ನಗರ ಸುಧಾರಣೆಗೆ ಹೀಗೊಂದು ಸಮೀಕ್ಷೆ

ಶುಕ್ರವಾರ, ಜೂಲೈ 19, 2019
23 °C

ನಗರ ಸುಧಾರಣೆಗೆ ಹೀಗೊಂದು ಸಮೀಕ್ಷೆ

Published:
Updated:

ಮಹಾನಗರಗಳ ನಾಗಾಲೋಟದ ಬೆಳವಣಿಗೆಯ ಗತಿ ಜಾಗತೀಕರಣದ ಯುಗದಲ್ಲಿ ಹಿಂದೆಂದಿಗಿಂತ ಹೆಚ್ಚಾಗಿದೆ. ಇದಕ್ಕೆ ಬೆಂಗಳೂರು ಕೂಡ ಹೊರತಲ್ಲ. ಉದ್ಯೋಗಗಳ ವಿಪುಲ ಅವಕಾಶದ ಜತೆಗೆ ಹಲವು ಸಮಸ್ಯೆಗಳು ಇಲ್ಲಿ ಹಾಸುಹೊಕ್ಕಿವೆ. ಮಿತಿಮೀರಿದ ವಲಸೆಯಿಂದ ಹೆಚ್ಚುತ್ತಿರುವ ಜನಸಾಂದ್ರತೆ, ವಾಹನ ದಟ್ಟಣೆ, ಮೂಲಸೌಕರ್ಯದ ಕೊರತೆ ಸವಾಲು ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಸಾಗಿದೆ.ಮಿತಿಮೀರಿ ಬೆಳೆಯುತ್ತಿರುವ ನಮ್ಮ ಬೆಂಗಳೂರಿನ ಅಭಿವೃದ್ಧಿ ಹಾಗೂ ಅದರ ಹಿಂದೆಯೇ ಸುತ್ತಿಕೊಂಡಿರುವ ಸಮಸ್ಯೆಗಳ ನಿವಾರಣೆಗೆ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಸರ್ಕಾರದ ಜೊತೆಗೆ, 130 ವಾರ್ಡ್‌ಗಳ ಆಡಳಿತ ನೋಡಿಕೊಳ್ಳಲು ಸ್ಥಳೀಯ ಆಡಳಿತ ಸಂಸ್ಥೆ (ಬಿಬಿಎಂಪಿ) ಇದೆ. ಆದರೂ, ಇಲ್ಲಿನ ಸಮಸ್ಯೆಗಳನ್ನು ಕಂಡುಕೊಂಡು ಅವುಗಳಿಗೆ ಸಂಪೂರ್ಣ ಪರಿಹಾರ ಸೂಚಿಸುವುದು ಪಾಲಿಕೆಗೆ ಇಂದಿಗೂ ಸವಾಲಾಗಿದೆ.ಇಂತಹ ಮೆಟ್ರೊ ನಗರಗಳ ಸ್ಥಳೀಯ ಆಡಳಿತಕ್ಕೂ ಸವಾಲಾಗುವ ಅನೇಕ ಸಮಸ್ಯೆಗಳ ಕಂಡುಕೊಂಡು ಅವುಗಳಿಗೆ ಪರಿಹಾರ ಸೂಚಿಸಿ, ಆ ಮೂಲಕ ಸ್ಥಳೀಯ ಆಡಳಿತಕ್ಕೆ ನೆರವಾಗುವ ನಿಟ್ಟಿನಲ್ಲಿ `ಜನಾಗ್ರಹ' ಎಂಬ ಸರ್ಕಾರೇತರ ಸಂಸ್ಥೆಯೊಂದು ಅವಿರತವಾಗಿ ಶ್ರಮಿಸುತ್ತಿದೆ. ಹೆಸರೇ ಸೂಚಿಸುವಂತೆ `ಜನಾಗ್ರಹ' ಸಂಸ್ಥೆ, ಜನರ ಹಕ್ಕುಗಳನ್ನು, ಸೌಲಭ್ಯಗಳನ್ನು ಆಡಳಿತ ಸಂಸ್ಥೆಯೊಂದಿಗೆ ಮುಖಾಮುಖಿಯಾಗಿಸಿ ನಗರದ ಜನರಲ್ಲಿ ಜಾಗೃತಿ ಮೂಡಿಸಿ, ತನ್ಮೂಲಕ ಅಭಿವೃದ್ಧಿಗೆ ಚಾಲನೆ ನೀಡುವ ಉದ್ದೇಶ ಹೊಂದಿದೆ.ವಾರ್ಡ್ ಗುಣಮಟ್ಟ ಅಂಕ (ಡಬ್ಲ್ಯೂಕ್ಯೂಎಸ್)

ಜನಾಗ್ರಹ ಸಂಸ್ಥೆ ಆರು ತಿಂಗಳ ಹಿಂದೆ ಕೈಗೊಂಡಿದ್ದ ಬೆಂಗಳೂರು ಮಹಾನಗರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳು ಹಾಗೂ 130 ವಾರ್ಡ್‌ಗಳಲ್ಲಿ ಕೈಗೊಂಡಿದ್ದ ಮೂಲಭೂತ ಸೌಕರ್ಯಗಳ ಸಮೀಕ್ಷೆಯೇ `ವಾರ್ಡ್ ಗುಣಮಟ್ಟ ಅಂಕ (ಡಬ್ಲ್ಯೂಕ್ಯೂಎಸ್)'. ಈಗಷ್ಟೇ ಪೂರ್ಣಗೊಂಡಿರುವ ಈ ಸಮೀಕ್ಷೆಯ ಫಲಿತಾಂಶವು ಮಹಾನಗರದ ಅಭಿವೃದ್ಧಿ ಹಾಗೂ ಇಲ್ಲಿನ  ಸಮಸ್ಯೆಗಳು, ಈ ಎರಡರ ಮೇಲೂ ಬೆಳಕು ಚೆಲ್ಲಿದೆ.ಡಬ್ಲ್ಯೂಕ್ಯೂಎಸ್‌ನಲ್ಲಿ ಸಮೀಕ್ಷೆಗೆ ಒಳಪಟ್ಟ ಪ್ರಮುಖ ಅಂಶಗಳು ಇಂತಿವೆ.

1. ನೀರು ಪೂರೈಕೆ: ನಿರಂತರತೆ, ಗುಣಮಟ್ಟ

2. ಪರಿಸರ: ಗಾಳಿ, ಶಬ್ದ

3. ನೈರ್ಮಲ್ಯ: ಘನತ್ಯಾಜ್ಯ ನಿರ್ವಹಣೆ ಮತ್ತು ಸಾರ್ವಜನಿಕ ಶೌಚಾಲಯ

4. ಚಾಲನೆ: ಬೀದಿ ದೀಪಗಳು, ಪಾದಚಾರಿ ಮಾರ್ಗ, ಚಾಲಕರ ಸುರಕ್ಷತೆ ಹಾಗೂ ಸಾರ್ವಜನಿಕ ಸಂಚಾರಿ ವ್ಯವಸ್ಥೆ

5. ಸಾರ್ವಜನಿಕ ಸೌಲಭ್ಯಗಳು: ಉದ್ಯಾನವನಗಳುಈ ಮೇಲಿನ ಅಂಶಗಳ ಮೇಲೆ ನಗರದ ಎಲ್ಲಾ ವಾರ್ಡ್‌ಗಳಲ್ಲಿ ಜನಾಗ್ರಹ ಸಂಸ್ಥೆ ಸಮೀಕ್ಷೆ ಕೈಗೊಂಡಿತ್ತು. ಮೇಲಿನ ಸೌಲಭ್ಯಗಳ ಲಭ್ಯತೆ, ಗುಣಮಟ್ಟ ಹಾಗೂ ನಿರ್ವಹಣೆಯ ಆಧಾರದ ಮೇಲೆ ಪ್ರತಿ ವಾರ್ಡ್‌ಗೂ `0' ಯಿಂದ `10'ರವರೆಗೆ ಅಂಕಗಳನ್ನು ನೀಡುವ ಮೂಲಕ ವಾರ್ಡ್‌ಗಳ ಗುಣಮಟ್ಟವನ್ನು ಅಳೆದಿದೆ.`ಪ್ರತಿ ವಾರ್ಡ್‌ನಲ್ಲಿ ಮೇಲಿನ ಐದು ಕ್ಷೇತ್ರಗಳಿಗೆ ಸಂಬಂಧಿಸಿದ ವೈಜ್ಞಾನಿಕ ನಿರ್ವಹಣೆಯೇ ಸಮೀಕ್ಷೆಯ ಒಟ್ಟಾರೆ ಫಲಿತಾಂಶವಾಗಿದೆ. ಡಬ್ಲ್ಯೂಕ್ಯೂಎಸ್ ಸಮೀಕ್ಷೆಯ ಫಲಿತಾಂಶ ಎಲ್ಲಾ ವಾರ್ಡ್‌ಗಳನ್ನು ಅಭಿವೃದ್ಧಿ ಹಾಗೂ ಸಮಸ್ಯೆಯ ಆಧಾರದ ಮೇಲೆ ತುಲನಾತ್ಮಕವಾಗಿ ಪರಿಶೀಲಿಸಲು ಸಹಕಾರಿಯಾಗಿದೆ. ಜೊತೆಗೆ ನಿರ್ದೇಶಿತ ರೀತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಹಾಗೂ ಮುನಿಸಿಪಲ್ ನಿಧಿಗಳ ವಿಂಗಡಣೆ ಇದರಿಂದ ಸುಲಭ ಸಾಧ್ಯವಾಗುತ್ತದೆ' ಎಂದು `ಜನಾಗ್ರಹ' ಸಂಸ್ಥೆಯ ಸಹ ಸಂಸ್ಥಾಪಕರಾದ ರಮೇಶ್ ರಾಮನಾಥನ್ ಹೇಳುತ್ತಾರೆ.ಸಮೀಕ್ಷೆ ಹೇಗೆ?

ಡಬ್ಲ್ಯೂಕ್ಯೂಎಸ್‌ನಲ್ಲಿ ಐದು ಪ್ರಮುಖ ಘಟಕಗಳಿಗೆ ಸಂಬಂಧಿಸಿದ 23 ಸೂಚಿಗಳನ್ನು ಸಮೀಕ್ಷೆ ಮಾಡಲಾಗಿದೆ. ಸುಮಾರು 55 ಬಹುಕ್ಷೇತ್ರೀಯ ದೇಶಿ ಹಾಗೂ ವಿದೇಶಿ ವೃತ್ತಿಪರರು ಪ್ರತ್ಯೇಕ ತಂಡಗಳಲ್ಲಿ ನಗರದ ಪ್ರತಿ ವಾರ್ಡ್‌ಗೂ ಭೇಟಿ ನೀಡಿ ಕ್ಷೇತ್ರ ಸಮೀಕ್ಷೆ ನಡೆಸಿದ್ದಾರೆ.ಸಾಂಪ್ರದಾಯಿಕ ಮಾದರಿಗಿಂತ ಭಿನ್ನವಾಗಿ ನಡೆಸಲಾಗಿರುವ ಈ ಸಮೀಕ್ಷೆಯಲ್ಲಿ ಟ್ಯಾಬ್ಲೆಟ್, ಡಿಜಿಟಲ್ ಸಮೀಕ್ಷಾ ಸಾಧನ, ಶಬ್ದಮಾಪನ ಹಾಗೂ ವಾಯುಮಾಲಿನ್ಯ ಸಾಧನಗಳನ್ನು ಬಳಸಿಕೊಳ್ಳಲಾಗಿದೆ. ಕ್ಷೇತ್ರಕಾರ್ಯವನ್ನು ಜಿ.ಪಿ.ಎಸ್. ತಂತ್ರಜ್ಞಾನದ ಮೂಲಕ ಖಚಿತಪಡಿಸಿಕೊಳ್ಳುವುದರ ಜೊತೆಗೆ, ಸ್ಥಳದಿಂದ ಕಚೇರಿಗೆ ಕ್ಷಣಮಾತ್ರದಲ್ಲಿ ಮಾಹಿತಿ ಪಡೆಯುವ ವ್ಯವಸ್ಥೆಯನ್ನು ಕೂಡ ಒಳಗೊಂಡಿತ್ತು. ಈ ರೀತಿಯ ವೈಜ್ಞಾನಿಕ ಸಾಧನಗಳ ಮೂಲಕ ಸಮೀಕ್ಷಾಕಾರರು ಪ್ರತಿ ವಾರ್ಡ್‌ಗೂ ಭೇಟಿ ನೀಡಿ, ಅಲ್ಲಿನ ಗುಣಮಟ್ಟವನ್ನು ಸೂಚಿಸುವ ಸುಮಾರು 55 ಸಾವಿರ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.ಅಚ್ಚರಿಯ ಫಲಿತಾಂಶ

