ನಗರದೆಲ್ಲೆಡೆ ರಾಷ್ಟ್ರಪಿತನ ನಾಮಸ್ಮರಣೆ

7

ನಗರದೆಲ್ಲೆಡೆ ರಾಷ್ಟ್ರಪಿತನ ನಾಮಸ್ಮರಣೆ

Published:
Updated:

ಬೆಂಗಳೂರು: `ರಘುಪತಿ ರಾಘವ ರಾಜಾರಾಂ, ಪತಿತ ಪಾವನ ಸೀತಾರಾಂ~ ಗೀತೆಯ ನಿನಾದ ಮಂಗಳವಾರ ನಗರದ ವಿವಿಧ ಕಡೆ ಹರಿದಾಡಿತು. ಗಾಂಧಿ ಜಯಂತಿಯ ಅಂಗವಾಗಿ ನಗರದ ಶಾಲಾ-ಕಾಲೇಜುಗಳು ಹಾಗೂ ವಿವಿಧ ಸಂಘ- ಸಂಸ್ಥೆಗಳಲ್ಲಿ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮಕ್ಕಳು ಸಿಹಿ ಹಂಚಿ ತಮ್ಮ ನೆಚ್ಚಿನ `ಗಾಂಧಿ ತಾತ~ನ ಜನ್ಮದಿನವನ್ನು ಆಚರಿಸಿದರು.ಗಾಂಧಿ ಜಯಂತಿ ಅಂಗವಾಗಿ ಮಕ್ಕಳು ಮಹಾತ್ಮ ಗಾಂಧಿಯಂತೆ ಪೋಷಾಕು ಹಾಕಿಕೊಂಡು ಸಂಭ್ರಮಿಸಿದರು. ವಿವಿಧ ಶಾಲೆಗಳಲ್ಲಿ ಮಹಾತ್ಮ ಗಾಂಧಿ ಚಿತ್ರ ರಚನೆ ಸ್ಪರ್ಧೆ ಹಾಗೂ ಗಾಂಧಿ ಕುರಿತ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಜಯನಗರದ ಆರ್.ವಿ. ಬಾಲಕಿಯರ ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿಜಯನಗರದ ವಿನಾಯಕನಗರದಲ್ಲಿ ಮಿತ್ರಕೂಟದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.ಮಲ್ಲೇಶ್ವರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಗಾಂಧಿ ಜಯಂತಿ ಅಂಗವಾಗಿ ನಾಗರಿಕರಲ್ಲಿ ಪ್ರಜ್ಞೆ ಮೂಡಿಸುವ ಸಲುವಾಗಿ ಸೈಕಲ್ ರ‌್ಯಾಲಿಯನ್ನು ಏರ್ಪಡಿಸಿತ್ತು.ಗುಜರಾತಿ ಸಮಾಜವು ಆನಂದ್ ರಾವ್ ವೃತ್ತದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, `ಗಾಂಧೀಜಿ ಅವರ ತತ್ವಾದರ್ಶಗಳು ಇಂದಿಗೂ ಅನುಕರಣೀಯ. ಗಾಂಧೀಜಿ ಅವರು ಸಾರಿದ ಅಹಿಂಸೆ ಮತ್ತು ಸತ್ಯದ ತತ್ವಗಳು ಎಂದಿಗೂ ಅನುಕರಣೆ ಮಾಡುವಂತಹುವಾಗಿವೆ. ಅವರ ಆದರ್ಶಗಳು ಇಡೀ ಜಗತ್ತಿಗೆ ಮಾದರಿಯಾಗಿವೆ~ ಎಂದರು.

ಮೇಯರ್ ಡಿ. ವೆಂಕಟೇಶಮೂರ್ತಿ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಂಸದ ಪಿ.ಸಿ. ಮೋಹನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಗಾಂಧಿ ಜಯಂತಿ ಅಂಗವಾಗಿ ಯಶವಂತಪುರ ಪೊಲೀಸ್ ಠಾಣೆ ಆವರಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರೌಡಿಗಳು ಮತ್ತು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳೂ ಸೇರಿದಂತೆ ಸುಮಾರು 90 ಮಂದಿ ರಕ್ತದಾನ ಮಾಡಿದರು.ಯಶವಂತಪುರ ಠಾಣೆಯ ರೌಡಿ ಪಟ್ಟಿಯಲ್ಲಿರುವವರು ರಕ್ತದಾನ ಮಾಡಿದರು. ಅಲ್ಲದೇ, ತಾವು ಇನ್ನು ಮುಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ ಮತ್ತು ನ್ಯಾಯಯುತ ರೀತಿಯಲ್ಲಿ ಬದುಕು ಸಾಗಿಸುತ್ತೇವೆ ಎಂದು ಶಾಸಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಮಾಣ ಮಾಡಿದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ವಿಧಾನ ಪರಿಷತ್ ಸದಸ್ಯ ಎಂ.ಆರ್.ಸೀತಾರಾಮ್ ಹಾಗೂ ಬಿಬಿಎಂಪಿ ಸದಸ್ಯರು, ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅಗತ್ಯವಿರುವ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು. ಮಳಿಗೆಗಳನ್ನು ನಡೆಸಲು, ಆಟೊ ಖರೀದಿಸಲು ಅಥವಾ ಸ್ವಂತ ಉದ್ಯೋಗ ಮಾಡಲು ಸರ್ಕಾರದಿಂದ ಇವರಿಗೆ ಹಣಕಾಸು ನೆರವು ಕೊಡಿಸುವುದಾಗಿ ಪೊಲೀಸ್ ಅಧಿಕಾರಿಗಳು ಆಶ್ವಾಸನೆ ನೀಡಿದರು.ಉತ್ತರ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ, ಯಶವಂತಪುರ ಉಪ ವಿಭಾಗದ ಎಸಿಪಿ ಜಿ.ಆರ್.ದೇಸಾಯಿ, ಯಶವಂತಪುರ ಇನ್‌ಸ್ಪೆಕ್ಟರ್ ಎಂ.ಎಲ್.ಪುರುಷೋತ್ತಮ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ವ್ಯವಸ್ಥಾಪಕ ಡಾ.ದೇಸಾಯಿ ಹಾಗೂ ಪಾಲಿಕೆ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry