ನಗರ ಸಂಚಾರ ಪೊಲೀಸರಿಗೆ ಚಿನ್ನದ ಪದಕ

7

ನಗರ ಸಂಚಾರ ಪೊಲೀಸರಿಗೆ ಚಿನ್ನದ ಪದಕ

Published:
Updated:

ಬೆಂಗಳೂರು: ‘ಬಿ- ಟ್ರಾಕ್ ಯೋಜನೆ ಅನುಷ್ಠಾನದಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಅಳವಡಿಸಿಕೊಂಡ ಬೆಂಗಳೂರು ಸಂಚಾರ ಪೊಲೀಸರಿಗೆ ಕೇಂದ್ರ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆಯು ಚಿನ್ನದ ಪದಕ ಘೋಷಿಸಿದೆ’ ಎಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಸೋಮವಾರ ಇಲ್ಲಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯ ಸರ್ಕಾರ ಬಿ- ಟ್ರಾಕ್ ಯೋಜನೆಗೆ ಮೂರು ವರ್ಷಗಳಲ್ಲಿ ಒಟ್ಟು 120 ಕೋಟಿ ರೂಪಾಯಿ ನೀಡಿದೆ. ಈ ಯೋಜನೆಯನ್ನು ಸಮರ್ಥವಾಗಿ ಜಾರಿಗೆ ತರಲಾಗಿದೆ. ರಾಷ್ಟ್ರದಲ್ಲೇ ಮೊಟ್ಟ ಮೊದಲ ಬಾರಿಗೆ ಶೇ 100ರಷ್ಟು ಸಂಚಾರ ನಿರ್ವಹಣೆಯನ್ನು ತಂತ್ರಜ್ಞಾನದ ಮೂಲಕ ಮಾಡಲಾಗುತ್ತಿದೆ. ಈ ಸಾಧನೆಯನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ ‘ಇ-ಆಡಳಿತ’ದಲ್ಲಿ ತಂತ್ರಜ್ಞಾನ ಬಳಕೆಗೆ ಚಿನ್ನದ ಪದಕ ನೀಡಿದೆ’ ಎಂದರು.‘ನಗರದಲ್ಲಿ ಮೆಟ್ರೊ ಕಾಮಗಾರಿ ಸೇರಿದಂತೆ ಹತ್ತಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇದರ ಹೊರತಾಗಿಯೂ ಸಂಚಾರ ಸಿಬ್ಬಂದಿ ಅತ್ಯುತ್ತಮವಾಗಿ ಸಂಚಾರ ನಿರ್ವಹಣೆ ಮಾಡುತ್ತಿದ್ದಾರೆ. ಬಿ- ಟ್ರಾಕ್ ಯೋಜನೆಯಡಿ ಪ್ರಮುಖ ಜಂಕ್ಷನ್‌ಗಳಲ್ಲಿ ವಿಡಿಯೋ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 2009ರಲ್ಲಿ ಶೇ 35ರಷ್ಟು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಈ ಕ್ಯಾಮೆರಾಗಳ ಸಹಾಯದಿಂದ ದಾಖಲಿಸಲಾಗಿದೆ. 2010ರಲ್ಲಿ ಇದರ ಪ್ರಮಾಣ ಶೇ 61ರಷ್ಟು’ ಎಂದು ಅವರು ಮಾಹಿತಿ ನೀಡಿದರು.‘ದಂಡ ವಸೂಲಿಯಲ್ಲೂ ಗಣನೀಯ ಪ್ರಮಾಣದ ಏರಿಕೆಯಾಗಿದೆ. 2007ರಲ್ಲಿ 19.91 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿತ್ತು. 2010ರಲ್ಲಿ 33.33 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ ದಂಡದ ರೂಪದಲ್ಲಿ 48 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ’ ಎಂದು ಬಿದರಿ ಹೇಳಿದರು.‘ಜನ ಸಂಖ್ಯೆ ಮತ್ತು ವಾಹನಗಳ ಹೆಚ್ಚಳದ ನಡುವೆಯೂ ಅಪಘಾತಗಳನ್ನು ಕಡಿಮೆ ಮಾಡುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. 2007ಕ್ಕಿಂತ ಮೊದಲು ಬೆಂಗಳೂರು ನಗರ ಪೊಲೀಸರ ವ್ಯಾಪ್ತಿ 600 ಚದರ ಕಿ.ಮೀ ಇತ್ತು. ಈಶಾನ್ಯ ಮತ್ತು ಆಗ್ನೇಯ ವಿಭಾಗಗಳನ್ನು ಆರಂಭಿಸಿದ ನಂತರ ನಗರದ ವ್ಯಾಪ್ತಿ 1,200 ಚದರ ಕಿ.ಮೀ ಆಗಿದೆ. 2007ರಲ್ಲಿ 8,426 ಅಪಘಾತಗಳು ಸಂಭವಿಸಿದ್ದವು. ಆದರೆ ವ್ಯಾಪ್ತಿಯ ಹೆಚ್ಚಳದ ನಂತರವೂ 2010ರಲ್ಲಿ ನಡೆದ ಒಟ್ಟು ಅಪಘಾತಗಳ ಸಂಖ್ಯೆ 6,483ಕ್ಕೆ ಇಳಿಕೆಯಾಗಿದೆ’ ಎಂದರು.ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್ ಕುಮಾರ್, ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry