ನಗರಪ್ರದಕ್ಷಿಣೆಯಲ್ಲಿ ನೂರು ಕೋಟಿ ನರಕ ದರ್ಶನ

ಗುರುವಾರ , ಜೂಲೈ 18, 2019
29 °C

ನಗರಪ್ರದಕ್ಷಿಣೆಯಲ್ಲಿ ನೂರು ಕೋಟಿ ನರಕ ದರ್ಶನ

Published:
Updated:

ಗುಲ್ಬರ್ಗ: `ಮೊದಲೇ ಸೂಚನೆ ನೀಡಿ ಬರುವ ಸಚಿವರಿಗೆ ಮಾಹಿತಿ ನೀಡುವುದಿಲ್ಲ. ಇನ್ನು ಜನಸಾಮಾನ್ಯರೊಂದಿಗೆ ನೀವು ಯಾವ ರೀತಿ ವರ್ತಿಸುತ್ತೀರಿ? ಜನರಿಗೆ ಏನು ಮಾಹಿತಿ ನೀಡುತ್ತೀರಿ?~

ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಸಮ್ಮುಖದಲ್ಲಿಯೇ ಅಧಿಕಾರಿಗಳ ಬೇಜವಾಬ್ದಾರಿ ಬಗ್ಗೆ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಆಕ್ರೋಶಭರಿತರಾಗಿ ಹೇಳಿದ ಮಾತುಗಳು.ಗುಲ್ಬರ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ನೂರು ಕೋಟಿ ರೂಪಾಯಿ ಅನುದಾನದ ಕಾಮಗಾರಿಗಳನ್ನು ಶುಕ್ರವಾರ ಸಚಿವರು ಪರಿಶೀಲಿಸಿದರು. ಸ್ವತಃ ಅಧಿಕಾರಿಗಳೇ ಸೂಚಿಸಿದ ಉದನೂರ ಕ್ರಾಸ್‌ನ ಸಂತೋಷ ನಗರಕ್ಕೆ ಭೇಟಿ ನೀಡಿದರು. ಇಲ್ಲಿ 48 ಲಕ್ಷ ರೂಪಾಯಿ ವೆಚ್ಚದಲ್ಲಿ 1.8 ಕಿ.ಮೀ. ಉದ್ದದ ರಸ್ತೆ ಕಾಮಗಾರಿ ನಡೆಯುತ್ತಿತ್ತು.ರಸ್ತೆಗೆ ಡಾಮರು ಹಾಕಿರಲಿಲ್ಲ, ಕಲ್ಲಿನ ಹುಡಿ ಹಾಕಲಾಗಿತ್ತು. ಚರಂಡಿ ಹಾಗೂ ಒಳಚರಂಡಿ ವ್ಯವಸ್ಥೆಯೇ ಇರಲಿಲ್ಲ. ಕಾಮಗಾರಿ ಸಂಪೂರ್ಣ ಕಳಪೆಯಾಗಿತ್ತು. ಸಚಿವರ ಭೇಟಿಗಾಗಿ ಗಿಡಗಂಟಿ ಕಡಿದು ಸ್ವಚ್ಛ ಮಾಡಲಾಗಿತ್ತು. ಈ ರಸ್ತೆಯ ದಾಖಲೆಗಳು, ಕಾಮಗಾರಿ ವಿವರ, ಕಾರ್ಯಯೋಜನೆ ಮಾಹಿತಿಯನ್ನು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಂಶುದ್ದೀನ್ ಹಾಗೂ ಸೆಕ್ಷನ್ ಅಧಿಕಾರಿ ಪ್ರಭಾಕರ್ ಬಳಿ ಸಚಿವರು ಕೇಳಿದರು. ಅಧಿಕಾರಿಗಳ ಬಳಿ ದಾಖಲೆಗಳೇ ಇರಲಿಲ್ಲ.ಸಚಿವರ ಕಾರ್ಯಕ್ರಮ ಪೂರ್ವ ನಿಗದಿಯಾಗಿತ್ತು. ಆದರೂ ಅಧಿಕಾರಿಗಳು ದಾಖಲೆ ತಂದಿರಲಿಲ್ಲ. ಸ್ವತಃ ಪಾಲಿಕೆಯ ಆಯುಕ್ತ ಮನೋಜ್ ಕುಮಾರ್ ಜೈನ್ ಹಾಜರಿರಲಿಲ್ಲ. ಅಲ್ಲದೇ ತಮ್ಮ ಅನುಪಸ್ಥಿತಿಯಲ್ಲಿ ಯಾವುದೇ ಹಿರಿಯ ಅಧಿಕಾರಿಯನ್ನು ನಿಯೋಜಿಸಿರಲಿಲ್ಲ. ಇದರಿಂದ ಆಕ್ರೋಶಗೊಂಡ ಸಚಿವರು ಮೇಲಿನ ಮಾತನ್ನು ಹೇಳಿದ್ದರು. ನೂರು ಕೋಟಿ ರೂಪಾಯಿ ಕಾಮಗಾರಿಗೆ ಅಧಿಕಾರಿಗಳಲ್ಲಿ ಉತ್ತರದಾಯಿತ್ವ ಇಲ್ಲದಿರುವುದು ಕಂಡುಬಂತು.  ಜಯತೀರ್ಥ: ಬಳಿಕ ಸಚಿವರು ಜಯತೀರ್ಥ ಕಲ್ಯಾಣ ಮಂಟಪದ ಮುಂಭಾಗದ ರಸ್ತೆಗೆ ಭೇಟಿ ನೀಡಿದರು. ಅಲ್ಲಿ ರಸ್ತೆ ಮಟ್ಟಕ್ಕಿಂತ ಚರಂಡಿ ಮಟ್ಟ ಎತ್ತರದಲ್ಲಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಕಾಮಗಾರಿ ಸಂಪೂರ್ಣ ಕಳಪೆ ಆಗಿರುವುದನ್ನು ಪತ್ತೆಹಚ್ಚಿದರು. ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಿದರು.ಕೊಳಚೆ ನೀರು: ಎಂ.ಆರ್.ವೈದ್ಯಕೀಯ ಕಾಲೇಜು ಬಳಿ ಕೊಳಚೆ ನೀರು ಹರಿವಿಗೆ ಮಾಡಲಾದ ಕಾಮಗಾರಿಯನ್ನು ಪರಿಶೀಲಿಸಿದರು. ನಗರದ ಹೆಚ್ಚುವರಿ ಕೊಳಚೆ ನೀರು ಭೀಮಾ ನದಿ ನೀರು ಸೇರುವುದರಿಂದ ರೋಗ ರುಜಿನಕ್ಕೆ ನಗರ ಆಗರವಾಗುತ್ತಿರುವುದನ್ನು ಮನಗಂಡರು.ಜಾಮ್: ಎಂ.ಆರ್.ವೈದ್ಯಕೀಯ ಕಾಲೇಜು ಬಳಿ ಬೆಳಗ್ಗೆ 9.30ರ ಸುಮಾರಿಗೆ ಸಚಿವರು ಹಾಗೂ ಅಧಿಕಾರಿಗಳ ವಾಹನಗಳು ರಸ್ತೆ ಮಧ್ಯದಲ್ಲಿಯೇ ನಿಂತ ಪರಿಣಾಮ ಟ್ರಾಫಿಕ್ ಜಾಮ್ ಆಗಿತ್ತು. ಶಾಲಾ-ಕಾಲೇಜು-ಕಚೇರಿಗಳಿಗೆ ಹೋಗುವ ಮಂದಿಗೆ ತೊಂದರೆಯಾಗಿತ್ತು. ಇದಕ್ಕೆ ಕೆಲವರ ಆಕ್ಷೇಪವೂ ವ್ಯಕ್ತವಾಯಿತು.ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಶಾಸಕರಾದ ಖಮುರುಲ್ ಇಸ್ಲಾಂ, ವಾಲ್ಮೀಕಿ ನಾಯಕ್, ದೊಡ್ಡಪ್ಪ ಗೌಡ ನರಿಬೋಳ, ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್, ಎಂಎಸ್‌ಐಎಲ್ ಅಧ್ಯಕ್ಷ ವಿಕ್ರಂ ಪಾಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದತ್ತಾತ್ರೇಯ ಪಾಟೀಲ ರೇವೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಕುಮಾರ ಪಾಟೀಲ ಮತ್ತು ಹಿರಿಯ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry