ನಗರಾಭಿವೃದ್ಧಿಗೆ ಜನರ ಸಹಭಾಗಿತ್ವ ಬಹಳ ಮುಖ್ಯ

7

ನಗರಾಭಿವೃದ್ಧಿಗೆ ಜನರ ಸಹಭಾಗಿತ್ವ ಬಹಳ ಮುಖ್ಯ

Published:
Updated:

ಬೆಂಗಳೂರು: `ಪಟ್ಟಭದ್ರ ಹಿತಾಸಕ್ತಿ ಇರುವವರು ತಮ್ಮ ಉದ್ದೇಶ ಸಾಧನೆಗೆ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಹೊಂದಿರುವವರು ತಮ್ಮ ಉದ್ದೇಶ ಈಡೇರಿಕೆಗೆ ಕನಿಷ್ಠ ಪ್ರಯತ್ನವನ್ನೂ ಮಾಡುತ್ತಿಲ್ಲ~ ಎಂದು `ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಪಡೆ~ಯ (ಅಬೈಡ್) ಸದಸ್ಯ ಅಶ್ವಿನ್ ಮಹೇಶ್ ಮಾರ್ಮಿಕವಾಗಿ ನುಡಿದರು.ವಿದ್ಯುನ್ಮಾನ ಆಂಗ್ಲ ನಿಯತಕಾಲಿಕ `ಗಿರೆಮ್~ (ಜಿಐಆರ್‌ಇಎಂ), ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ `ಮೆಟ್ರೊ- ಬೆಂಗಳೂರಿನ ಬೆನ್ನೆಲುಬು~ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.`ಸುಶಿಕ್ಷಿತರು, ಮಧ್ಯಮವರ್ಗದವರಲ್ಲಿ ಸರ್ಕಾರ ತಮ್ಮ ಮಾತು ಕೇಳುವುದಿಲ್ಲ ಎಂಬ ಅಭಿಪ್ರಾಯವಿದೆ. ನನ್ನ ಅನುಭವದಲ್ಲಿ ಇದು ತಪ್ಪು. ನಮ್ಮ ಬೇಕು ಬೇಡಗಳನ್ನು ಸರ್ಕಾರದ ಮುಂದೆ ಇಡುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥವೇ ಇಲ್ಲ~ ಎಂದು ಅವರು ಹೇಳಿದರು.`ಬಜೆಟ್ ಸೇರಿದಂತೆ ಸರ್ಕಾರದ ಯೋಜನೆಗಳ ಫಲಿತಾಂಶ ನೋಡಿ ಟೀಕಿಸುವ ಪ್ರವೃತ್ತಿ ಸರಿಯಲ್ಲ. ಯೋಜನೆಗಳು, ಬಜೆಟ್‌ಗಳು ತಯಾರಾಗುವ ಹಂತದಲ್ಲಿಯೇ ಜನರು ಭಾಗಿಯಾಗಬೇಕು. ಮಾಧ್ಯಮಗಳು ಸಹ ಫಲಿತಾಂಶಕ್ಕಿಂತ ಪ್ರಕ್ರಿಯೆ ಹಂತದಲ್ಲಿ ಹೆಚ್ಚಿನ ನಿಗಾ ವಹಿಸಬೇಕು~.`ಪಾಲಿಕೆ ಬಜೆಟ್‌ನಲ್ಲಿ ರಸ್ತೆಗಳ ಅಭಿವೃದ್ಧಿಗೆ ಹಣ ಕೊಡಲಾಗುತ್ತಿತ್ತು. ಎರಡು ವರ್ಷಗಳ ಹಿಂದೆ ಪಾದಚಾರಿ ಮಾರ್ಗದ ಅಭಿವೃದ್ಧಿಗೆ ಪ್ರತ್ಯೇಕ ಹಣ ನೀಡುವಂತೆ ನಾನು ಸಲಹೆ ಮಾಡಿದೆ. ಅದರಂತೆ ಮೊದಲ ವರ್ಷ 20 ಕೋಟಿ, ಎರಡನೇ ವರ್ಷ 28 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಯಿತು~.ನೆರೆ ಹೊರೆ ಅಭಿವೃದ್ಧಿ: `ನಗರಾಭಿವೃದ್ಧಿಯಲ್ಲಿ ನಾಗರಿಕರ ಸಹಭಾಗಿತ್ವ ಬಹಳ ಮುಖ್ಯ. ಕೆನಡಾದಲ್ಲಿ ನೆರೆಹೊರೆ ಅಭಿವೃದ್ಧಿ ಕಾರ್ಯಕ್ರಮದಡಿ ಅಲ್ಲಿನ ಅಭಿವೃದ್ಧಿ ಕಾರ್ಯಗಳಲ್ಲಿ ಸಮುದಾಯ ಸಕ್ರಿಯವಾಗಿ ಭಾಗವಹಿಸುತ್ತಿದೆ. ಆಫ್ರಿಕಾದ ಕೊಳೆಗೇರಿಗಳಲ್ಲಿ ಇಂತಹ ಸಮುದಾಯ ಸಹಭಾಗಿತ್ವದ ಕಾರ್ಯಕ್ರಮ ಯಶಸ್ವಿಯಾಗಿದೆ~. `ಚುನಾವಣೆ ಮೂಲಕ ಮೇಯರ್ ಆಯ್ಕೆಯಾಗುವ ವ್ಯವಸ್ಥೆ ಬರಬೇಕು. ನಗರದ ಕೇಂದ್ರ ಭಾಗ ಮಾತ್ರವಲ್ಲದೇ ಸಮಗ್ರ ದೃಷ್ಟಿಕೋನದಿಂದ ಯೋಜನೆಗಳನ್ನು ರೂಪಿಸುವ ಕೆಲಸ ಆಗಬೇಕು. ಇದಕ್ಕಾಗಿ ನಗರಕ್ಕೆ ಸಂಬಂಧಿಸಿದ ಸರ್ಕಾರದ ಎಲ್ಲ ಸಂಸ್ಥೆಗಳನ್ನು ಸೇರಿಸಿ ಬೆಂಗಳೂರು ಮಹಾನಗರ ಪ್ರದೇಶ ಆಡಳಿತ ಮಂಡಳಿ ರಚಿಸಬೇಕು~.`ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮುಖ್ಯಮಂತ್ರಿಗಳ ವಿವೇಚನ ಕೋಟಾ ಅಡಿಯಲ್ಲಿ ನಿವೇಶನ ಹಂಚಿಕೆಗಿಂತ ಮುಖ್ಯವಾಗಿ ನಗರಾಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಅದಕ್ಕಾಗಿ ಅದನ್ನು ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ಪ್ರಾಧಿಕಾರವನ್ನಾಗಿ ಪರಿವರ್ತಿಸಬೇಕು~ ಎಂದು ಅವರು ಒತ್ತಾಯಿಸಿದರು.ವೆಂಕಟರಾಮನ್ ಅಸೋಸಿಯೇಟ್ಸ್ ಕಂಪೆನಿಯ ವ್ಯವಸ್ಥಾಪಕ ಪಾಲುದಾರ ವಿ.ನರೇಶ್ ನರಸಿಂಹನ್, `ನವದೆಹಲಿಯನ್ನು ರಾಷ್ಟ್ರದ ರಾಜಧಾನಿ ಪ್ರದೇಶ ಎಂದು ಅಭಿವೃದ್ಧಿ ಪಡಿಸಬಹುದಾದರೆ ಬೆಂಗಳೂರನ್ನು ರಾಜ್ಯ ರಾಜಧಾನಿ ಪ್ರದೇಶ ಎಂದು ಘೋಷಿಸಿ ಅಭಿವೃದ್ಧಿ ಪಡಿಸಬಾರದೇಕೆ?~ ಎಂದು ಪ್ರಶ್ನಿಸಿದರು.`ಬೆಂಗಳೂರು ಸಿಟಿ ಕನೆಕ್ಟ್ ಫೌಂಡೇಷನ್~ನ ಸದಸ್ಯ ರವಿಚಂದ್ರನ್, `ನಗರ ಚೆನ್ನಾಗಿದ್ದರೆ ವಾಣಿಜ್ಯ ವ್ಯವಹಾರಗಳು ಚೆನ್ನಾಗಿ ನಡೆಯುತ್ತವೆ. ಉದ್ಯಮಿಗಳು ಇದನ್ನು ಮನಗಂಡು ನಗರಾಭಿವೃದ್ಧಿಗೆ ಕೊಡುಗೆ ನೀಡಬೇಕು.  ಆಗಬೇಕಿರುವ ಕೆಲಸಗಳು ಯಾವುವು? ಆಗಬಾರದ ಕೆಲಸಗಳು ಯಾವುವು ಎಂಬುದನ್ನು ನಿರ್ದಿಷ್ಟವಾಗಿ ಸರ್ಕಾರದ ಮುಂದೆ ಮಂಡಿಸಬೇಕು~ ಎಂದರು.

`ಹಲವು ಸಮಸ್ಯೆಗಳ ನಗರ~

ಬೆಂಗಳೂರು: `ಇತರೆ ಮಹಾನಗರಗಳಂತೆ ಅತಿ ವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರವು ಭೂ ಪರಿವರ್ತನೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ~ ಎಂದು ಸೆಂಚುರಿ ರಿಯಲ್ ಎಸ್ಟೇಟ್‌ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪೈ ಅಭಿಪ್ರಾಯಪಟ್ಟರು.`ಬೆಂಗಳೂರು ಬೆಳೆದ ಬಂದ ರೀತಿ~ ಕುರಿತು ಮಾತನಾಡಿದ ಅವರು, `ರಾಜಕಾರಣಿಗಳ ಹಿಡಿತದಲ್ಲಿ ಭೂಮಿ ಇರುವುದರಿಂದ ಹೊಸ ಹೊಸ ಯೋಜನೆಗಳನ್ನು ಅನುಸರಿಸುವುದು ಕಷ್ಟವಾಗಿದೆ. ಪ್ರಸ್ತುತ ಕಾರ್ಯಗತಗೊಂಡಿರುವ ನಗಾರಭಿವೃದ್ಧಿ ಯೋಜನೆಗಳಲ್ಲಿ ದೂರದರ್ಶಿತ್ವದ ಕೊರತೆಯಿದೆ~ ಎಂದು ವಿಷಾದಿಸಿದರು.`ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವ ಈ ನಗರದ ರಸ್ತೆಗಳು ಯೋಜಿತ ನಕ್ಷೆಯ ಆಧಾರದ ಮೇಲೆ ರೂಪುಗೊಂಡಿಲ್ಲ. ಇನ್ನು ಕಾರ್ಪೋರೇಟ್ ಕಂಪೆನಿಗಳನ್ನು ಸ್ಥಾಪಿಸುವ ವಿಷಯ ಮತ್ತು ನಗರಾಭಿವೃದ್ಧಿಯಂತಹ ವಿಚಾರದಲ್ಲಿ ಬೆಂಗಳೂರು ಸೇರಿದಂತೆ ಇತರೆ ಮಹಾನಗರಗಳಲ್ಲಿ ಮೇಯರ್ ಅವರ ಪಾತ್ರವೂ ದುರ್ಬಲವಾಗಿದೆ~ ಎಂದರು.ವಿಪ್ರೊ ಟೆಕ್ನಾಲಜಿ ಸಂಸ್ಥೆಯ ಹರಿಪ್ರಸಾದ್ ಹೆಗ್ಡೆ, `ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಕಂಪೆನಿ ಸ್ಥಾಪನೆಗೆ ಆಂಧ್ರಪ್ರದೇಶ ಸರ್ಕಾರ ಉತ್ತಮ ಪ್ರೋತ್ಸಾಹ ನೀಡುತ್ತಿದ್ದು, ಈ ವಿಷಯದಲ್ಲಿ ರಾಜ್ಯ ಸರ್ಕಾರದ ಸಹಕಾರ ಅಗತ್ಯವಿದೆ~ ಎಂದು ಹೇಳಿದರು. `ಭೂ ಪರಿವರ್ತನೆ ಮತ್ತು ಡಿನೋಟಿಫಿಕೇಷನ್‌ನಂತಹ ಪ್ರಕರಣಗಳಲ್ಲಿ ನಿವಾಸಿಗಳು ಅನಗತ್ಯ ಕಿರುಕುಳ ಅನುಭವಿಸುತ್ತಾರೆ. ಅಗತ್ಯವಿದ್ದರಷ್ಟೇ ಡಿನೋಟಿಫಿಕೇಷನ್‌ಗೆ ಸರ್ಕಾರ ಒಪ್ಪಿಗೆ ನೀಡಬೇಕು. ಸಾರಿಗೆ ವ್ಯವಸ್ಥೆಯನ್ನು ಪರಿಸರ ಸ್ನೇಹಿಯಾಗಿ ಪರಿವರ್ತನೆಗೊಳಿಸುವುದರ ಜತೆಗೆ ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ಬೆಂಗಳೂರು ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಿದೆ~ ಎಂದರು.`ಸುಸಜ್ಜಿತ ಪಾದಚಾರಿ ಮಾರ್ಗವೂ ಅತ್ಯಗತ್ಯ~

ಬೆಂಗಳೂರು: `ಸುರಂಗ ಮಾರ್ಗ ನಿರ್ಮಾಣ ಪೂರ್ಣಗೊಂಡ ಮೇಲಷ್ಟೇ ಮೆಟ್ರೊದ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ಮೆಟ್ರೊದ ನಿಲ್ದಾಣಗಳಿಗೆ ಹೋಗಿ ಬರಲು ಸುಸಜ್ಜಿತವಾದ ಪಾದಚಾರಿ ಮಾರ್ಗ ನಿರ್ಮಿಸಬೇಕು~ ಎಂದು ನಗರದಲ್ಲಿ ಗುರುವಾರ ನಡೆದ `ಮೆಟ್ರೊ- ಬೆಂಗಳೂರಿನ ಬೆನ್ನೆಲುಬು~ ಕುರಿತ ವಿಚಾರ ಗೋಷ್ಠಿಯಲ್ಲಿ ಅಭಿಪ್ರಾಯಪಡಲಾಯಿತು.`ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನಾ ಕೇಂದ್ರ~ದ (ಸಿಐಎಸ್‌ಟಿಯುಪಿ) ಸಹಾಯಕ ಪ್ರಾಧ್ಯಾಪಕ ಡಾ.ಅಶೀಶ್ ವರ್ಮ, `ಮೆಟ್ರೊ ನಿಲ್ದಾಣಗಳಿಗೆ ಸುಗಮ ಸಂಪರ್ಕ ಸೌಲಭ್ಯ ಕಲ್ಪಿಸುವ ಅಗತ್ಯವಿದೆ~ ಎಂದರು. ವರ್ಮ ಮಾತಿಗೆ ಗೋಷ್ಠಿಯಲ್ಲಿ ಭಾಗವಹಿಸಿದ್ದ ಎಲ್ಲರೂ ದನಿಗೂಡಿಸಿದರು.

`ವರ್ತುಲ ರಸ್ತೆಗಳ ಬಳಿ ಅಗ್ನಿಶಾಮಕ ಠಾಣೆ ಸ್ಥಾಪನೆ ಅಗತ್ಯ~

ಬೆಂಗಳೂರು: ವರ್ತುಲ ರಸ್ತೆಗಳಿರುವ ಬಳಿ ಅಗ್ನಿ ಶಾಮಕ ಠಾಣೆಗಳನ್ನು ಸ್ಥಾಪಿಸಬೇಕು ಎಂದು ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆ ಇಲಾಖೆಯ ಉಪ ನಿರ್ದೇಶಕ ರಶೀದ್ ಅಭಿಪ್ರಾಯ ವ್ಯಕ್ತಪಡಿಸಿದರು.`ಅಗ್ನಿಯಿಂದ ಸುರಕ್ಷತೆ~ ವಿಷಯದ ಸಮ್ಮೇಳನದಲ್ಲಿ ಅವರು ಮಾತನಾಡುತ್ತಾ, ನಗರದಲ್ಲಿ ಕಳೆದ ಒಂದು ವರ್ಷದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಗ್ನಿ ದುರಂತಗಳು ಸಂಭವಿಸಿವೆ. ಮಾಹಿತಿ ತಿಳಿದ ಕೂಡಲೇ ನಮ್ಮ ಸಿಬ್ಬಂದಿ ತಂಡ ವಾಹನಗಳೊಂದಿಗೆ ಹೊರಡುತ್ತಾರೆ. ಆದರೆ ಸಂಚಾರ ದಟ್ಟಣೆಯಿಂದ ಸೂಕ್ತ ಸಮಯದಲ್ಲಿ ಸ್ಥಳಕ್ಕೆ ಹೋಗಿ ಬೆಂಕಿಯನ್ನು ನಂದಿಸಲು ಕಷ್ಟವಾಗುತ್ತಿದೆ. ಈ ಕಾರಣದಿಂದಲೇ ನಗರದ ಹುಳಿಮಾವು ಬಳಿ ಇರುವ ವರ್ತುಲ ರಸ್ತೆಯಲ್ಲಿ ಅಗ್ನಿ ಶಾಮಕ ಠಾಣೆಯನ್ನು ಸ್ಥಾಪಿಸಲಾಗಿದೆ. ಇಂತಹ ವ್ಯವಸ್ಥೆಯಿಂದ ಹೆಚ್ಚಿನ ಅನಾಹುತವನ್ನು ತಪ್ಪಿಸಬಹುದು ಎಂದರು.ಸಾಫ್ಟ್‌ವೇರ್ ಕಂಪೆನಿಗಳು ಸೇರಿದಂತೆ ನಗರದ ಬೃಹತ್ ಕಟ್ಟಡಗಳ ಮಾಲೀಕರು ನಿರಪೇಕ್ಷಣಾ ಪತ್ರವನ್ನು(ಎನ್‌ಒಸಿ) ಪಡೆದಿರುವುದಿಲ್ಲ. ಅಗ್ನಿ ಸುರಕ್ಷತೆಗೆ ಮುಂಜಾಗ್ರತಾ ಕ್ರಮಗಳೂ ಕಟ್ಟಡದಲ್ಲಿ ಇರುವುದಿಲ್ಲ. ಬೆಂಕಿ ನಂದಿಸುವಾಗಲೂ ಮಾಲೀಕರು ನಮಗೆ ಸಹಕಾರ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಬಿಎಐಎಲ್‌ನ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಕೆ.ದೇವಸ್ಯ ಹಾಗೂ ಇನ್‌ಫಿನಿಟ್ ಕಂಪ್ಯೂಟರ್ ಸೊಲ್ಯುಶನ್ ಇಂಡಿಯಾ ಕಂಪೆನಿಯ ಮುಖ್ಯಸ್ಥ(ಆಡಳಿತ ಮತ್ತು ಸೌಲಭ್ಯ) ಆರ್.ರಾಮಕೃಷ್ಣನ್ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry