ಶುಕ್ರವಾರ, ಮೇ 7, 2021
26 °C

ನಗರದ ಇಕ್ಕಟ್ಟು ಓಣಿಗಳಲ್ಲಿ ದಿಕ್ಕೆಟ್ಟ ಕವಿತೆ ಅರಸುತ್ತಾ...

ನಟರಾಜ Updated:

ಅಕ್ಷರ ಗಾತ್ರ : | |

ಕರಾವಳಿಯಿಂದ, ಮಲೆನಾಡಿನಿಂದ ಮುಂಬಯಿಗೆ ತೆರಳಿ ನೆಲೆಸಿ, ಅಲ್ಲಿ ತಮ್ಮದೇ ಆದ ಕನ್ನಡ ಜಗತ್ತುಗಳನ್ನು ರೂಪಿಸಿಕೊಂಡವರು ಅನೇಕರಿದ್ದಾರೆ. ಅಂಥವರಲ್ಲಿ ವಿ.ಎಸ್.ಶ್ಯಾನ್‌ಭಾಗ್ ಕೂಡ ಒಬ್ಬರು. ಮಲೆನಾಡಿನ ರಿಪ್ಪನ್‌ಪೇಟೆಯ ಶ್ಯಾನ್‌ಭಾಗ್ ಮುಂಬಯಿಯಲ್ಲಿ ನೆಲೆಸಿ ಮೂರು ದಶಕಗಳಾದವು.ಇಲ್ಲಿದ್ದಾಗ ಹಚ್ಚಿಕೊಂಡಿದ್ದ ಕವಿತೆಯ ಸಖ್ಯ ಅವರಿಗಿನ್ನೂ ಬಿಸುಪು ಕಳೆದುಕೊಂಡಿದೆ ಅನ್ನಿಸಿಲ್ಲ. ದೈನಿಕದ ನಾಗಾಲೋಟದ ನಡುವೆ ಸಾಹಿತ್ಯ ಹಿನ್ನೆಲೆಗೆ ಸರಿದರೂ, ಅಂತರಂಗದ ಸುಖಕ್ಕೆ ಮತ್ತೆ ಮತ್ತೆ ಒದಗಿಬರುವುದು ಸಾಹಿತ್ಯವೇ ಅಲ್ಲವೇ? ಈ ಮಾತು ಶ್ಯಾನ್‌ಭಾಗ್‌ರ `ಇದು ಅಂತರಂಗ ಸುದ್ದಿ~ ಸಂಕಲನದ ಅನೇಕ ಕವಿತೆಗಳಲ್ಲಿ ಧ್ವನಿಸುತ್ತದೆ.`ಇದು ಅಂತರಂಗ ಸುದ್ದಿ~ ಶ್ಯಾನ್‌ಭಾಗ್‌ರ ಮೂರನೇ ಸಂಕಲನ. `ತಟ್ಟೀರಾಯ ಮತ್ತು ನಾನು~, `ಹೊಳೆದದ್ದನ್ನು ಹೇಳಲಿಲ್ಲ~ ಸಂಕಲನಗಳ ನಂತರ, ಸುಮಾರು ಹತ್ತು ವರ್ಷಗಳ ತರುವಾಯ ಮೂರನೇ ಸಂಕಲನ ಹೊರಬಂದಿದೆ.ಶಹರದ ಒತ್ತಡದ ಬದುಕಿನಲ್ಲಿ ಓದು-ಬರವಣಿಗೆ ಹಿಂದುಳಿಯುವುದು ಈ ಕಾಲದ ಎಲ್ಲ ಬರಹಗಾರರು ಎದುರಿಸಬೇಕಾದ ಆತಂಕವೇ ಆಗಿದೆ. ಇಂಥ ಆತಂಕವನ್ನು ಶ್ಯಾನ್‌ಭಾಗ್‌ರ `ಮರಳಿ ಕೊಡಿ ನನ್ನ ಕವಿತೆಗಳ~ ಕವಿತೆ ಅತ್ಯಂತ ಆರ್ದ್ರವಾಗಿ ಚಿತ್ರಿಸುತ್ತದೆ:

ಮುಂಬಯಿಗೆ ಬಂದಾಗ

ನೀವು ಕೊಟ್ಟ ಕೆಲಸಕ್ಕೆ, ಪಗಾರಕ್ಕೆ

ನನ್ನ ಕವಿತೆಗಳನ್ನು ನಿಮ್ಮಲ್ಲಿ

ಅಡವಿಟ್ಟಿದ್ದೆ

ನೀವೋ ಬಡ್ಡಿ ರಹಿತ ಠೇವಣಿಗಳಂತೆ

ಸನ್ಮಾನದ ಶಾಲುಗಳಂತೆ

ನಿಮ್ಮ ದಿಂಬಿನೊಳಗಿಟ್ಟು ನಿದ್ದೆ ಹೋದಿರಿ

ಆಧುನಿಕತೆಯ ಸವಲತ್ತುಗಳನ್ನು ನಮ್ಮದಾಗಿಸಿಕೊಳ್ಳುವ ಹಂಬಲದಲ್ಲಿ ಉದ್ಯೋಗದ ಸ್ಪರ್ಧೆ, ಮಾರುಕಟ್ಟೆಯ ಒತ್ತಡವನ್ನು ಅನುಭವಿಸುವುದು ಸಹಜವೇ ಆಗಿದೆ. ಆದರೆ, ಈ ಸ್ಪರ್ಧೆ-ಒತ್ತಡದ ನಂತರದ ಸಂಧ್ಯೆಯಲ್ಲಿ- `ಅಡವಿಟ್ಟ ಕವಿತೆಗಳ ಮರಳಿಕೊಡಿ / ಬೇಕಿದ್ದರೆ ನನ್ನ ಪಾಗಾರದ ಮನೆ ಮತ್ತೆ / ಪಗಾರಗಳ ಅಡವಿಟ್ಟು~ ಎನ್ನುವ ಹಳಹಳಿಕೆ ಶುರುವಾಗುತ್ತದೆ.ಆದರೆ, ಕವಿತೆ ಮತ್ತು ಪಗಾರವನ್ನು ಬದಲಿಸಿಕೊಳ್ಳಲಾಗದು. ಈ ವಿರೋಧಾಭಾಸವೇ ಕವಿತೆಗೆ ಹೊಸ ಧ್ವನಿಯನ್ನು ನೀಡುತ್ತದೆ. ಇದರೊಂದಿಗೆ `ಸಾಹಿತ್ಯ ನಮಗೆ ಯಾಕೆ ಬೇಕು?~ ಎನ್ನುವ ಪ್ರಶ್ನೆ ಕೇಳಿಕೊಳ್ಳಲೂ ಒತ್ತಾಯಿಸುತ್ತದೆ.`ಇದು ಅಂತರಂಗ ಸುದ್ದಿ~ ಎನ್ನುವ ಮತ್ತೊಂದು ಕವಿತೆಯಲ್ಲಿ (ಜಿ.ಎಸ್.ಶಿವರುದ್ರಪ್ಪನವರ `ಮುಂಬೈ ಜಾತಕ~ವನ್ನು ನೆನಪಿಸುವ ಪದ್ಯ) ನಗರದ ದೈನಿಕದಲ್ಲಿ ನಮಗೆ ನಾವೇ ಅನಾಮಧೇಯರಾಗುವ ಕುರಿತ ವಿಪರ್ಯಾಸವಿದೆ.

ಬೆಳಿಗ್ಗೆ ಏಳುವಾಗ ಸೂರ್ಯ ನೋಡಲಿಲ್ಲ

ಸಂಜೆ ಮನೆಗೆ ಬರುವಾಗ ಚಂದ್ರ ಕಾಣುವುದಿಲ್ಲ

ಬೆಳಿಗ್ಗೆ ಮತ್ತು ಸಂಜೆಯ ನಡುವೆ

ನನಗೆ ನಾನೇ ಕಾಡುವುದಿಲ್ಲ;

ಕಾಣುವುದಿಲ್ಲ

ಹೀಗೆ ಕಾಣದೇ ಹೋಗುವ ಬದುಕು ಕೊನೆಗೆ ಕಳೆದೇಹೋಗುತ್ತದೆ. ಕವಿ ಹೇಳುತ್ತಾರೆ- `ಹೊಡೆ ಮೊಳೆ ಗೋಡೆಗೆ ನಿನ್ನೆಯ ನಿನ್ನದೇ ಚಿತ್ರ / ನಾಳೆಗೆ ನಿನಗೇ ಗುರುತು ಸಿಗದ ವಿಚಿತ್ರ~.ಹೀಗೆ ನಮಗೆ ನಾವೇ ಕಳೆದುಹೋಗುವ `ಶಹರದ ಬದುಕು~ ಶ್ಯಾನ್‌ಭಾಗ್‌ರ ಕವಿತೆಗಳಲ್ಲಿ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತದೆ. ಒಂದೆಡೆ ಮುಗಿಲಿಗೆ ನಿಂತ ಮಹಡಿ ಮನೆಗಳು, ಇನ್ನೊಂದೆಡೆ ಇಕ್ಕಟ್ಟು ಗಲ್ಲಿ - ಗಟಾರವಾದ ರಸ್ತೆ.

ಎರಡು ಮಹಡಿಗಳ ನಡುವೆ

ಹಾಯುತ್ತದೆ ಗಲ್ಲಿ

ಸೋರಿದ ನಲ್ಲಿ ನೀರನು ಹೀರಿ

(ಎರಡು ಮಹಡಿಗಳ ನಡುವೆ)

ಶಹರದ ಕಿಷ್ಕಿಂಧೆಯಲ್ಲೂ ಎದುರಾಗುವ ಅಂತಃಕರಣವನ್ನು ಕಾಣಿಸಲು `ಇದು ಅಂತರಂಗ ಸುದ್ದಿ~ಯ ಕವಿ ಮರೆಯುವುದಿಲ್ಲ. ನೌಕರಿಗೆ ಹೊರಡುವ ಆತುರದಲ್ಲಿ `ಕಂದ ಪದ್ಯ~ ಕೈಗೆ ಸಿಗುತ್ತದೆ. ನಡೆವ ದಾರಿಯಲ್ಲಿ ನಮ್ಮನ್ನು ಪ್ರೀತಿಸುವವರೂ ಇದ್ದಾರೆ ಎನ್ನುವ ಅರಿವು ಹಾಗೂ ಹೊಸ ದಾರಿಗಳ ಬಗೆಗಿನ ಕುತೂಹಲ ಕಾಣಿಸುತ್ತದೆ.

ಮುಂಬಯಿ ಕನ್ನಡಿಗರ ಪಾಲಿಗೆ ಯಶವಂತ ಚಿತ್ತಾಲರು ಹಿರಿಯಣ್ಣನಂತೆ. ಚಿತ್ತಾಲರ ಬಗ್ಗೆ ಶ್ಯಾನ್‌ಭಾಗ್ ರಚಿಸಿರುವ `ಚಿತ್ತಾಲ~ ಕವಿತೆ ಸೊಗಸಾಗಿದೆ. ಅವರು ಕಾಣಿಸುವ ಚಿತ್ತಾಲ ಮೂರ್ತಿಯ ಒಂದು ಚಿತ್ರಣ-

ಇವರು

ನಮ್ಮ ಚಿತ್ತ

ಆಲ

ಚಾಚಿದಷ್ಟೂ ಕಣ್ಣ ದೃಷ್ಟಿ

ಬೇಲಿ ದಾಟಿ ನಿಂತ

ಮಧುಶಾಲ

ಈ ಆಲದ ಸುತ್ತ ನೂರೆಂಟು ಸುತ್ತಿ ಬಿಟ್ಟು ಬಿಡಿಚಿತ್ತ

ಕೈಯ ಬೆರಳಿಗೆ ಬಣ್ಣ ಬಿಟ್ಟ ಚಿಟ್ಟೆ ಪದ ನಿಮಿತ್ತ

ನಗರದ ಬದುಕಿನ ತವಕತಲ್ಲಣಗಳ ಬಗ್ಗೆ ಕವಿ ನೋವು-ವಿಷಾದದಿಂದ ಬರೆದರೂ ಅವರ ಕವಿತೆಗಳಿಗೆ ಶಹರದ ಬದುಕೇ ವಸ್ತುವಾಗಿದೆ ಎನ್ನುವುದನ್ನು ಗಮನಿಸಬೇಕು. ಕನ್ನಡದ ಅನೇಕ ಬರಹಗಾರರು ನಗರವಾಸಿಗಳಾಗಿದ್ದರೂ, ನಮ್ಮ ಬರಹಗಾರರಿಗೆ ಇವತ್ತಿಗೂ ನಗರವೆನ್ನುವುದು ಅನ್ಯವೇ ಆಗಿದೆ ಹಾಗೂ ಬರವಣಿಗೆಯ ವಸ್ತುವಿಗಾಗಿ ಲೇಖಕರು ಮತ್ತೆ ಮತ್ತೆ ನಗರದತ್ತ ತುಡಿಯುವುದು ಸಾಮಾನ್ಯವಾಗಿದೆ.

 

ಇಂಥ ಸಂದರ್ಭದಲ್ಲಿ ಶ್ಯಾನ್‌ಭಾಗ್‌ರ `ಇದು ಅಂತರಂಗ ಸುದ್ದಿ~ ಸಂಕಲನ ನಗರದ ವಿವಿಧ ಮುಖಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಲು ಪ್ರಯತ್ನಿಸುವ ಮೂಲಕ ಗಮನಸೆಳೆಯುತ್ತದೆ.ಇದು ಅಂತರಂಗ ಸುದ್ದಿ

ಲೇ: ವಿ.ಎಸ್.ಶ್ಯಾನ್‌ಭಾಗ್

ಪು: 72; ಬೆ: ರೂ. 100

ಪ್ರ: ಕವಿತಾ ಪ್ರಕಾಶನ, ಬೋರಿವಿಲಿ, ಮುಂಬಯಿ- 400 103.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.