ಡಬ್ಲ್ಯೂಕ್ಯೂಎಸ್ ಸಮೀಕ್ಷೆ ನಗರದ ಪ್ರತಿ ವಾರ್ಡ್‌ಗಳಲ್ಲಿ ಆಯ್ದ ಐದು ಘಟಕಗಳ ಕುರಿತು ನಡೆಸಿದ ಸಮೀಕ್ಷೆಯ ಫಲಿತಾಂಶ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ.  ಫಲಿತಾಂಶವನ್ನು ವಿಶ್ಲೇಷಣೆಗೊಳಪಡಿಸಿದಾಗ, ಆಡಳಿತ ಸಂಸ್ಥೆಗಳು ನಗರದ ಮೌಲಭೂತ ಸೌಕರ್ಯಗಳ ನಿರ್ವಹಣೆ ಬಗ್ಗೆ ತೋರಿಸುತ್ತಿರುವ ಜಾಣ ಕುರುಡು ಇದರಿಂದ ಬಯಲಾಗಿದೆ. 2010 ಹಾಗೂ 2013ರ ಡಬ್ಲ್ಯೂಕ್ಯೂಎಸ್ ಸಮೀಕ್ಷೆಯ ಫಲಿತಾಂಶದ ನಡುವೆ ಭಾರಿ ಹೋಲಿಕೆ ಕಂಡುಬಂದಿದ್ದು, ಫಲಿತಾಂಶದ ವಿವರ ಇಂತಿದೆ.ಸಮೀಕ್ಷೆ ವೇಳೆ 2007ರಲ್ಲಿ ಹೊಸದಾಗಿ ಮಹಾನಗರ ವ್ಯಾಪ್ತಿಗೆ ಸೇರ್ಪಡೆಗೊಂಡ ವಾರ್ಡ್‌ಗಳನ್ನು ಹೊರವಲಯದ ವಾರ್ಡ್‌ಗಳೆಂದು ಊಳಿದವುಗಳನ್ನು ಒಳವಲಯದ ವಾರ್ಡ್‌ಗಳೆಂದು ವಿಂಗಡಿಸಲಾಗಿತ್ತು.ಈ ಎರಡೂ ಬಗೆಯ ವಾರ್ಡ್‌ಗಳ ಜನಸಂಖ್ಯೆಯನ್ನು ಸಮೀಕ್ಷೆಯಲ್ಲಿ (2001-2011) ತುಲನಾತ್ಮಕ ಪರಿಶೀಲನೆಗೊಳಪಡಿಸಿದಾಗ, ಹೊರವಲಯದ ವಾರ್ಡ್‌ಗಳ ಜನಸಂಖ್ಯೆ ಪ್ರಮಾಣದಲ್ಲಿ ಶೇ 119 ಏರಿಕೆ ಕಂಡುಬಂದಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಒಳವಲಯದ ವಾರ್ಡ್‌ಗಳಲ್ಲಿ ಜನಸಂಖ್ಯೆ ಪ್ರಮಾಣ ಶೇ 19ರಷ್ಟು ಇಳಿಮುಖವಾಗಿದೆ.ಫಲಿತಾಂಶದ ವಿಶ್ಲೇಷಣೆಯ ಪ್ರಕಾರ, ಹೊರವಲಯದ ವಾರ್ಡ್‌ಗಳ ಸಂರಚನೆ ಹಾಗೂ ಇಲ್ಲಿನ ಮೂಲಭೂತ ಸೌಕರ್ಯಗಳ ಮೇಲೆ ಹೆಚ್ಚು ಗಮನ ನೀಡಬೇಕಾಗಿದೆ.ಕಡಿಮೆ ಅಂಕ ಪಡೆದಿರುವ ಮೇಲಿನ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 2001-2011ರ ಅವಧಿಯಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚಳವಾಗಿದ್ದು, ಈ ಕ್ಷೇತ್ರಗಳಲ್ಲಿ ದೂರದೃಷ್ಟಿಯುಳ್ಳ ನಗರ ಯೋಜನೆಗಳು ಹಾಗೂ ಮೂಲಭೂತ ಸೌಕರ್ಯಗಳ ಸುಧಾರಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ಫಲಿತಾಂಶದ ವಿಶ್ಲೇಷಣೆಯಿಂದ ತಿಳಿದುಬಂದಿದೆ.ಬೆಂಗಳೂರಿನ ಬಗ್ಗೆ ಕಳಕಳಿ ಹೊಂದಿರುವ `ಜನಾಗ್ರಹ' ಸಂಸ್ಥೆಯ `ಡಬ್ಲ್ಯೂಕ್ಯೂಎಸ್' ಸಮೀಕ್ಷೆಯ ಫಲಿತಾಂಶದ ಹೆಚ್ಚಿನ ವಿವರಗಳಿಗೆ www.ichangemycity.com/wqs  ಗೆ ಭೇಟಿ ನೀಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry