ಭಾನುವಾರ, ಡಿಸೆಂಬರ್ 15, 2019
21 °C

ನಗರೀಕರಣದಿಂದ ಮನುಷ್ಯತ್ವ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರೀಕರಣದಿಂದ ಮನುಷ್ಯತ್ವ ನಾಶ

ರಾಮನಗರ: ಇಂದಿನ ನಗರೀಕರಣದ ಬದುಕಿನಲ್ಲಿ ಮನುಷ್ಯ ಮನುಷ್ಯತ್ವ ಕಳೆದುಕೊಂಡು ಮೃಗಗಳಿಗಿಂತ ಕಡೆಯಾಗಿ ಜೀವಿಸುತ್ತಿದ್ದಾನೆ. ಅತಿಯಾದ ನಗರೀಕರಣದಿಂದಾಗಿ ಮನುಷ್ಯತ್ವ ನಾಶವಾಗುತ್ತಿದ್ದು, ಸಂಶಯ, ಭಯ, ತಲ್ಲಣಗಳಲ್ಲಿ ಜೀವನ ನಡೆಸುವ ಪರಿಸ್ಥತಿ ನಿರ್ಮಾಣ ಆಗಿರುವುದು ಆತಂಕ  ಉಂಟು ಮಾಡಿದೆ ಎಂದು ಬೇಲಿಮಠದ ಶಿವಾನುಭವ ಚರಮೂರ್ತಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.ತಾಲ್ಲೂಕು ಬಿಜೆಪಿ ಘಟಕ ನಗರದ ಕನ್ನಿಕಾ ಮಹಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.ವಿವೇಕಾನಂದರ ವಿಚಾರಧಾರೆಗಳಿಂದ ಸ್ಪೂರ್ತಿ ಪಡೆದ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ನಿಂತು ಹೋಗಿದ್ದ ಧಾರ್ಮಿಕ ಪ್ರವಾಹವನ್ನು ಪುನಃ ಜಾಗೃತಿಗೊಳಿಸಿ ಮನುಷ್ಯರಲ್ಲಿ ಸಹೋದರತೆ, ಸಹಬಾಳ್ವೆಯನ್ನು ಅವರು ಮೂಡಿಸಿದರು ಎಂದು ಸ್ವಾಮೀಜಿ ಸ್ಮರಿಸಿದರು.ವಿವೇಕಾನಂದರ ವಿಚಾರಧಾರೆಗಳಿಂದ ಪ್ರಭಾವಿತರಾದ ಕುವೆಂಪು ಅವರು ಉತ್ತಮ ಸಾಹಿತ್ಯವನ್ನು ರಚಿಸಲು ಸಾದ್ಯವಾಯಿತು. ಇವರಿಂದ ಅನೇಕರು ಸ್ಪೂರ್ತಿ ಪಡೆದರು ಎಂದು ಅವರು ಹೇಳಿದರು.ಅರ್ಕಾವತಿ ಶುದ್ಧವಾಗಬೆಕು: ರಾಮನಗರದಲ್ಲಿ ಹಾದು ಹೋಗುವ ಅರ್ಕಾವತಿ ನದಿ ಮೊದಲು ಶುದ್ದೀಕರಣವಾಗಬೇಕಿದೆ. ಹಿಂದಿನಂತೆ ಈ ನದಿಯಲ್ಲಿ ಶುದ್ಧ ನೀರು ಹರಿಯಬೇಕು. ಆ ಮೂಲಕ ನದಿಯ ಹಿಂದಿನ ವೈಭವ ಮರುಕಳಿಸಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆಯವರು ನದಿಯನ್ನು ಹಾಳು ಮಾಡಿದ ದುಷ್ಕೃತ್ಯವನ್ನು ಎಂದಿಗೂ ಕ್ಷಮಿಸಲಾರರು ಎಂದು ಸ್ವಾಮೀಜಿ ಎಚ್ಚರಿಸಿದರು.ಊರಿನ ಮಧ್ಯ ಭಾಗದಲ್ಲಿ ಇರುವ ಈ ನದಿಯನ್ನು ಶುದ್ಧಿಕರಿಸದಿದ್ದರೆ ಬೇರೆ ಯಾವ ಅಭಿವೃದ್ಧಿಯೂ ಪೂರ್ಣವೆನಿಸಿಕೊಳ್ಳಲಾರದು. ಹಾಗೆಯೇ ಕಲುಷಿತವಾಗಿರುವ ಮನಸ್ಸುಗಳನ್ನು ಶುದ್ಧವಾಗಿಸಬೇಕಿದೆ.ಸಮಾಜದಲ್ಲಿ ಮಾನವೀಯತೆ ಪುನರ್ ಸ್ಥಾಪಿಸಬೆಕಾದ ಅಗತ್ಯ ಇದೆ. ಪರಸ್ಪರರ ಹೃದಯಗಳಲ್ಲಿ ಶಾಂತಿ ಸೌಹಾರ್ಧತೆಯ ಹೂವು ಅರಳಬೇಕು ಎಂದರು.ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಯುವ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅಂಗವಿಕಲರು, ಅಂಧರು ಮತ್ತು ಬುದ್ಧಿಮಾಂದ್ಯ ಮಕ್ಕಳಿಗೆ ಉಪಯುಕ್ತ ಪರಿಕರಗಳು ಮತ್ತು ಉಪಕರಣಗಳನ್ನು ವಿತರಿಸಲಾಯಿತು. ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇದೇ ವೇದಿಕೆಯಲ್ಲಿ ಅಭಿನಂದಿಸಲಾಯಿತು.ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೀಶ್ವರ್ ಕಾರ್ಯಕ್ರಮ ಉದ್ಘಾಟಿಸಿದರು. ರಾಮನಗರ ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆವಹಿಸಿದ್ದರು. ಕೆಎಂಎಫ್ ನಿರ್ದೇಶಕ ಪಿ.ನಾಗರಾಜು, ಮುಖಂಡರಾದ ಡಿ.ಗಿರಿಗೌಡ, ಚನ್ನಕೇಶವ ಉಪಸ್ಥಿತರಿದ್ದರು. ಶಶಿಕಲಾ ರಾಮಣ್ಣ ಪ್ರಾರ್ಥಿಸಿದರು. ಜಿ.ವಿ.ಪದ್ಮನಾಭ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)