ಮಂಗಳವಾರ, ಮೇ 24, 2022
30 °C

ನಗರಸಭೆ ನಿರ್ಲಕ್ಷ್ಯ; ಶೌಚಕ್ಕೂ ಪರದಾಟ

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ವಿಜಾಪುರ: ‘ಶೌಚಾಲಯ ಇಲ್ಲದ ಮನೆಗೆ ಕನ್ಯೆ ಕೊಡಬೇಡಿ’ ಎಂದು ಮುಖ್ಯಮಂತ್ರಿಗಳು ಫರ್ಮಾನು ಹೊರಡಿಸಿದ್ದನ್ನು ಕೇಳಿ ಇಲ್ಲಿಯ ಇಬ್ರಾಹಿಂಪುರ ಬಡಾವಣೆಯ ಜನ ಮುಜುಗುರಕ್ಕೀಡಾಗಿದ್ದಾರೆ. ಏಕೆಂದರೆ, ನಿತ್ಯಕರ್ಮ ಪೂರೈಸಲು ಈ ಬಡಾವಣೆಯವರು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಬಹುತೇಕರಿಗೆ ರೈಲ್ವೆ ಹಳಿಗಳೇ ಶೌಚಾಲಯ, ಹಗಲು ಹೊತ್ತಿನಲ್ಲಾದರೆ ಸೈಕಲ್ ಏರಿ ಶೌಚಕ್ಕೆ ಹೋಗಬೇಕಾದ ಅನಿವಾರ್ಯತೆ.‘ಇಬ್ರಾಹಿಂಪುರ’ ಎಂದಾಕ್ಷಣ ಇದು ಯಾವುದೋ ಕುಗ್ರಾಮ ಎಂದುಕೊಳ್ಳಬೇಡಿ. ಐತಿಹಾಸಿಕ ವಿಜಾಪುರ ನಗರದ ಒಂದು ಭಾಗ. 21ನೇ ವಾರ್ಡ್. ಈಗ ಅವರೇ ನಗರಸಭೆಯ ಉಪಾಧ್ಯಕ್ಷರು!ವಿಜಾಪುರದಲ್ಲಿ ನಿರ್ಮಲ ನಗರ ಯೋಜನೆ ಜಾರಿಯಲ್ಲಿದೆ. ನಗರಸಭೆಯವರ ನಿರ್ಲಕ್ಷ್ಯದಿಂದಾಗಿ ಅದು ಆಮೆ ವೇಗವನ್ನೂ ಮೀರಿಲ್ಲ. ಇಡೀ ನಗರವನ್ನು ನಿರ್ಮಲ ಮಾಡುವುದು ಹೋಗಲಿ, ನಗರದ ಭಾಗವಾಗಿರುವ ಈ ಬಡಾವಣೆಯ ಜನರಿಗೆ ‘ಮಲ’ ವಿಸರ್ಜಿಸಲು ಒಂದಿಷ್ಟು ಸಾರ್ವಜನಿಕ ಶೌಚಾಲಯ ನಿರ್ಮಿಸಿ ‘ಪುಣ್ಯ’ಕಟ್ಟಿಕೊಳ್ಳುವ ಮನಸ್ಸನ್ನು ನಗರಸಭೆ ಮಾಡಿಲ್ಲ.ಅಂದಾಜು ಹತ್ತು ಸಾವಿರ ಜನರು ವಾಸಿಸುತ್ತಿರುವ ಈ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ವೈಯಕ್ತಿಕ ಶೌಚಾಲಯಗಳಿಲ್ಲ. ಸೆಪ್ಟಿಕ್ ಟ್ಯಾಂಕ್ ನಿರ್ಮಿಸಿ ಕೆಲವರು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಆದರೂ ಅವುಗಳ ಸಂಖ್ಯೆ ಬೆರಳೆಣಿಕೆಯಷ್ಟು. ಪುರುಷರು- ಮಹಿಳೆಯರು ನಿತ್ಯಕರ್ಮ ಪೂರೈಸಲು ಇಲ್ಲಿಯ ರೈಲ್ವೆ ಹಳಿಗಳತ್ತ, ಇಲ್ಲವೆ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ನ ಸುತ್ತಮುತ್ತ ಕೈಯಲ್ಲಿ ತಂಬಿಗೆ ಹಿಡಿದು ಹೆಜ್ಜೆ ಹಾಕುತ್ತಾರೆ. ನಿತ್ಯಕರ್ಮ ಪೂರೈಸುವುದಕ್ಕಾಗಿಯೇ ಇವರೆಲ್ಲ ನಸುಕಿನಲ್ಲಿ ಏಳಬೇಕು. ಸ್ವಲ್ಪ ತಡವಾದರೆ, ಜನ ಸಂಚಾರ ಆರಂಭವಾಗುತ್ತದೆ. ಪುರುಷರು ಸೈಕಲ್ ಅಥವಾ ಬೈಕ್ ಮೇಲೆ ಒಂದೆರಡು ಕಿ.ಮೀ. ಆಚೆ ಹೋಗುತ್ತಾರೆ. ಮಹಿಳೆಯರು ಸಂಜೆವರೆಗೆ ಕಾಯಲೇಬೇಕಾದ ದುಸ್ಥಿತಿ ಇದೆ ಎಂದು ಬಡಾವಣೆಯ ಗುರುನಿಂಗಪ್ಪ ಗುನ್ನಾಪುರ ಹೇಳುತ್ತಾರೆ.‘ಒಳಚರಂಡಿ, ಶೌಚಾಲಯ, ಶುದ್ಧ ಕುಡಿಯುವ ನೀರು ಮತ್ತಿತರ ಅಗತ್ಯಗಳನ್ನು ಪೂರೈಸುವುದು ಸರ್ಕಾರದ ಹೊಣೆಗಾರಿಕೆ. ಆದರೆ, ನೀರು ಹೊರತು ಪಡಿಸಿದರೆ ಉಳಿದ ಯಾವುದೇ ಸೌಲಭ್ಯ ತಮಗೆ ದೊರೆಯುತ್ತಿಲ್ಲ. ನಾವೆಲ್ಲ ನಮ್ಮ ಹಕ್ಕುಗಳಿಂದ ವಂಚಿತರಾಗಿದ್ದೇವೆ. ಇದು ಇಂದು ನಿನ್ನೆಯ ಸಮಸ್ಯೆ ಆಲ್ಲ. ಇಬ್ರಾಹಿಂಪುರ ಬಡಾವಣೆ ನಿರ್ಮಾಣಗೊಂಡಾಗಿನಿಂದಲೂ ಜನರು ನಿತ್ಯ ತಂಬಿಗೆ ಹಿಡಿದು ಕಿಲೋಮೀಟರ್ ಗಟ್ಟಲೆ ಹೋಗುವುದು ತಪ್ಪುತ್ತಿಲ್ಲ’ ಎಂದು ಅವರು ಗೋಳಿಡುತ್ತಾರೆ.ತಮ್ಮ ಬಡಾವಣೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಿ ಶೌಚಾಲಯ ನಿರ್ಮಿಸಿಕೊಡುವಂತೆ ನಗರಸಭೆಗೆ ಮನವಿ ಮಾಡಿ ಸೋತ ಜಿ.ಎನ್. ಗುನ್ನಾಪುರ ಮತ್ತಿತರರು ರಾಜ್ಯ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದಾರೆ.  ‘ವಿಜಾಪುರದಲ್ಲಿ ಸಭೆ ನಡೆಸಿದ್ದ ಆಯೋಗದ ಅಧ್ಯಕ್ಷ ನ್ಯಾ.ಎಸ್.ಆರ್. ನಾಯಕ, ಸಾರ್ವಜನಿಕ ಸಭೆಯಲ್ಲಿಯೇ ಪೌರಾಯುಕ್ತರಿಗೆ ಛೀಮಾರಿ ಹಾಕಿದ್ದರು. ಆಗ ಎರಡು ತಿಂಗಳಲ್ಲಿ ಶೌಚಾಲಯ ಮತ್ತು ಒಳ ಚರಂಡಿ ಕಾಮಗಾರಿಗೆ ಟೆಂಡರ್ ಕರೆಯುವುದಾಗಿ ಪೌರಾಯುಕ್ತರು ಭರವಸೆ ನೀಡಿದ್ದರು. ಆದರೆ, ಆ ಕೆಲಸ ಇನ್ನೂ ಆಗಿಲ್ಲ’ ಎನ್ನುತ್ತಾರೆ ಅವರು.‘ನಗರ ಶಾಸಕರು ಹಾಗೂ ನಗರಸಭೆಯವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಕನಿಷ್ಠ ಪಕ್ಷ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಕೊಡಲು ಮುಂದಾಗಬೇಕು’ ಎಂದು ಇಬ್ರಾಹಿಂಪುರ ಬಡಾವಣೆಯ ನಾಗರಿಕರು ಮನವಿ ಮಾಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.