ನಗರ ಸ್ವಚ್ಛತೆ ಹೊಣೆ ಬೆಂಗಳೂರು ಕಂಪೆನಿಗೆ

7

ನಗರ ಸ್ವಚ್ಛತೆ ಹೊಣೆ ಬೆಂಗಳೂರು ಕಂಪೆನಿಗೆ

Published:
Updated:
ನಗರ ಸ್ವಚ್ಛತೆ ಹೊಣೆ ಬೆಂಗಳೂರು ಕಂಪೆನಿಗೆ

ಹಾಸನ: ನಗರದ ಸ್ವಚ್ಛತಾ ಗುತ್ತಿಗೆ ಸಮಸ್ಯೆ ನಿವಾರಣೆಯಾಗಿದ್ದು, ಸೋಮವಾರ ನಗರಸಭೆಯ ಸಭಾಂಗಣದಲ್ಲಿ ಕರೆದಿದ್ದ ತುರ್ತು ಸಭೆಯಲ್ಲಿ 2011-12ನೇ ಸಾಲಿನ ಗುತ್ತಿಗೆಯನ್ನು ಬೆಂಗಳೂರಿನ ಮೂರು ಕಂಪೆನಿಗಳಿಗೆ ವಹಿಸಲು ಸರ್ವಾನುಮತದ ಒಪ್ಪಿಗೆ ನೀಡಲಾಯಿತು.ಟೆಂಡರ್ ಅಂತಿಮಗೊಳಿಸುವ ಉದ್ದೇಶದಿಂದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಳೆದಬಾರಿ ನಡೆದ ಸಭೆಯಲ್ಲಿ, ಹಿಂದೊಮ್ಮೆ ಗುತ್ತಿಗೆ ಪಡೆದು ಸರಿಯಾಗಿ ಕಾರ್ಯ ನಿರ್ವಹಿಸದಿರುವ ಗುತ್ತಿಗೆದಾರರಿಗೇ ಟೆಂಡರ್ ನೀಡಿದ್ದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿ ಇಡೀ ಪ್ರಕ್ರಿಯೆಯನ್ನು ಪುನಃ ನಡೆಸಲು ತೀರ್ಮಾನಿಸಲಾಗಿತ್ತು.ಸೋಮವಾರ ನಡೆದ ಸಭೆಯಲ್ಲಿ ಗುತ್ತಿಗೆದಾರರಿಗೆ ಸಂಬಂಧಿಸಿದಂತೆ ಹೆಚ್ಚಿನ ಚರ್ಚೆ ನಡೆಯಲಿಲ್ಲ. ಆದರೆ ಅವರಿಗೆ ಕೆಲವು ಷರತ್ತುಗಳನ್ನು ವಿಧಿಸುವಂತೆ ಸದಸ್ಯರು ಆಗ್ರಹಿಸಿದರು.ವಾರ್ಡ್ ನಂ.1 ರಿಂದ 10ರವರೆಗಿನ ಮೊದಲ ಪ್ಯಾಕೇಜನ್ನು ರೂ. 3,84,444 ನಮೂದಿಸಿದ ಬೆಂಗಳೂರಿನ ಕೆ.ಎನ್. ಸೌಂದಿರನ್ ಅವರಿಗೆ, ವಾರ್ಡ್ ಸಂಖ್ಯೆ 11 ರಿಂದ 20ರ ವರೆಗಿನ ಎರಡನೇ ಪ್ಯಾಕೇಜನ್ನು ರೂ. 3,69,999 ನಮೂದಿಸಿದ ಬೆಂಗಳೂರಿನ ಆರ್.ವೆಂಕಟೇಶ್ ಹಾಗೂ ವಾರ್ಡ್ 21 ರಿಂದ 30ರವರೆಗಿನ ಮೂರನೇ ಪ್ಯಾಕೇಜನ್ನು 2,99,991 ರೂಪಾಯಿ ದರ ನಮೂದಿಸಿದ ಬೆಂಗಳೂರಿನ ಎಂ.ಎನ್. ಮಾಯಣ್ಣಗೌಡ ಅವರಿಗೆ ನೀಡಲು ಸಭೆ ಅನುಮೋದನೆ ನೀಡಿತು.ಈಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಯಶವಂತ್, ಆಯವ್ಯಯದಲ್ಲಿ ನಗರ ಸ್ವಚ್ಚತೆಗೆ ನಿಗದಿ ಮಾಡಿದ ಹಣದ ಪ್ರಕಾರದಲ್ಲೇ ಟೆಂಡರ್ ಕರೆಯಲಾಗಿದೆಯೇ ಅಥವಾ ಅದಕ್ಕಿಂತ ಹೆಚ್ಚು ಹಣ ನೀಡಲು ಮುಂದಾಗಿದೆಯೇ ಎಂದು ಪ್ರಶ್ನಿಸಿದರಲ್ಲದೆ, ಈ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದರು.  ಮಾಹಿತಿಯನ್ನು ಒದಗಿಸುವುದಾಗಿ ತಿಳಿಸಿದ ಅಧ್ಯಕ್ಷರು ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೂ ಸರಿಪಡಿಸಲಾಗುವುದು ಎಂದರು.ಮಾಜಿ ಅಧ್ಯಕ್ಷ ಸಯ್ಯದ್ ಅಕ್ಬರ್ ಮಾತನಾಡಿ, `ಗುತ್ತಿಗೆ ನೀಡಲು ಆಕ್ಷೇಪವಿಲ್ಲ. ಆದರೆ ಹಾಕಿರುವ ನಿಬಂಧನೆಗಳನ್ನು ಉಲ್ಲಂಘಿ ಸಬಾರದು ಎಂದು ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದರು.

ಗುತ್ತಿಗೆದಾರರಿಗೆ ಹಾಕಿರುವ ನಿಬಂಧನೆಗಳನ್ನು ಅಧಿಕಾರಿಗಳು ಸಭೆಯಲ್ಲಿ  ಓದಿ ತಿಳಿಸಿದರು.ಮೂವರು ಗುತ್ತಿಗೆದಾರರಿಗೆ ಪ್ರತ್ಯೇಕ ಬಣ್ಣಗಳ ಸಮವಸ್ತ್ರ ನೀಡಬೇಕು. ಇದರಿಂದ ನಿಜವಾಗಿ ಎಷ್ಟು ಕಾರ್ಮಿಕರಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಟ್ರ್ಯಾಕ್ಟರ್ ಮೇಲೆ ಅದು ಯಾವ ವಾರ್ಡ್‌ಗೆ ಸೇರಿದ್ದು ಎಂಬ ಬಗ್ಗೆ ಫಲಕ ಹಾಕಬೇಕು. ಸ್ವಚ್ಛತೆ ಮಾಡಿರುವ ಬಗ್ಗೆ ಆಯಾ ವಾರ್ಡ್‌ನ ಕೆಲವು ಮನೆಗಳಿಂದ ಸಹಿ ಪಡೆಯುವ ವ್ಯವಸ್ಥೆಯನ್ನು ಜಾರಿಮಾಡಬೇಕು ಎಂದು ಸದಸ್ಯ ಡಾ. ಅನಿಲ್ ಕುಮಾರ್ ಸಲಹೆ ನೀಡಿದರು.ಆದರೆ ಈ ಎಲ್ಲ ಕಾನೂನು, ನಿಬಂಧನೆಗಳು ಕಡತಗಳಲ್ಲೇ ಉಳಿಯುತ್ತವೆ, ನಿಜವಾಗಿಯೂ ಅವುಗಳನ್ನು ಜಾರಿಗೆ ತಂದರೆ ನಾಗರಿಕರ ಪರವಾಗಿ ಅಧ್ಯಕ್ಷರಿಗೆ ಸನ್ಮಾನ ಮಾಡುತ್ತೇವೆ ಎಂದು ಮಾಜಿ ಅಧ್ಯಕ್ಷ ಕೆ.ಟಿ. ಪ್ರಕಾಶ್ ಅಧ್ಯಕ್ಷ ಶಂಕರ್ ಅವರನ್ನು ಛೇಡಿಸಿದರು.ಎಲ್ಲೆಲ್ಲಿ ತೊಟ್ಟಿಗಳನ್ನಿಡಬೇಕು, ಯಾವ ರೀತಿ ಸ್ವಚ್ಛತೆಯ ಕಾರ್ಯ ನಡೆಸಬೇಕು ಎಂಬ ವಿಚಾರಗಳ ಬಗ್ಗೆ ಸದಸ್ಯರೇ ಚರ್ಚಿಸಿ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಶಾಸಕ ಎಚ್.ಎಸ್.. ಪ್ರಕಾಶ್ ಸಲಹೆ ನೀಡಿದರು.ಅಧ್ಯಕ್ಷರಿಂದ ತಾರತಮ್ಯ

ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್ ಎಲ್ಲ ಸದಸ್ಯರನ್ನು ಹಾಗೂ ವಾರ್ಡ್‌ಗಳನ್ನು ಸಮಾನವಾಗಿ ಪರಿಗಣಿಸಲುತ್ತಿಲ್ಲ, ಅವರು ಕೆಲವೇ ವಾರ್ಡ್‌ಗಳಿಗೆ ಸೀಮಿತವಾಗಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಆರೋಪಿಸಿದರು.

ಸಭೆಯ ಆರಂಭದಲ್ಲೇ ಈ ಆರೋಪ ಮಾಡಿದ ಕೆ.ಟಿ. ಪ್ರಕಾಶ್, `ಕೆಲವು ಪ್ರೆದೇಶಗಳಿಗೆ ಮಾತ್ರ ತಾವು ಖುದ್ದಾಗಿ ಹೋಗಿ ಶುಚಿತ್ವದ ಕಾರ್ಯ ಮಾಡಿಸುತ್ತೀರಿ. ಈಚೆಗೆ ಮಹಾರಾಜಾ ಪಾರ್ಕ್‌ನಲ್ಲಿ ಬಸವ ಮೂರ್ತಿ ಸ್ಥಾಪಿಸುವಾಗಲೂ ಕೆಲವೇ ಕೆಲವರಿಗೆ ಮಾಹಿತಿ ನೀಡಿದ್ದೀರಿ, ಕೆಲವು ವಾರ್ಡ್‌ಗಳಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಆದರೆ ಕ್ಯೂರಿಂಗ್ ಸರಿಯಾಗಿ ನಡೆಯುತ್ತಿಲ್ಲ. ಕೆಲವರು ಕೆಲಸ ಮಾಡದೆಯೆ ಬಿಲ್ ಕೊಟ್ಟಿದ್ದಾರೆ, ಪರಿಶೀಲನೆ ಮಾಡದೆಯೇ ಅಂಥವರಿಗೆ ಹಣವನ್ನೂ ನೀಡಿದ್ದೀರಿ, ಲೆಕ್ಕಪತ್ರ ಮಂಡನೆಯಾಗುವ ಸಂದರ್ಭದಲ್ಲಿ ಈ ಬಗ್ಗೆ ದಾಖಲೆಸಹಿತ ಮಾತನಾಡುತ್ತೇನೆ~ ಎಂದರು.ಸುಳ್ಳು ಬಿಲ್ ನೀಡಿದ ಮಾಹಿತಿ ಇದ್ದರೆ ಕೊಡಿ, ಹಣ ನೀಡಿದ ಅಧಿಕಾರಿಯನ್ನು ವಜಾ ಮಾಡಲು ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇನೆ ಎಂದು ಅಧ್ಯಕ್ಷ  ಸಿ.ಆರ್. ಶಂಕರ್ ನುಡಿದರು.ಅಧಿಕಾರಿಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಯಶವಂತ್, `ನಗರಸಭೆಯಲ್ಲಿ ಯಾವ ಅಧಿಕಾರಿ ಎಲ್ಲಿ ಕೂರುತ್ತಾರೆ ಎಂಬುದೇ ಜನರಿಗೆ ಗೊತ್ತಾಗುತ್ತಿಲ್ಲ. ಅವರಿಗೆ ವಾಕಿಟಾಕಿ ನೀಡಲಾಗಿತ್ತು, ಅದು ಬಳಕೆಯಾಗುತ್ತಿಲ್ಲ, ಸಿಬ್ಬಂದಿ ಯಾರೆಂದು ಗೊತ್ತಾಗಬೇಕೆಂಬ ಉದ್ದೇಶದಿಂದ ಅವರಿಗೆ ಗುರುತಿನ ಪತ್ರನೀಡಿ ಅದನ್ನು ಧರಿಸಿಕೊಂಡೇ ಆಬರಬೇಕೆಂಬ ಸೂಚನೆ ನೀಡಲಾಗಿತ್ತು. ಆದರೆ ಯಾರೊಬ್ಬರೂ ಅದನ್ನು ಧರಿಸುತ್ತಿಲ್ಲ. ಒಟ್ಟಾರೆಯಾಗಿ ಇಡೀ ವ್ಯವಸ್ಥೆ ಕೆಟ್ಟು ಹೋಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.ಜಾಗದ ಕೊರತೆಯಿಂದ ಹೀಗಾಗಿದೆ. ನಗರಸಭೆಗೆ ಹೊಸ ಕಟ್ಟಡ ನಿರ್ಮಿಸಲು 8.5ಕೋಟಿ ರೂಪಾಯಿಯ ಪ್ರಸ್ತಾವನೆ ಕಳುಹಿಸಲಾಗಿದ್ದು, ಮಂಜೂರಾದರೆ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ. ಉಳಿದಂತೆ ವಾಕಿಟಾಕಿ, ಗುರುತಿನ ಪತ್ರ ಮುಂತಾದವುಗಳನ್ನು ಕೂಡಲೇ ಜಾರಿ ಮಾಡಲಾಗುವುದು ಎಂದು ಶಂಕರ್  ನುಡಿದರು.

