ಗುರುವಾರ , ಆಗಸ್ಟ್ 5, 2021
21 °C

ನಗರದ ರಸ್ತೆಗಳಲ್ಲಿ ಇನ್ನೂ 13 ಸಾವಿರ ಗುಂಡಿಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ವಿವಿಧ ರಸ್ತೆಗಳಲ್ಲಿ ಇನ್ನೂ 13 ಸಾವಿರ ಗುಂಡಿಗಳಿವೆ!

ನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ನೀಡಿದ ಮಾಹಿತಿ ಇದು.ಒಟ್ಟಾರೆ 33 ಸಾವಿರ ಗುಂಡಿಗಳು ಇದ್ದವು. ಅವುಗಳಲ್ಲಿ 20 ಸಾವಿರ ಗುಂಡಿಗಳನ್ನು ಡಾಂಬರು ಹಾಕಿ ಮುಚ್ಚಲಾಗಿದೆ. ಮುಂದಿನ 8-10 ದಿನದಲ್ಲಿ ಬಾಕಿ ಇರುವ 13 ಸಾವಿರ ಗುಂಡಿಗಳನ್ನೂ ಮುಚ್ಚಲಾಗುವುದು. ಮುಂದಿನ ದಿನಗಳಲ್ಲಿ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ರಸ್ತೆ ಗುಂಡಿ ಮುಚ್ಚಲು ನಿರ್ಧರಿಸಲಾಗಿದೆ. ಇದಕ್ಕೆ ಬೇಕಾದ ಯಂತ್ರ ಖರೀದಿ ಮಾಡಲಾಗುವುದು ಎಂದು ಅವರು ಹೇಳಿದರು.ರಸ್ತೆಗಳ ಅಗಲ: ಮೇಖ್ರಿ ವೃತ್ತದಿಂದ ವಿಂಡ್ಸರ್ ಮ್ಯಾನರ್ ಜಂಕ್ಷನ್ ನಡುವಿನ ರಸ್ತೆ ಸೇರಿದಂತೆ ನಗರದ ಕೆಲವು ಪ್ರಮುಖ ರಸ್ತೆಗಳನ್ನು ಅಗಲ ಮಾಡಲು ತೀರ್ಮಾನಿಸಲಾಗಿದೆ. ಸಂಚಾರ ದಟ್ಟಣೆ ಮತ್ತಿತರ ವಿಷಯಗಳ ಕುರಿತು ಚರ್ಚಿಸಲು ಬಿಬಿಎಂಪಿ, ಜಲಮಂಡಳಿ, ಬಿಡಿಎ, ನಮ್ಮ ಮೆಟ್ರೊ, ಸಂಚಾರ ಪೊಲೀಸ್ ಹಾಗೂ ಬಿಎಂಟಿಸಿ ಮುಖ್ಯಸ್ಥರ ಸಮನ್ವಯ ಸಭೆ ಬಳಿಕ ಈ ತೀರ್ಮಾನಕ್ಕೆ ಬರಲಾಯಿತು ಎಂದು ರಾಮಲಿಂಗಾರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.ಸಂಚಾರ ದಟ್ಟಣೆ ವಿಪರೀತ ಇರುವ ಏಳು ರಸ್ತೆಗಳ ಬಗ್ಗೆ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಎಂ.ಎ.ಸಲೀಂ ವರದಿ ನೀಡಿದ್ದಾರೆ. ಅವರ ಸಲಹೆ ಪ್ರಕಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಎಷ್ಟು ಹಣ ಬೇಕಾಗುತ್ತದೆ ಎಂಬುದನ್ನು ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೇಖ್ರಿ ವೃತ್ತದಿಂದ ವಿಂಡ್ಸರ್ ಮ್ಯಾನರ್ ಜಂಕ್ಷನ್ ವರೆಗೆ ನಾಲ್ಕು ಪಥದ ರಸ್ತೆ ಇದ್ದು, ಅದನ್ನು ಕನಿಷ್ಠ ಆರು ಪಥದ ರಸ್ತೆ ಮಾಡಲಾಗುವುದು. ಅರಮನೆ ಮೈದಾನಕ್ಕೆ ಹೊಂದಿಕೊಂಡಿರುವ ಜಮೀನನ್ನು ಸ್ವಾಧೀನಕ್ಕೆ ತೆಗೆದುಕೊಂಡು ಅಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ವಿವರಿಸಿದರು.ಹೊರ ವರ್ತುಲ ರಸ್ತೆಯ ರೇಷ್ಮೆ ಮಂಡಳಿ ಜಂಕ್ಷನ್‌ನಿಂದ ಜಯದೇವ ಹೃದ್ರೋಗ ಆಸ್ಪತ್ರೆವರೆಗೆ ತಕ್ಷಣಕ್ಕೆ ರಸ್ತೆ ಅಗಲ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಿಸುವ ಉದ್ದೇಶ ಇದೆ. ಕೆ.ಆರ್.ಪುರದ ಬೆನ್ನಿಗಾನಹಳ್ಳಿಯಿಂದ ಮಹದೇವಪುರ ಮೇಲ್ಸೇತುವೆ ವರೆಗೆ, ಬನ್ನೇರುಘಟ್ಟ ರಸ್ತೆಯ ಡೇರಿ ವೃತ್ತದಿಂದ ಸಾಗರ್ ಆಸ್ಪತ್ರೆ ಜಂಕ್ಷನ್‌ವರೆಗೆ ರಸ್ತೆ ಅಗಲ ಮಾಡಲು ತೀರ್ಮಾನಿಸಲಾಗಿದೆ. ಹೆಬ್ಬಾಳ ಮೇಲ್ಸೇತುವೆ ಅಗಲ ಮಾಡುವ ಕಾಮಗಾರಿ ನಡೆಯುತ್ತಿದ್ದು, ಅದನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ.ಹಡ್ಸನ್ ವೃತ್ತದಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಮಿಷನ್ ರಸ್ತೆ ಅಥವಾ ದೇವಾಂಗ ಹಾಸ್ಟಲ್ ರಸ್ತೆಯನ್ನು ಅಗಲ ಮಾಡುವ ಉದ್ದೇಶ ಇದೆ. ಮಿನರ್ವ ವೃತ್ತದಿಂದ ಕೆಂಪೇಗೌಡ ಬಸ್ ನಿಲ್ದಾಣದವರೆಗೆ ರಸ್ತೆ ಮೇಲ್ಸೇತುವೆ ನಿರ್ಮಿಸಿದರೆ ಹಡ್ಸನ್ ವೃತ್ತದಲ್ಲಿನ ಸಂಚಾರ ದಟ್ಟಣೆ ಕಡಿಮೆ ಆಗಲಿದೆ ಎಂದು ಸಲೀಂ ಸಲಹೆ ಮಾಡಿದ್ದು, ಆ ಕುರಿತು ಪರಿಶೀಲಿಸಲಾಗುವುದು ಎಂದು ರೆಡ್ಡಿ ತಿಳಿಸಿದರು.ಪರಿಶೀಲನೆಗೆ ಸಲಹೆ: ಅಗತ್ಯ ಇಲ್ಲ ಎಂದು ಪಾಲಿಕೆಯ ಹಿಂದಿನ ಆಯುಕ್ತರು ರದ್ದು ಮಾಡಿದ್ದ ಸುಮಾರು 580 ಕೋಟಿ ರೂಪಾಯಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಮತ್ತೆ ಜೀವ ನೀಡುವ ಸಾಧ್ಯತೆ ಇದೆ.ಈಗಾಗಲೇ ಚಾಲನೆ ನೀಡಿರುವ ಕಾಮಗಾರಿಗಳನ್ನು ರದ್ದು ಮಾಡುವುದು ಬೇಡ ಎಂದು ನಗರದ ಹಲವು ಶಾಸಕರು ಒತ್ತಡ ಹೇರುತ್ತಿದ್ದಾರೆ. ಈ ಕಾರಣಕ್ಕೆ ನಿಜಕ್ಕೂ ಈ ಕಾಮಗಾರಿಗಳ ಅಗತ್ಯ ಇದೆಯೇ ಎಂಬುದನ್ನು ಪರಿಶೀಲಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ. ಅವರು ಕೊಡುವ ವರದಿ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.ಸೈಕಲ್ ಪಥ: ಮಡಿವಾಳದಲ್ಲಿ 9 ಕೋಟಿ ರೂಪಾಯಿ ವೆಚ್ಚದಲ್ಲಿ ಸೈಕಲ್ ಪಥ ನಿರ್ಮಿಸಲಾಗುವುದು. ಇದೇ ರೀತಿ ಇಂದಿರಾನಗರ, ಎಚ್‌ಎಸ್‌ಆರ್ ಲೇಔಟ್, ಸದಾಶಿವನಗರದಲ್ಲೂ ಸೈಕಲ್ ಪಥ ನಿರ್ಮಿಸಲಾಗುವುದು ಎಂದರು.

ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದಾಗಿ ನಗರದಲ್ಲೂ ಅಪಾರ ನಷ್ಟ ಉಂಟಾಗಿದೆ. ಇದಕ್ಕೆ ಪ್ರಕೃತಿ ವಿಕೋಪ ನಿಧಿಯಿಂದ 10 ಕೋಟಿ ರೂಪಾಯಿ ಬಿಡುಗಡೆ ಮಾಡಲು ನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಕೆರೆ ಅಭಿವೃದ್ಧಿ: ನಗರದ ಕೆಲವು ಕೆರೆಗಳ ಅಭಿವೃದ್ಧಿಗೆ ನಮ್ಮ ಮೆಟ್ರೊ ಮುಂದೆ ಬಂದಿದ್ದು, ಸದ್ಯದಲ್ಲೇ ಆ ಕುರಿತು ತೀರ್ಮಾನಿಸಲಾಗುವುದು. ಬಿಡಿಎ ಅಭಿವೃದ್ಧಿಪಡಿಸಿದ ರಸ್ತೆ ಮೇಲ್ಸೇತುವೆಗಳನ್ನು ನಿರ್ವಹಣೆ ದೃಷ್ಟಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಗೆ ವಹಿಸಲು ಸೂಚಿಸಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.