ನಗರಸಭೆಗೆ ಮಹಿಳಾ ಪಾರುಪತ್ಯ

6
ಅಧ್ಯಕ್ಷೆ ಮಹಾದೇವಿ, ಉಪಾಧ್ಯಕ್ಷೆ ಪದ್ಮಾವತಿ ಅವಿರೋಧ ಆಯ್ಕೆ

ನಗರಸಭೆಗೆ ಮಹಿಳಾ ಪಾರುಪತ್ಯ

Published:
Updated:
ನಗರಸಭೆಗೆ ಮಹಿಳಾ ಪಾರುಪತ್ಯ

ರಾಯಚೂರು: ರಾಯಚೂರು ನಗರಸಭೆಗೆ ನೂತನ ಅಧ್ಯಕ್ಷರಾಗಿ ನಗರದ 6ನೇ ವಾರ್ಡ್‌ನ ಸದಸ್ಯೆ ಮಹಾದೇವಿ ಹಾಗೂ 22ನೇ ವಾರ್ಡ್‌ನ ಸದಸ್ಯೆ ಪದ್ಮಾವತಿ ಶ್ರೀನಿವಾಸ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮಧ್ಯಾಹ್ನ 1 ಗಂಟೆಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಗರಸಭೆ ನೂತನ ಕಟ್ಟಡದ ಸಭಾ ಭವನದಲ್ಲಿ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಂಜುಶ್ರೀ ಅವರು ನಗರಸಭೆಗೆ ನೂತನ ಅಧ್ಯಕ್ಷೆಯಾಗಿ ಮಹಾದೇವಿ ಹಾಗೂ ಉಪಾಧ್ಯಕ್ಷೆಯಾಗಿ ಪದ್ಮಾವತಿ ಶ್ರೀನಿವಾಸ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಘೋಷಣೆ ಮಾಡಿದರು.ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಶೇ 50ರಷ್ಟು ಸದಸ್ಯರ ಹಾಜರಾತಿ ಇರಬೇಕು. ಶಾಸಕರು, ಸಂಸದರು ಸೇರಿದಂತೆ ಒಟ್ಟು 38 ಸದಸ್ಯರಲ್ಲಿ 25 ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಕೋರಂ ಕೊರತೆ ಇರಲಿಲ್ಲ. ಹೀಗಾಗಿ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಮಾತ್ರ ಸಲ್ಲಿಕೆ ಆಗಿತ್ತು. ಹೀಗಾಗಿ, ಇಬ್ಬರೂ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುಶ್ರೀ ತಿಳಿಸಿದರು.ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಚುನಾವಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಹೀಗಾಗಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿತ್ತು. ಆದರೆ, ಚುನಾವಣಾಧಿಕಾರಿ ಮಂಜುಶ್ರೀ ತಡೆಯಾಜ್ಞೆ ಕುರಿತ ಯಾವುದೇ ಅಧಿಕೃತ ಮಾಹಿತಿ ತಮಗೆ ದೊರಕಿಲ್ಲ. ಚುನಾವಣೆ ನಡೆಸುವುದಾಗಿ ಹೇಳಿದ್ದರು. ಆ ಪ್ರಕಾರ ಶುಕ್ರವಾರ ಚುನಾವಣೆ ಪ್ರಕ್ರಿಯೆ ನಡೆಸಿ ಅಧ್ಯಕ್ಷ-ಉಪಾಧ್ಯಕ್ಷರ ಘೋಷಣೆ ಮಾಡಲಾಗಿದೆ ಎಂದರು.ಎಸ್‌ಟಿ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಬೆಳಿಗ್ಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗುತ್ತಿದ್ದಂತೆಯೇ 6ನೇ ವಾರ್ಡ್‌ನ ಪಕ್ಷೇತರ ಸದಸ್ಯೆ ಮಹಾದೇವಿ ಅವರು ನಾಮಪತ್ರ ಸಲ್ಲಿಸಿದರು. ಹಿಂದುಳಿದ ವರ್ಗ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ 22ನೇ ವಾರ್ಡ್‌ನ ಪದ್ಮಾವತಿ ಶ್ರೀನಿವಾಸ ನಾಮಪತ್ರ ಸಲ್ಲಿಸಿದರು.1 ಗಂಟೆಗೆ ಚುನಾವಣಾಧಿಕಾರಿ ಮಂಜುಶ್ರೀ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಸಿದರು. ಸಭೆಯಲ್ಲಿ 13 ಜನ ಕಾಂಗ್ರೆಸ್ ಸದಸ್ಯರು, ಬಿಜೆಪಿ 7 ಸದಸ್ಯರು ಹಾಗೂ ಪಕ್ಷೇತರ 5 ಸದಸ್ಯರು ಹಾಜರಿದ್ದರು. 9 ಸದಸ್ಯ ಬಲ ಹೊಂದಿದ ಜೆಡಿಎಸ್ ಸದಸ್ಯರು ಚುನಾವಣಾ ಸಭೆಗೆ ಆಗಮಿಸದೇ ದೂರ ಉಳಿದಿದ್ದರು. ಹೀಗಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು.ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಬಲ 14 ಸದಸ್ಯರು. ಆದರೆ, ಈ ದಿನ ನಡೆದ ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಒಬ್ಬ ಮಹಿಳಾ ಸದಸ್ಯೆ ತಡವಾಗಿ ಆಗಮಿಸಿದ್ದರಿಂದ ಚುನಾವಣಾಧಿಕಾರಿಗಳು ತಾಂತ್ರಿಕವಾಗಿ ಅವರ ಹಾಜರಾತಿ ಪರಿಗಣಿಸಲಿಲ್ಲ. ಹೀಗಾಗಿ ಕಾಂಗ್ರೆಸ್ ಸದಸ್ಯ ಬಲ 13ಕ್ಕೆ ಕುಸಿಯಿತು. ಒಮ್ಮತ ತೀರ್ಮಾನದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಸದಸ್ಯೆ ಪದ್ಮಾವತಿ ಶ್ರೀನಿವಾಸ ಅವರಿಗೆ ಬೆಂಬಲ ಸೂಚಿಸಿದ್ದರು.ಬಿಜೆಪಿ ಪಕ್ಷದ 7 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಕ್ಷದ ವರಿಷ್ಠರ ಸೂಚನೆಯಂತೆ ತಟಸ್ಥವಾಗಿರಲು ನಿರ್ಧರಿಸಿದ್ದರು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದು, ಆಯ್ಕೆ ಅವಿರೋಧವಾಗಿ ನಡೆದಿದ್ದರಿಂದ ರಾಜಕೀಯ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿತು. ಪಕ್ಷೇತರ 5 ಸದಸ್ಯರು  ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪಕ್ಷೇತರ ಸದಸ್ಯೆ ಮಹಾದೇವಿ ಅವರಿಗೆ ಬೆಂಬಲ ಸೂಚಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry