ಶುಕ್ರವಾರ, ನವೆಂಬರ್ 15, 2019
22 °C
ಬರಿದಾದ ಬಸವನಹೊಳೆ ಜಲಾಶಯ; ಹೆಸರಿಗೆ `ಸಾಗರ', ಕುಡಿಯುವ ನೀರಿಗೆ ಬರ!

ನಗರಸಭೆಯಿಂದ ನೀರು ಪೂರೈಕೆ ಬಂದ್

Published:
Updated:

ಸಾಗರ: ನಗರಕ್ಕೆ ಕುಡಿಯುವ ನೀರು ಪೂರೈಸುವ ಬಸವನಹೊಳೆ ಡ್ಯಾಂ ಸಂಪೂರ್ಣವಾಗಿ ಬರಿದಾಗಿದ್ದು ಏ. 19ರಿಂದ ನಳ ಸಂಪರ್ಕ ಹೊಂದಿರುವವರಿಗೆ ಕುಡಿಯುವ ನೀರು ಪೂರೈಕೆ ಬಂದ್ ಮಾಡಲಾಗಿದೆ ಎಂದು ನಗರಸಭೆ ಗುರುವಾರ ಘೋಷಿಸಿದೆ.ಪ್ರತಿವರ್ಷ ಸಾಧಾರಣವಾಗಿ ಮೇ 15ರ ನಂತರ ಈ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ವರ್ಷ ಏಪ್ರಿಲ್ ಮುಗಿಯುವುದರೊಳಗೆ ಹೀಗಾಗಿರುವುದು ನೀರು ಪೂರೈಕೆ ಸಮಸ್ಯೆ ನಾಗರಿಕರನ್ನು ತೀವ್ರವಾಗಿ ಕಾಡಲಿದೆ.ನಗರಕ್ಕೆ ಕುಡಿಯುವ ನೀರು ಪೂರೈಸುವ ಬಸವನಹೊಳೆ ಡ್ಯಾಂನ ಹೂಳೆತ್ತುವ ಮೂಲಕ ಅಲ್ಲಿ ಸಂಗ್ರಹವಾಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಸಮಸ್ಯೆ ಬಗೆಹರಿಸಬೇಕು ಎಂಬ ಒತ್ತಾಸೆ ನಗರದ ನಾಗರಿಕರಿಂದ, ಸಂಘ-ಸಂಸ್ಥೆಗಳಿಂದ ಕೇಳಿ ಬಂದಿತ್ತು. ಆದರೆ, ನಗರಸಭೆ ಆಡಳಿತ ಇದಕ್ಕೆ ಕಿವಿಗೊಡದ ಪರಿಣಾಮ ಅದರ ಬಿಸಿ ಈಗ ಜನರಿಗೆ ತಟ್ಟಿದೆ.ಪ್ರತಿವರ್ಷ ನೀರು ಪೂರೈಕೆ ಕೊರತೆ ಉಂಟಾಗುತ್ತಿದ್ದರೂ ಮೇ ತಿಂಗಳ ಮಧ್ಯ ಭಾಗದವರೆಗೆ ಬಸವನಹೊಳೆ ಡ್ಯಾಂನಲ್ಲಿ ಸಂಗ್ರಹವಿರುವ ನೀರು ಪೂರ್ತಿಯಾಗಿ ಖಾಲಿ ಆಗದಂತೆ ನಿರ್ವಹಿಸ ಲಾಗುತ್ತಿತ್ತು. ಈ ಬಾರಿ ಅಂತಹ ನಿರ್ವಹಣೆಯಲ್ಲಿ ನಗರಸಭೆ ವಿಫಲವಾಗಿದೆ. ಡ್ಯಾಂನ ತಲೆಕಟ್ಟಿನಲ್ಲಿರುವ ಕೃಷಿ ಭೂಮಿಯ ಮಾಲೀಕರು ಅಕ್ರಮವಾಗಿ ಡ್ಯಾಂನ ನೀರನ್ನು ಬಳಸಿಕೊಳ್ಳುವುದನ್ನು ತಡೆಯುವತ್ತ ನಗರಸಭೆ ಆಡಳಿತ ಗಮನಹರಿಸದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.ಸದ್ಯಕ್ಕೆ ಮಳೆ ಬರುವ ವಾತಾವರಣ ಕಾಣದೇ ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಪರಿಸ್ಥಿತಿ ನಿಭಾಯಿಸಲು ನಗರಸಭೆ ವತಿಯಿಂದ ಟ್ಯಾಂಕರ್ ಮೂಲಕ ಮೂರು ದಿನಕ್ಕೊಮ್ಮೆ ನೀರು ಪೂರೈಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು  ಉಪ ವಿಭಾಗಾಧಿಕಾರಿ ಡಾ.ಬಿ. ಉದಯ ಕುಮಾರ್ ಶೆಟ್ಟಿ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.ಬೆಳಿಗ್ಗೆ 6ಕ್ಕೆ ನಗರದ ವಿವಿಧ ಬಡಾವಣೆಗಳಿಗೆ ನೀರು ಪೂರೈಸಲು 15 ಸಾವಿರ ಲೀಟರ್ ಸಾಮರ್ಥ್ಯದ ಆರು ಹಾಗೂ 4 ಸಾವಿರ ಲೀ. ಸಾಮರ್ಥ್ಯದ ಆರು ಟ್ಯಾಂಕರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುವುದು. ಪ್ರತಿ ಮೂರು ದಿನಕ್ಕೊಮ್ಮೆ ಸಭೆ ಸೇರಿ ನೀರಿನ ಸಮಸ್ಯೆ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು  ಎಂದಿದ್ದಾರೆ.ನಾಗರಿಕರು ನೀರಿನ ಸಮಸ್ಯೆ ಕುರಿತು 24 ಗಂಟೆಗಳ ಕಾಲವೂ ಚಾಲ್ತಿಯಲ್ಲಿರುವ ಸಹಾಯವಾಣಿ (08183- 220178), ನೀರು ಸರಬರಾಜು ವಿಭಾಗದ ಎಂಜಿನಿಯರ್ ರಾಮಪ್ಪ (99641 87206) ಅವರನ್ನು ಸಂಪರ್ಕಿಸಬಹುದು ಎಂದು ಉಪ ವಿಭಾಗಾಧಿಕಾರಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)