ನಗರ ಸ್ವಚ್ಛತೆ: ಪಾಲಿಕೆ ಸದಸ್ಯರ ಅಸಮಾಧಾನ

ಮಂಗಳವಾರ, ಜೂಲೈ 23, 2019
27 °C

ನಗರ ಸ್ವಚ್ಛತೆ: ಪಾಲಿಕೆ ಸದಸ್ಯರ ಅಸಮಾಧಾನ

Published:
Updated:

ಹುಬ್ಬಳ್ಳಿ: ಅವಳಿ ನಗರದಲ್ಲಿ ಸ್ವಚ್ಛತೆಗೆ ಸಂಬಂಧಪಟ್ಟು ಪರಿಣಾಮಕಾರಿ ಕೆಲಸಗಳು ಆಗುತ್ತಿಲ್ಲ ಎಂದು ಪಕ್ಷಭೇದ ಮರೆತು ದೂರಿದ ಪಾಲಿಕೆ ಸದಸ್ಯರು ಡೆಂಗೆಯಂಥ ಸಾಂಕ್ರಾಮಿಕ ರೋಗಗಳು ಕಾಲಿಡುವ ಮುನ್ನ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು.ಶನಿವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅರ್ಧ ದಿನವನ್ನು ಕಸ ವಿಲೇವಾರಿ, ನಗರ ಸ್ವಚ್ಛತೆ ಇತ್ಯಾದಿ ವಿಷಯಗಳಿಗೆ ಸಂಬಂಧಪಟ್ಟ ಚರ್ಚೆಗೇ ಸೀಮಿತವಾಯಿತು. ಈ ಮಧ್ಯೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಅನೇಕ ಬಾರಿ ಮಾತಿನ ಚಕಮಕಿ ನಡೆಯಿತು. ಮೇಯರ್ ಬಳಿಗೆ ವಿರೋಧ ಪಕ್ಷದವರು ನುಗ್ಗಿದಾಗ ಮೇಯರ್ ತಮ್ಮ ಪೀಠದಿಂದ ಎದ್ದು ಹೊರನಡೆದ ಪ್ರಸಂಗವೂ ನಡೆಯಿತು.ಸ್ವಚ್ಛತೆಗೆ ಸಂಬಂಧಿಸಿ ಯೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂಬ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ಅವರ ಹೇಳಿಕೆಯೊಂದರಿಂದ ಕುಪಿತಗೊಂಡ ವಿರೋಧ ಪಕ್ಷದ ಸದಸ್ಯರು ಅವರನ್ನು ತರಾಟೆಗೆ ತೆಗೆದುಕೊಂಡರು.ಗಮನ ಸೆಳೆಯುವ ಗೊತ್ತುವಳಿ ಮಂಡಿಸಿದ ವಿರೋಧ ಪಕ್ಷದ ಮಾಜಿ ನಾಯಕ ದೀಪಕ ಚಿಂಚೋರೆ, ಅವಳಿ ನಗರದಲ್ಲಿ ಡೆಂಗೆಯಂಥ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು ಪಾಲಿಕೆ ಇಲ್ಲಿಯ ವರೆಗೆ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ದೂರಿ, ಈಚೆಗೆ  ಧಾರವಾಡದ ಕಿಲ್ಲಾ ನಿವಾಸಿ ದೈವಿಕ್ ಪ್ರತಾಪ ಶೆಟ್ಟಿ ಎಂಬ ಬಾಲಕ ಡೆಂಗೆಯಿಂದ ಸಾವಿಗೀಡಾಗಿದ್ದಾನೆ ಎಂದು ಹೇಳಿದರು.ಇದಕ್ಕೆ ದನಿಗೂಡಿಸಿದ ದಶರಥ ವಾಲಿ, ಗಣೇಶ ಟಗರಗುಂಟಿ, ಸುವರ್ಣಾ ಕಲ್ಲಕುಂಟ್ಲ, ಹಜರತ್ ಅಲಿ ದೊಡಮನಿ, ಸರೋಜಾ ಪಾಟೀಲ, ಯಾಸಿನ್ ಹಾವೇರಿಪೇಟೆ ಮುಂತಾದವರು ಕಸ ವಿಲೇವಾರಿ, ಫಾಗಿಂಗ್ ಇತ್ಯಾದಿ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ ಎಂದು ದೂರಿದರು.ಆಡಳಿತ ಪಕ್ಷದ ನಾಯಕ ವೀರಣ್ಣ ಸವಡಿ ಕಸ ವಿಲೇವಾರಿಗೆ ಸಂಬಂಧಪಟ್ಟು ಸರಿಯಾದ ವ್ಯವಸ್ಥೆಯೇ ಇಲ್ಲ ಎಂದು ದೂರಿದರು. ಹೂವಪ್ಪ ದಾಯಗೊಂಡಿ, ಅಧಿಕಾರಿಗಳು ನಿತ್ಯ ವಾರ್ಡ್ ಭೇಟಿ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರೆ, ಕಸ ವಿಲೇವಾರಿಯನ್ನು ಸಮರ್ಪಕವಾಗಿ ಮಾಡದವರ ಮೇಲೆ ದಂಡ ವಿಧಿಸಬೇಕು ಎಂದು ಆಗ್ರಹಿಸಿದರು.`ಬಾಲಕ ಡೆಂಗೆಗೆ ಬಲಿಯಾಗಿಲ್ಲ~

ದೀಪಕ ಚಿಂಚೋರೆ ಅವರ ಗಮನ ಸೆಳೆಯುವ ಗೊತ್ತುವಳಿಗೆ ಉತ್ತರಿಸಿದ ಪಾಲಿಕೆ ಆರೋಗ್ಯಾಧಿಕಾರಿ ಡಾ. ಬಿರಾದಾರ, ದೈವಿಕ್ ಪ್ರತಾಪ ಶೆಟ್ಟಿ ಸಾವಿಗೆ ಡೆಂಗೆ ಕಾರಣವಲ್ಲ ಎಂದು ತಿಳಿಸಿದರು.ಬಾಲಕನನ್ನು ಆರಂಭದಲ್ಲಿ ರ‌್ಯಾಪಿಡ್ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಇದರಲ್ಲಿ ಪಾಸಿಟಿವ್ ಫಲಿತಾಂಶ ಬಂದಿತ್ತು. ಆದರೆ ಎಲಿಸಾ ಪರೀಕ್ಷೆಯ ವರದಿ ನೆಗೆಟಿವ್ ಆಗಿತ್ತು. ಎರಡನೇ ಪರೀಕ್ಷೆಯ ವರದಿಯನ್ನೇ ಅಧಿಕೃತ ಎಂದು ಪರಿಗಣಿಸುವುದರಿಂದ ಬಾಲಕನ ಸಾವಿಗೆ ಡೆಂಗೆ ಕಾರಣವಲ್ಲ ಎಂದು ದೃಢಪಡಿಸಲಾಗಿದೆ ಎಂದು ಅವರು ಹೇಳಿದರು.`ಫಾಗಿಂಗ್ ಅನ್ನು ಸಮರ್ಪಕವಾಗಿ ಮಾಡಲಾಗುತ್ತದೆ. ಕೆಲವರು ಮನೆಯ ಒಳಗೆ ಫಾಗಿಂಗ್ ಮಾಡಲು ಬಿಡುವುದಿಲ್ಲ. ಈ ಹಿನ್ನೆಲೆಯಲ್ಲಿ ಲಾರ್ವಾಗಳನ್ನು ನಾಶ ಮಾಡಲು ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತಿದೆ. ಕಳೆದ ಜನವರಿಯಿಂದ ಇಲ್ಲಿಯ ವರೆಗೆ ಒಟ್ಟು 17 ಪ್ರಕರಣಗಳು ಪತ್ತೆಯಾಗಿದ್ದು ಯಾವುದೂ ದೃಢಪಟ್ಟಿಲ್ಲ ಎಂದು ಅವರು ತಿಳಿಸಿದರು.ಮುತ್ತಣ್ಣವರ ತರಾಟೆಗೆ

