ನಗರದ ಅಭಿವೃದ್ಧಿಗೆ ಕಂಟಕವಾದ ವೈಮನಸ್ಸು

7

ನಗರದ ಅಭಿವೃದ್ಧಿಗೆ ಕಂಟಕವಾದ ವೈಮನಸ್ಸು

Published:
Updated:

ಕೋಲಾರ: ಸಚಿವರಾದ ಕೆ.ಎಚ್.ಮುನಿಯಪ್ಪ ಮತ್ತು ಆರ್.ವರ್ತೂರು ಪ್ರಕಾಶರ ಬಣಗಳಿಗೆ ಸೇರಿದ ನಗರಸಭೆ ಸದಸ್ಯರ ನಡುವಿನ ವೈಮನಸ್ಯ ಬಳಿಕ, ಇದೀಗ ನಗರಸಭೆ ಅಧ್ಯಕ್ಷೆ ನಾಜಿಯಾ ಮತ್ತು ಆಯುಕ್ತೆ ಆರ್.ಶಾಲಿನಿಯವರ ವೈಮನಸ್ಯನಿಂದ ನಗರಸಭೆ ಗಮನ ಸೆಳೆದಿದೆ. ನಗರದ ಅಭಿವೃದ್ಧಿ ಕಾರ್ಯಗಳಿಗೆ, ಸಮಸ್ಯೆಗಳ ನಿವಾರಣೆಗೆ ಸ್ಪಂದಿಸುತ್ತಿಲ್ಲ ಎಂದು ಇಬ್ಬರೂ ಪರಸ್ಪರ ಆರೋಪಿಸಿದ್ದಾರೆ.ನಗರದ 13ನೇ ವಾರ್ಡಿನ ಜನ ಮೂಲಸೌಕರ್ಯಕ್ಕಾಗಿ ಆಗ್ರಹಿಸಿ ನಗರಸಭೆ ಮುಂದೆ ಶುಕ್ರವಾರ ಬೆಳಿಗ್ಗೆ 11ರ ವೇಳೆಗೆ ಧರಣಿ ನಡೆಸಿದ ಬಳಿಕ ಇಬ್ಬರ ವೈಮನಸ್ಯ ಬಹಿರಂಗಗೊಂಡಿದೆ. ಇಬ್ಬರೂ ಪ್ರತ್ಯೇಕವಾಗಿ ಸುದ್ದಿಗಾರರೊಡನೆ ಮಾತನಾಡಿ `ಸಹಕಾರ-ಸ್ಪಂದನದ ಕೊರತೆ~ಯ ಅಂಶದ ಕಡೆಗೆ ಗಮನ ಸೆಳೆದಿದ್ದಾರೆ. ನಗರಸಭೆಯ ವ್ಯವಹಾರಗಳಲ್ಲಿ ಅಧ್ಯಕ್ಷೆ ನಾಜಿಯಾ ಅವರ ಪತಿ ಬಾಬಾಜಾನ್  ಮೂಗು ತೂರಿಸುತ್ತಿದ್ದಾರೆ ಎಂಬ ಆರೋಪವೂ ಇದೇ ಸಂದರ್ಭದಲ್ಲಿ ಕೇಳಿ ಬಂದಿದೆ.ಆಯುಕ್ತೆ ಏನಂತಾರೆ ?: ಸುದ್ದಿಗಾರರೊಡನೆ ಮಾತನಾಡಿದ ಆಯುಕ್ತೆ ಆರ್.ಶಾಲಿನಿ, ಅಧ್ಯಕ್ಷೆ ನಿರ್ಲಕ್ಷ್ಯ ಧೋರಣೆಯೇ ಜನರ ಸಮಸ್ಯೆ, ಅದರಲ್ಲೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಲು ಕಾರಣ ಎಂದು ಆರೋಪಿಸಿದರು.ಮುಖ್ಯಮಂತ್ರಿಗಳ ವಿಶೇಷ ನಿಧಿಯಲ್ಲಿ ಉಳಿದಿರುವ ರೂ 3.50 ಕೋಟಿ ಅನುದಾನವನ್ನು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಬಳಸುವ ಕುರಿತು ಮತ್ತು 2011-12ನೇ ಸಾಲಿನಲ್ಲಿ ಎಸ್‌ಎಫ್‌ಸಿ ಮುಕ್ತನಿಧಿ ಅಡಿಯಲ್ಲಿ ಬಿಡುಗಡೆಯಾಗಿರುವ ಮೊತ್ತಕ್ಕೆ ರೂಪಿಸಲಾಗಿರುವ ಕ್ರಿಯಾಯೋಜನೆಗಳಿಗೆ ಆಡಳಿತಾತ್ಮಕ ಮಂಜೂರಾತಿ ಪಡೆಯಲು ವಿಶೇಷ ಸಭೆ ನಡೆಸಲು ದಿನಾಂಕ ನಿಗದಿ ಮಾಡಿ ಎಂದು ಆ.31ರಂದೇ ಅಧ್ಯಕ್ಷೆಗೆ ಕಡತವನ್ನು ಕಳಿಸಿದ್ದರೂ ಇದುವರೆಗೂ ಸಭೆ ನಿಗದಿ ಮಾಡಿಲ್ಲ ಎಂದು ಆರೋಪಿಸಿದರು.ಅಧ್ಯಕ್ಷೆಯ ಪತಿ ಬಾಬಾಜಾನ್ ಅವರು ಕಚೇರಿಗೆ ದಿನವೂ ಬಂದು ನಗರಸಭೆ ವ್ಯವಹಾರದಲ್ಲಿ ಮೂಗು ತೂರಿಸುತ್ತಿದ್ದಾರೆ. ನಗರಸಭೆಯಲ್ಲಿ ದಿನವೂ ನಡೆಯುವ ಹಣಕಾಸು ವ್ಯವಹಾರಗಳ ಕುರಿತು ಮಾಹಿತಿ ನೀಡುವಂತೆ ಒತ್ತಾಯಿಸುತ್ತಾರೆ. 13ನೇ ವಾರ್ಡಿನಲ್ಲಿನ ಸಮಸ್ಯೆಗಳ ಬಗ್ಗೆ  ಮಾತನಾಡಲು ಅಧ್ಯಕ್ಷೆಯ ಸೂಚನೆ ಮೇರೆಗೆ ಅವರ ಕೊಠಡಿಗೆ ತೆರಳಿದಾಗ ಅಲ್ಲೆ ಇದ್ದ ಬಾಬಾಜಾನ್ ಅವರು ಮೇಲಧಿಕಾರಿಯಂತೆ ನನ್ನನ್ನು ಪ್ರಶ್ನಿಸಿದರು. ಅದು ನನ್ನಲ್ಲಿ ಬೇಸರ ಮೂಡಿಸಿದೆ. ಹೆಚ್ಚಿನ ಮಾಹಿತಿಯನ್ನು ಸಭೆಯಲ್ಲಿ ನೀಡುವೆ ಎಂದು ಅಧ್ಯಕ್ಷೆಗೆ ತಿಳಿಸಿರುವೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದರೂ, ಅಧ್ಯಕ್ಷರು ಸಭೆ ಕರೆಯದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಜನರ ಸಮಸ್ಯೆಗೆ ಯಾವ ರೀತಿಯಲ್ಲೂ ಸ್ಪಂದಿಸಲೂ ಆಗುತ್ತಿಲ್ಲ. ಆದರೆ ಈಗ ಅಧ್ಯಕ್ಷೆಯೇ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಕಸ ವಿಲೇವಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಕೆಲಸ ವಹಿಸುವ ಪ್ರಮಾಣ ಪತ್ರವನ್ನು ಅಧ್ಯಕ್ಷೆ ಗುತ್ತಿಗೆದಾರರಿಗೆ ನೀಡದೆ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ ಎಂದೂ ಆರೋಪಿಸಿದರು. ಹಿಂದಿನ ಉಪಾಧ್ಯಕ್ಷ ಎಸ್.ಆರ್. ಮುರಳಿಗೌಡರೂ ಹಲವು ವಿಷಯಗಳಲ್ಲಿ ಒತ್ತಡ ಹೇರುತ್ತಿದ್ದಾರೆ. ಅದರಿಂದಲೂ ಸಮರ್ಪಕವಾಗಿ ಕೆಲಸ ಮಾಡಲಾಗುತ್ತಿಲ್ಲ ಎಂದು ಆರೋಪಿಸಿದರು.ಅಧ್ಯಕ್ಷೆ ಏನಂತಾರೆ ? :ಈ ಆರೋಪಗಳಿಗೆ ಅಧ್ಯಕ್ಷೆ ನಾಜಿಯಾ ಕೂಡ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದರು. `ಪೌರಾಯುಕ್ತರು ಸಹಕಾರ ಕೊಡುತ್ತಿಲ್ಲ~ ಎಂಬುದ ಅವರ ಸ್ಪಷ್ಟ ನುಡಿಯಾಗಿತ್ತು.`ಸಭೆ ಕರೆಯಲು ಕೋರಿ ಆಯುಕ್ತರು ಆಗಸ್ಟ್‌ನಲ್ಲಿ ಯಾವ ಮನವಿಯನ್ನುೂ ಸಲ್ಲಿಸಿಲ್ಲ. ಕೆಲವೇ ದಿನದ ಹಿಂದೆ, ಅ.18ರಂದು ಪತ್ರ ಬರೆದಿದ್ದಾರೆ. 13ನೇ ವಾರ್ಡಿನ ಸಮಸ್ಯೆಗಳಿಗೆ ಸಂಬಂಧಿಸಿ ಮಾಹಿತಿ ಕೇಳಿದ್ದಕ್ಕೆ ಸ್ಪಷ್ಟ ಉತ್ತರ ನೀಡದ ಆಯುಕ್ತೆ ಸಭೆ ಕರೆದರೆ ಮಾಹಿತಿ ಕೊಡುವೆ ಎಂದು ಉದ್ಧಟತನದ ಉತ್ತರ ನೀಡಿದರು~ ಎಂದು ಆರೋಪಿಸಿದರು.ನನ್ನ ಬಳಿ ಕಸ ವಿಲೇವಾರಿಗೆ ಸಂಬಂಧಿಸಿ ಯಾವ ಕಡತವೂ ಇಲ್ಲ. ನಗರಸಭೆಯಲ್ಲಿ ನನ್ನ ಪತಿ ಅಥವಾ ಮನೆಯವರಾಗಲೀ ಅಧಿಕಾರ ನಡೆಸುತ್ತಿಲ್ಲ. ಹಾಗಿರುವುದಾದರೆ ಆ ಕುರಿತು ಸಾಕ್ಷ್ಯ ನೀಡಲಿ. ಈ ಬಗ್ಗೆಯೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.ಆಯುಕ್ತೆ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆಯೇ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ಒಪ್ಪದ ಅವರು, ಸಿಎಂ ಅನುದಾನದ ಬಗ್ಗೆ ಸರಿಯಾದ ಮಾಹಿತಿ ಕೊಡಿ ಎಂದರೆ ಆಯುಕ್ತೆ ಇದುವರೆಗೆ ಮಾಹಿತಿ ಕೊಟ್ಟಿಲ್ಲ. ಈ ಹಿಂದಿನ ಪೌರಾಯುಕ್ತರನ್ನೂ ಈ ಬಗ್ಗೆ ಕೇಳಿದ್ದೆ. ಆಗಲೂ ಮಾಹಿತಿ ದೊರಕಿರಲಿಲ್ಲ. ಹಿಂದಿನ ಆಡಳಿತ ಮಂಡಳಿಯೂ ಅದಕ್ಕೆ ಕಾರಣ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry