ಬುಧವಾರ, ಜೂಲೈ 8, 2020
21 °C

ನಗರೀಕರಣ: ರಾಜ್ಯಕ್ಕೆ 4ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರೀಕರಣ ಪ್ರಕ್ರಿಯೆಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಈಗ 4ನೇ ಸ್ಥಾನದಲ್ಲಿದ್ದು, 2050ರ ವೇಳೆಗೆ ರಾಜ್ಯದ ಶೇ. 50ರಷ್ಟು ಭೂಭಾಗ ನಗರೀಕರಣ ವ್ಯಾಪ್ತಿಗೆ ಸೇರುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಎನ್.ವಿಜಯಪ್ರಕಾಶ್ ತಿಳಿಸಿದರು.ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಗರ ನೈರ್ಮಲ್ಯೀಕರಣ ಯೋಜನೆ ಕುರಿತು ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನಗರ ನೈರ್ಮಲ್ಯ ಯೋಜನೆ(ಸಿಎಸ್‌ಪಿ) ರೂಪಿಸಲಾಗಿದ್ದು ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ವಿವಿಧ ನಗರಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿವೆ ಎಂದರು.ಸಿಎಸ್‌ಪಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಜಾರಿಗೆ ತಂದಿಲ್ಲ. ಬದಲಿಗೆ ನೈರ್ಮಲ್ಯ ಕುರಿತು ತೆಗೆದುಕೊಳ್ಳಬೇಕಾದ ಕ್ರಮಗಳು, ಜನಜಾಗೃತಿ ಇದರಲ್ಲಿ ಸೇರಿವೆ. ಈಗಾಗಲೇ ಪಾಲಿಕೆಯಿಂದ ನಗರ ನೈರ್ಮಲ್ಯ ಕಾರ್ಯಪಡೆ ರಚಿಸಲಾಗಿದೆ. ಕಾರ್ಯಪಡೆ ನೇತೃತ್ವದಲ್ಲಿ ವಿವಿಧ ಆರೋಗ್ಯ ಜಾಗೃತಿ ಕಾರ್ಯಕ್ರಮ ಜಾರಿಗೆ ತರಲಾಗುವುದು ಎಂದರು.ಬಯಲು ಮಲ ವಿಸರ್ಜನಾಮುಕ್ತ ನಗರಗಳನ್ನಾಗಿ ಘೋಷಿಸಲು ಈ ಯೋಜನೆ ಸಹಕಾರಿಯಾಗಿದ್ದು, ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಘನ ತ್ಯಾಜ್ಯ ನಿರ್ವಹಣೆಗೆ ಇತ್ತೀಚೆಗೆ ಹೊಸದಾಗಿ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದ ಆಯುಕ್ತ ವಿಜಯಪ್ರಕಾಶ್, ನಗರ ನೈರ್ಮಲೀಕರಣ ಯೋಜನೆ ಯಶಸ್ವಿಯಾಗಲು ಸಾರ್ವಜನಿಕರ ಜತೆ ಜನಪ್ರತಿನಿಧಿಗಳೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.ಕಾರ್ಯಾಗಾರ ಉದ್ಘಾಟಿಸಿದ ಮೇಯರ್ ರಜನಿ ದುಗ್ಗಣ್ಣ, ನೈರ್ಮಲ್ಯ ಕಾಪಾಡಲು ಅಧಿಕಾರಿಗಳೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.

ಹೈದರಾಬಾದ್‌ನ ಭಾರತೀಯ ಮಹಾವಿದ್ಯಾಲಯ(ಅಸ್ಕಿ)ದ ಸಂಪನ್ಮೂಲ ವ್ಯಕ್ತಿ ಸೀಮಾ, ನಗರ ನಿರ್ಮಲೀಕರಣ ನೀತಿಯ ಯಶಸ್ವಿ ಅನುಷ್ಠಾನಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿದರು.ಉಪ ಮೇಯರ್ ರಾಜೇಂದ್ರ ಕುಮಾರ್, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ. ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.