ನಗರದ ನೀರಡಿಕೆ

7

ನಗರದ ನೀರಡಿಕೆ

Published:
Updated:

ಜನ ಜಾನುವಾರಗಳಿಗೆ ಕುಡಿಯುವ ನೀರಿಗಾಗಿ ಧರ್ಮಾಂಬುದಿ, ಕೆಂಪಾಂಬುದಿ, ಕಾರಂಜಿ, ಸಂಪಂಗಿ, ಹಲಸೂರು ಮೊದಲಾದ ಕೆರೆಗಳನ್ನು ನಗರದ ಸುತ್ತಲೂ ನಿರ್ಮಿಸಿದ ಕೆಂಪೇಗೌಡರ ಕತೆ ನಮಗೆ ಗೊತ್ತು.ಒಬ್ಬ ಮುದುಕಿಯ ಒಂಟಿ ಗುಡಿಸಲಿದ್ದ ಈ ಕುಟೀರ ನಂತರದಲ್ಲಿ ಬೆಂದಕಾಳೂರೆನ್ನಿಸಿ ಕೊಂಡು (ಬೆಂದಕಾಡೂರು, ಬೆಂಗಾಡೂರು) ಆನಂತರ ಇಲ್ಲಿಗೆ ಬಂದು ಸೇರಿದ ಹತ್ತಾರು ಒಕ್ಕಲುತನದಿಂದ ಗ್ರಾಮ ಎಂದು ಗುರುತಿಸಿಕೊಂಡಿತು.1871ರ ವೇಳೆಗೆ ಈ ಪಟ್ಟಣದ ಜನಸಂಖ್ಯೆ ಒಂದು ಲಕ್ಷ ಮೀರಿರಲಿಲ್ಲ. ಈಗ ನಗರದ ಜನಸಾಂದ್ರತೆ ಅಂದಾಜು 95 ಲಕ್ಷ ಮುಟ್ಟಿದೆ. ಕೇವಲ ನಾಲ್ಕು ಕಿಲೋಮೀಟರ್ ವಿಸ್ತೀರ್ಣವಿದ್ದ ಕುಗ್ರಾಮ, ಇಂದು 810 ಚದರ ಕಿಲೋ ಮೀಟರ್‌ಗೂ ಹೆಚ್ಚು ವಿಸ್ತೀರ್ಣಕ್ಕೆ ಹರಡಿ ಬೃಹತ್ ಬೆಂಗಳೂರು ನಗರವಾಗಿದೆ.ಬೆಂಗಳೂರು ಜಲಮಂಡಳಿಯ ಒಡಂಬಡಿಕೆಯಲ್ಲಿ ಫೆಬ್ರುವರಿ 1ರಿಂದ 3ರವರೆಗೆ `ಅಂತರರಾಷ್ಟ್ರೀಯ ನೀರಿನ ಶೃಂಗ ಸಭೆ~ ನಡೆಯುತ್ತಿದೆ. ಕೇಂದ್ರ ಸಂರಕ್ಷಣಾ ಅಭಿವೃದ್ಧಿ, ಭಾರತೀಯ ನೀರಾವರಿ ಸಂಘಗಳು ಈ ಕಮ್ಮಟವನ್ನು ಸಂಘಟಿಸಿವೆ. ಲಭ್ಯ ಜಲಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಲು ತಂತ್ರಜ್ಞಾನವನ್ನು ಅಳವಡಿಸಿ ಅದನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುವುದು ಇದರ ಉದ್ದೇಶ.ಸರೋವರಗಳ ನಗರ ಅನ್ನಿಸಿದ್ದ ಬೆಂಗಳೂರಿನಲ್ಲಿ 1833ರಲ್ಲಿ ಕುಡಿಯುವ ನೀರಿಗೂ ಬರ ಬಂತು. ಆಗ  ಕುಮದ್ವತಿ, ಅರ್ಕಾವತಿ ನದಿಗಳಿಗೆ ಹೆಸರುಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಬಳಿ ಅಡ್ಡಕಟ್ಟಿ ನಗರಕ್ಕೆ ನೀರನ್ನು ಹರಿಸಲಾಯಿತು.

 

ದಿನ ಕಳೆದಂತೆ ಈ ಎರಡೂ ಜಲಮೂಲಗಳು ಬತ್ತಿ ಬರಿದಾಗುತ್ತಾ ಬಂದವು. ಆನಂತರದಲ್ಲಿ ಕಾವೇರಿ ನದಿಯಿಂದ ನಗರಕ್ಕೆ 900 ದಶಲಕ್ಷ ಲೀಟರ್ ನೀರನ್ನು ನಾಲ್ಕು ಹಂತದಲ್ಲಿ ಹರಿಸಲಾಯಿತು. 2012ರ ಅಂತ್ಯದ ಹೊತ್ತಿಗೆ ಮತ್ತೆ 500 ದಶಲಕ್ಷ ಲೀಟರ್ ನೀರನ್ನು ನಗರ ತರಿಸಲಿದೆ.ಈಗ ಕಾವೇರಿ ನದಿ ತೀರದಿಂದ ಸುಮಾರು 100 ಕಿಲೋಮೀಟರ್ ದೂರಕ್ಕೆ ನೀರು ಪ್ರವಹಿಸಲು ಖರ್ಚಾಗುವ ವಿದ್ಯುಚ್ಛಕ್ತಿಯ ಪ್ರಮಾಣ ನಗರಕ್ಕೆ ದಿನರಾತ್ರಿ ಖರ್ಚಾಗುವ ವಿದ್ಯುಚ್ಛಕ್ತಿಯ ಶೇ 45ರಷ್ಟಿದೆ. ಬೆಂಗಳೂರು ಜಲಮಂಡಳಿ ತಲಾವಾರು 120 ಲೀಟರ್ ನೀರನ್ನು ವಿತರಿಸುತ್ತದೆ ಎಂದು ಹೇಳುತ್ತದೆ.

 

ಆದರೆ ನಗರಕ್ಕೆ ಹರಿದು ಬರುವ 900 ದಶಲಕ್ಷ ಲೀಟರ್ ನೀರಿನಲ್ಲಿ ದಾರಿಯುದ್ದಕ್ಕೂ, ನಗರದಲ್ಲಿ ಸೋರುವಿಕೆ ಮತ್ತು ಕುಡಿಯಲು ಹೊರತುಪಡಿಸಿ ದೈನಂದಿನ ಇತರೆ ಬಳಕೆಗೆ ವ್ಯರ್ಥವಾಗುವ ನೀರಿನ ಪ್ರಮಾಣ ಶೇ 55. ಉಳಿದ 450 ದಶಲಕ್ಷ ಲೀಟರ್ ನೀರನ್ನು 95 ಲಕ್ಷ ಜನರಿಗೆ ಹಂಚಿದರೆ ಒಬ್ಬರಿಗೆ ದಕ್ಕುವ ನೀರಿನ ಪ್ರಮಾಣ 15 ಲೀಟರ್‌ಗಿಂತ ಕಡಿಮೆ.ನಗರವ್ಯಾಪ್ತಿಯಲ್ಲಿ ಲಭ್ಯವಿರುವ ಜಲಮೂಲಗಳ ಪ್ರಯೋಜನ ಪಡೆದು ಬಳಕೆಗೆ ಕೊರತೆ ಬಂದಾಗ ದೂರದ ಜಲಮೂಲಗಳತ್ತ  ಕೈ ಚಾಚಬಹುದಿತ್ತು. ದೂರದ ಕಾವೇರಿ ಒಡಲಿಗೆ ಲಗ್ಗೆ ಇಟ್ಟಿರುವುದು ಸೂಕ್ತ ಯೋಜನೆಯೇ ಇರಬಹುದು. ನೂರಾರು ಕಿಲೋಮೀಟರ್ ದೂರದಿಂದ ನೀರನ್ನು ಪೈಪ್ ಮೂಲಕ ಹರಿಸುವಾಗ ಅದರ ನಿರ್ವಹಣೆ, ಆರ್ಥಿಕ ಸಂಪನ್ಮೂಲಗಳ ವೆಚ್ಚ, ವಿದ್ಯುತ್ ಬಳಕೆ, ಮಾನವ ಸಂಪನ್ಮೂಲದ ಬಗ್ಗೆ ಲೆಕ್ಕ ಹಾಕಿದಾಗ ಮಾತ್ರ ತಲೆ ತಿರುಗುತ್ತದೆ.

 

ಇಷ್ಟಾದರೂ ಬೆಂಗಳೂರು ಜಲಮಂಡಳಿ ನಗರದ ಜನರಿಗೆ ಸಮರ್ಪಕವಾಗಿ ನೀರನ್ನು ವಿತರಿಸಲಾಗುತ್ತಿಲ್ಲ. ಮತ್ತೆ ಹೇಮಾವತಿ ಒಡಲಿಗೆ ಕೈಹಾಕದೆ ಆ ನೀರನ್ನು ರೈತರ ಉಪಯೋಗಕ್ಕೆ ಬಿಟ್ಟು ಬೆಂಗಳೂರು ಜಲ ಮೂಲಗಳತ್ತ ಗಮನಹರಿಸುವುದು ಸೂಕ್ತ.ಅಂತರ್ಜಲ

ನಗರದಲ್ಲಿ ರಾತ್ರಿ ಬೆಳಗಾಗುವ ಹೊತ್ತಿಗೆ ಕಡಿಮೆ ಅಂದರೂ ಐದು ಕೊಳವೆ ಬಾವಿಗಳು ನಿರ್ಮಾಣವಾಗುತ್ತಿವೆ. ಬೇಸಿಗೆ ಬಂತೆಂದೆರೆ ದಿನದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಡೆ ಭೈರಿಗೆ ಯಂತ್ರಗಳು ನೆಲವನ್ನು ತೂತುಗೊಳಿಸುತ್ತಲೇ ಇವೆ. ಸರ್ಕಾರಿ ಮತ್ತು ಸಾರ್ವಜನಿಕರು ಕೊರೆಸಿರುವ ಕೊಳವೆ ಬಾವಿಗಳ ಸಂಖ್ಯೆ ಅಂದಾಜು 4ಲಕ್ಷ ಎಂದು ಭಾವಿಸಬಹುದು. ದಿನದಲ್ಲಿ ಒಂದೊಂದು ಕೊಳವೆ ಬಾವಿಯಿಂದ ಸಾವಿರ ಲೀಟರ್‌ನಿಂದ ಇಪ್ಪತ್ತು ಸಾವಿರ ಲೀಟರ್ ಭೂಜಲ ಬಳಸಲಾಗುತ್ತಿದೆ.ಸುಮಾರು 3ಲಕ್ಷ ಕೊಳವೆ ಬಾವಿಗಳು ದಿನಕ್ಕೆ 4000 ಲೀಟರ್ ಭೂಜಲ ನೀಡುತ್ತದೆ ಎಂದು ಅಂದಾಜಿದೆ. ನಗರದ ಜನ ದಿನಕ್ಕೆ ಪಡೆಯುತ್ತಿರುವ ಭೂ ಜಲದ ಪ್ರಮಾಣ ಸುಮಾರು 12 ದಶಲಕ್ಷ ಲೀಟರ್‌ಗಳು. ನಗರಕ್ಕೆ ಹರಿದು ಬರುತ್ತಿರುವ ಜಲದ ಪ್ರಮಾಣಕ್ಕಿಂತ ಒಂದೂವರೆ ಪಟ್ಟು ಅಧಿಕ.ಮಳೆಯ ನೀರನ್ನು ನೆಲದಾಳಕ್ಕೆ ಇಂಗಿಸಬಲ್ಲ ಹಲವಾರು ವ್ಯವಸ್ಥೆಗಳಲ್ಲಿ ಒಂದಾದ ಇಂಗು ಗುಂಡಿಗಳನ್ನು ನಗರದಲ್ಲೆಡೆ ನಿರ್ಮಿಸಬೇಕು. ಇಂತಹ ಇಂಗುಗುಂಡಿಗಳು ಕೇವಲ ಮನೆಗಳ ಸರಹದ್ದಿಗೆ ಸೀಮಿತ ವಾಗಬಾರದು ಅಥವಾ ದೂರಕ್ಕೆ ಅಲ್ಲೊಂದು ಇಲ್ಲೊಂದು ರಚಿಸಿದರೂ ಸಾಲದು. ನಗರದ ಎಲ್ಲಾ ಕಡೆಗಳಲ್ಲಿ ಹರಿಯುವ ಮಳೆಯ ನೀರಿಗೆ ಎದುರಾಗಿ ಬೃಹದಾಕಾರವಾಗಿ ನಿರ್ಮಿಸಬೇಕು.ಇಂಗುಗುಂಡಿಗಳ ಒಳಗೆ ಖಾಲಿ ಜಾಗ ಬಿಡದಂತೆ ಅದರಲ್ಲಿ ಅನುಕ್ರಮವಾಗಿ ವಿವಿಧ ಆಕಾರದ ಕಲ್ಲು ಮತ್ತು ಸಣ್ಣ ಮರಳಿಂದ ವೈಜ್ಞಾನಿಕವಾಗಿ ರಚಿಸಬೇಕು. ಇಂಗುಗುಂಡಿಗಳ ಮೇಲ್ಭಾಗದಲ್ಲಿ ಮರಳಿಂದ ಮುಚ್ಚಿ, ಜನ ಅದರ ಮೇಲೆ ಸಲೀಸಾಗಿ ಓಡಾಡಲು ಅನುವು ಮಾಡಬೇಕು. ಪ್ರತಿ ಐವತ್ತು ಅಡಿ ಅಂತರದಲ್ಲಿ ಇಂತಹ ವ್ಯವಸ್ಥಿತ ಇಂಗು ಗುಂಡಿಗಳನ್ನು ನಿರ್ಮಿಸಿದರೆ ಮಳೆಯ ನೀರನ್ನು ನೆಲದಾಳಕ್ಕೆ ಬಲವಂತವಾಗಿ ತುರುಕಲು ಸಾಧ್ಯ. ಎಲ್ಲರೂ ಕೈಜೋಡಿಸಿದರೆ ಭವಿಷ್ಯದಲ್ಲಿ ಭೂ ಗರ್ಭದ ಸೆಲೆ ಪಾತಾಳಕ್ಕೆ ಕುಸಿಯುವುದೇ ಇಲ್ಲ.ನಗರದ ಚರಂಡಿ ನೀರು

ನಗರದಲ್ಲಿ ಉಪಯೋಗಿಸಿ ಹೊರಬಿಟ್ಟ ನೀರಿನ ಪ್ರಮಾಣ ಅಧಿಕ. ಕೊಳಚೆ ನೀರಿನ್ನು ಆಧುನಿಕ ತಂತ್ರಜ್ಞಾನದಿಂದ ಸಂಸ್ಕರಿಸಿ ದೈನಂದಿನ ಬಳಕೆಗೆ ಉಪಯೋಗಿಸುವ ರೂಢಿ ಮುಂದುವರಿದ ರಾಷ್ಟ್ರಗಳಲ್ಲಿ ಇಂದಿಗೂ ಇದೆ. ಸಮುದ್ರದ ಕಡು ಉಪ್ಪು ನೀರನ್ನು ಸಂಸ್ಕರಿಸಿ ಅದರ ಪ್ರಯೋಜನ ಪಡೆದಿರುವ ರೂಢಿ ಕೆಲವು ದೇಶಗಳಲ್ಲಿವೆ! ನಮ್ಮ ದೇಶದಲ್ಲಿ ದೊಡ್ಡ ದೊಡ್ಡ ಕಂಪನಿಗಳೂ ಸಹ ಕೊಳಚೆ ನೀರನ್ನು ರೀಸೈಕ್ಲಲಿಂಗ್ ಮಾಡಿ ಬಳಸುತ್ತಿವೆ.

 

ನಗರದ ಕೊಳಚೆ ವೃಷಭಾವತಿ, ಬೆಳಂದೂರು, ಹೆಬ್ಬಾಳ ಇತ್ಯಾದಿ ಸ್ಥಳಗಳಲ್ಲಿ ಹರಿದು, ಕೆರೆಗಳಲ್ಲಿ ಉಕ್ಕಿ ಹರಿಯುವುದು ಕಂಡಿದ್ದೇವೆ. ನಗರದ ಈ ಕೊಳಚೆಗೆ ಯಾವ ಚಿಕಿತ್ಸೆ ನೀಡದೆ ಬಿಡದಿಯ ಬೈರಮಂಗಲ, ವೈಟ್‌ಫೀಲ್ಡ್‌ನ ವರ್ತೂರು ಮುಂತಾದ ಕೆರೆಗಳಲ್ಲಿ ನಿಲ್ಲುತ್ತದೆ. ಈ ಸ್ಥಳಗಳಲ್ಲಿ ವಿದ್ಯುಕ್ತವಾಗಿ ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸಿ ವಿವಿಧ ಚಿಕಿತ್ಸೆಗೆ ಒಳಗಾದ ನೀರನ್ನು ಪೈಪ್ ಮೂಲಕ ವಿತರಿಸಿದರೆ ಅದನ್ನು ಕುಡಿಯಲಾಗಿದಿದ್ದರೂ ದೈನಂದಿನ ಬಳಕೆ ಮಾಡಬಹುದು. ಈ ಯೋಜನೆಯಿಂದ ಜಲಮಂಡಳಿ ಹರಿಸುವ ಕುಡಿಯುವ ನೀರಿಗೆ ಕೊರತೆ ತಪ್ಪುತ್ತದೆ.ಮಳೆಯ ನೀರು ವ್ಯರ್ಥ

ಮಳೆಯ ನೀರನ್ನು ನೆಲದಾಳಕ್ಕೆ ಇಂಗಿಸುವುದು ಒಂದು ವಿಧಾನವಾದರೆ, ಸಿಮೆಂಟ್ ತೊಟ್ಟಿಗಳಲ್ಲಿ ಸಂಗ್ರಹಿಸಿ ಬಳಸಿಕೊಳ್ಳುವುದು ಮತ್ತೊಂದು ಬಗೆ. ಮಳೆ ನೀರಿನ ಕೊಯ್ಲು ಮಾಡುವಲ್ಲಿ ಬೆಂಗಳೂರು ಜಲಮಂಡಳಿ ಸಾರ್ವಜನಿಕರನ್ನು ಒತ್ತಾಯಿಸುತ್ತದೆಯೇ ವಿನಾ ಮಂಡಳಿ ಶೇಕಡಾ ಒಂದರಷ್ಟು ಮಳೆಯ ನೀರನ್ನು ತಡೆದು ಉಳಿಸಿ ಬಳಸಿಕೊಂಡಿಲ್ಲ.ಹರಿಯುವ ಮಳೆ ನೀರಿಗೆ ತಡೆಯೊಡ್ಡಿ ಬಳಸುವ ಪದ್ಧತಿಯನ್ನು ಕೆಂಪೇಗೌಡ ಈಗಾಗಲೇ ತೋರಿಸಿಕೊಟ್ಟಿದ್ದು. ಆದರೆ ಜಲಮಂಡಳಿ ಅದನ್ನು ವ್ಯವಸ್ಥಿತವಾಗಿ ರೂಢಿಸಿಕೊಂಡು ಹೋಗುವ ಪ್ರಯತ್ನ ಮಾಡಲೇ ಇಲ್ಲ. ನಗರದ 810 ಚದರ ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಬೀಳುವ ಮಳೆಯಿಂದ ಇಪ್ಪತ್ತೇಳು ಟಿ.ಎಂ.ಸಿ.ಗೂ ಅಧಿಕ ನೀರು ಉತ್ಪತ್ತಿಯಾಗುತ್ತದೆ.ಬೀಳುವ ಮಳೆಯ ಶೇ 80 ನೀರನ್ನು ಜಲಮಂಡಳಿ ತಡೆಹಿಡಿದು ಬಳಸಿಕೊಂಡರೆ ನಗರದ 95 ಲಕ್ಷ ಜನರಿಗೆ ವರ್ಷದ ಬಹಳಷ್ಟು ದಿವಸ ದಿನಕ್ಕೆ ಎರಡು ಗಂಟೆಗೂ ಹೆಚ್ಚು ನೀರನ್ನು ಒದಗಿಸಬಹುದು. ಬಿದ್ದ ಮಳೆಯ ನೀರನ್ನು ಒಂದೆಡೆ ತಡೆಹಿಡಿದು ನಿಲ್ಲಿಸಬೇಕಾದರೆ ಉನ್ನತ ತಂತ್ರಜ್ಞಾನ, ವೈಜ್ಞಾನಿಕ ಕಸರತ್ತು, ಸ್ಥಳಾವಕಾಶ, ಆರ್ಥಿಕ ಸಂಪನ್ಮೂಲ, ಸರ್ಕಾರದ ನೈತಿಕ ಹೊಣೆ ಜವಾಬ್ದಾರಿ ಮತ್ತು ಕಾಲದ ಪರಿಮಿತಿ ಅವಶ್ಯಕ.ನಗರದ ಚರಂಡಿ ನೀರನ್ನು ಹೊರತುಪಡಿಸಿ ಎಲ್ಲಾ ದಿಕ್ಕುಗಳ ರಸ್ತೆಗಳ ಮೇಲೆ ಹರಿಯುವ ಮಳೆಯ ನೀರನ್ನು ಕಂದಕಗಳಿಗೆ ಹರಿಸಬೇಕು. ಸಾಮಾನ್ಯವಾಗಿ ರಸ್ತೆಯ ಮೇಲೆ ಹರಿದ ಮಳೆಯ ನೀರು ಮಣ್ಣಿನಿಂದ ಬೆರತು ಬಗ್ಗಡವಾಗುವುದು ಸಹಜ. ಬಗ್ಗಡ ನೀರನ್ನು ಅತ್ಯಾಧುನಿಕ ತಂತ್ರಜ್ಞಾನದಡಿ ಸೂಕ್ತ ಚಿಕಿತ್ಸೆ ನೀಡಿ ಸಂಸ್ಕರಿಸಲು ಸಾಧ್ಯ.ಈ ನೀರನ್ನು ತಿಳಿಗೊಳಿಸಿ ಬ್ಯಾಕ್ಟೀರಿಯಾ ವಾಸನೆ ಬಾರದಂತೆ ಹಲವಾರು ತಿಂಗಳು ಜೋಪಾನ ಮಾಡುವ ಉಪಾಯ ನಮ್ಮಲ್ಲಿದೆ. ಕಂದಕಗಳಿಗೆ ಬಗ್ಗಡ ನೀರು ಹರಿದಾಗ ಹೂಳು ಸಂಗ್ರಹವಾದರೆ ಅದನ್ನೆಲ್ಲಾ ಹೊರಗೆ ತೆಗೆದು ಹಾಕಲು ಸಾಕಷ್ಟು ಸಮಯ, ಪರಿಕರಗಳಿಗೆ ಸಮಸ್ಯೆ ಇಲ್ಲ.ಈ ನೀರನ್ನು ಬಳಸುವ ಜೊತೆಗೆ ಕುಡಿಯಲೂ ಸಾಧ್ಯ. ಈ ಯೋಜನೆ ಪೂರ್ಣಗೊಳ್ಳಬೇಕಾದರೆ ಕಾಲಪರಿಮಿತಿ, ಸಾರ್ವಜನಿಕರ ಸಹಕಾರ ಅತ್ಯಗತ್ಯ. ಈ ಯೋಜನೆಗಳು ವಿಧ್ಯುಕ್ತವಾಗಿ ಪೂರ್ಣಗೊಂಡರೆ ಭವಿಷ್ಯದಲ್ಲಿ ನೀರಿನ ವಿತರಣೆ ಮರೀಚಿಕೆ ಆಗಲಾರದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry