ಸೋಮವಾರ, ಜೂನ್ 14, 2021
26 °C
ನಿಲೇಕಣಿ, ನಾರಾಯಣಸ್ವಾಮಿ, ರಿಜ್ವಾನ್‌ರಿಂದ ಬೆಂಬಲಯಾಚನೆ

ನಗರದ ವಿವಿಧೆಡೆ ಕಾಂಗ್ರೆಸ್‌ ರೋಡ್‌ ಷೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಭಾರತ ನಿರ್ಮಾಣ ಪಾದಯಾತ್ರೆ’ ಮೂಲಕ ಕಾಂಗ್ರೆಸ್‌ ಲೋಕಸಭಾ ಚುನಾವಣೆ ಪ್ರಚಾರ ಬಿರುಸುಗೊಳಿಸಿದೆ. ಬೆಂಗಳೂರು ದಕ್ಷಿಣ, ಉತ್ತರ ಮತ್ತು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ ನಂದನ್‌ ನಿಲೇಕಣಿ, ಸಿ.ನಾರಾಯಣ­ಸ್ವಾಮಿ ಮತ್ತು ರಿಜ್ವಾನ್ ಅರ್ಷದ್‌ ಶನಿವಾರ ನಗರದ ಹಲವೆಡೆ ಪಾದಯಾತ್ರೆ, ‘ರೋಡ್‌ ಷೋ’ ನಡೆಸಿ ಬೆಂಬಲ ಯಾಚಿಸಿದರು.ನಿಲೇಕಣಿ ಅವರು ಬೆಳಿಗ್ಗೆ 7 ಗಂಟೆಯಿಂದಲೇ ವಿಜಯನಗರ ವಿಧಾನ­ಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಆರಂಭಿಸಿದರು. ಸ್ಥಳೀಯ ಶಾಸಕ ಎಂ.ಕೃಷ್ಣಪ್ಪ ಅವರ ಜೊತೆ ಕೆಂಪಾಪುರ ಅಗ್ರಹಾರದ ಮಹದೇಶ್ವರ ದೇವಸ್ಥಾನ­ದಿಂದ ಹೆಜ್ಜೆ ಹಾಕಿದ ಕಾಂಗ್ರೆಸ್‌ ಅಭ್ಯರ್ಥಿ, ಮನೆ ಮನೆಗೆ ತೆರಳಿ ಮತದಾರರನ್ನು ಭೇಟಿ ಮಾಡುವ ಪ್ರಯತ್ನ ನಡೆಸಿದರು.ಚೋಳೂರುಪಾಳ್ಯ, ಟೆಲಿಕಾಂ ಬಡಾ­ವಣೆ, ಗಂಗಪ್ಪ ಗಾರ್ಡನ್, ಪಾದ­ರಾಯ­ನಪುರ ಮುಖ್ಯರಸ್ತೆ, ವಿಜಯ­ನಗರ, ಬಾಪೂಜಿನಗರ, ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಸುತ್ತಮುತ್ತಲ ಪ್ರದೇಶ, ಬ್ಯಾಟರಾಯನಪುರ, ಆವಲಹಳ್ಳಿ, ಮುನೇಶ್ವರ ಬ್ಲಾಕ್, ವೀರಭದ್ರನಗರ, ಹೊಸಕೆರೆಹಳ್ಳಿ ಮುಖ್ಯರಸ್ತೆ, ದೀಪಾಂಜಲಿನಗರ, ಗಂಗೊಂಡನಹಳ್ಳಿ, ಚಂದ್ರಾ ಬಡಾವಣೆ, ಅತ್ತಿಗುಪ್ಪೆ ಮತ್ತು ವಿಜಯನಗರ ಬಸ್‌ ನಿಲ್ದಾಣದ ಪ್ರದೇಶದಲ್ಲಿ ನಿಲೇಕಣಿ ಪಾದಯಾತ್ರೆ ಮಾಡಿದರು.ಕೇಂದ್ರದ ಯುಪಿಎ ಸರ್ಕಾರದ ಸಾಧನೆಗಳು ಮತ್ತು ರಾಜ್ಯದ ಕಾಂಗ್ರೆಸ್‌ ಸರ್ಕಾರದ ಪ್ರಮುಖ ಯೋಜನೆ­ಗಳ ಮಾಹಿತಿಯುಳ್ಳ ಕರಪತ್ರಗಳನ್ನು ಹಂಚಿದ ಅವರು, ಐದು ಬಾರಿ ಬೆಂಗಳೂರು ದಕ್ಷಿಣ ಸಂಸದರಾಗಿ ಆಯ್ಕೆಯಾದ ಬಿಜೆಪಿಯ ಅನಂತ್‌ಕುಮಾರ್‌ ಕ್ಷೇತ್ರದ ಅಭಿವೃದ್ಧಿ­ಗೆ ಶ್ರಮಿಸಿಲ್ಲ ಎಂದು ಆರೋಪಿಸಿದರು. ನಗರದ ಸಮಸ್ಯೆಯ ಪರಿಹಾರಕ್ಕಾಗಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.ಮೂರು ಕಡೆ ಯಾತ್ರೆ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಒಂದೇ ದಿನ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಿ, ಬೆಂಬಲ ಯಾಚಿಸಿದರು. ಬೆಳಿಗ್ಗೆ ಹೆಬ್ಬಾಳದಲ್ಲಿ ಅವರ ಪಾದಯಾತ್ರೆ ನಡೆಯಿತು. ಕೆಪಿಸಿಸಿ ಮುಖಂಡರಾದ ಆನಂದ­ಕುಮಾರ್‌, ರವಿಶಂಕರ ಶೆಟ್ಟಿ ಮತ್ತಿ­ತ­ರರು ಪಾದಯಾತ್ರೆಯಲ್ಲಿ ಭಾಗವಹಿಸಿ­ದ್ದರು. ಬಳಿಕ ಮಾಜಿ ಶಾಸಕ  ಬಿ.ಪ್ರಸನ್ನ­ಕುಮಾರ್‌ ಜೊತೆಗೂಡಿ ಪುಲಕೇಶಿ­ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸಿದರು.ಸಂಜೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ನಾರಾಯಣಸ್ವಾಮಿ ಅವರ ಪಾದಯಾತ್ರೆ ನಡೆಯಿತು. ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂ­ರಾವ್, ಎಐಸಿಸಿ ಕಾರ್ಯದರ್ಶಿ ಡಾ.ಚೆಲ್ಲಕುಮಾರ್, ವಿಧಾನಸಭಾ ಚುನಾವಣೆಯಲ್ಲಿ ಮಲ್ಲೇಶ್ವರ ಕ್ಷೇತ್ರ­ದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಬಿ.ಕೆ.ಶಿವರಾಂ ಮತ್ತಿತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.ಸಿ.ವಿ.ರಾಮನ್‌ನಗರದಲ್ಲಿ ರಿಜ್ವಾನ್: ರಿಜ್ವಾನ್‌ ಅರ್ಷದ್‌ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂರಾವ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿ.ವಿ.­ರಾಮನ್‌­ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಪಿ.ರಮೇಶ್ ಮತ್ತಿತರರ ಜೊತೆಗೂಡಿ ‘ರೋಡ್‌ ಷೋ’ ನಡೆಸಿದರು.ತಿಪ್ಪಸಂದ್ರದಲ್ಲಿನ ಕಾಂಗ್ರೆಸ್‌ ಕಚೇರಿಯಿಂದ ಆರಂಭವಾದ ‘ರೋಡ್‌ ಷೋ’ ಬಾಬಾಸಾಹೇಬ್‌ ಕಾಲೋನಿ, ಕೋಡಿಹಳ್ಳಿ, ಆನಂದಪುರ, ಸುಧಾಮ­ನಗರ, ನಂಜರೆಡ್ಡಿ ಕಾಲೋನಿ, ಕೋನೇನ ಅಗ್ರಹಾರ, ರಮಣಗಿರಿ, ಜಿ.ಎಂ.ಪಾಳ್ಯ, ಕಗ್ಗದಾಸನಪುರ, ಬೈರಸಂದ್ರ, ನಾಗವಾರ ಪಾಳ್ಯ,  ಸುದ್ದಗುಂಟೆ ಪಾಳ್ಯ, ಬೆನ್ನಿಗಾನಹಳ್ಳಿ, ಕೃಷ್ಣಯ್ಯನಪಾಳ್ಯ ಮಾರ್ಗವಾತಿ ಕಸ್ತೂರಿನಗರದವರೆಗೂ ನಡೆಯಿತು.

ಆರ್ಚ್‌ ಬಿಷಪ್‌ ಭೇಟಿ

ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಿ.ನಾರಾಯಣಸ್ವಾಮಿ ಅವರು ಶನಿವಾರ ಬೆಂಗಳೂರಿನ ಆರ್ಚ್‌ ಬಿಷಪ್‌ ಬರ್ನಾರ್ಡ್‌ ಮೋರಸ್‌ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದರು. ಮಧ್ಯಾಹ್ನ ಬಿಷಪ್‌ ಹೌಸ್‌ನಲ್ಲಿ ಇಬ್ಬರ ಭೇಟಿ ನಡೆಯಿತು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.