ನಗರ ಪಾಲಿಕೆ ಸಭೆಯಲ್ಲಿ ಸದಸ್ಯರ ಧರಣಿ

7

ನಗರ ಪಾಲಿಕೆ ಸಭೆಯಲ್ಲಿ ಸದಸ್ಯರ ಧರಣಿ

Published:
Updated:

ಮೈಸೂರು: ಬೇಸಿಗೆ ಆರಂಭಕ್ಕೂ ಮುನ್ನವೇ ಪಾಲಿಕೆಯಲ್ಲಿ `ನೀರು ಬೇಕು ನೀರು~ ಕೂಗು ಸೋಮವಾರ ಜೋರಾಗಿ ಪ್ರತಿಧ್ವನಿಸಿತು.ಪಾಲಿಕೆಯಿಂದ ಮುಡಾಕ್ಕೆ ಒಬ್ಬ ಸದಸ್ಯನನ್ನು ಆಯ್ಕೆ ಮಾಡುವ ಸಲುವಾಗಿ ಕರೆಯಲಾಗಿದ್ದ ವಿಶೇಷ ಸಭೆಯ ಆರಂಭದಲ್ಲೇ ಕುಡಿಯುವ ನೀರಿನ ಸಮಸ್ಯೆ ಕುರಿತು ಬಿಜೆಪಿಯ ಎಂ.ಕೆ.ಶಂಕರ್, ಕೆ.ಎಂ.ಶಂಕರ್, ಪಾರ್ಥಸಾರಥಿ, ಕೇಬಲ್ ರಮೇಶ್, ನಿಂಗಣ್ಣ, ಜೆಡಿಎಸ್‌ನ ಕೆಂಪಣ್ಣ ಜೊತೆಯಾಗಿ ಮೇಯರ್ ಆಸನದತ್ತ ಧಾವಿಸಿ ಕಪ್ಪುಬಟ್ಟೆಯನ್ನು ಪ್ರದರ್ಶಿಸಿ ಧರಣಿ ಆರಂಭಿಸಿದರು.`ಮುಡಾಕ್ಕೆ ಸದಸ್ಯರನ್ನು ಆಯ್ಕೆ ಮಾಡುವ ಸಲುವಾಗಿ ಕರೆದಿರುವ ವಿಶೇಷ ಸಭೆಯಾಗಿದೆ. ಗುರುವಾರ ಕುಡಿಯುವ ನೀರಿನ ಬವಣೆ ಕುರಿತು ವಿಶೇಷ ಸಭೆಯನ್ನು ಕರೆಯಲಾಗಿದೆ. ಆದ್ದರಿಂದ ಧರಣಿ ನಡೆಸುತ್ತಿರುವ ಸದಸ್ಯರು ತಮ್ಮ ಆಸನದಲ್ಲಿ ಕುಳಿತು ಕೊಳ್ಳಬೇಕು~ ಎಂದು ಮೇಯರ್ ಮನವಿ ಮಾಡಿದರು. ಅವರ ಮನವಿಗೆ ಜಗ್ಗದ ಸದಸ್ಯರು `ಮೊದಲು ನೀರು ಕೊಡಿ, ನಂತರ ಉಳಿದ ವಿಚಾರ. ಅಲ್ಲಿಯ ತನಕ ನಾವು ಧರಣಿ ನಿಲ್ಲಿಸುವುದಿಲ್ಲ~ ಎಂದು ಪಟ್ಟಹಿಡಿದರು.ಈ ಸಂದರ್ಭದಲ್ಲಿ ಶಾಸಕ ತನ್ವೀರ್ ಸೇಟ್ ಮಧ್ಯ ಪ್ರವೇಶಿಸಿ, `ಈಗ ವಿಶೇಷ ಸಭೆ ನಡೆಯಲು ಬಿಡಿ. ಕುಡಿಯುವ ನೀರಿಗಾಗಿ ವಿಶೇಷ ಸಭೆ ಕರೆದಿದ್ದು, ಅದರಲ್ಲಿ ಜಸ್ಕೊ, ವಾಣಿ ವಿಲಾಸ ನೀರು ಸರಬರಾಜು ಮಂಡಳಿ ಅಧಿಕಾರಿಗಳೂ ಸಹ ಸಭೆಗೆ ಬರುವಂತೆ ಸೂಚಿಸಬೇಕು.

 

ವಿಶೇಷ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯ ಬೇಕು~ ಎಂದು ಮೇಯರ್‌ಗೆ ಸಲಹೆ ನೀಡಿದರು. ಆದರೂ ಸದಸ್ಯರು ಬಗ್ಗಲಿಲ್ಲ.ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯ ಅಯೂಬ್‌ಖಾನ್, `ಇಂತಹ ವಿಷಯವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ~ ಎಂದು ಏರುಧ್ವನಿಯಲ್ಲಿ ಹೇಳಿದರು. ಇದರಿಂದ ಕೆರಳಿದ ಧರಣಿನಿತರರು ಅಯೂಬ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿಯ ಇತರ ಸದಸ್ಯರೂ ಸಹ ಧ್ವನಿಗೂಡಿ ಸಿದರು. ಇದರಿಂದಾಗಿ ಯಾರು ಏನು ಮಾತನಾಡುತ್ತಿದ್ದಾರೆ ಎನ್ನುವುದು ತಿಳಿಯದಷ್ಟು ಗದ್ದಲ ಹೆಚ್ಚಾಯಿತ್ತು.ಜೆಡಿಎಸ್‌ನ ಆರ್.ಲಿಂಗಪ್ಪ ಮಾತನಾಡಿ `ಧರಣಿನಿರತರ ಸದಸ್ಯರು ಕೇಳುತ್ತಿರುವುದು ಸರಿಯಾಗಿಯೇ ಇದೆ~ ಎಂದು ಬೆಂಬಲ ವ್ಯಕ್ತಪಡಿಸಿದರು.`ನನ್ನ ವಾರ್ಡ್‌ಗೆ ಇಂದಿನಿಂದಲೇ ನೀರಿನ ಟ್ಯಾಂಕರ್ ಕಳುಹಿಸಿಕೊಡಿ, ಇಲ್ಲದೇ ಹೋದರೆ ನಿಮ್ಮ ಕಿರುಕುಳ ತಾಳಲಾರದೆ ಸಭೆಯಲ್ಲಿಯೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕಾ ಗುತ್ತದೆ~ ಎಂದು ಬಿಜೆಪಿ ಸದಸ್ಯೆ ಸುನಂದಾಪಾಲನೇತ್ರ ಬೆದರಿಕೆ ಹಾಕಿದರು. ಇಷ್ಟಕ್ಕೆ ಸುಮ್ಮನಾಗದ ಅವರು `ನಮ್ಮ ವಾರ್ಡ್‌ನಲ್ಲಿ ಜನರು ನೀರಿಗಾಗಿ ನನ್ನನ್ನು ಅಟ್ಟಿಸಿಕೊಂಡು ಬಂದರು.

 

ಸ್ಕೂಟರ್‌ನಲ್ಲಿ ಹೋಗುವಾಗ ಬಿದ್ದು ಪೆಟ್ಟಾಗಿದೆ. ನನಗೆ ರಕ್ಷಣೆ ಕೊಡುವವರು ಯಾರು~ ಎಂದು ಪ್ರಶ್ನಿಸಿದರು. ಮೇಯರ್ ಎಷ್ಟೇ ಮನವಿ ಮಾಡಿದರೂ ಸುನಂದಾ ಕುಳಿತು ಕೊಳ್ಳಲು ಒಪ್ಪಲೇ ಇಲ್ಲ. ಮುಂದು ವರಿದು ಮಾತನಾಡಿ, `ಬಿಜೆಪಿ ಸದಸ್ಯರ ವಾರ್ಡ್‌ಗಳಲ್ಲಿ ಮಾತ್ರ ನೀರಿನ ಸಮಸ್ಯೆ ಇದೆ~ ಎಂದರು. ಇಂತಹ ಹೇಳಿಕೆಯಿಂದ ಕೆರಳಿದ ಶಾಸಕ ತನ್ವೀರ್ ಸೇಟ್, `ಇಂತಹ ಮಾತು ಆಡಬೇಡಿ, ನೀರಿಗೆ ಜಾತಿ, ಪಕ್ಷ ಇಲ್ಲ~ ಎಂದು ಆಕ್ಷೇಪ ವ್ಯಕ್ತಪಡಿಸಿದರು.ವಿರೋಧ ಪಕ್ಷದ ನಾಯಕಿ ಎ.ವಿ. ವಿದ್ಯಾ ಸಹ ಮೇಯರ್ ವಿರುದ್ಧ ವಾಗ್ದಾಳಿ ನಡೆಸಿ, `ನಾವು ಜನರಿಂದ ಉಗಿಸಿ ಕೊಂಡರೆ ನಿಮಗೆ ಸಂತೋಷವೇ~ ಎಂದು ಚುಚ್ಚಿದರು. ಇಷ್ಟೆಲ್ಲ ನಡೆದರೂ ಧರಣಿನಿತರು ತಮ್ಮ ಆಸನಗಳತ್ತ ಬಂದಿರಲಿಲ್ಲ. ಜೆಡಿಎಸ್‌ನ ಕೆಂಪಣ್ಣ `4 ವರ್ಷದಿಂದ ವಿಶೇಷ ಸಭೆಗಳ ಚರ್ಚೆ ಸಾಕಾಗಿ ಹೋಗಿದೆ. ವಿಶೇಷ ಸಭೆಯಿಂದ ಪ್ರಯೋಜನವಿಲ್ಲ, ಮೊದಲು ನೀರು ಕೊಡಿ~ ಎಂದು ಆಗ್ರಹಿಸಿದರು.

ಜೆಡಿಎಸ್‌ನ ಸಂದೇಶ್‌ಸ್ವಾಮಿ ಅವರು ಧರಣಿನಿರತರ ಬಳಿ ತೆರಳಿ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ನಂತರ ಸಭೆ ಸುಗಮವಾಗಿ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry