ನಗರದ ಹಲವೆಡೆ ಕೃಷ್ಣನ ತೂಗುಯ್ಯಾಲೆ

7

ನಗರದ ಹಲವೆಡೆ ಕೃಷ್ಣನ ತೂಗುಯ್ಯಾಲೆ

Published:
Updated:
ನಗರದ ಹಲವೆಡೆ ಕೃಷ್ಣನ ತೂಗುಯ್ಯಾಲೆ

ಬೆಂಗಳೂರು: ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಗರದ ಇಸ್ಕಾನ್, ಪುತ್ತಿಗೆ ಮಠ, ಪೂರ್ಣ ಪ್ರಜ್ಞಾ ವಿದ್ಯಾ ಪೀಠ, ಕೋಟೆ ವೆಂಕಟರಮಣಸ್ವಾಮಿ ಮೊದಲಾದ  ದೇವಸ್ಥಾನಗಳಲ್ಲಿ ಬೆಣ್ಣೆ ಅಲಂಕಾರ, ತೂಗುಯ್ಯಾಲೆ ಸೇರಿದಂತೆ ವಿಶೇಷ ಪೂಜೆ ಮತ್ತು ಧಾರ್ಮಿಕ ವಿಧಿ-ವಿಧಾನಗಳು ನಡೆದವು.ಭಾನುವಾರ ರಜಾ ದಿನವಾದ್ದರಿಂದ ಮಹಿಳೆಯರು ತಮ್ಮ ಮಕ್ಕಳಿಗೆ ಶ್ರೀಕೃಷ್ಣನ ವೇಷ ತೊಡಿಸಿ ಸಂಭ್ರಮ ಪಟ್ಟರು. ಕೆಲವು ಮನೆಗಳಲ್ಲಿ ಬೆಣ್ಣೆಕೃಷ್ಣನ ಕಳ್ಳಹೆಜ್ಜೆಯನ್ನು ಬರೆದು ಪೂಜಿಸಲಾಯಿತು.ಹೆಂಗಳೆಯರು  ಕೃಷ್ಣನಿಗೆ ಪ್ರಿಯವಾದ ಕರ್ಜಿಕಾಯಿ, ಅಷ್ಟಮಿ ಉಂಡೆ, ಅವಲಕ್ಕಿ, ಲಡ್ಡು ತಯಾರಿಸಿದರು. ಅಷ್ಟಮಿಯ ವಿಶೇಷಗಳಲ್ಲಿ ಒಂದಾದ ಮೊಸರು ಕುಡಿಕೆ ಕಾರ್ಯಕ್ರಮವು ನಡೆಯಿತು. ಸಂಜೆ ಕೃಷ್ಣನ ದೇವಸ್ಥಾನಗಳಲ್ಲಿ ಸಂಗೀತ, ನೃತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಇಸ್ಕಾನ್‌ನಲ್ಲಿ `ಅಷ್ಟಮಿ~: ರಾಜಾಜಿನಗರದ ಇಸ್ಕಾನ್ ಮಂದಿರದಲ್ಲಿರುವ ರಾಧಾಕೃಷ್ಣ ಮೂರ್ತಿಯನ್ನು ಆಭರಣ, ಪುಷ್ಪಗಳಿಂದ ವೈಭವೋಪೇತವಾಗಿ ಅಲಂಕರಿಸಲಾಗಿತ್ತು. ಹಾಲು, ತುಪ್ಪ, ಬೆಣ್ಣೆ, ಜೇನು, ಎಳನೀರು, ಸಕ್ಕರೆ, ಗಂಧ, ಕುಂಕುಮ ಅರಿಶಿನ ನೀರು, ವಿವಿಧ ಹಣ್ಣಿನ ರಸಗಳ ಅಭಿಷೇಕ ನಡೆಯಿತು.ಉಪವಾಸವಿರುವ ಭಕ್ತರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಕೃಷ್ಣನ ಕುರಿತು ಹರೇ ಕೃಷ್ಣ ಹರೇ ರಾಮ ಮಂತ್ರವು ಜೋರಾಗಿ ಮೊಳಗಿತು. ಇದರೊಂದಿಗೆ ಕೃಷ್ಣನಿಗೆ ಪ್ರಿಯವಾದ ಬೆಣ್ಣೆಯನ್ನು ಭಕ್ತರಿಗೆ ಪ್ರಸಾದವಾಗಿ ನೀಡಲಾಯಿತು.   ಕಾಲೇಜಿನ ವಿದ್ಯಾರ್ಥಿಗಳು ಶ್ರೀಕೃಷ್ಣನ ದಶಾವತಾರ ಕುರಿತ ನೃತ್ಯ ರೂಪಕವನ್ನು ಪ್ರದರ್ಶಿಸಿದರು. ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಕೃಷ್ಣ ಗಾನಮಿತ್ರ ಹೆಸರಿನಲ್ಲಿ ಗಾನಕಲಾಶ್ರೀ ಎಂ.ಎಸ್.ಲೀಲಾ ಅವರು ಹಾಡಿದರು.ಇದೇ ಸಂದರ್ಭದಲ್ಲಿ ರಾಧಾ ಕೃಷ್ಣ ವೇಷಧಾರಿ ಮಕ್ಕಳು ನೋಡುಗರ ಗಮನ ಸೆಳೆದರು.

ಕರ್ನಾಟಕ ಹಾಲು ಮಹಾಮಂಡಳಿಯು ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 5 ರಿಂದ 10 ವರ್ಷದ ಚಿಣ್ಣರಿಗಾಗಿ ಕೃಷ್ಣ ವೇಷಧಾರಿ ಸ್ಪರ್ಧೆಯನ್ನು ಆಯೋಜಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry