ಬುಧವಾರ, ಮೇ 25, 2022
23 °C

ನಗರಸಭಾ ಸದಸ್ಯರಿಗೆ ಕರ್ತವ್ಯ ಮಾಹಿತಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ನಗರಸಭೆಯ ಸದಸ್ಯರಿಗೆ ತಮ್ಮ ಅಧಿಕಾರ, ಕರ್ತವ್ಯಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮೊದಲು ಅವರಿಗೆ ತರಬೇತಿ ಆಯೋಜಿಸಿ ಅವರ ಜವಾಬ್ದಾರಿ, ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಬೇಕು’ ಎಂದು ನಗರದ ಹಿರಿಯ ನಾಗರಿಕರು ಆಗ್ರಹಿಸಿದರು.ನಗರಸಭೆಯ 2011-12ನೇ ಸಾಲಿನ ಮುಂಗಡ ಪತ್ರ ಸಿದ್ದಪಡಿಸುವ ಸಂಬಂಧ ಅಭಿವೃದ್ಧಿ ಬಗ್ಗೆ ಚರ್ಚಿಸಲು ಶುಕ್ರವಾರ ನಗರಸಭೆಯಲ್ಲಿ ಕರೆದಿದ್ದ ಹಿರಿಯ ನಾಗರಿಕರ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.ಸ್ವತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ ಮಾತನಾಡಿ ‘ನಗರಸಭೆ ಸದಸ್ಯರಿಗೆ ತಮ್ಮ ಕಾರ್ಯ ವ್ಯಪ್ತಿ ಏನೆಂಬುದೇ ಗೊತ್ತಿಲ್ಲ. ಹೀಗಿರುವಾಗ ಅಭಿವೃದ್ಧಿ ಹೇಗೆ ಸಾಧ್ಯ? ಮೊದಲು ಅವರಿಗೆ ತರಬೇತಿ ನೀಡಬೇಕು. ಮುಂದಿನ ಬಜೆಟ್‌ನಲ್ಲಿ ಕುಡಿಯುವ ನೀರು, ರಸ್ತೆ ದುರಸ್ತಿ, ಒಳಚರಂಡಿ ಕಾಮಗಾರಿಗಳಿಗೆ ಸಾಕಷ್ಟು ಹಣ ಮೀಸಲಿಡಬೇಕು. ಪ್ರತಿ ವಾರ್ಡ್‌ಗಳಲ್ಲೂ ವಾಚನಾಲಯ ತರೆಯಬೇಕು. ನಗರದ ಹೊಸ ಬಸ್ ನಿಲ್ದಾಣಕ್ಕೆ ಹೊಗುವ ರಸ್ತೆಯಲ್ಲಿ ಬೀದಿ ದೀಪ ವ್ಯವಸ್ಥೆ ಇಲ್ಲದೆ ಅಪರಾಧ ಚಟುವಟಿಕೆಗಳು ಹೆಚ್ಚಾಗಿದೆ’ ಎಂದರು.ನಿರ್ವಾಣಯ್ಯ ಅವರು ‘ಯಾವುದೇ ವಾರ್ಡ್‌ನಲ್ಲೂ ನಾಮಫಲಕವಿಲ್ಲ. ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಅಷ್ಟೇ ಅಲ್ಲ ನಗರಸಭೆಯಲ್ಲೇ ಮಾಹಿತಿ ನೀಡುವ ಫಲಕಗಳಿಲ್ಲ’ ಎಂದರು. ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್ ‘ಹಿರಿಯ ನಾಗರಿಕರು ಸೇರಿದಂತೆ ಎಲ್ಲರಿಂದ ಮಾರ್ಗದರ್ಶನ ಪಡೆದು ನಂತರವೇ ಈ ಬಾರಿಯ ಬಜೆಟ್ ರೂಪಿಸಲಾಗವುದು. ಯಾವುದೇ ಲೋಪದೋಷ ವಾಗದಂತೆ ಬಜೆಟ್ ರೂಪಿಸಲಾಗುವುದು. ನಗರಸಭೆಯ 40 ಸದಸ್ಯರೊಂದಿಗೆ ಈಬಗ್ಗೆ ಚರ್ಚಿಸಿ ಸೂಕ್ತ ಯೋಜನೆ ರೂಪಿಸಲಾಗುವುದು. ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಗಳು ಹಳೆಯದಾಗಿದ್ದು ಇದರ ಕಾಮಗಾರಿಯನ್ನು ಮೂರನೇ ಹಂತದಲ್ಲಿ ಸರ್ಕಾರದಿಂದ ಅನುದಾನ ಪಡೆದು ಹೊಸ ಪೈಪ್‌ಲೈನ್‌ಗಳನ್ನು ಜೋಡಿಸಲಾಗುವುದು” ಎಂದರು.ಪ್ರತಿಭಟನೆ: ಹೊಸ ಬಜೆಟ್ ಸಿದ್ಧಪಡಿಸಲು ನಗರಸಭೆ ಮುಂದಾಗಿದೆ. ಆದರೆ ಕಳೆದಬಾರಿ ಬಜೆಟ್‌ನಲ್ಲಿ ಉಲ್ಲೇಖಿಸಿದ್ದ ಹಲವು ಯೋಜನೆಗಳು ಜಾರಿಯಾಗಿಲ್ಲ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ನಗರಸಭೆ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಬಜೆಟ್ ಪ್ರಸ್ತಾವನೆಗಳೆಲ್ಲ ಕಡತಗಳಲ್ಲೇ ಉಳಿಯುತ್ತಿವೆ ಎಂದು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಅವರು ಯೋಜನೆ ಜಾರಿಗೊಳಿಸುವಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಕೊಳಚೆ ಪ್ರದೇಶ ಅಭಿವೃದ್ಧಿ, ಶೇ 22.75 ಅನುದಾನ ಹೀಗೆ ಅನೇಕ ಯೋಜನೆಗಳು ಫಲಾನುಭವಿಗಳಿಗೆ ಸಿಕ್ಕಿಲ್ಲ ಎಂದು ಅವರು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.