ಬುಧವಾರ, ಜನವರಿ 22, 2020
24 °C

ನಗರದ 2 ಕನ್ನಡ ಶಾಲೆಗಳ ವಿಲೀನ!

ಪ್ರಜಾವಾಣಿ ವಾರ್ತೆ/ ಸಚ್ಚಿದಾನಂದ ಕುರಗುಂದ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ನಗರದ ಹೃದಯ ಭಾಗದಲ್ಲಿರುವ ಎರಡು ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ ಕ್ರಮಕ್ಕೆ ಮುಂದಾಗಿರುವ ಶಿಕ್ಷಣ ಇಲಾಖೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.ಕನ್ನಡ ಶಾಲೆಗಳನ್ನು ವಿಲೀನಗೊಳಿಸಬಾರದು ಅಥವಾ ಮುಚ್ಚಬಾರದು ಎನ್ನುವ ಚರ್ಚೆ ರಾಜ್ಯಾದ್ಯಂತ ನಡೆಯುತ್ತಿರುವಾಗಲೇ ಶಿಕ್ಷಣ ಇಲಾಖೆ ಇಂತಹ ಕ್ರಮ ಕೈಗೊಂಡಿರುವುದು ಅಚ್ಚರಿ ಮೂಡಿಸಿದೆ.ನಗರದ ಸರ್ಕಾರಿ ನೂತನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪಟ್ಟಣದ ಹಳೇ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲೆಯನ್ನು ಒಂದುಗೂಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ. ಜತೆಗೆ, ತಕ್ಷಣಕ್ಕೆ ಜಾಗ ಖಾಲಿ ಮಾಡುವಂತೆ ಒತ್ತಡ ಹೇರಲಾಗುತ್ತಿದೆ.ಈ ಎರಡು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಇದರಿಂದ ಈ ಶಾಲೆಗಳನ್ನು ಮುಂದುವರಿಸುವುದು ಸೂಕ್ತವೆಲ್ಲವೆಂದು ನಿರ್ಧರಿಸಿ ವಿಲೀನಗೊಳಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಸರ್ಕಾರಿ ಹಳೇ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಶೈಕ್ಷಣಿಕ ದಾಖಲೆ ಪತ್ರಗಳನ್ನು ಹಾಗೂ ಸಾಮಗ್ರಿಗಳ ಪಟ್ಟಿ ತಯಾರಿಸಿ ನೂತನ ಬಾಲಕಿಯರ ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಬೇಕು. ಹಾಲಿ ನೂತನ ಬಾಲಕಿಯರ ಶಾಲೆಯಲ್ಲಿ ವಿಲೀನಗೊಂಡು ಶೈಕ್ಷಣಿಕ, ಆರ್ಥಿಕ, ಆಡಳಿತಾತ್ಮಕ ವಿಚಾರಕ್ಕೆ ಸಂಬಂಧಿಸಿದ ವಹಿವಾಟುಗಳನ್ನು ನೂತನ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಹೆಸರಿನಲ್ಲಿ ವ್ಯವಹರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ರವಿಶಂಕರರೆಡ್ಡಿ ಆದೇಶ ಹೊರಡಿಸಿದ್ದಾರೆ.ಆದರೆ, ಎರಡು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುವುದು ಕಂಡುಬಂದಿದೆ. ನೂತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 125 ವಿದ್ಯಾರ್ಥಿಗಳಿದ್ದಾರೆ. ಒಂದನೇ ತರಗತಿಯಲ್ಲಿ 9, ಎರಡನೇ ತರಗತಿಯಲ್ಲಿ 11, 3ನೇ ತರಗತಿಯಲ್ಲಿ 16, 4ನೇ ತರಗತಿಯಲ್ಲಿ 13, 5ನೇ ತರಗತಿಯಲ್ಲಿ 19, 6ನೇ ತರಗತಿಯಲ್ಲಿ 22, 7ನೇ ತರಗತಿಯಲ್ಲಿ 35 ವಿದ್ಯಾರ್ಥಿಗಳಿದ್ದಾರೆ.ಹಳೇ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 70 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 6ನೇ ತರಗತಿಗೆ 14, 7ನೇ ತರಗತಿಗೆ 18 ವಿದ್ಯಾರ್ಥಿಗಳು ಇದ್ದಾರೆ.`ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರುವಾಗ ಶಿಕ್ಷಣ ಇಲಾಖೆ ಈ ನಿರ್ಧಾರ ಹೇಗೆ ಕೈಗೊಂಡಿತು. ಮುಂದಾಲೋಚನೆ ಮತ್ತು ಸಮರ್ಪಕವಾಗಿ ಯೋಜನೆ ರೂಪಿಸದೆ ದಿಢೀರನೆ ಶಿಕ್ಷಣ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಇದರಿಂದ ಒಂದು ಶಾಲೆಯನ್ನೇ ಮುಚ್ಚಿದಂತಾಗುತ್ತದೆ. ಜತೆಗೆ, ನೂತನ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಉತ್ತಮವಾಗಿದೆ. ಮಕ್ಕಳು ಸುರಕ್ಷಿತವಾಗಿದ್ದಾರೆ. ಆದರೆ, ಹಳೇ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲೆ ಹಳೇ ಕಟ್ಟಡವಾಗಿದ್ದು, ಯಾವುದೇ ರೀತಿ ಸುರಕ್ಷತೆ ಇಲ್ಲ. ಆ ಕಟ್ಟಡದ ಬಳಿ ಪೋಲಿ ಹುಡುಗರು ಬಂದು ದಾಂಧಲೆ ಮಾಡುತ್ತಾರೆ. ಶಾಲೆ ಸುತ್ತಮುತ್ತ ಬಾಟಲ್‌ಗಳು ಬಿದ್ದಿರುತ್ತವೆ~ ಎಂದು ಪೋಷಕರು ದೂರಿದ್ದಾರೆ.ಪ್ರಸ್ತುತ ನೂತನ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಪದವಿಪೂರ್ವ ಬಾಲಕಿಯರ ಕಾಲೇಜಿನ ಕಟ್ಟಡಕ್ಕೆ ಬೇಕಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಾಲೇಜಿಗೆ ಕೊಠಡಿಗಳು ಇಲ್ಲ. ಈ ಶಾಲೆಯನ್ನು ವಿಲೀನಗೊಳಿಸಿದರೆ ಅನುಕೂಲ ಆಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಾರೆ.ಈ ಎರಡು ಶಾಲೆಗಳು ಹಳೇ ಶಾಲೆಗಳಾಗಿದ್ದು, ಒಂದು ಕಾಲಕ್ಕೆ 700-800 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. ಇತ್ತೀಚೆಗೆ ಖಾಸಗಿ ಶಾಲೆಗಳ ಹಾವಳಿಯಿಂದ ಮಕ್ಕಳ ಸಂಖ್ಯೆಯಲ್ಲಿ ಕಡಿಮೆಯಾಗಿರಬಹುದು. ಶಿಕ್ಷಣ ಇಲಾಖೆ ಈ ಶಾಲೆಗಳ ಅಭಿವೃದ್ಧಿ ಬಗ್ಗೆ ಯೋಚಿಸಬಹುದಿತ್ತು ಅಥವಾ ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಆದರೂ ಚಿಂತನೆ ಮಾಡಬಹುದು.ಯಾವುದೇ ರೀತಿ ಸಮಗ್ರವಾಗಿ ಯೋಚನೆ ಮಾಡದೆ ಒಂದು ಶಾಲೆಯನ್ನು ಮುಚ್ಚುವ ಕ್ರಮವೇ ಸರ್ಕಾರದ ನೀತಿಗೆ ವಿರುದ್ಧವಾಗಿದೆ ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)