ಗುರುವಾರ , ಮೇ 13, 2021
40 °C

`ನಗರ ಸ್ಥಳೀಯ ಸಂಸ್ಥೆ ಮೀಸಲಾತಿ ಶೀಘ್ರ'

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿಯನ್ನು 8-10 ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಬುಧವಾರ ಇಲ್ಲಿ ತಿಳಿಸಿದರು.ಮೀಸಲಾತಿ ನಿಗದಿ ಸಂಬಂಧ ಮಾರ್ಗದರ್ಶಿ ಸೂತ್ರ ಸಿದ್ಧವಾಗಿದೆ. ಹಿರಿಯ ಸಚಿವರು 3-4 ಬಾರಿ ಸಭೆ ಸೇರಿ ಚರ್ಚಿಸಿದ್ದು, ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಮೀಸಲಾತಿ ನಿಗದಿ ಆಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ವಕ್ಫ್ ಸಮೀಕ್ಷೆ: ಮೂರು ತಿಂಗಳ ಒಳಗೆ ವಿಭಾಗ ಮಟ್ಟದ ಸಭೆಗಳನ್ನು ನಡೆಸಿ ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ಸರ್ವೇ ಮಾಡಿಸಲಾಗುವುದು. ಒತ್ತುವರಿ ತೆರವುಗೊಳಿಸಿ ವಕ್ಫ್ ಆಸ್ತಿಗಳನ್ನು ಅಭಿವೃದ್ಧಿಪಡಿಸಲಾಗುವುದು. 20 ವರ್ಷಕ್ಕೊಮ್ಮೆ ವಕ್ಫ್ ಆಸ್ತಿಗಳ ಸರ್ವೇ ಆಗಬೇಕು. ಆದರೆ, ಇದರ ಪಾಲನೆ ಆಗಿಲ್ಲ. ಕೆಲವು ಜಿಲ್ಲೆಗಳಲ್ಲಿ ವಕ್ಫ್ ಆಸ್ತಿಗಳ ಒತ್ತುವರಿ ಆಗಿದೆ ಎಂಬ ದೂರುಗಳು ಇವೆ. ಕಾರ್ಯಪಡೆಯೊಂದನ್ನು ರಚಿಸಿ ಸರ್ವೇಗೆ ಸೂಚಿಸಲಾಗುವುದು. ಒತ್ತುವರಿ ತೆರವುಗೊಳಿಸಿದ ನಂತರ ವಕ್ಫ್ ಆಸ್ತಿಗಳನ್ನು ಅಭಿವೃದ್ಧಿಪಡಿಸುವ ಅಥವಾ ಗುತ್ತಿಗೆಗೆ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.100 - 150 ವಕ್ಫ್ ಆಸ್ತಿಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸುವಂತೆ ವಕ್ಫ್ ಮಂಡಳಿಗೆ ಸೂಚಿಸಲಾಗಿದೆ. ಕೇಂದ್ರದಿಂದ 1,500 ಕೋಟಿ ರೂಪಾಯಿ ನೆರವು ಕೋರಲಾಗುವುದು. ಮಂಗಳೂರು, ಹುಬ್ಬಳ್ಳಿ, ಗುಲ್ಬರ್ಗದಲ್ಲಿ ಹಜ್ ಭವನ ನಿರ್ಮಿಸಲಾಗುವುದು ಎಂದು ತಿಳಿಸಿದರು.ಸತ್ಯಕ್ಕೆ ದೂರ: `ಲೋಕಾಯುಕ್ತ ನ್ಯಾಯಾಲಯದಲ್ಲಿ ನನ್ನ ವಿರುದ್ಧ ದಾಖಲಿಸಿರುವ ದೂರಿನಲ್ಲಿ ಯಾವುದೇ ಸತ್ಯಾಂಶ ಇಲ್ಲ. ಗುಲ್ಬರ್ಗ ಭೂ ನ್ಯಾಯಮಂಡಳಿಯು 1981ರಲ್ಲಿ ನನ್ನ ಅಣ್ಣ ಅನ್ವರುಲ್ ಹಕ್ ಅವರ ಮಾವ ಸೈಯದ್ ಗುಲಾಮ್ ದಸ್ತಗೀರ್ ಅವರಿಗೆ ಜಮೀನು ಮಂಜೂರು ಮಾಡಿರುವುದನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಸಾರ್ವಜನಿಕ ಜೀವನದಲ್ಲಿರುವ ನನ್ನ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡುವ ಉದ್ದೇಶದಿಂದ ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.