ಶುಕ್ರವಾರ, ಜೂನ್ 25, 2021
22 °C
ಚಿಂತಾಮಣಿ

ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಜೋರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಅಂತು ಇಂತೂ ನಗರಸಭೆ ಸದಸ್ಯರಿಗೆ ಅಧಿಕಾರ ವಹಿಸಿಕೊಳ್ಳುವ ಮುಹೂರ್ತ ಕೂಡಿ ಬಂದಿದ್ದು, ಮಾ.19ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.  ಇಲ್ಲಿನ ನಗರಸಭೆ ಸದಸ್ಯರು ಅಧಿಕಾರ ವಹಿಸಿಕೊಳ್ಳಲು ಒಂದು ವರ್ಷದಿಂದ ತವಕಿಸುತ್ತಿದ್ದರು. 2013 ಮಾ.7ರಂದು ನಗರಸಭೆ ಚುನಾವಣೆ ನಡೆದು ಸದಸ್ಯರಾಗಿ ಆಯ್ಕೆಯಾದರೂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ವಿವಾದದಿಂದ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.  ಚುನಾವಣೆ ದಿನಾಂಕ ಈಗ ಘೋಷಣೆಯಾಗಿರುವುದರಿಂದ ನಗರಸಭೆ ಸದಸ್ಯರು ಕೊಂಚ ನಿರಾಳರಾಗಿದ್ದಾರೆ.  ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ–ಎ ಮತ್ತು ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ.  ಜೆಡಿಎಸ್‌ನ  16 ಮಂದಿ ಸದಸ್ಯರಿದ್ದು, ಸ್ಪಷ್ಟ  ಬಹುಮತ ಗಳಿಸಿದೆ. ಮಾಜಿ ಶಾಸಕ ಚೌಡರೆಡ್ಡಿ ಗುಂಪಿನ ಪಕ್ಷೇತರರು–13, ಬಿಜೆಪಿ–1, ಕಾಂಗ್ರೆಸ್‌–1 ಸೇರಿ ಒಟ್ಟು 31 ಮಂದಿ ಸದಸ್ಯರಿದ್ದಾರೆ.ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಮತ ಚಲಾಯಿಸಲು ಶಾಸಕ ಜೆಡಿಎಸ್‌ನ ಎಂ.ಕೃಷ್ಣಾರೆಡ್ಡಿ, ಲೋಕಸಭಾ ಸದಸ್ಯ ಕಾಂಗ್ರೆಸ್‌ನ ಕೆ.ಎಚ್‌.ಮುನಿಯಪ್ಪ, ವಿಧಾನ ಪರಿಷತ್‌ ಸದಸ್ಯ ಕಾಂಗ್ರೆಸ್‌ನ ನಸೀರ್‌ ಅಹಮದ್‌ ಅವರಿಗೂ ಅವಕಾಶವಿದೆ. ಇದರಿಂದ ಹೆಚ್ಚು ಕುತೂಹಲ ಕೆರಳಿಸಿದೆ. ಆಕಾಂಕ್ಷಿಗಳ ಚಟುವಟಿಕೆ ಬಿರುಸಾಗಿದೆ. ನಗರದ 2ನೇ ವಾರ್ಡ್‌ ವೆಂಕಟಗಿರಿಕೋಟೆ ದಕ್ಷಿಣದ ಸದಸ್ಯ ಎ.ಆರ್‌.ಅನ್ವರ್‌, 11 ನೇ ವಾರ್ಡ್‌ ವೆಂಕಟೇಶ್ವರ ಬಡಾವಣೆ ಸದಸ್ಯ ಎಸ್‌.ನಟರಾಜ್‌,  29 ನೇ ವಾರ್ಡ್‌ ನೆಕ್ಕುಂದಿಪೇಟೆ ಸದಸ್ಯ ಜಿಯಾಉಲ್ಲಾ ರಹಮಾನ್‌ ಅವರ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿವೆ. ಶಾಸಕ ಎಂ.ಕೃಷ್ಣಾರೆಡ್ಡಿ ಬೆಂಬಲಿಸುವ ಅಭ್ಯರ್ಥಿಯೇ ಅಧ್ಯಕ್ಷ ಸ್ಥಾನ ಗಳಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಜೆಡಿಎಸ್‌ನ ಮೂರು ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನ ಗಳಿಸಲು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ನಡೆಸಿದ್ದಾರೆ. ಶಾಸಕರ ಮತ್ತು ಕೇಂದ್ರ ಸಚಿವರ  ಬೆಂಬಲ ಗಳಿಸಲು ಲಾಬಿ  ನಡೆಸಿದ್ದಾರೆ. ಎ.ಆರ್‌.ಅನ್ವರ್‌, ಜಿಯಾಉಲ್ಲಾ ರಹಮಾನ್‌ ಎರಡನೇ ಬಾರಿಗೆ ಆಯ್ಕೆಯಾಗಿದ್ದರೆ. ಎಸ್‌.ನಟರಾಜ್‌ ಮೊದಲ ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷ ಸ್ಥಾನವು ಕಾಂಗ್ರೆಸ್‌ಗೆ ಬಯಸದೆ ಬಂದ ಭಾಗ್ಯವಾಗಿದೆ. ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. 3ನೇ ವಾರ್ಡ್‌ ವೆಂಕಟಗಿರಿಕೋಟೆ ಕಾಲೊನಿಯ ಕಾಂಗ್ರೆಸ್‌ ಸದಸ್ಯೆ ತುಳಸಿ, ಪರಿಶಿಷ್ಟ ಜಾತಿಯಿಂದ ಆಯ್ಕೆಯಾದ ಏಕೈಕ ಮಹಿಳೆಯಾಗಿದ್ದಾರೆ. ಯಾವುದೇ ಅಡ್ಡಿಆತಂಕವಿಲ್ಲದೇ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.