದ ಒಳಗಡೆ ನಿಲ್ಲಿಸುವ ವ್ಯವಸ್ಥೆಯಿದೆ. ರೈಲ್ವೆ ನಿಲ್ದಾಣದ ಮಾರ್ಗದಲ್ಲಿ ರಸ್ತೆ ಕಾಮಗಾರಿ ಚಾಲ್ತಿಯಲ್ಲಿರುವುದರಿಂದ ಇದರ ಉದ್ಘಾಟನೆ ತಡವಾಗುತ್ತಿದೆ.ಈ ನಿಲ್ದಾಣದಿಂದ ವಿಶ್ವವಿದ್ಯಾಲಯ, ಸೂಪರ್ ಮಾರ್ಕೆಟ್, ನೆಹರುಗಂಜ್, ಕೆಂದ್ರೀಯ ಬಸ್ ನಿಲ್ದಾಣ, ಎಂ.ಎಸ್.ಕೆ ಮಿಲ್, ಸಂಚಾರಿ ಹೈಕೋರ್ಟ್, ಖಾಜಾ ಬಂದೇ ನವಾಜ್ ದರ್ಗಾ ಮತ್ತಿತರ ಕಡೆ ಬಸ್‌ಗಳು ಸಂಚರಿಸುತ್ತವೆ.ವಿಶ್ವವಿದ್ಯಾಲಯದ ಬಸ್ ನಿಲ್ದಾಣ:  ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ 80 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನಿಲ್ದಾಣದ ಕೆಲಸ ಮುಗಿದಿದ್ದು ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗುವ ನಿರೀಕ್ಷೆಯಿದೆ. 8 ಬಸ್ಸುಗಳು ನಿಲ್ಲುವಂತೆ ದೊಡ್ಡದಾದ ನಿಲ್ದಾಣ ಮಾಡಲಾಗಿದೆ. ಮಹಿಳೆಯರು ಮತ್ತು ಪುರುಷ ಪ್ರಯಾಣಿಕರಿಗೆ  ಕಾಯಲು ಪ್ರತ್ಯೇಕ ಎರಡು ಕೋಣೆ ನಿರ್ಮಾಣಗೊಂಡಿದೆ.ಇಲ್ಲಿಂದ ಸೂಪರ್ ಮಾರ್ಕೆಟ್, ದರ್ಗಾ, ರೈಲ್ವೆ ಸ್ಟೇಷನ್, ರಾಮ ಮಂದಿರ, ಕೇಂದ್ರೀಯ ಬಸ್ ನಿಲ್ದಾಣ ಮುಂತಾದೆಡೆಗಳಿಗೆ ಬಸ್‌ಗಳು ಹೋಗುವಂತೆ ಮಾಡಲಾಗುವುದು.ಒಂದು ಕಚೇರಿಯೂ ಇಲ್ಲಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಆಸನಗಳ ವ್ಯವಸ್ಥೆ ಮಾಡಲಾಗಿದೆ.ವಿಶ್ವವಿದ್ಯಾಲಯ ಹಾಗೂ ರೈಲ್ವೆ ನಿಲ್ದಾಣದ ಹತ್ತಿರ ಬಸ್‌ನಿಲ್ದಾಣಗಳು ಸಿದ್ಧವಾಗಿವೆ. ಈ ಪೈಕಿ ರೈಲ್ವೆ ನಿಲ್ದಾಣದಲ್ಲಿರುವ ಬಸ್ ನಿಲ್ದಾಣ ಬಳಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಇಲ್ಲಿಂದ ಬಸ್ ಸಂಚಾರ ವಿಳಂಬವಾಗುವ ಸಾಧ್ಯತೆ ಇದೆ. ಕಾಮಗಾರಿ ಮುಗಿದ ತಕ್ಷಣ ಸಂಚಾರ ಆರಂಭಿಸಲಾಗುವುದು.

- ಜೆ. ಎನ್. ಶಿವಮೂರ್ತಿ, ವ್ಯವಸ್ಥಾಪಕ ನಿರ್ದೇಶಕ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry