ನಗರದ ಎಲ್ಲೆಡೆ ಕನ್ನಡ ಕಂಪು

7

ನಗರದ ಎಲ್ಲೆಡೆ ಕನ್ನಡ ಕಂಪು

Published:
Updated:
ನಗರದ ಎಲ್ಲೆಡೆ ಕನ್ನಡ ಕಂಪು

ಬೆಂಗಳೂರು: ನಗರದ ಮೂಲೆ ಮೂಲೆಗಳಲ್ಲಿ ಮಂಗಳವಾರ ಕರುನಾಡ ದೀಪ, ಸಿರಿನುಡಿಯ ದೀಪ ಬೆಳಗಿತು. ಅನ್ಯ ಭಾಷೆಯ ಪ್ರಭಾವ ಹೆಚ್ಚಿರುವ ಪ್ರದೇಶಗಳಲ್ಲಿ ಕೂಡ ಹಳದಿ ಕೆಂಪು ಬಾವುಟ ರಾರಾಜಿಸಿತು. ಅನೇಕ ಸಂಘ ಸಂಸ್ಥೆಗಳ ಸದಸ್ಯರು ಸಿಹಿ ಹಂಚಿ, ಪಟಾಕಿ ಸಿಡಿಸಿ ಕನ್ನಡ ತಾಯಿಯನ್ನು ಸ್ವಾಗತಿಸಿದರು.ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಚಾಲನೆ ನೀಡಿದರು. ನಗರದ ಮೈಸೂರು ಬ್ಯಾಂಕ್ ವೃತ್ತದ ನೃಪತುಂಗ ವೇದಿಕೆಯಿಂದ ಆರಂಭವಾದ ಮೆರವಣಿಗೆ, ಕೆಂಪೇಗೌಡ ರಸ್ತೆ, ಗುಬ್ಬಿ ತೋಟದಪ್ಪ ರಸ್ತೆ, ಆನಂದ ರಾವ್ ವೃತ್ತ, ಶೇಷಾದ್ರಿ ವೃತ್ತ, ಕೆ.ಆರ್.ವೃತ್ತ, ನೃಪತುಂಗ ರಸ್ತೆಯ ಮೂಲಕ ಮರಳಿ ಮೈಸೂರು ಬ್ಯಾಂಕ್ ವೃತ್ತ ತಲುಪಿತು.ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಪ್ರತಿಕೃತಿಗಳನ್ನು ಹೊಂದಿದ ಸ್ತಬ್ಧಚಿತ್ರ ಸೇರಿದಂತೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ಆನೆಯೊಂದು ವೆುರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ವಿವಿಧ ಜಾನಪದ ತಂಡಗಳ ನೃತ್ಯ ಪ್ರದರ್ಶನ ಇದೇ ಸಂದರ್ಭದಲ್ಲಿ ನಡೆಯಿತು. ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತಿತರರು ಉತ್ಸವದಲ್ಲಿ ಪಾಲ್ಗೊಂಡರು.ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಕೆಂಪೇಗೌಡ ರಸ್ತೆಯ ಪುಲಿಕೇಶಿ ಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ರಾಣಿ ಸತೀಶ್, ಪತ್ರಕರ್ತ ವೆಂಕಟರಮಣ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ಮುಖ್ಯಮಂತ್ರಿ ಸದಾನಂದಗೌಡ ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗದಲ್ಲಿರುವ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆಯಲ್ಲಿ ನಾಡಿನ ಸಂಸ್ಕೃತಿ ಪರಂಪರೆ ಸಾರುವ ಸ್ತಬ್ದ ಚಿತ್ರಗಳು, ಜಾನಪದ ಕಲಾ ತಂಡಗಳು  ನೋಡಗರನ್ನು ಆಕರ್ಷಿಸಿದವು. ಮೇಯರ್ ಶಾರದಮ್ಮ, ಸಂಸದ ಪಿ.ಸಿ.ಮೋಹನ್, ಸಂಘದ ಗುರುದೇವ ನಾರಾಯಣ ಕುಮಾರ್ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡರು.ಅಖಿಲ ಕರ್ನಾಟಕ ಓಂಶಕ್ತಿ ಕನ್ನಡ ವೇದಿಕೆಯ ಸದಸ್ಯರು ಮೆಜೆಸ್ಟಿಕ್ ಸಮೀಪ ಇರುವ ವೀರ ಸಂಗೊಳ್ಳಿರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ವೇದಿಕೆಯ ವಾರ್ಷಿಕೋತ್ಸವ ಆಚರಿಸಿದರು.ಈ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರನ್ನು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಶಾಸಕ ದಿನೇಶ್ ಗುಂಡೂರಾವ್, ಬಿಬಿಎಂಪಿ ಸದಸ್ಯ ರವೀಂದ್ರ ಮತ್ತಿತರರು ಸನ್ಮಾನಿಸಿದರು.

 

ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ, ವಿಧವೆಯರಿಗೆ ಹಿಟ್ಟು ರುಬ್ಬುವ ಗಿರಣಿ, ಕ್ರೀಡಾಪಟುಗಳಿಗೆ ಕ್ರೀಡಾ ಸಾಮಗ್ರಿ ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ಗಳನ್ನು ವಿತರಿಸಲಾಯಿತು.ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘವು ಮಂಗಳವಾರ ಸಂಘದ ಆವರಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಹಮ್ಮಿಕೊಂಡಿತ್ತು. ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಜೆ.ಕಾಳೇಗೌಡರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.ಸಮಾರಂಭದಲ್ಲಿ  ಸಂಘದ ಖಜಾಂಚಿ ಕೆ.ಜಿ.ಹನುಮಂತರಾಜು, ಜಂಟಿ ಕಾರ್ಯದರ್ಶಿ ಟಿ.ವಾಸನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಟಿ.ಸುರೇಶ್, ಪಿ.ಅಂಬರೀಶ್, ಟಿ.ಮುತ್ತುರಾಜ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕರ್ನಾಟಕ ರಕ್ಷಣಾ ವೇದಿಕೆ ಮಲ್ಲೇಶ್ವರ ಆಟದ ಮೈದಾನದಲ್ಲಿ ಕನ್ನಡ ಕ್ರಾಂತಿ ಧ್ವನಿ ಸುರಳಿ ಬಿಡುಗಡೆ ಸಮಾರಂಭ ಹಮ್ಮಿಕೊಂಡಿತ್ತು. ಕಾಡು ಮಲ್ಲೇಶ್ವರ ದೇವಾಲಯದಿಂದ ಮೈದಾನದವರೆಗೆ ನಾಡು ನುಡಿ ಪರಂಪರೆಯನ್ನು ಬಿಂಬಿಸುವ ಜನಪದ ತಂಡಗಳ ಬೃಹತ್ ಮೆರವಣಿಗೆ ನಡೆಯಿತು.ಲಾಲ್‌ಬಾಗ್‌ನ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಡಿಗೆದಾರರ ಒಕ್ಕೂಟ ಮತ್ತು ನಡಿಗೆದಾರರರ ಸಂಘದ ಸದಸ್ಯರು ರಾಜ್ಯೋತ್ಸವ ಆಚರಿಸಿದರು. ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಸಂಘದ ಸಿ.ಕೆ.ರವಿಚಂದ್ರ, ವೈ.ಜಯರಾಮ್, ಶ್ರೀ ಕೃಷ್ಣ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪರಿಷತ್ತಿನ ಅಧ್ಯಕ್ಷರಾದ ವಿ.ಎ.ರಾಣೋಜಿರಾವ್ ಸಾಠೆ ಧ್ವಜಾರೋಹಣ ಮಾಡಲಾಯಿತು. ಈ ಸಂದರ್ಭದಲ್ಲಿ ಸಿಹಿ ಹಂಚಲಾಯಿತು. ಪರಿಷತ್ತಿನ ಕಾರ್ಯದರ್ಶಿ ವಿ.ಶಿವಾಜಿರಾವ್ ಜಾಧವ್, ಖಜಾಂಚಿಗಳಾದ ಎ. ಭೈನೋಜಿರಾವ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಹೊಸಕೆರೆ ಹಳ್ಳಿ ಹಿತರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಶಂಕರ್‌ನಾಗ್ ಆಟೊ ನಿಲ್ದಾಣವನ್ನು ಬಿಬಿಎಂಪಿ ಸದಸ್ಯ ಎಚ್.ನಾರಾಯಣ್ ಆಟೊ ಚಾಲನೆ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿದರು.ಬಿಇಎಲ್ ಕಾರ್ಮಿಕರ ಹಿತರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಉದ್ಘಾಟಿಸಿದರು. ಪಾಲಿಕೆ ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಂಡಪ್ಪ, ಸಂಗೀತ ನಿರ್ದೇಶಕ ಆರ್.ರತ್ನಂ, ಬಿಇಎಲ್ ಪ್ರಧಾನ ವ್ಯವಸ್ಥಾಪಕ ವಿ.ಮಹೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತ್ಯಾಗರಾಜ ನಗರದ ಭೈರಪ್ಪ ಬ್ಲಾಕ್‌ನಲ್ಲಿ ಕೆಂಪೇಗೌಡ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಡಾ.ಬಿ.ಗುರಪ್ಪನಾಯ್ಡ ಧ್ವಜಾರೋಹಣ ಮಾಡಿದರು.ದಿ ಪ್ಯಾರಡೈಸ್ ವಸತಿ ಶಾಲೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಅಧ್ಯಕ್ಷ ಮಂಜುನಾಥ್, `ಕನ್ನಡ ನಾಡಿನಲ್ಲಿ ಹುಟ್ಟಿರುವುದೇ ಒಂದು ಪುಣ್ಯದ ಕಾರ್ಯ. ಕನ್ನಡದ ಕಾರ್ಯಕ್ಕೆ ಯುವಕರು ಮುಂದಾಗಬೇಕು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕು~ ಎಂದು ಹೇಳಿದರು. ಪ್ರಾಂಶುಪಾಲ ಡಾ.ರಬ್ಬಿ ಪುತ್ರನ್, ಶಿಕ್ಷಕರಾದ ಪ್ರಸಾದ್ ಶ್ರೀ ಕೃಷ್ಣ, ಪಿ.ಆರ್,ಬಿ ಕುಮಾರ್, ಮುನಿರಾಜ್‌ಬಾಬು, ನಾರಾಯಣಪ್ಪ ಮುಂತಾದವರು ಭಾಗವಹಿಸಿದ್ದರು.ಬಿಎಂಟಿಸಿ 24ನೇ ಘಟಕ ರಾಜ್ಯೋತ್ಸವದ ಪ್ರಯುಕ್ತ ಚಲನಚಿತ್ರ ನಿರ್ದೇಶಕ ಎಸ್.ಕೆ.ಭಗವಾನ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿತು. ಘಟಕದ ವ್ಯವಸ್ಥಾಪಕ ಬಿ.ಜೆ.ಪ್ರಭಾಕರನ್, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಎಲ್.ಹರೀಶ್, ಕಾರ್ಯದರ್ಶಿ ವಿ.ರಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಕನ್ನಡ ಕಣ್ಮಣಿ ಡಾ. ರಾಜ್‌ಕುಮಾರ್ ಸಾಂಸ್ಕೃತಿಕ ಸಂಸ್ಥೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿತು. ಕಾರ್ಯಕ್ರಮದಲ್ಲಿ ಚಿತ್ರ ನಿರ್ಮಾಪಕರಾದ ಸಾ.ರಾ.ಗೋವಿಂದು, ಗೋವಿಂದಹಳ್ಳಿ ದೇವೇಗೌಡ, ಧರಣೇಶ್ ಗೌಡ, ಗಿರಿಶ್‌ಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry