ನಗರಸಭೆ: ವಿರೋಧದ ನಡುವೆಯೂ ಕ್ರಿಯಾ ಯೋಜನೆಗೆ ಒಪ್ಪಿಗೆ

7

ನಗರಸಭೆ: ವಿರೋಧದ ನಡುವೆಯೂ ಕ್ರಿಯಾ ಯೋಜನೆಗೆ ಒಪ್ಪಿಗೆ

Published:
Updated:
ನಗರಸಭೆ: ವಿರೋಧದ ನಡುವೆಯೂ ಕ್ರಿಯಾ ಯೋಜನೆಗೆ ಒಪ್ಪಿಗೆ

ಮಂಡ್ಯ: ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ತಯಾರಿಸಿರುವ 12 ಕೋಟಿ ರೂಪಾಯಿ ಕ್ರಿಯಾ ಯೋಜನೆಗೆ, ಶಾಸಕರು ಹಾಗೂ ಆಡಳಿತ ಪಕ್ಷದ ಕೆಲ ಸದಸ್ಯರ ವಿರೋಧದ ಮಧ್ಯೆ ಬಹುಮತದಿಂದ ಅಂಗೀಕರಿಸಲಾಯಿತು.ಮಂಡ್ಯ ನಗರಸಭೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯಸಭೆಯಲ್ಲಿ ಕ್ರಿಯಾ ಯೋಜನೆ ಮಂಡಿಸುತ್ತಿದ್ದಂತೆಯೇ ಆಡಳಿತ ಪಕ್ಷವಾದ ಜೆಡಿಎಸ್‌ನ ಎಂ.ಜೆ. ಚಿಕ್ಕಣ್ಣ, ಎಂ.ಎಲ್. ಮಂಜುನಾಥ, ಶಂಕರೇಗೌಡ, ಪದ್ಮಾವತಿ, ಕೆ.ಸಿ. ನಾಗಮ್ಮ, ವಾರ್ಡ್‌ವಾರು ಅನದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ವಿರೋಧಿಸಿದರು.ಪ್ರತಿಪಕ್ಷದ ಹೊಸಹಳ್ಳಿ ಬೋರೇಗೌಡ, ನಂಜುಂಡಪ್ಪ ಮತ್ತಿತರರು ಮಾತನಾಡಿ, ಕ್ರಿಯಾ ಯೋಜನೆಗೆ ಅನುಮೋದಿಸುತ್ತಿದ್ದೇವೆ. ಬಹುಮತವಿರುವುದರಿಂದ ಅಂಗೀಕರಿಸಬೇಕು ಎಂದು ಅಧ್ಯಕ್ಷ ಎಂ.ಪಿ.ಅರುಣಕುಮಾರ್ ಅವರಿಗೆ ಮನವಿ ಮಾಡಿದರು.ಈ ಹಂತದಲ್ಲಿ ಎರಡೂ ಬಣದ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಗಲಾಟೆಯಲ್ಲಿ ಯಾರೂ ಮಾತನಾಡುವುದು ಕೇಳಲಿಲ್ಲ. ಎಲ್ಲರನ್ನೂ ಸಮಾಧಾನ ಪಡಿಸಿದ ಅಧ್ಯಕ್ಷರು, ಕ್ರಿಯಾ ಯೋಜನೆಗೆ ಅಂಗೀಕಾರ ನೀಡುತ್ತಿರುವುದಾಗಿ ಘೋಷಿಸಲು ಮುಂದಾದರು. ಆಗ ಮತ್ತೆ ಗಲಾಟೆ ಆರಂಭವಾಯಿತು.

ಆಡಳಿತ ಪಕ್ಷದ ಕೆಲ ಸದಸ್ಯರು ಕ್ರಿಯಾ ಯೋಜನೆ ಅಂಗೀಕಾರವಾಗಲು ಬಿಡುವುದಿಲ್ಲ ಎಂದರೆ, ಉಳಿದವರು ಅಂಗೀಕರಿಸಬೇಕು ಎಂದು ಪಟ್ಟು ಹಿಡಿದರು.ಆಗ ಮಧ್ಯಪ್ರವೇಶಿಸಿದ ಶಾಸಕ ಎಂ.ಶ್ರೀನಿವಾಸ್, ಸಭೆಯನ್ನು ಹೀಗೆ ನಡೆಸಲಾಗುತ್ತದೆಯೇ? ಶಾಂತವಾಗಿ ಕುಳಿತುಕೊಳ್ಳಿ ಎಂದರು. ಈ ಹಂತದಲ್ಲಿ ಅಡ್ಡಿ ಪಡಿಸಲು ಯತ್ನಿಸಿದರಿಗೆ, ನನಗೂ ಕಾನೂನು ಗೊತ್ತು. ಎಲ್‌ಎಲ್‌ಬಿ ಓದಿದ್ದೇನೆ. ಸುಮ್ಮನೆ ಕುಳಿತುಕೊಳ್ಳಿ ಎಂದು ಸೂಚಿಸಿದರು.ವಿಧಾನ ಪರಿಷತ್ ಸದಸ್ಯ ಬಿ. ರಾಮಕೃಷ್ಣ ಮಾತನಾಡಿ, ಒಬ್ಬೊಬ್ಬರಾಗಿ ಮಾತನಾಡಿ. ಎಲ್ಲವೂ ರೆಕಾರ್ಡ್ ಆಗಲಿ ಎಂದರು.ಸದಸ್ಯ ನಂಜುಂಡಪ್ಪ ಮಾತನಾಡಿ, ಕಳೆದ ಬಾರಿ ತಮ್ಮ ವಾರ್ಡ್‌ಗಳಿಗೆ ಹೆಚ್ಚಿನ ಅನುದಾನ ಪಡೆದುಕೊಂಡು, ನಮ್ಮ ವಾರ್ಡ್‌ಗಳಿಗೆ ಹೆಸರಿಗೆ ಮಾತ್ರ ನೀಡುವ ಮೂಲಕ ಅನ್ಯಾಯ ಮಾಡಲಾಗಿತ್ತು. ಆಗ ಕೇಳಿದರೆ ಬಹುಮತವಿದೆ ಎಂದು ಹೇಳಲಾಗಿತ್ತು. ಈಗೇಕೆ ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು.ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪದ್ಮಾವತಿ, ನಾಗಮ್ಮ, ಶಂಕರೇಗೌಡ ಅವರು, ಎಲ್ಲರಿಗೂ ಸಮನಾಗಿ ಹಂಚಿಕೆ ಮಾಡಬೇಕು. ಮಧ್ಯ ಪ್ರವೇಶಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.ಶಾಸಕ ಶ್ರೀನಿವಾಸ್ ಮಾತನಾಡಿ, ಕಳೆದ ಬಾರಿ ನೀವು ಹೆಚ್ಚಿಗೆ ತೆಗೆದುಕೊಂಡಿದ್ದೀರಿ ಎಂದು ಹೇಳುತ್ತಿದ್ದಾರೆ. ಈಗ, ಅವರು ಹೆಚ್ಚಿಗೆ ತೆಗೆದುಕೊಂಡಿದ್ದಾರೆ. ಎರಡನ್ನೂ ಪರಿಗಣನೆಗೆ ತೆಗೆದುಕೊಂಡ ಸಮನಾಗಿ ಹಂಚಿಕೆ ಮಾಡೋಣ ಎಂದರು. ಇದಕ್ಕೂ ಕೆಲವರು ಒಪ್ಪಿಗೆ ಸೂಚಿಸಲಿಲ್ಲ.ಕ್ರಿಯಾ ಯೋಜನೆ ಅಂಗೀಕಾರಕ್ಕೆ ಅಧ್ಯಕ್ಷರು ಮುಂದಾದಾಗ, ಅದನ್ನು ತಡೆದ ಸದಸ್ಯ ಎಂ.ಜೆ. ಚಿಕ್ಕಣ್ಣ ಅವರು, ಶಾಸಕರು ತಮ್ಮ ಅಭಿಪ್ರಾಯ ದಾಖಲಿಸಬೇಕು ಎಂದರು.ಶಾಸಕ ಶ್ರೀನಿವಾಸ್ ಮಾತನಾಡಿ, ಅನುದಾನ ಸಮಾನವಾಗಿ ಹಂಚಿಕೆಯಾಗಿಲ್ಲ. ಇದಕ್ಕೆ ವಿರೋಧವಿದೆ. ಈ ಬಗೆಗೆ ಪ್ರತ್ಯೇಕ ಸಭೆ ಕರೆದು ಚರ್ಚಿಸೋಣ ಎಂದರು.ಶಾಸಕ ಬಿ. ರಾಮಕೃಷ್ಣ ಮಾತನಾಡಿ, ಅನುದಾನ ಸಮನಾಗಿ ಹಂಚಿಕೆಯಾಗ ಬೇಕು. ಸಭೆಯ ಕರೆಯವ ಬಗೆಗೆ ಸಹಮತ ವ್ಯಕ್ತಪಡಿಸಿದರು. ಇದಕ್ಕೆ ಉಪಾಧ್ಯಕ್ಷ ನಾಗರಾಜು ಅವರೂ ಧ್ವನಿಗೂಡಿಸಿದರು.ಅಧ್ಯಕ್ಷ ಅರುಣಕುಮಾರ್ ಮಾತನಾಡಿ, ಕ್ರಿಯಾ ಯೋಜನೆ ಅಂಗೀಕಾರಕ್ಕೆ ಹೊಸಹಳ್ಳಿ ಬೋರೇಗೌಡರು ಸೇರಿದಂತೆ ಹದಿನೈದು ಸದಸ್ಯರು ಅನುಮೋದಿಸಿದ್ದಾರೆ. ಆದ್ದರಿಂದ ಸಭೆ ಅನುಮೋದಿಸಿದೆ ಎಂದು ಘೋಷಿಸಿದರು.ಇದರಿಂದ ಅಸಮಾಧಾನಗೊಂಡ ಶಾಸಕರಾದ ಎಂ.ಶ್ರೀನಿವಾಸ್, ಬಿ. ರಾಮಕೃಷ್ಣ, ನಗರಸಭೆ ಸದಸ್ಯರಾದ ಎಂ.ಜೆ. ಚಿಕ್ಕಣ್ಣ, ಮಂಜುನಾಥ ಮತ್ತಿತರರು ಸಭೆಯಿಂದ ಹೊರ ನಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry