ಸೋಮವಾರ, ಆಗಸ್ಟ್ 2, 2021
19 °C
ಗುಲ್ಬರ್ಗ–ಮಂಗಳೂರು ಬಸ್‌ ಸಂಚಾರಕ್ಕೆ ಹಸಿರು ನಿಶಾನೆ

ನಗರ ಸಾರಿಗೆ 4ನೇ ಘಟಕ ಸೇವೆಗೆ ಸಮರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜೆ–ನರ್ಮ್‌ ಯೋಜನೆ ಅಡಿ ನಿರ್ಮಿಸಿರುವ ನಗರ ಸಾರಿಗೆಯ 4ನೇ ಘಟಕ ಹಾಗೂ ಗುಲ್ಬರ್ಗ ವಿ.ವಿ ಆವರಣದಲ್ಲಿ ನಿರ್ಮಿಸಿರುವ ಬಸ್‌ ನಿಲ್ದಾಣವನ್ನು ಬುಧವಾರ ಸೇವೆಗೆ ಸಮರ್ಪಿಸಲಾಯಿತು.ರೂ 3.38 ಕೋಟಿ ವೆಚ್ಚದಲ್ಲಿ ಅಂದಾಜು 3 ಎಕರೆ ವಿಸ್ತೀರ್ಣದಲ್ಲಿ ನೂತನ ಘಟಕ ನಿರ್ಮಿಸಲಾಗಿದೆ. 78 ನಗರ ಸಾರಿಗೆ ಬಸ್‌ಗಳು ಈ ಘಟಕದಿಂದ ಸಂಚಾರ ಆರಂಭಿಸಲಿವೆ. ಶೀಘ್ರದಲ್ಲಿಯೇ 153 ಬಸ್‌ ಖರೀದಿಸ­ಲಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ) ಅವುಗಳ ನಿಲುಗಡೆಗೆ ಇಲ್ಲಿ ವ್ಯವಸ್ಥೆ ಮಾಡಿದೆ.ಸಿಬ್ಬಂದಿ ವಿಶ್ರಾಂತಿ ಕೊಠಡಿ, ಶೌಚಾ­ಲಯ, ಕುಡಿಯುವ ನೀರು, ವಾಹನ ನಿರ್ವಹಣಾ ಗುಂಡಿ, ಉಗ್ರಾಣ ಮತ್ತು ಆಯಿಲ್‌ ಸಂಗ್ರಹ ಕೊಠಡಿ, ವಾಹನ ಸ್ವಚ್ಛತೆ, ಸಿಬ್ಬಂದಿ ರಜೆ ಪಡೆಯುವ ಕಿಯೋಸ್ಸ್‌ ವ್ಯವಸ್ಥೆಯನ್ನು ನೂತನ ಘಟಕ ಒಳಗೊಂಡಿದೆ.ಗುಲ್ಬರ್ಗ ವಿಶ್ವವಿದ್ಯಾಲಯ ಆವರಣ­ದಲ್ಲಿ 2 ಎಕರೆ ವಿಶಾಲ ಪ್ರದೇಶದಲ್ಲಿ ರೂ 80 ಲಕ್ಷ ವೆಚ್ಚದಲ್ಲಿ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. ಇದರಿಂದ ವಿದ್ಯಾರ್ಥಿ­ಗಳಿಗೆ ಅನುಕೂಲವಾಗಲಿದೆ. ನಗರದ ವಿವಿಧ ಬಡಾವಣೆಗಳಿಗೆ ಹಾಗೂ ನಗರ ಸಾರಿಗೆ ನಿಲ್ದಾಣ, ಕೇಂದ್ರ ಬಸ್‌ ನಿಲ್ದಾಣಕ್ಕೆ ಇಲ್ಲಿಂದ ಬಸ್‌ ಸೌಕರ್ಯ ಕಲ್ಪಿಸುವ ಉದ್ದೇಶವನ್ನು ಎನ್‌ಇಕೆಆರ್‌­ಟಿಸಿ ಹೊಂದಿದೆ.8 ಬಸ್‌ ನಿಲುಗಡೆ ಸಾಮರ್ಥ್ಯ ಹೊಂದಿರುವ ಫ್ಲಾಟ್‌ಫಾರಂ, ಸಂಚಾರ ನಿಯಂತ್ರಕರ ಕೊಠಡಿ, ಶೌಚಾಲಯ, ಕುಡಿಯುವ ನೀರು ಹಾಗೂ ನಿಲ್ದಾಣದಲ್ಲಿ ಅಂಗಳದಲ್ಲಿ ಹೂದೋಟ ನಿರ್ಮಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್‌ ಇಸ್ಲಾಂ ಅವರು ಬುಧವಾರ ನೂತನ ಘಟಕ ಹಾಗೂ ಬಸ್‌ ನಿಲ್ದಾಣವನ್ನು ಸೇವೆಗೆ ಸಮರ್ಪಿಸಿದರು.ಮಂಗಳೂರಿಗೆ ಬಸ್‌: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಗುಲ್ಬರ್ಗ–ಮಂಗಳೂರು ನಡುವೆ ‘ನಾನ್‌ ಎ.ಸಿ ಸ್ಲೀಪರ್‌’ ಬಸ್ ಸಂಚಾರಕ್ಕೆ ಬುಧವಾರ ಹಸಿರು ನಿಶಾನೆ ತೋರಿದರು. ಗುಲ್ಬರ್ಗದಿಂದ ಪ್ರತಿದಿನ ಸಂಜೆ 4 ಗಂಟೆಗೆ ಹೊರಡುವ ಈ ಬಸ್‌ ಲಿಂಗಸಗೂರು–ಕುಷ್ಟಗಿ– ಹುಬ್ಬಳ್ಳಿ ಮಾರ್ಗವಾಗಿ ಮಂಗಳೂರಿಗೆ ಮರುದಿನ ಬೆಳಿಗ್ಗೆ 8ಗಂಟೆಗೆ ತಲುಪಲಿದೆ. ಮಂಗ­ಳೂರಿನಿಂದ ಪ್ರತಿದಿನ ಸಂಜೆ 4ಗಂಟೆಗೆ ಹೊರಟು ಗುಲ್ಬರ್ಗಕ್ಕೆ ಮರುದಿನ ಬೆಳಿಗ್ಗೆ 8 ಗಂಟೆಗೆ ಬರಲಿದೆ. ಆ.15ರಿಂದ ಈ ಸೇವೆ ವಿಧ್ಯುಕ್ತವಾಗಿ ಆರಂಭವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.