ನಗು ತರಿಸಿದರೆ ಹನಿಗವಿತೆ ಸಾರ್ಥಕ

7

ನಗು ತರಿಸಿದರೆ ಹನಿಗವಿತೆ ಸಾರ್ಥಕ

Published:
Updated:
ನಗು ತರಿಸಿದರೆ ಹನಿಗವಿತೆ ಸಾರ್ಥಕ

ಬೆಂಗಳೂರು: `ಇಂದಿನ ಜನರು ಮಾತನಾಡುವುದನ್ನೇ ಮರೆತಿದ್ದಾರೆ. ಅದಕ್ಕಿಂತ ಮುಖ್ಯವಾಗಿ ನಗು ಜನರಿಂದ ಮರೆಯಾಗಿದೆ. ಹೀಗಾಗಿ ನಗು ಮರೆತವರ ಮುಖಗಳ ಮೇಲೆ ನಗುವಿನ ಗೆರೆ ಮೂಡಿಸಿದರೆ ಹನಿಗವಿತೆ ಸಾರ್ಥಕ~ ಎಂದು ಹನಿಗವಿ ಡುಂಡಿರಾಜ್ ಅಭಿಪ್ರಾಯಪಟ್ಟರು.



ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ `ಡುಂಡಿರಾಜ್ ಅವರೊಂದಿಗೆ ಒಂದು ಸಂಡೆ~ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.



`ಈಗಿನ ಆಧುನಿಕ ಯುಗದಲ್ಲಿ ಜನರಿಗೆ ಯಾವುದಕ್ಕೂ ಸಮಯವಿಲ್ಲ. ಅದಕ್ಕಾಗಿ ಜನರು ಯಾವುದನ್ನೇ ಆಗಲಿ ