ನಗರ ಸಾರಿಗೆ ಆರಂಭ ಎಂದು?

7

ನಗರ ಸಾರಿಗೆ ಆರಂಭ ಎಂದು?

Published:
Updated:

ರಾಯಚೂರು: ಜಿಲ್ಲಾ ಕೇಂದ್ರವಾದರೂ ನಗರದ ಪ್ರಮುಖ ರಸ್ತೆಯಲ್ಲಿ ಬಸ್ ಶೆಲ್ಟರ್‌ಗಳೇ ಇಲ್ಲದ ಈ ನಗರದಲ್ಲಿ ಈಗ ಕೆಲ ಪ್ರಮುಖ ರಸ್ತೆ, ವೃತ್ತದಲ್ಲಿ  ಬಸ್ ಶೆಲ್ಟರ್‌ಗಳು ತಲೆ ಎತ್ತಿವೆ!

ಸುಮಾರು ಮೂರುವರೆ ಲಕ್ಷ ಜನಸಂಖ್ಯೆಯನ್ನು ಈ ನಗರ ಹೊಂದಿದೆ. ಕೃಷಿ ವಿಶ್ವವಿದ್ಯಾಲಯ, ನಗರದಿಂದ 10 ಕೀ.ಮಿ ಅಂತರದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರ,  ಎರಡು ವೈದ್ಯಕೀಯ ಕಾಲೇಜು, ಅನೇಕ ಖಾಸಗಿ ಆಸ್ಪತ್ರೆಗಳಿವೆ. ಎರಡು ಖಾಸಗಿ ಮತ್ತು ಒಂದು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಡಿಪ್ಲೋಮಾ ಶಿಕ್ಷಣ ಸಂಸ್ಥೆಗಳು ಈ ನಗರದಲ್ಲಿವೆ. ಜಿಲ್ಲಾ ಆಸ್ಪತ್ರೆ, ರಾಜ್ಯದಲ್ಲಿಯೇ ಬೃಹತ್ ಗಾತ್ರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇದೆ.

ದಕ್ಷಿಣ ಭಾರದಲ್ಲಿಯೇ ದೊಡ್ಡದಾದ ಹತ್ತಿ ಮಾರುಕಟ್ಟೆಯೂ ಇದೇ ನಗರದಲ್ಲಿದೆ. ಅಲ್ಲದೇ 20 ಕಿ.ಮೀ ದೂರದಲ್ಲಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಇದೆ. ದೇಶದ ವಿವಿಧ ಭಾಗಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ ಹೊಂದಿದ ರೈಲ್ವೆ ನಿಲ್ದಾಣವಿದೆ. ಜಿಲ್ಲೆಯ ಐದೂ ತಾಲ್ಲೂಕಿನಿಂದ ಕೆಲಸ ಕಾರ್ಯದ ಮೇಲೆ ಸಾವಿರಾರು ಜನರು ನಿತ್ಯ ನಗರಕ್ಕೆ ಧಾವಿಸುತ್ತಾರೆ.

ಇಷ್ಟೆಲ್ಲ ಇದ್ದರೂ ಜಿಲ್ಲಾ ಕೇಂದ್ರವಾದ ಈ ನಗರದಲ್ಲಿ ನಗರ ಸಾರಿಗೆ ವ್ಯವಸ್ಥೆ ಮಾತ್ರ ಇಲ್ಲ! ಈಶಾನ್ಯ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗವು ನಗರ ಸಾರಿಗೆ ಹೆಸರಿನಲ್ಲಿ ಒಂದೆರಡು ಬಸ್‌ಗಳನ್ನು ಓಡಿಸುತ್ತಿದೆ. ರೈಲ್ವೆ ನಿಲ್ದಾಣದಿಂದ ವಾಸವಿ ನಗರ, ರೈಲ್ವೆ ನಿಲ್ದಾಣದಿಂದ ಯರಮರಸ್. ಈ ಎರಡು ಮಾರ್ಗದಲ್ಲಿ ಒಂದೆರಡು ಬಸ್ ಸಂಚರಿಸುತ್ತವೆ. ಅದೂ ಕೂಡಾ ಟೈಮಿಲ್ಲ! ಬಸ್ ಬಂದಾಗಲೇ ಹತ್ತಿ ಹೋಗಬೇಕು! ಹೀಗಾಗಿ ನಗರದ ಜನತೆ 30ರಿಂದ 50, 100 ರೂಪಾಯಿ ಕೊಟ್ಟೇ ಆಟೋದಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಸ್ಥಿತಿ ಮುಂದುವರಿದಿದೆ. ಕೇಂದ್ರ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ 5ನೇ ವರ್ಷಕ್ಕೆ ಕಾಲಿಟ್ಟಿದ್ದರೂ ಸದ್ಯ ಪೂರ್ಣಗೊಳ್ಳುವ ಲಕ್ಷಣಗಳಿಲ್ಲ!

ಇಷ್ಟಷ್ಟೆಲ್ಲ ಇಲ್ಲಗಳೇ ಇದ್ದರೂ ಭವಿಷ್ಯದಲ್ಲಿ ಜನತೆಗೆ ಅನುಕೂಲವಾದೀತು ಎಂಬ ಕಾರಣದಿಂದಲೋ ಏನೋ. ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಎಸ್ ಪಕ್ಕೀರಪ್ಪ ಅವರು ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2009-10ನೇ ಸಾಲಿನ 2ನೇ ಕಂತಿನ ಅನುದಾನದಲ್ಲಿ 5 ಕಡೆ ಬಸ್ ಶೆಲ್ಟರ್ ನಿರ್ಮಾಣಕ್ಕೆ 15 ಲಕ್ಷ ಅನುದಾನ ದೊರಕಿಸಿದ್ದಾರೆ. ಒಂದು ಬಸ್ ಶೆಲ್ಟರ್‌ಗೆ 3 ಲಕ್ಷದಂತೆ ಒಟ್ಟು 5 ಶೆಲ್ಟರ್‌ಗೆ 15 ಲಕ್ಷ ಅನುದಾನ ದೊರಕಿಸಿದ್ದಾರೆ.

ನಗರದ ಬಸವೇಶ್ವರ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತ ಸಂಪರ್ಕಿಸುವ ರಸ್ತೆಯ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಹಾಗೂ ಮಂತ್ರಾಲಯ ರಸ್ತೆಯ ಐ.ಡಿ.ಎಸ್.ಎಂ.ಟಿ ಲೇ ಔಟ್ ಹತ್ತಿರ ಒಂದು ಬಸ್ ಶೆಲ್ಟರ್ ನಿರ್ಮಾಣ ಪೂರ್ಣಗೊಂಡಿದ್ದು, ಈಗ ಬಿಸಿಲಿನ ತಾಪಕ್ಕೆ ಬಸವಳಿದ ಜನತೆಗೆ ನೆರಳು ನೀಡುತ್ತಿವೆ.

ಏಳು ಮೈಲ್ ಕ್ರಾಸ್ ಹತ್ತಿರ, ಗಂಜ್ ವೃತ್ತ ಹತ್ತಿರ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ(ಆರ್‌ಟಿಓ ಕಚೇರಿ ವೃತ್ತ) ಹತ್ತಿರ ಬಸ್ ಶೆಲ್ಟರ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಈ ಬಸ್ ಶೆಲ್ಟರ್‌ಗಳು ನಗರದ ಕೆಲ ವೃತ್ತ ಮತ್ತು ರಸ್ತೆಗಳಿಗೆ ಸ್ವಲ್ಪ ಭೂಷಣವಾಗಿದ್ದರೆ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ಕುಳಿತು ಸಾವರಿಸಿಕೊಳ್ಳಲು ಅನುಕೂಲವಾಗಿದೆ. ಈಗ ನಗರದಲ್ಲಿ 6 ಕೀ.ಮಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಚಾಲನೆ ಪಡೆದಿದ್ದು, ಈ ರಸ್ತೆ ಕಾಮಗಾರಿ ಪೂರ್ಣಗೊಂಡರೆ ಬಸ್ ಶೆಲ್ಟರ್‌ಗಳು ಸಾರ್ವಜನಿಕರಿಗೆ ಹೆಚ್ಚು ಬಳಕೆ ಆಗಲಿದೆ.

ರಸ್ತೆ ನಿರ್ಮಾಣವಾದ ಬಳಿಕವಾದರೂ ಈಶಾನ್ಯ ಸಾರಿಗೆ ಸಂಸ್ಥೆ ರಾಯಚೂರು ವಿಭಾಗವು ನಗರದ ವಿವಿಧ ಬಡಾವಣೆ, ಪ್ರದೇಶಕ್ಕೆ ನಗರ ಸಾರಿಗೆ ಸಂಚಾರ ವಿಸ್ತರಣೆ ಮಾಡಬೇಕು. ಜಿಲ್ಲಾಡಳಿತ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಸಾರ್ವಜನಿಕರ ಅನುಕೂಲತೆ ದೃಷ್ಟಿಯಿಂದ ಸಾರಿಗೆ ಸಂಸ್ಥೆಗೆ ಮನವರಿಕೆ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ನಗರ ಸಾರಿಗೆ ಸಂಚಾರ ವ್ಯವಸ್ಥೆ ಜಾರಿಯಾಗದೇ ಇದ್ದರೆ ಸಂಸದರು 15 ಲಕ್ಷದಲ್ಲಿ ನಿರ್ಮಿಸಿದ ಬಸ್ ಶೆಲ್ಟರ್‌ಗಳು ಇದ್ದು ಇಲ್ಲದಂತಾಗುತ್ತದೆ. ಹಂದಿ- ನಾಯಿ ಮಲಗುವ ಸ್ಥಳವಾಗಿಯೋ, ಕೊಳಚೆ ತುಂಬಿದ ತಾಣವಾಗಿ ಭವಿಷ್ಯದಲ್ಲಿ ಗೋಚರಿಸಬಹುದು. ಇದಕ್ಕೆ ಆಡಳಿತ ವರ್ಗ, ಸ್ಥಳೀಯ ಸಂಸ್ಥೆ ಅವಕಾಶ ಅಸ್ಪದ ಕೊಡಬಾರದು. ವ್ಯವಸ್ಥಿತ ರೀತಿ ನಿರ್ವಹಣೆ ಮಾಡಬೇಕು ಎಂದು ಜನತೆ ಆಶಯ ವ್ಯಕ್ತಪಡಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry