ಶನಿವಾರ, ಜನವರಿ 18, 2020
20 °C

ನಗರದೆಲ್ಲೆಡೆ ಸಂಭ್ರಮದ ಗಣರಾಜೋತ್ಸವ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದೆಲ್ಲೆಡೆ ಗುರುವಾರ 63ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಎಂದಿನಂತೆ ಶಾಲೆ, ಕಾಲೇಜು ಮತ್ತು ಸರ್ಕಾರಿ ಇಲಾಖೆಗಳಲ್ಲಿ ಧ್ವಜಾರೋಹಣ ಸಮಾರಂಭವು ಸಂಭ್ರಮದಿಂದ ನಡೆಯಿತು.ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಆಕರ್ಷಕ ಪಥ ಸಂಚಲನ ನಡೆಸಿದರು. ಸಮಾರಂಭದ ನಂತರ ಗಣರಾಜ್ಯೋತ್ಸವ ಸಂಭ್ರಮದ ದ್ಯೋತಕವಾಗಿ ಸಿಹಿ ಹಂಚಲಾಯಿತು. ಬಹುತೇಕ ಸರ್ಕಾರಿ ಕಟ್ಟಡಗಳಲ್ಲಿ ತ್ರಿವರ್ಣ ಧ್ವಜವು ಹಾರಾಡಿತು. ಒಂದು ತಿಂಗಳ ಹಿಂದೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ತಾಲೀಮು ನಡೆಸುತ್ತಿದ್ದ ವಿದ್ಯಾರ್ಥಿಗಳು ಸಮಾರಂಭದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. `ವಂದೇ ಮಾತರಂ~ `ಹೇ ಭಾರತ್ ದೇಶ್ ಹೇ ಮೇರಾ~ ಸೇರಿದಂತೆ ವಿವಿಧ ದೇಶಭಕ್ತಿ ಗೀತೆಗಳಿಗೆ ಆದ್ಯತೆ ನೀಡಿ ವಿದ್ಯಾರ್ಥಿಗಳು ನೃತ್ಯ ಮತ್ತು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.ಸರ್ಕಾರಿ ರಜೆಯಿದ್ದುದರಿಂದ ವಿವಿಧ ರಂಗಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ಗಣರಾಜ್ಯದ ಸಂಭ್ರಮವನ್ನು ಮನೆಯಲ್ಲಿಯೇ ಆಚರಿಸಿದರು. ಎಂ.ಜಿ.ರಸ್ತೆ, ಬಿಗ್ರೇಡ್ ರಸ್ತೆ, ಮಲ್ಲೇಶ್ವರ ಮತ್ತು ಜಯನಗರ 4ನೇ ಬ್ಲಾಕ್‌ನ ಪಾದಚಾರಿ ಮಾರ್ಗಗಳಲ್ಲಿ ರಾಷ್ಟ್ರಧ್ವಜ ಮಾರಾಟ ಸಾಮಾನ್ಯವಾಗಿತ್ತು.ನೈರುತ್ಯ ರೈಲ್ವೆ ವಿಭಾಗವು ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರೈಲು ಸಂರಕ್ಷಣಾ ಪಡೆ ಮತ್ತು ಕೇಂದ್ರೀಯ ವಿದ್ಯಾಲಯದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು. ಇದೇ ಸಂದರ್ಭದಲ್ಲಿ ವಿಭಾಗದ ವ್ಯವಸ್ಥಾಪಕ ಮಣಿ ಅವರು ತಂಬಾಕು ವಿರೋಧಿ ಅಭಿಯಾನಕ್ಕೂ ಚಾಲನೆ ನೀಡಿ ಗಣರಾಜೋತ್ಸವ ದಿನಾಚರಣೆಗೆ ಅರ್ಥ ನೀಡಿದರು.ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಭಾರತ ಸೇವಾದಳದಿಂದ ನಗರದ ಕುಮಾರಕೃಪಾದಲ್ಲಿ ಧ್ವಜ ವಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರಿಗೆ ಸಂವಿಧಾನದತ್ತ ಹಕ್ಕುಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಮತ್ತು ಸಾಂವಿಧಾನಿಕ ಶಕ್ತಿಯನ್ನು ಬಲಪಡಿಸುವಂತೆ ವಿವಿಧ ಸಮಾರಂಭಗಳಲ್ಲಿ ಮಾತನಾಡಿದ ಚಿಂತಕರು ಪ್ರತಿಪಾದಿಸಿದರು.

 

 

ಪ್ರತಿಕ್ರಿಯಿಸಿ (+)