ಕಸ ವಿಲೇವಾರಿ ಹಾಗೂ ಸ್ವಚ್ಛತೆಗೆ ಸಂಬಂಧಪಟ್ಟು ಮಾತನಾಡಿದ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣವರ, ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲು ಸಭೆ ಕರೆದರೆ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.ಇದರಿಂದ ಕುಪಿತರಾದ ವಿರೋಧ ಪಕ್ಷದವರು ಇಂಥ ಹೇಳಿಕೆಯನ್ನು ಸಮಿತಿಯ ಅಧ್ಯಕ್ಷರು ನೀಡುವುದು ಸರಿಯಲ್ಲ, ಮಾತು ಕೇಳದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಅವರು ಜನಪ್ರತಿನಿಧಿಗಳಿಗೆ ಅವಮಾನ ಮಾಡಿದಂತೆ ಆಗುತ್ತದೆ ಎಂದು ಹೇಳಿ ವಾಗ್ವಾದಕ್ಕಿಳಿದರು. ವಾದ-ವಿವಾದ ಹೆಚ್ಚಾಗಿ ಮೇಯರ್ ಬಳಿಗೆ ನುಗ್ಗಿದರು. ಮೇಯರ್ ಹೊರನಡೆದರು.ಮತ್ತೆ ಸಭೆ ಆರಂಭವಾದಾಗಲೂ ಇದೇ ವಿಷಯದ ಬಗ್ಗೆ ಚರ್ಚೆ ನಡೆಯಿತು. ಕೊನೆಗೆ ಆಯುಕ್ತ ವೈ.ಎಸ್. ಪಾಟೀಲ, ಸ್ವಚ್ಛತೆಗೆ ಸಂಬಂಧಪಟ್ಟು ಸದಸ್ಯರು ಮುಂದಿಟ್ಟ ಸಲಹೆಗಳನ್ನು ಅನುಷ್ಠಾನಕ್ಕೆ ತರಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು, ಸಂಬಂಧಿಸಿದ ಅಧಿಕಾರಿಯ ಹುದ್ದೆಯನ್ನು ಮೇಲ್ದರ್ಜೆಗೇರಿಸಿ ಜವಾಬ್ದಾರಿ ನೀಡಲಾಗಿದೆ,ಸ್ವಚ್ಛತಾ ಇನ್ಸ್‌ಪೆಕ್ಟರ್‌ಗಳು ಸರಿಯಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಖಾಲಿ ಪ್ಲಾಟ್‌ಗಳಲ್ಲಿ ಇರುವ ಕಸವನ್ನು ವಿಲೇವಾರಿ ಮಾಡಲು ಪಾಲಿಕೆ ಕ್ರಮ ಕೈಗೊಳ್ಳಲಿದ್ದು ಅದರ ವೆಚ್ಚವನ್ನು ಮಾಲೀಕರ ಮೇಲೆ ಹಾಕಲಾಗುವುದು ಎಂದು ತಿಳಿಸಿದರು.`ತಿಂಗಳಲ್ಲಿ ಕನ್ನಡ ಭವನ~

ಸರ್ಕಾರದ 100 ಕೋಟಿ ರೂಪಾಯಿ ಅನುದಾನದಲ್ಲಿ ನಡೆಯುವ ಕಾಮಗಾರಿಗಳು ಸಮರ್ಪಕವಾಗಿಲ್ಲ, ಕನ್ನಡ ಭವನದ ನಿರ್ಮಾಣ ಹಾಗೂ ಟೌನ್‌ಹಾಲ್ ದುರಸ್ತಿ ಕಾಮಗಾರಿ ಇನ್ನೂ ಪೂರ್ತಿಗೊಂಡಿಲ್ಲ ಎಂಬ ಗಣೇಶ ಟಗರಗುಂಟಿ ಅವರ ದೂರಿಗೆ ಉತ್ತರಿಸಿದ ಅಧಿಕಾರಿಗಳು ಕನ್ನಡ ಭವನ ಜುಲೈ 31ರೊಳಗೆ ಸಿದ್ಧವಾಗಲಿದೆ ಎಂದು ಹೇಳಿದರು.`ನಗರದಲ್ಲಿ ನಡೆಯುವ ಎಲ್ಲ ಯೋಜನೆಗಳ ಕಾಮಗಾರಿ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇರಬೇಕು, ಇದಕ್ಕೆ ಸಂಬಂಧಿಸಿ ಶೀಘ್ರದಲ್ಲೇ ಅಧಿಕಾರಿಗಳ ಸಭೆ ನಡೆಸಬೇಕು. ಕಾಮಗಾರಿಗಳ ಪ್ರತಿಯೊಂದು ಹಂತವನ್ನು ಪರಿಶೀಲಿಸಿ ಬಿಲ್ ಪಾಸ್ ಮಾಡಬೇಕು ಎಂದು ಆಯುಕ್ತರಿಗೆ ಮೇಯರ್ ಸೂಚನೆ ನೀಡಿದರು.ವಿದ್ಯುತ್ ಕಂಬಗಳು ಮುರಿದು ಬೀಳುತ್ತಿದ್ದು ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು 15 ದಿನಗಳಲ್ಲಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸಭೆ ನಡೆಸಲಾಗುವುದು ಎಂದು ಮೇಯರ್ ತಿಳಿಸಿದರು.ಉಣಕಲ್ ಕೆರೆಗೆ ಬರುತ್ತಿರುವ ಮಲಿನ ನೀರು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂಬ ರಾಜಣ್ಣ ಕೊರವಿ ಮನವಿಗೆ ಮೇಯರ್, ಹಂತಹಂತವಾಗಿ ಈ ಕೆಲಸ ಆಗುತ್ತಿದೆ ಎಂದು ಹೇಳಿದರು.32.75ರ ಅನುದಾನದಡಿ ನಡೆಯಬೇಕಾದ ಕಾಮಗಾರಿಗಳನ್ನು ಶೀಘ್ರ ಆರಂಭಿಸಲು ಸೂಚನೆ ನೀಡುವಂತೆ ಆಯುಕ್ತರಿಗೆ ಮೇಯರ್ ಸೂಚಿಸಿದರು.   ನೀರು ಸರಬರಾಜು ಅಭಿವೃದ್ಧಿ ಯೋಜನೆಯ ಪ್ರೋರೇಟಾ ಶುಲ್ಕದಲ್ಲಿ ಬಡವರಿಗೆ ವಿನಾಯಿತಿ ನೀಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನಿತ್ಯ ನೀರು ಯೋಜನೆಗೆ ಸಂಬಂಧಿಸಿ ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ತೀವ್ರಗೊಳಿಸಲು, ನೀರಿನ ಮೀಟರ್ ಯಂತ್ರಗಳ ನವೀಕರಣಕ್ಕೆ ಯಂತ್ರಗಳ ವಿತರಕರಿಂದ ಭದ್ರತಾ ಠೇವಣಿ ಇರಿಸುವಂತೆ ಮಾಡಲು, ಆರನೇ ವೇತನ ಆಯೋಗದ ಶಿಫಾರಸಿನಂತೆ ಪೌರಕಾರ್ಮಿಕರಿಗೆ ಕಳೆದ ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ವೇತನವನ್ನು ಪಾವತಿಸಲು ನಿರ್ಣಯಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry