ನಗರದ ಚೆಲುವ-ಚೆಲುವೆ

7

ನಗರದ ಚೆಲುವ-ಚೆಲುವೆ

Published:
Updated:

ಮತ್ತದೇ ಫ್ಯಾಶನ್ ಶೋ. ತೆಳ್ಳಗಿನ ಬೆಳ್ಳಗಿನ ಹತ್ತಾರು ಲಲನೆಯರ ಕೃತಕ ನಗುವಿನ ರ‌್ಯಾಂಪ್ ಶೋ ಎಂದು ಮೂಗು ಮುರಿಯುವವರೂ ಅಲ್ಲಿ ನಿಂತಿದ್ದರು. ಅಲ್ಲಿನ ಸೊಬಗಿಗೆ ಬೆರಗಾಗಿದ್ದರು. ಆ ಸೌಂದರ್ಯ ರಾಶಿಗೆ ಸಂಜೆ ಸೂರ್ಯನೂ ಕೆಂಪಾಗಿ ನಾಚಿ ಮರೆಯಾಗಿದ್ದ!ರಂಗಸಜ್ಜಿಕೆಯೂ ಅಷ್ಟೇ. ಅರಮನೆಯಂಥ ಬೃಹತ್ ಕಟ್ಟಡ. ಮುಂದೆ ಬೃಹತ್ ಜನಜಂಗುಳಿ. ನೀಲಿ ಬಣ್ಣದ ರತ್ನಗಂಬಳಿ. ಝಗಮಗಿಸುತ್ತಿದ್ದ ವಿದ್ಯುತ್ ಲೈಟ್‌ಗಳನ್ನೂ ನಾಚಿಸುವ ರಾಜಕುಮಾರ, ರಾಜಕುಮಾರಿಯರ ನಡಿಗೆ.ಅದು ಮಿಸ್ಟರ್ ಹಾಗೂ ಮಿಸ್ ಬೆಂಗಳೂರು ಸ್ಪರ್ಧೆ. ಉದ್ಯಾನನಗರಿಯಲ್ಲಿ ಸುಂದರಿಯರಿಗೆ ಕೊರತೆಯೇ? ಅಳೆದೂ ಸುರಿದೂ ನೂರಕ್ಕೂ ಹೆಚ್ಚು ಸ್ಪರ್ಧಿಗಳಿಂದ ಆಯ್ದ 24 ಮಂದಿ ಗ್ರಾಂಡ್ ಫೈನಲ್‌ಗೆ ಆಯ್ಕೆಯಾಗಿದ್ದರು. ಚೆಲುವಿನಲ್ಲಿ ಒಬ್ಬರಿಂದೊಬ್ಬರು ಸ್ಪರ್ಧಿಗಳೇ... ಎರಡು ಗಂಟೆಗೂ ಹೆಚ್ಚುಕಾಲ ಒಂಟಿ ಕಾಲಲ್ಲಿ ಕಾದು ನಿಂತಿದ್ದ ಜನರೂ ಆ ಕ್ಷಣ ನೋವು ಮರೆತು ಖುಷಿಪಟ್ಟರು.ಉತ್ತಮ ನೋಟ, ಮೈಮಾಟ, ಸ್ಟೈಲ್, ವಸ್ತ್ರವಿನ್ಯಾಸ, ಆಂಗಿಕ ಭಾಷೆಗಳ ಆಧಾರದ ಮೇಲೆ ತೀರ್ಪು ನೀಡಲಾಯಿತು. ಮೊಘಲ್, ಕ್ಯಾಶುವಲ್, ಎಥ್ನಿಕ್ ವಿಭಾಗಗಳಲ್ಲಿ ಸ್ಪರ್ಧಿಗಳು ತಮ್ಮ ಸೌಂದರ್ಯ ಪ್ರದರ್ಶಿಸಿದರು. ಅನಾಮಿಕಾ ಹಾಗೂ ದಿನೇಶ್ ವಸ್ತ್ರವಿನ್ಯಾಸಕರಾಗಿದ್ದರು.ಅವಿಜ್ಞಾ ಪ್ರೊಡಕ್ಷನ್‌ನ ನಿರ್ದೇಶಕ ಕಾರ್ತಿಕ್ ಹೇಳುವಂತೆ, `ಇದು ಒಂದು ವಿಶಿಷ್ಟ ಪ್ರಯತ್ನ. ಬೇರೆ ಕಾರ್ಯಕ್ರಮಗಳಂತೆ ಇಲ್ಲಿ ಲಕ್ಷಗಟ್ಟಲೆ ಹಣ ವಸೂಲಿ ಮಾಡಿಲ್ಲ. ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಸಾಧ್ಯವಾಗಬೇಕು ಎಂಬ ಕಾರಣಕ್ಕೆ ಇಲ್ಲಿ ಯಾವುದೇ ಶುಲ್ಕ ನಿಗದಿಪಡಿಸಿಲ್ಲ. ಮಿ.ಹಾಗೂ ಮಿಸ್ ಬೆಂಗಳೂರು ಎಂಬ ಪ್ರಶಸ್ತಿ ನೀಡುವುದಾದರೂ ನಗರದಲ್ಲಿ ವಾಸಿಸುವ ಇತರ ರಾಜ್ಯದವರೂ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಅದರಂತೆ ಭೂತಾನ್, ಮಣಿಪುರಿ ಮೂಲದವರೂ ಪಾಲ್ಗೊಂಡಿದ್ದರು~.`ಡ್ಯಾನ್ಸ್ ಕಾರ್ಯಕ್ರಮವಾದರೆ ಸ್ಟೆಪ್ ನೋಡಿ ವಿಜೇತರನ್ನು ಆಯ್ಕೆ ಮಾಡಬಹುದು. ಆದರೆ ಇಲ್ಲಿ ಕೇಶ ವಿನ್ಯಾಸದಿಂದ ಕಾಲಿನ ಉಗುರಿನವರೆಗಿನ ಎಲ್ಲಾ ಸೂಕ್ಷ್ಮತೆಗಳನ್ನೂ ಗಮನಿಸಬೇಕು. ತೀರ್ಪುಗಾರರನ್ನು ಕರೆಯಿಸಿದ್ದರೂ ಅಂತಿಮ ಆಯ್ಕೆಯ ಹಕ್ಕು ಸಾರ್ವಜನಿಕರಿಗೇ ನೀಡಲಾಗಿತ್ತು. ಅವರೇ ಈ ಬಾರಿಯ ಮಿಸ್ ಹಾಗೂ ಮಿಸ್ಟರ್ ಬೆಂಗಳೂರು ಅಭ್ಯರ್ಥಿಗಳ ಆಯ್ಕೆ ಮಾಡಿದರು~ ಎನ್ನುತ್ತಾರೆ ಹತ್ತಾರು ಮ್ಯಾನೇಜ್‌ಮೆಂಟ್ ಕಾರ್ಯಕ್ರಮ ನಡೆಸಿದ ಅನುಭವವಿರುವ ಕಾರ್ತಿಕ್.ಸುಂದರ ಸಂಜೆಯಲ್ಲಿ ಆ ಕಾರ್ಯಕ್ರಮ ನಡೆದಿದ್ದು ಬೈಯ್ಯಪ್ಪನಹಳ್ಳಿ ಸಮೀಪ ಹೊಸದಾಗಿ ನಿರ್ಮಾಣವಾದ ಗೋಪಾಲನ್ ಮಾಲ್‌ನಲ್ಲಿ. ಅವಿಜ್ಞಾ ಹಾಗೂ ಇನ್‌ಫಾಂಟ್ ಫ್ಯಾಶನ್ ಸ್ಕೂಲ್ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿತ್ತು. ಪುಟಾಣಿಗಳಾದ ನಿಶಿತಾ ಹಾಗೂ ಚಾರು ಅವರ ರ‌್ಯಾಂಪ್ ವಾಕ್ ಮೆಚ್ಚುಗೆ ಗಳಿಸಿತು. ಸಾಯಿ ಗೋಲ್ಡ್ ಪ್ಯಾಲೆಸ್ ಮಾಲಿಕ ಸರವಣ್ ಅತಿಥಿಗಳಾಗಿ ಆಗಮಿಸಿದ್ದರು. ಮೈಸೂರು ಮೂಲದ ಪೂರ್ಣಿಮಾ ಮಿಸ್ ಬೆಂಗಳೂರು ಹಾಗೂ ಇಲ್ಲಿಯವರೇ ಆದ ದಕ್ಷ್ ಮಿಸ್ಟರ್ ಬೆಂಗಳೂರು ಆಗಿ ಹೊರಹೊಮ್ಮಿದರು.ಮಿಸ್.ಬೆಂಗಳೂರು ಮಾತು...

ಈ ಬಾರಿಯ ಮಿಸ್.ಬೆಂಗಳೂರು ಆಗಿ ಹೊರಹೊಮ್ಮಿದ ಪೂರ್ಣಿಮಾ ಕೋಟೆ ಮೂಲತಃ ಮೈಸೂರಿನವರು. ಬಿಕಾಂ ಅಂತಿಮ ವರ್ಷದಲ್ಲಿ ಓದುತ್ತಿರುವ ಪೂರ್ಣಿಮಾ ಕಳೆದ ಬಾರಿ ಮಿಸ್.ಮೈಸೂರು ಆಗಿ ಆಯ್ಕೆಯಾಗಿದ್ದವರು. ಪ್ರಸ್ತುತ ಆರ್ಯಾಸ್ ಲವ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಪೂರ್ಣಿಮಾಗೆ ಕೈಯಲ್ಲಿ ಇನ್ನೂ ಎರಡು ಹೆಸರಿಡದ ಚಿತ್ರಗಳಿವೆ.`ಮಿಸ್.ಬೆಂಗಳೂರು ಎಂಬ ಪಟ್ಟಕ್ಕೆ ಆಯ್ಕೆಯಾಗಿದ್ದು ತುಂಬಾ ಖುಷಿ ಕೊಟ್ಟಿದೆ. ಪಬ್ಲಿಕ್ ಬಳಿ ನಿಮ್ಮ ಆಯ್ಕೆ ಯಾರು ಎಂದು ಕೇಳಿದಾಗ ಎಲ್ಲರೂ ನನ್ನ ಸಂಖ್ಯೆಯನ್ನೇ ಉಚ್ಚರಿಸಿದ್ದು ಅಚ್ಚರಿ ನೀಡಿತ್ತು. ತೀರ್ಪುಗಾರರ ಆಯ್ಕೆಯೂ ಅದೇ ಆಗಿದ್ದರಿಂದ ನಾನು ಮಿಸ್ ಬೆಂಗಳೂರು ಕಿರೀಟ ಧರಿಸಿದೆ. ಮುಂದೆ ಚಿತ್ರರಂಗದಲ್ಲಿ ಮುಂದುವರೆಯಬೇಕೆಂಬ ಕನಸಿದೆ. ಆದರೆ ಹಠ ಇಲ್ಲ. ಬದುಕು ಹೇಗೆ ಸಾಗುವುದೋ ಅದರೊಂದಿಗೆ ಹೆಜ್ಜೆ ಹಾಕುವುದು. ಉನ್ನತ ಶಿಕ್ಷಣ ಪಡೆಯಬೇಕೆಂಬ ಹಂಬಲವೂ ಇದೆ~ ಎನ್ನುತ್ತಾ ಹೂ ನಗೆ ಚೆಲ್ಲಿದರು.`ನಟನೆ ನನ್ನ ಕನಸು~

ಕ್ರೈಸ್ಟ್ ಕಾಲೇಜಿನಲ್ಲಿ ಈಗಷ್ಟೇ ಎಂಬಿಎಗೆ ಸೇರಿರುವ ಹುಡುಗ ದಕ್ಷ್. ಕಳೆದ ವಾರ ನಡೆದ ಮಿ.ಸ್ಯಾಂಡಲ್‌ವುಡ್‌ನಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದು ಚಿತ್ರರಂಗದವರಿಗೂ ಪರಿಚಿತನಾದವ. ವೃತ್ತಿಪರ ಗಾಯಕ ದಕ್ಷ್ ಸಂತಸ ಹಂಚಿಕೊಂಡಿದ್ದು ಹೀಗೆ...`ಆ ಕ್ಷಣ ಮರೆಯಲು ಸಾಧ್ಯವಿಲ್ಲ. ತೀರ್ಪುಗಾರರ ಹಾಗೂ ಸಾರ್ವಜನಿಕರ ಆಯ್ಕೆ ನಾನೇ ಆಗಿದ್ದು ಸಂತಸದೊಂದಿಗೆ ಆಶ್ಚರ್ಯವನ್ನೂ ಮೂಡಿಸಿತ್ತು. ಈ ಪಟ್ಟದೊಂದಿಗೆ ಇನ್ನೂ ಹತ್ತು ಹಲವು ಅವಕಾಶಗಳು ಬರುತ್ತಿವೆ. ಜಾಹೀರಾತು ಕಂಪೆನಿಗಳು ಈಗಾಗಲೇ ಸಂಪರ್ಕಿಸಿವೆ.ಮಾಡೆಲಿಂಗ್ ಲೋಕದಲ್ಲಿ ಮುಂದುವರೆಯುವ ಕನಸಿದೆ. ಚಿತ್ರರಂಗದಲ್ಲಿ ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇನೆ. ಹಲವಾರು ನಾಟಕಗಳಲ್ಲಿ ನಟಿಸಿದ ಅನುಭವವಿದೆ~

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry