ಸೋಮವಾರ, ಏಪ್ರಿಲ್ 12, 2021
22 °C

ನಗರ ತೊರೆಯುವವರ ಸಂಖ್ಯೆ ಇಳಿಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಭದ್ರತೆಯ ಭಾವದಿಂದ ನಗರವನ್ನು ತ್ಯಜಿಸುತ್ತಿರುವ ಈಶಾನ್ಯ ರಾಜ್ಯಗಳ ನಾಗರಿಕರ ಸಂಖ್ಯೆಯಲ್ಲಿ ಶನಿವಾರ ತೀವ್ರ ಇಳಿಮುಖವಾಗಿದೆ. ಯಶವಂತಪುರದಿಂದ ಕೋಲ್ಕತ್ತಕ್ಕೆ ತೆರಳುವ `ಹೌರಾ ಎಕ್ಸ್‌ಪ್ರೆಸ್~ ರೈಲಿನಲ್ಲಿ ಸುಮಾರು 800 ಮಂದಿ ತಮ್ಮೂರಿಗೆ ತೆರಳಿದರು.ಸಾಮಾಜಿಕ ಜಾಲ ತಾಣಗಳಲ್ಲಿ ಹಬ್ಬಿದ ಬೆದರಿಕೆ ಕರೆ ಹಾಗೂ ಹಲ್ಲೆ ವದಂತಿಗಳ ಹಿನ್ನೆಲೆಯಲ್ಲಿ ಮೂರು ದಿನಗಳಲ್ಲಿ (ಬುಧವಾರದಿಂದ ಶುಕ್ರವಾರದವರೆಗೆ) ಮೂರು ದೈನಿಕ ರೈಲುಗಳು ಹಾಗೂ ಎಂಟು ವಿಶೇಷ ರೈಲುಗಳ ಮೂಲಕ 26,184 ಮಂದಿ ನಗರವನ್ನು ತ್ಯಜಿಸಿದ್ದರು. ಆದರೆ, ನಗರ ರೈಲು ನಿಲ್ದಾಣದಲ್ಲಿ ಶನಿವಾರ ಭಾರಿ ಜನದಟ್ಟಣೆ ಕಂಡುಬರಲಿಲ್ಲ. ಸಂಜೆ ಆರು ಗಂಟೆಯ ವೇಳೆಗೆ ಗುವಾಹಟಿಗೆ 200 ಟಿಕೆಟ್ ಸೇರಿದಂತೆ 300 ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿತ್ತು.ಗುವಾಹಟಿಗೆ ನಗರದಿಂದ ಬುಧವಾರ, ಗುರುವಾರ ಹಾಗೂ ಶುಕ್ರವಾರ ಮಾತ್ರ ರೈಲು ತೆರಳುತ್ತದೆ. ಶನಿವಾರ ದೈನಿಕ ರೈಲು ವ್ಯವಸ್ಥೆ ಇಲ್ಲದಿರುವುದು ಸಹ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಲು ಕಾರಣವಾಗಿತ್ತು. ಆದರೂ, ಹಲ್ಲೆಯ ಆತಂಕದಿಂದ 800ರಷ್ಟು ಮಂದಿ ರೈಲ್ವೆ ನಿಲ್ದಾಣಕ್ಕೆ ಧಾವಿಸಿದ್ದರು. ಗುವಾಹಟಿಗೆ ವಿಶೇಷ ರೈಲಿನ ವ್ಯವಸ್ಥೆ ಮಾಡುವಂತೆ ಪ್ರಯಾಣಿಕರು ಅಧಿಕಾರಿಗಳಲ್ಲಿ ಆಗ್ರಹಿಸಿದರು. ಇದರಿಂದಾಗಿ ಸ್ವಲ್ಪ ಹೊತ್ತು ನಿಲ್ದಾಣದಲ್ಲಿ ಗೊಂದಲ ಉಂಟಾಯಿತು.`ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲು ಕನಿಷ್ಠ 2,000 ಪ್ರಯಾಣಿಕರು ಇರಬೇಕು. ಆದರೆ, ಇಂದು ಅಷ್ಟು ಮಂದಿ ನಿಲ್ದಾಣದಲ್ಲಿ ಇಲ್ಲ. ಯಶವಂತಪುರದಿಂದ ಹೊರಡುವ ಹೌರಾ ಎಕ್ಸ್‌ಪ್ರೆಸ್ ಮೂಲಕ ತೆರಳಬಹುದು~ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ಈ ಪ್ರಯಾಣಿಕರನ್ನು ಯಶವಂತಪುರ ರೈಲು ನಿಲ್ದಾಣಕ್ಕೆ ಕಳುಹಿಸಿ ಕೊಡಲಾಯಿತು. ಹೌರಾ ಎಕ್ಸ್‌ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ ಬೋಗಿ ಅಳವಡಿಸಲಾಯಿತು. ರಾತ್ರಿ 7.30ಕ್ಕೆ ಈ ರೈಲು ನಿರ್ಗಮಿಸಿತು. ರೈಲ್ವೆ ಸಚಿವ ಕೆ.ಎಚ್.ಮುನಿಯಪ್ಪ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು.ರಾಜ್ಯಕ್ಕೆ ಕೇಂದ್ರದ ಶ್ಲಾಘನೆ: `ನಗರ ತೊರೆಯುತ್ತಿರುವ ನಾಗರಿಕರ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿದೆ. ರಾಜ್ಯ ಸರ್ಕಾರ ನೀಡಿದ ಭರವಸೆಯಿಂದಾಗಿ ಶನಿವಾರ ಹೆಚ್ಚು ಜನರು ವಾಪಸು ಹೋಗಲಿಲ್ಲ~ ಎಂದು ಉಪಮುಖ್ಯಮಂತ್ರಿ ಆರ್.ಅಶೋಕ ತಿಳಿಸಿದರು.ಶನಿವಾರ ಸಂಜೆ ವಿಕಾಸಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, `ಎರಡು ವಿಶೇಷ ರೈಲುಗಳು ಈಶಾನ್ಯ ರಾಜ್ಯಗಳತ್ತ ಪ್ರಯಾಣಕ್ಕೆ ಸನ್ನದ್ಧವಾಗಿದ್ದವು. ಆದರೂ, ಜನರು ಬರಲಿಲ್ಲ. ಭೀತಿಗೆ ಒಳಗಾಗಿದ್ದ ಜನರ ಮನವೊಲಿಕೆಗೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ಕೂಡ ಶ್ಲಾಘಿಸಿದೆ. ಈಶಾನ್ಯ ರಾಜ್ಯಗಳ ಸರ್ಕಾರಗಳು ಮತ್ತು ಜನರಿಂದಲೂ ಮೆಚ್ಚುಗೆ ಮಾತುಗಳು ಕೇಳಿಬಂದಿವೆ~ ಎಂದರು.`ಗೂಂಡಾಗಳ ಮೇಲೆ ನಿಗಾ ಇಡಲು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ. ಕೇಂದ್ರದ ಕ್ಷಿಪ್ರ ಕಾರ್ಯಾಚರಣೆ ಪಡೆಯ ಆರು ತುಕಡಿಗಳು ನಗರಕ್ಕೆ ಬಂದಿವೆ. 20ರಂದು ರಂಜಾನ್ ಹಬ್ಬವಿದೆ. ಈ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಲಾಗುವುದು~ ಎಂದರು.

ವಾಪಸ್ ಬಂದರೆ ಗುವಾಹಟಿಯಿಂದ ವಿಶೇಷ ರೈಲು

ಬೆಂಗಳೂರು: `ನಗರದಲ್ಲಿ ನೆಲೆಸಿರುವ ಈಶಾನ್ಯ ರಾಜ್ಯಗಳ ನಾಗರಿಕರು ವದಂತಿಗಳಿಗೆ ಕಿವಿಗೊಡಬಾರದು. ವಲಸೆ ಹೊರಟು ನಿಂತಿರುವವರು ಮನಸ್ಸು ಬದಲಾಯಿಸಿ ಇಲ್ಲಿಯೇ ಉಳಿಯಬೇಕು~ ಎಂದು ರೈಲ್ವೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ವಿನಂತಿಸಿದರು.ನಗರದ ರೈಲು ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿ ವಲಸಿಗರಿಗೆ ಸಾಂತ್ವನ ಹೇಳಿದ ಸಚಿವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, `ಈಗಾಗಲೇ ವಲಸೆ ಹೋಗಿರುವ ಮಂದಿ ವಾಪಸ್ ಬರಲು ಸಿದ್ಧರಿದ್ದರೆ ಗುವಾಹಟಿಯಿಂದ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗುವುದು~ ಎಂದು ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಪ್ಲಾಟ್‌ಫಾರಂ ಏಳು ಹಾಗೂ ಎಂಟರಲ್ಲಿ ಹಾಪ್‌ಕಾಪ್ಸ್ ಮಳಿಗೆಯನ್ನು ಸಚಿವರು ಉದ್ಘಾಟಿಸಿದರು. ಇದಾದ ಬಳಿಕ ಈಶಾನ್ಯ ರಾಜ್ಯಗಳ ಜನರನ್ನು ಭೇಟಿ ಮಾಡಿ ಸಂತೈಸಿದರು. `ಅಸ್ಸಾಂ ಭಾರತದ ಭಾಗವಾಗಿದ್ದು, ಅಲ್ಲಿನ ಜನರು ದೇಶದ ಯಾವುದೇ ಭಾಗದಲ್ಲೂ ವಾಸಿಸಲು ಸ್ವತಂತ್ರರು~ ಎಂದರು.ಕಳೆದ ಮೂರು ದಿನಗಳಲ್ಲಿ ರೈಲು ನಿಲ್ದಾಣದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಂಡು ವಲಸಿಗರಿಗೆ ಯಾವುದೇ ತೊಂದರೆಯಾಗದಂತೆ ತಮ್ಮೂರಿಗೆ ತೆರಳಲು ವ್ಯವಸ್ಥೆ ಮಾಡಿದ ಬೆಂಗಳೂರು ವಿಭಾಗಕ್ಕೆ ಸಚಿವರು ಎರಡು ಲಕ್ಷ ರೂಪಾಯಿ ಹಾಗೂ ನೈರುತ್ಯ ರೈಲ್ವೆ ವಿಭಾಗಕ್ಕೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.