ನಗರ ದಾಹಕ್ಕೆ ಟ್ಯಾಂಕರ್ ನೀರು

ಶನಿವಾರ, ಜೂಲೈ 20, 2019
24 °C

ನಗರ ದಾಹಕ್ಕೆ ಟ್ಯಾಂಕರ್ ನೀರು

Published:
Updated:

ಹುಯ್ಯೋ ಹುಯ್ಯೋ ಮಳೆರಾಯ ಅಂತ ಬೆಂಗಳೂರಿನ ಬೋರ್‌ವೆಲ್‌ಗಳು ಹುಯಿಲಿಟ್ಟವು. ನಮ್ಮ ಗಂಟಲಾರಿದೆ ಗಂಗಾತಾಯಿ ಕರುಣೆ ತೋರು.. ಇಳಿದು ಬಾ ತಾಯೇ ಇಳಿದು ಬಾ... ಅಂತ ಗೋಳಿಡುತ್ತಿವೆ ಖಾಲಿ ಬಿಂದಿಗೆಗಳು... ಬೀದಿ ಬದಿಯಲ್ಲೂ ಬಿಂದಿಗೆಗಳ ಮೆರವಣಿಗೆ... ಅವುಗಳ ದಂಡನಾಯಕ ಅದೇ ಆ ಬಡಪಾಯಿ ನಲ್ಲಿ!ಕೊನೆಗೂ ವರುಣ ಕರಗಿದ. ಹನಿ ಹನಿ ಮಳೆ ಬೆಂಗಳೂರನ್ನು ತೋಯಿಸಿತು. ಶನಿವಾರ ರಾತ್ರಿಯಿಂದ ಭಾನುವಾರ ತಡರಾತ್ರಿವರೆಗೂ ಸಿಲಿಕಾನ್ ಸಿಟಿಯಲ್ಲಿ ತುಂತುರು ನೀರ ಹಾಡು. ತಾರಸಿಗಳ ನೀರೆಲ್ಲ ರಸ್ತೆ ತುಂಬಾ ಹರಿದುಹೋಗುವುದನ್ನು ನೋಡುವ ಸುಖ ನಗರದ್ದಾಯಿತು. ಆದರೆ ರಸ್ತೆಯಾಚೆಗಿನ ನಲ್ಲಿ ಮಾತ್ರ ನೀರ ಸದ್ದು ಮಾಡಲೇ ಇಲ್ಲ. ಭೂತಾಯಿಯ ಒಡಲು ತಣಿಯಲೇ ಇಲ್ಲ...ಈ `ಸಂತ್ರಸ್ತ~ರಿಗೆ ಸಾಂತ್ವನ ಹೇಳಿದ್ದು ನೀರಿನ ಟ್ಯಾಂಕರ್‌ಗಳು!ಬೆಂಗಳೂರಿನ ಸಾರ್ವಕಾಲಿಕ `ಸತ್ಯ~ವಾಗಿ ಬೀದಿ ಬೀದಿಯಲ್ಲಿ ಅಲೆದಾಡುವ ನೀರಿನ ಟ್ಯಾಂಕರ್‌ಗಳು ನಗರಕ್ಕೆ ಪರ್ಯಾಯ ನೀರಿನ ಸೆಲೆಗಳು... ಒಂದು ಫೋನ್ ಕರೆಗೆ ಓಗೊಟ್ಟು ಮನೆಯ ಸಂಪಿಗೆ ನೀರು ತುಂಬಿಕೊಡುವ ಟ್ಯಾಂಕರ್‌ನವರು ಆಪದ್ಬಾಂಧವರೇ ಹೌದು.ಕಟ್ಟಡ ನಿರ್ಮಾಣ ಕಾಮಗಾರಿಗೆ, ಹೊಸದಾಗಿ ಕಟ್ಟಿಸಿರುವ ಸಂಪಿನ ಹೊಟ್ಟೆಗೆ, ಮಗಳ ಬಾಣಂತನಕ್ಕೆ, ಅಸುನೀಗಿದವರ ಅಂತಿಮಸ್ನಾನಕ್ಕೆ, ಮದುವೆಗೆ, ಭೋಜನಕೂಟಕ್ಕೆ, ಮನೆಯಲ್ಲಿರುವ ನಾಲ್ಕು ವಾಹನಗಳ ತೊಳೆಯೋಕೆ, ಕಲ್ಯಾಣಮಂಟಪಗಳಿಗೆ...

 

ಹೀಗೆ ನೀರು ಎಲ್ಲಿಗೆ ಬೇಡ? ಮತ್ತೊಂದೆಡೆ ಯಾರೇ ಕೂಗಾಡಲಿ ಊರೇ ಹೋರಾಡಲಿ ನಮ್ಮ ಕಾಮಗಾರಿಗೆ ಭಂಗವಿಲ್ಲ ಎಂದು ಸಾಗಿರುವ ಬಹುಮಹಡಿ ಕಟ್ಟಡಗಳ ನಿರ್ಮಾಣ ಕಾಮಗಾರಿ. ಎಲ್ಲಕ್ಕೂ ನೀರು ಬೇಕೇಬೇಕು.ನೀರಿನ ಬವಣೆಯನ್ನು ಸ್ವಲ್ಪ ಮಟ್ಟಿಗಾದರೂ ಹತೋಟಿಗೆ ತಂದವರು ಇದೇ ನೀರಿನ ವ್ಯಾಪಾರಿಗಳು. ಅದೇನೇ ಇದ್ದರೂ ಈ ನೀರಿನ ವ್ಯಾಪಾರಿಗಳಿಗೂ ನೀರು ಮೊಗೆಯಲು ಇರುವುದು ಅದೇ ಭೂಮಿ. ಅವರು ನಂಬಿರುವ ಬೋರ್‌ವೆಲ್‌ಗಳಲ್ಲೂ ಒರತೆ ತಗ್ಗಿದೆ.`ನಮಗೂ ನೀರಿನ ಕೊರತೆ ಎದುರಾಗುತ್ತಿದೆ. ಬೇಡಿಕೆಗೆ ತಕ್ಕುದಾಗಿ ತಕ್ಷಣ ನೀರು ಪೂರೈಸಲು ಆಗುತ್ತಿಲ್ಲ. ನಮ್ಮ ಬೋರ್‌ವೆಲ್ ಸಹ ವೀಕ್ ಆಗುತ್ತಿದೆ~ ಎಂಬ ಸತ್ಯವನ್ನು ಹೊರಗೆಡಹುತ್ತಾರೆ ನಗರದ ಟ್ಯಾಂಕರ್ ನೀರು ಸರಬರಾಜುದಾರರು.ಅಪಾರ್ಟ್‌ಮೆಂಟ್‌ನವರ ಕಷ್ಟ

ಕೊಡಿಗೇಹಳ್ಳಿ ಬಳಿಯ ವಿರೂಪಾಕ್ಷನಗರದ ಸಿದ್ಧಿವಿನಾಯಕ ಬಡಾವಣೆಯ ಗೃಹಿಣಿ ಚಿತ್ರಾಂಜಲಿ ಹೇಳುತ್ತಾರೆ- `ಅಪಾರ್ಟ್‌ಮೆಂಟ್‌ಗಳಿಗೆ ನೀರಿನ ವ್ಯವಸ್ಥೆಯನ್ನು ಮಾಲೀಕರೇ ಮಾಡಬೇಕಾಗುತ್ತದೆ. ನಮ್ಮ ಅಪಾರ್ಟ್‌ಮೆಂಟ್‌ನ ಬೋರ್‌ವೆಲ್ ಕೆಟ್ಟಿರುವುದರಿಂದ ನಾವು ಆರೂ ಮನೆಗಳವರು ಅನಿವಾರ್ಯವಾಗಿ ಟ್ಯಾಂಕರ್ ನೀರನ್ನು ಅವಲಂಬಿಸಿದ್ದೇವೆ.ವಾರಕ್ಕೆ ಕನಿಷ್ಠ ನಾಲ್ಕು ಟ್ಯಾಂಕರ್ ನೀರು ಬೇಕಾಗುತ್ತದೆ. (ಒಂದು ಟ್ಯಾಂಕರ್ ಸಾಮರ್ಥ್ಯ 7 ಸಾವಿರ ಲೀಟರ್ ನೀರು). ಈಗ ಟ್ಯಾಂಕರ್ ಒಂದಕ್ಕೆ 350 ರೂಪಾಯಿ ಶುಲ್ಕ ತೆರಬೇಕು. ತಿಂಗಳಿಗೊಮ್ಮೆ ಒಟ್ಟು ಶುಲ್ಕವನ್ನು ಎಲ್ಲಾ ಮನೆಗಳವರು ಪಾಲು ಮಾಡಿಕೊಳ್ಳುತ್ತೇವೆ~.`ಇದೇ ಬಡಾವಣೆಯ ಪಕ್ಕದಲ್ಲೇ 75ಕ್ಕೂ ಹೆಚ್ಚು ಅಂತಸ್ತುಗಳ ಭಾರೀ ಕಟ್ಟಡವೊಂದು ನಿರ್ಮಾಣವಾಗುತ್ತಿದೆ. ಅಲ್ಲಿಗೆ ದಿನಕ್ಕೆ 20ಕ್ಕೂ ಹೆಚ್ಚು ಟ್ಯಾಂಕರ್ ನೀರು ಪೂರೈಕೆಯಾಗುತ್ತಿದೆ! ನಗರದಲ್ಲಿ ಇಂತಹ ಬೃಹತ್ ಕಾಮಗಾರಿಗಳು ನೀರಿಲ್ಲದ ಕಾರಣಕ್ಕೆ ನಿಂತದ್ದಿದೆಯೇ?~ ಎಂದು ಪ್ರಶ್ನಿಸುತ್ತಾರೆ ವಿರೂಪಾಕ್ಷನಗರದ ನಿವಾಸಿ ದಿನಕರ್.ಶುಲ್ಕ ಹೆಚ್ಚಳ

ಬೇಡಿಕೆ ಹೆಚ್ಚಿದಂತೆ ಟ್ಯಾಂಕರ್ ನೀರಿಗೆ ಶುಲ್ಕ ಹೆಚ್ಚುತ್ತಲೇ ಇದೆ. 150 ರೂಪಾಯಿಗೆ ಒದಗಿಸುತ್ತಿದ್ದವರು ತಮ್ಮ ಹಳೆಯ ಗ್ರಾಹಕರಿಗೂ 500ರಿಂದ 600 ರೂಪಾಯಿವರೆಗೂ ದರ ಕೇಳುತ್ತಿರುವುದೂ ಉಂಟು. ಕೆಲವು ಕಡೆ 800-900ರ ಆಸುಪಾಸಿನಲ್ಲಿದೆ.ಹೇಳಿದಷ್ಟು ದುಡ್ಡು ಕೊಡುವ ಷರತ್ತಿಗೆ ಬದ್ಧರಾಗುವುದು ಈ ಕಾಲದಲ್ಲಂತೂ ಅನಿವಾರ್ಯ.

ಆರ್‌ಎಂವಿ ಎರಡನೇ ಹಂತದಲ್ಲಿರುವ ಮಾರುತಿ ವಾಟರ್ ಸಪ್ಲೈಸ್ ಕಳೆದ 21 ವರ್ಷಗಳಿಂದಲೂ ನೀರಿನ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ.

 

ಸದಾಶಿವನಗರ, ಆರ್‌ಎಂವಿ ಎರಡನೆ ಹಂತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲದೆ ಎಂ.ಎಸ್. ರಾಮಯ್ಯ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಇವರು ನೀರು ಪೂರೈಸುತ್ತಾರೆ.

`ರಾಮಯ್ಯ ಮತ್ತು ಸಿಪಿಆರ್‌ಐ ಸೇರಿದಂತೆ ದಿನಕ್ಕೆ ಗರಿಷ್ಠ 70ರಿಂದ 80ಸಾವಿರ ಲೀಟರ್ ನೀರು ಒದಗಿಸುತ್ತೇವೆ. ನೀರಿನ ಫೋರ್ಸ್‌ ಈಗ ಹಿಂದಿನಂತಿಲ್ಲ. ಮಳೆ ಬರದಿದ್ದರೆ ನಮಗೂ ನೀರಿನ ತತ್ವಾರ ತಪ್ಪಿದ್ದಲ್ಲ.

 

ಜನವರಿಯಲ್ಲಿ ಟ್ಯಾಂಕರ್‌ಗೆ 350 ರೂಪಾಯಿ ಶುಲ್ಕ ವಿಧಿಸುತ್ತಿದ್ದೆವು. ಈಗ ಬೇಡಿಕೆ ಹೆಚ್ಚಿರುವುದರಿಂದ 450 ರೂ. ಮಾಡಿದ್ದೇವೆ. ನೀರಿನ ವ್ಯಾಪಾರದೊಂದಿಗೆ ಮಳೆನೀರು ಸಂಗ್ರಹಣೆಗೂ ಆದ್ಯತೆ ನೀಡಿದ್ದೇವೆ.

 

ನಮ್ಮ ಸಂಸ್ಥೆಯ ಪಕ್ಕದಲ್ಲೇ ಇರುವ ಖಾಲಿ ನಿವೇಶನದಲ್ಲಿ ಮಳೆ ನೀರು ಸಂಗ್ರಹಣೆ, ವ್ಯರ್ಥವಾಗಿ ಪೋಲಾಗುವ ನೀರೆಲ್ಲ ಇಂಗುವ ವ್ಯವಸ್ಥೆ ಮಾಡಿದ್ದೇವೆ. ನಾಳೆಗೂ ನೀರು ಬೇಕಲ್ಲವೇ?~ ಎಂದು ಪ್ರಶ್ನಿಸುತ್ತಾರೆ ಮಾರುತಿ ವಾಟರ್ ಸಪ್ಲೈಸ್‌ನ ಮಾಲೀಕ ಸತೀಶ್.ಲೋಡ್ ಮಾಡುವಾಗ ಹೊರಚೆಲ್ಲುವ ನೀರು ಹಾಗೂ ಮಳೆ ನೀರು ಪೋಲಾಗುವುದನ್ನು ತಡೆಯುವ ಪ್ರಯತ್ನವಾಗಿ ಸ್ವಂತ ಬೋರ್‌ವೆಲ್ ಹೊಂದಿರುವ ನೀರಿನ ವ್ಯಾಪಾರಿಗಳು ಇಂಗುಗುಂಡಿ ವ್ಯವಸ್ಥೆ ಮಾಡಿಕೊಂಡಿದ್ದಿದೆ.ಓಕುಳಿಪುರದಲ್ಲಿರುವ ಪ್ರಿಯದರ್ಶಿನಿ ವಾಟರ್ ಸರ್ವಿಸ್‌ನ ಉಸ್ತುವಾರಿ ನೋಡಿಕೊಳ್ಳುವ ವೆಂಕಟೇಶ ಅಡಿಗ ಹೇಳುತ್ತಾರೆ- `ನೀರಿನ ಮಟ್ಟ ತುಂಬಾ ಕಡಿಮೆಯಾಗಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲಾಗುತ್ತಿಲ್ಲ. ಒಂದು ದಿನದ ಮಳೆಯಿಂದ ನೀರಿನ ಒರತೆ ಹೆಚ್ಚಾಗುವುದಿಲ್ಲ.ಇವತ್ತು ಕೇಳಿದವರಿಗೆ ನಾಳೆ ನೀರು ಪೂರೈಸುವ ಸ್ಥಿತಿ ಬಂದಿದೆ~.

ಮೈಸೂರು ರಸ್ತೆಯ ರಾಜು ಅವರು ನಗರದ ಹಳೆಯ ನೀರಿನ ವ್ಯಾಪಾರಿ. ಈ ಬಾರಿಯಷ್ಟು ಬೇಡಿಕೆ ಯಾವತ್ತೂ ಕಂಡಿಲ್ಲ ಅನ್ನುತ್ತಾರೆ.`ನೀರು ದಿನೇದಿನೇ ಪಾತಾಳಕ್ಕಿಳಿಯುತ್ತಿದೆ. ಮಳೆ ಹೀಗೇ ಕೈಕೊಟ್ಟರೆ ನಾವೂ ಕೈ ಕಟ್ಟಿ ಕೂರಬೇಕಾಗುತ್ತದೆ. ದಿನಕ್ಕೆ 40-45 ಟ್ಯಾಂಕರ್ ನೀರು ಸರಬರಾಜು ಮಾಡುತ್ತಿದ್ದೆವು. ಈಗ 25-26 ಟ್ಯಾಂಕರ್ ಮಾತ್ರ ಸಾಧ್ಯವಾಗುತ್ತಿದೆ. 1990ರಲ್ಲಿ 12 ರೂಪಾಯಿಗೆ ಒಂದು ಟ್ಯಾಂಕರ್ ನೀರು ಕೊಡುತ್ತಿದ್ದೆವು.ಡೀಸೆಲ್‌ಗೆ ಐದೂವರೆ ಆರು ರೂಪಾಯಿ ಇತ್ತು. ಕೂಲಿಯೂ ಕಡಿಮೆಯಿತ್ತು. ಈಗ ಎಲ್ಲವೂ ಕೈಮೀರಿದೆ. ಹಾಗಂತ ಚಾಲಕ, ಕ್ಲೀನರ್, ಮ್ಯಾನೇಜರ್ ಇಲ್ಲದೆ ವ್ಯವಹಾರ ನಡೆಸಲಾದೀತೆ? ವಾರದಿಂದ ಒಂದು ಟ್ಯಾಂಕರ್ ನೀರಿಗೆ 650 ಚಾರ್ಜ್ ಮಾಡುತ್ತಿದ್ದೇವೆ.ನಮ್ಮಲ್ಲಿ ನೀರು ಸಾಕಾಗದೆ ಹೊರಗಿನಿಂದ ತೆಗೆದುಕೊಳ್ಳುತ್ತೇವೆ. ಪ್ರತಿ ಟ್ಯಾಂಕರ್‌ಗೆ 100-150 ರೂಪಾಯಿ ಅವರಿಗೂ ಕೊಡಬೇಕು. ಹೀಗೆ ನಾವು ಏಳೆಂಟು ಕಡೆಗಳಿಂದ ನೀರು ಸಂಗ್ರಹಿಸಿ ಪೂರೈಸುತ್ತೇವೆ~ ಎಂದು ವಹಿವಾಟಿನ ಗುಟ್ಟು ಬಿಚ್ಚಿಡುತ್ತಾರೆ ರಾಜು.ಟ್ಯಾಂಕರ್ ನೀರು ಎಷ್ಟು ಸುರಕ್ಷಿತ?


 
ಟ್ಯಾಂಕರ್ ನೀರು ನಗರದ ನೀರಿನ ಸಮಸ್ಯೆಗೆ ಪರ್ಯಾಯವಾಗಿದ್ದರೂ ಅದು ಕುಡಿಯಲು ಎಷ್ಟು ಸಮರ್ಪಕ? ಆರೋಗ್ಯದ ದೃಷ್ಟಿಯಿಂದ ಟ್ಯಾಂಕರ್ ನೀರು ಸರಬರಾಜು ವ್ಯವಸ್ಥೆಯನ್ನು ಕಾನೂನಿನ ಚೌಕಟ್ಟಿಗೆ ತರಬೇಕು ಎಂದು ಸಚಿವ ಸುರೇಶ್ ಕುಮಾರ್ ಹೇಳುತ್ತಲೇ ಬಂದಿದ್ದಾರೆ. ಆದರೂ ಅದು ಜಾರಿಯಾಗಿಲ್ಲ.ಬೋರ್‌ವೆಲ್ ನೀರಿನಲ್ಲಿ ಫ್ಲೋರೈಡ್‌ನಂತಹ ಹಾನಿಕಾರಕ ರಾಸಾಯನಿಕಗಳ ಅಂಶ ದಟ್ಟವಾಗಿರುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ತಾವು ಪೂರೈಸುವ ನೀರು ಕುಡಿಯಲು ಸಮರ್ಪಕವಾಗಿದೆಯೇ ಅಥವಾ ಇತರ ಬಳಕೆಗಷ್ಟೇ ಸೂಕ್ತವೇ ಎಂಬುದನ್ನು ಸ್ವತಃ ನೀರಿನ ವ್ಯಾಪಾರಿಗಳು ತಮ್ಮ ಟ್ಯಾಂಕರ್ ಮೇಲೆ ಪ್ರಕಟಿಸಬೇಕು.ತಪ್ಪಿದಲ್ಲಿ ಯಾವುದೇ ಅನಾಹುತಕ್ಕೆ ಅವರೇ ಹೊಣೆ ಎಂಬುದು ಸುರೇಶ್ ಕುಮಾರ್ ಕಳಕಳಿ. ಈ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry