ಬುಧವಾರ, ಜನವರಿ 22, 2020
16 °C

ನಗರಸಭೆ ಜೆಸಿಬಿ ಖಾಸಗಿ ಕೆಲಸ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಒಂದು ತಿಂಗಳಿನಿಂದ ಸಬೂಬು ಹೇಳುತ್ತಾ ನಗರಸಭೆ ಅಧ್ಯಕ್ಷರನ್ನು ದಾರಿತಪ್ಪಿಸುತ್ತಿದ್ದ ನಗರಸಭೆ ಜೆಸಿಬಿಯನ್ನು ನಗರದ ಹೊರಭಾಗದಲ್ಲಿ ಚಾಲಕನ ಸಮೇತ ರೆಡ್‌ಹ್ಯಾಂಡ್ ಆಗಿ ಹಿಡಿಯುವಲ್ಲಿ ಅಧ್ಯಕ್ಷೆ ಯಶೋಧಾಗಂಗಪ್ಪ ಗುರುವಾರ ಯಶಸ್ವಿಯಾಗಿದ್ದಾರೆ.ನಗರಸಭೆ ಕಾಂಗ್ರೆಸ್ ಸದಸ್ಯರೊಬ್ಬರ ತಂದೆಯ ತೋಟದಲ್ಲಿ ಈ ಜೆಸಿಬಿ ಕೆಲಸ ಮಾಡುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಹದಿನೈದು ದಿನಗಳಿಂದೂ ಅತಿ ಹತ್ತಿರದಿಂದ ಗಮನಿಸಲಾಗುತ್ತಿತ್ತು. ಗುರುವಾರ ಯಂತ್ರದ ಜವಾಬ್ದಾರಿ ಹೊತ್ತಿರುವ ಎಂಜಿನಿಯರ್ ಶಿವಶಂಕರ ಅವರನ್ನು ಕೇಳಿದಾಗಲೂ ನಜರಾಬಾದ್ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಉತ್ತರಿಸಿದ್ದರು ಎಂದು ಯಶೋಧಾ ಗಂಗಪ್ಪ `ಪ್ರಜಾವಾಣಿ~ಗೆ ತಿಳಿಸಿದರು.ಗುರುವಾರ ಜೆಸಿಬಿ ಯನ್ನು ನಗರಸಭೆ ಕಚೇರಿ ಆವರಣಕ್ಕೆ ಕರೆಸುವಂತೆ ಸೂಚಿಸಿದಾಗ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮುಗಿದ ಬಳಿಕ ಕರೆಸುವುದಾಗಿ ಹೇಳಿ ಎಂಜಿನಿಯರ್ ನುಣುಚಿಕೊಂಡಿದ್ದರು. ಎಂಜಿನಿಯರ್ ಹೇಳಿಕೆ ನಂತರ ಜೆಸಿಬಿ ಹಿಡಿಯಲು ಯಶೋಧಾಗಂಗಪ್ಪ ಅವರು ಸದಸ್ಯೆ ಸುಜಾತಾ ಚಂದ್ರಶೇಖರ್ ಅವರೊಂದಿಗೆ ಖಾಸಗಿ ಕಾರಿನಲ್ಲಿ ತೆರಳಿ ಹೊನ್ನುಡಿಕೆ ಬಳಿ ಚಾಲಕನ ಸಮೇತ ಹಿಡಿದಿದ್ದಾರೆ.ಒಂದು ತಿಂಗಳಿನಿಂದ ಜೆಸಿಬಿ ಯಂತ್ರ ಗೂಳೂರು ಹ್ಯಾಂಡ್‌ಪೋಸ್ಟ್ ಬಳಿಯ ತೋಟವೊಂದರಲ್ಲಿ ನಿಂತಿದೆ. ಆದರೆ ಲಾಗ್‌ಪುಸ್ತಕದಲ್ಲಿ ನಗರದ ವಿವಿಧ  ವಾರ್ಡ್‌ಗಳಲ್ಲಿ ಕೆಲಸ ಮಾಡಿಸಿರುವುದಾಗಿ ನಮೂದಿಸಲಾಗಿದೆ. ಹೀಗಾಗಿ ಎಂಜಿನಿಯರ್ ಶಿವಶಂಕರ್ ಅವರನ್ನು ಅಮಾನತು ಪಡಿಸುವಂತೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.`ನಗರಸಭೆ ಕಾಂಗ್ರೆಸ್ ಸದಸ್ಯೆ ದೇವಿಕಾ ಸಿದ್ದಲಿಂಗೇಗೌಡ ಅವರ ತಂದೆಗೆ ಸೇರಿದ ತೋಟದಲ್ಲಿ ಇಷ್ಟು ದಿನ ಜೆಸಿಬಿ ಕೆಲಸ ಮಾಡಿದೆ. ಕಳೆದ ಕೆಲವು ದಿನಗಳ ಹಿಂದೆ ರಾತ್ರಿ ವೇಳೆ ಸ್ಥಳಕ್ಕೆ ಹೋಗಿ ಖಚಿತಪಡಿಸಿಕೊಂಡಿದ್ದೆ~ ಎಂದು ಯಶೋಧಾ ಅವರು `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿದರು.ಕೆಲವು ದಿನಗಳಿಂದ ಜೆಸಿಬಿ ಯಂತ್ರ ನಗರಸಭೆ ಬಳಕೆಗೆ ಸಿಗುತ್ತಿರಲಿಲ್ಲ. ಇದರ ಜವಾಬ್ದಾರಿ ವಹಿಸಿಕೊಂಡಿರುವ ಎಂಜಿನಿಯರ್ ಶಿವಶಂಕರ ಅವರನ್ನು ಕೇಳಿದಾಗಲೆಲ್ಲ ವಾರ್ಡ್‌ಗಳಲ್ಲಿ ಕೆಲಸ ಮಾಡುತ್ತಿದೆ ಎಂದು ಸಬೂಬು ಹೇಳುತ್ತಿದ್ದರು. ಇದರಿಂದ ಅನುಮಾನಗೊಂಡು ತನಿಖೆ ಮಾಡಿದಾಗ ಸುಳಿವು ಸಿಕ್ಕಿತ್ತು ಎಂದೂ ಅವರು ಹೇಳಿದರು.ಯಶೋಧಾ ಗಂಗಪ್ಪ ವಿರುದ್ಧ ಸದಸ್ಯರು ಅವಿಶ್ವಾಸಕ್ಕೆ ಮುಂದಾಗಿದ್ದಾರೆ. ಅವಿಶ್ವಾಸದಿಂದ ತೆರವಾಗುವ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಲ್ಲಿ ದೇವಿಕಾ ಸಿದ್ದಲಿಂಗೇಗೌಡ ಕೂಡ ಒಬ್ಬರಾಗಿದ್ದಾರೆ. ಇಂಥ ಸಂದರ್ಭದಲ್ಲೇ ನಗರಸಭೆ ಜೆಸಿಬಿ ಬಳಕೆಯ ಆರೋಪಕ್ಕೆ ಸಿಲುಕಿರವುದು ಮುಂದಿನ ನಗರಸಭೆ ರಾಜಕೀಯ ನಡೆಯ ಮೇಲೆ ಪರಿಣಾಮ ಬೀರಬಹುದು ಎಂದು ಸದಸ್ಯರೊಬ್ಬರು ತಿಳಿಸಿದರು.

 

ಪ್ರತಿಕ್ರಿಯಿಸಿ (+)