ಮಂಜು ಬಂಗಾರಿ, ಮಾಜಿ ಅಧ್ಯಕ್ಷೆ ನೇತ್ರಾವತಿ, ಪ್ರಸನ್ನಕುಮಾರ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.ಹಾಸನಾಂಬಾ ಜಾತ್ರೆ: ಪೊಲೀಸರ ವರ್ತನೆಗೆ ಆಕ್ಷೇಪ

ಹಾಸನಾಂಬಾ ದೇವಸ್ಥಾನದ ಜಾತ್ರೆ ಸಂದರ್ಭದಲ್ಲಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ನಗರಸಭೆಯಲ್ಲೂ ಆಕ್ಷೇಪ ವ್ಯಕ್ತವಾಯಿತು.ಈ ವಿಚಾರ ಪ್ರಸ್ತಾಪಿಸಿದ ಯಶವಂತ್, `ಉಪ ವಿಭಾಗಾಧಿಕಾರಿ ಎಲ್ಲ ಸದಸ್ಯರನ್ನೂ ಆಹ್ವಾನಿಸಿದ್ದರು. ಆದರೆ ಅಲ್ಲಿಗೆ ಹೋದರೆ ಪೊಲೀಸರು ಸದಸ್ಯರನ್ನು ಕೇವಲವಾಗಿ ಕಂಡು ಅವಮಾನಿಸಿದರು. ಅಧ್ಯಕ್ಷರೇ ಅಸಹಾಯಕರಾಗುವಂತೆ ಮಾಡಿದ್ದು ದುರಂತ. ಅಲ್ಲಿ ಎಲ್ಲ ವ್ಯವಸ್ಥೆ ಮಾಡುವುದು, ಕಸ ಎತ್ತುವುದು ಮತ್ತಿತರ ವಿಚಾರಗಳಿಗೆ ನಗರಸಭೆ ಬೇಕು ಆದರೆ ಸದಸ್ಯರು ಹೋದರೆ ಅವಮಾನಿಸುವುದು. ಇದನ್ನು ಸಹಿಸಲು ಸಾಧ್ಯವಿಲ್ಲ~ ಎಂದರು.ಈ ಬಗ್ಗೆ ಸ್ಪಷ್ಟನೆ ನೀಡಲು ಹೋದ ಶಂಕರ್ `ನಾನು ಶಕ್ತಿ ಮೀರಿ ಶ್ರಮಿಸಿ ಎಲ್ಲ ಸದಸ್ಯರಿಗೂ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದೇನೆ~ ಎಂದರು ಈ ಬಗ್ಗೆ ಚರ್ಚೆ ಸ್ವಲ್ಪ ತೀವ್ರಗೊಂಡಾಗ, `ನಾನು ಪೊಲೀಸರೊಡನೆ ವಾಗ್ವಾದಕ್ಕೆ ಇಳಿದರೆ ಅವರು ಮಹಿಳಾ ಸದಸ್ಯರ ಮೇಲೆ ಲಾಠಿ ಚಾರ್ಜ್ ಮಾಡುವ ಸಾಧ್ಯತೆ ಇತ್ತು~ ಎಂದರು. ಕೊನೆಗೆ ಇದು ಜಿಲ್ಲಾಡಳಿತಕ್ಕೆ ಸಂಬಂದಿಸಿದ ವಿಚಾರವಾದ್ದರಿಂದ ಚರ್ಚೆ ಬೇಡ ಎಂದು ವಿಷಯಕ್ಕೆ ತೆರೆ ಎಳೆಯಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry