ನಗರ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆ ಸುಧಾರಣೆ

7

ನಗರ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆ ಸುಧಾರಣೆ

Published:
Updated:

ಬೆಂಗಳೂರು: `ನಗರ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆ ಸುಧಾರಣೆಗೆ ತಂತ್ರ ಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು~ ಎಂದು ನಗರ ಭೂ ಸಾರಿಗೆ ಆಯಕ್ತರಾದ ವಿ.ಮಂಜುಳಾ ಹೇಳಿದರು.ಕೇಂದ್ರ ನಗರಾಭಿವೃದ್ಧಿ ಇಲಾಖೆ ಮತ್ತು ರಾಜ್ಯ ಸರ್ಕಾರ ಜಪಾನ್ ಸರ್ಕಾರದ ಸಹಯೋಗದೊಂದಿಗೆ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ `ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಫಾರ್ ಸ್ಟ್ಯಾರ್ಟಜಿಕ್ ಅರ್ಬನ್ ಡೆವಲಪ್‌ಮೆಂಟ್ ಇನ್ ಇಂಡಿಯಾ~ ವಿಷಯ ಕುರಿತ ಸಮ್ಮೇಳನದಲ್ಲಿ ಅವರು ಮಾತನಾಡಿದರು.`ನಗರೀಕರಣ ಕೇಂದ್ರಿತ ರಾಜ್ಯವಾದ ಕರ್ನಾಟಕದಲ್ಲಿ ಶೇ 38.6ರಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ. ಒಟ್ಟು ಜನ ಸಂಖ್ಯೆಯಲ್ಲಿ ಶೇ 66ರಷ್ಟು ಜನರು 23 ನಗರಗಳಲ್ಲಿ ವಾಸಿಸುತ್ತಿದ್ದಾರೆ. ಅದೇ ರೀತಿ ವಾಹನಗಳ ಸಂಖ್ಯೆಯೂ ಪ್ರತಿ ವರ್ಷ ಶೇ 10ರಿಂದ 14ರಷ್ಟು ಹೆಚ್ಚುತ್ತಿದೆ. 1991ರಲ್ಲಿ 16 ಲಕ್ಷವಿದ್ದ ವಾಹನಗಳ ಸಂಖ್ಯೆ ಎರಡು ದಶಕಗಳಲ್ಲಿ 83 ಲಕ್ಷವಾಗಿದೆ. ಅಸಮರ್ಪಕ ಸಾರಿಗೆ ಮೂಲಸೌಕರ್ಯದಿಂದ ತೊಂದರೆ ಆಗುತ್ತಿದೆ.ಬೆಂಗಳೂರಿನಲ್ಲಿ ಅರ್ಧ ಗಂಟೆಯ ಪ್ರಯಾಣಕ್ಕೆ 47 ನಿಮಿಷ ಬೇಕಾಗುತ್ತದೆ ಎಂದು ಸಮೀಕ್ಷೆ ಹೇಳುತ್ತದೆ. ಆದ್ದರಿಂದ ನಗರ ಸಾರಿಗೆ ವ್ಯವಸ್ಥೆಯನ್ನು ಸುಧಾರಣೆ ಮಾಡಲು ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ~ ಎಂದು ಅಭಿಪ್ರಾಯಪಟ್ಟರು.`ಹೊಸ ರಸ್ತೆ ನಿರ್ಮಾಣ, ಇರುವ ರಸ್ತೆಯ ವಿಸ್ತರಣೆ ಮತ್ತು ಅಭಿವೃದ್ಧಿ ಒಂದು ಹಂತದ ನಂತರ ಸಾಧ್ಯವಿಲ್ಲ. ಆ ನಂತರವೂ ಮಾಡಬೇಕೆಂದರೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತದೆ. ಸಾಮಾಜಿಕ ಪರಿಣಾಮಗಳೂ ಉಂಟಾಗಲಿವೆ. ಆದ್ದರಿಂದ ಇಂಟಲಿಜೆಂಟ್          ಟ್ರಾನ್ಸ್‌ಪೋರ್ಟ್ ಸಿಸ್ಟಮ್

ತಂತ್ರಜ್ಞಾನ ಅಳವಡಿಸಿಕೊಂಡು ದಟ್ಟಣೆ, ಮಾಲಿನ್ಯ ಸಮಸ್ಯೆ ನಿವಾರಣೆ ಮಾಡಬೇಕು ಮತ್ತು ಸುರಕ್ಷತೆಯನ್ನೂ ಒದಗಿಸಬೇಕು~ ಎಂದು ತಿಳಿಸಿದರು.`ರಸ್ತೆ ನಿರ್ಮಾಣಕ್ಕೆ ಮಿತಿ ಇದೆ. ದೆಹಲಿಯಲ್ಲಿ ಶೇ 22ರಷ್ಟು ಪ್ರದೇಶದಲ್ಲಿ ರಸ್ತೆ ಇದ್ದರೂ ಅಲ್ಲಿ ಸಮಸ್ಯೆ ಇದೆ. ಆದ್ದರಿಂದ ಸಾರಿಗೆಯಲ್ಲಿ ಐಟಿಎಸ್ ಅಳವಡಿಸಿಕೊಳ್ಳುವ ಅಗತ್ಯವಿದೆ. ಜಪಾನ್‌ನಲ್ಲಿ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ. ದೇಶದಲ್ಲಿಯೂ ಇದನ್ನು ಜಾರಿಗೆ ತರಲಾಗುತ್ತದೆ. ಹನ್ನೆರಡನೇ ಪಂಚವಾರ್ಷಿಕ ಯೋಜನೆಯಲ್ಲಿ 820 ಕೋಟಿ ರೂಪಾಯಿ ಮೀಸಲಿಡಲು ಸಲಹೆ ಬಂದಿದೆ.

 

ಕರ್ನಾಟಕದ ಮೈಸೂರು (ಕೆಎಸ್‌ಆರ್‌ಟಿಸಿ) ಮತ್ತು ಇಂದೋರ್‌ನಲ್ಲಿ ಐಟಿಎಸ್ ಪ್ರಾಯೋಗಿಕ ಯೋಜನೆ ಪ್ರಗತಿಯಲ್ಲಿದೆ.    ಮಾರ್ಚ್ ಅಂತ್ಯಕ್ಕೆ ಪ್ರಾಯೋಗಿಕ ಯೋಜನೆ ಪೂರ್ಣಗೊಂಡು ಏಪ್ರಿಲ್‌ನಿಂದ ಜಾರಿಗೆ ಬರಲಿದೆ. ಟೋಲ್ ಪಾವತಿ, ರಾಷ್ಟ್ರೀಯ ಸಂಚಾರ ಕಾರ್ಡ್ ಪರಿಚಯಿಸುವಿಕೆ, ಬಸ್‌ನಲ್ಲಿ ಐಟಿಎಸ್ ಅಳವಡಿಕೆ ಸೇರಿದಂತೆ ಐದು ರೀತಿಯಲ್ಲಿ ಇದರ ಬಳಕೆ ಮಾಡಿಕೊಳ್ಳಬೇಕಾಗಿದೆ~ ಎಂದು ಕೇಂದ್ರ ನಗರ ಅಭಿವೃದ್ಧಿ ಇಲಾಖೆ ವಿಶೇಷಾಧಿಕಾರಿ               ಎಸ್.ಕೆ.ಲೋಹಿಯಾ ಹೇಳಿದರು.`ಐಟಿಎಸ್ ತಂತ್ರಜ್ಞಾನವನ್ನು ಈಗಾಗಲೇ ಜಪಾನ್‌ನಲ್ಲಿ ಯಶಸ್ವಿಯಾಗಿ ಅಳವಡಿಸಲಾಗಿದೆ. ಭಾರತದಲ್ಲಿ ಸಹ ಈ ತಂತ್ರಜ್ಞಾನ ಅಳವಡಿಸಲು ಜಪಾನ್‌ನ ಹಲವು ಕಂಪೆನಿಗಳು ಉತ್ಸುಕವಾಗಿವೆ. ಸುಸ್ಥಿರ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ ಎಂಬ ನಂಬಿಕೆ ಇದೆ~ ಎಂದು ಜಪಾನ್‌ನ ಭೂ, ಮೂಲಸೌಕರ್ಯ, ಸಾರಿಗೆ ಮತ್ತು ಪ್ರವಾಸೋದ್ಯಮ ಇಲಾಖೆ ಉಪ ಮಹಾ ನಿರ್ದೇಶಕ ಒಸಾಮು ಯೊಶಿಝಕಿ ತಿಳಿಸಿದರು.`ಹೈದರಾಬಾದ್‌ನಲ್ಲಿ ನಿರ್ಮಾಣವಾಗುತ್ತಿರುವ ಸುಮಾರು ನೂರು ಕಿ.ಮೀ ಉದ್ದದ ಹೊರ ವರ್ತುಲ ರಸ್ತೆಗೆ ಐಟಿಎಸ್ ತಂತ್ರಜ್ಞಾನ ಬಳಸಲಾಗುತ್ತಿದೆ. ರಸ್ತೆ ನಿರ್ಮಾಣ ಪ್ರಗತಿಯಲ್ಲಿದೆ~ ಎಂದು ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಯ ಮುಖ್ಯ ಪ್ರತಿನಿಧಿ ಶಿನಿಚಿ ಯಮನಕ ಹೇಳಿದರು.ಬೆಂಗಳೂರು ನಗರ ಸಂಚಾರದ ಬಗ್ಗೆ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ. ಎಂ.ಎ.ಸಲೀಂ, ಮೈಸೂರಿನಲ್ಲಿ ಐಟಿಎಸ್ ಅಳವಡಿಕೆ ಕುರಿತು ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಮಂಜುನಾಥ್ ಪ್ರಸಾದ್ ಪವರ್‌ಪಾಯಿಂಟ್ ನೆರವಿನಿಂದ ಮಾಹಿತಿ ನೀಡಿದರು. ಕೇಂದ್ರ ನಗರ ಸಾರಿಗೆ ವ್ಯವಹಾರಗಳ ಸಚಿವಾಲಯದ ಮಾಜಿ ನಿರ್ದೇಶಕ ಎ.ಕೆ.ಸರೋಹ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry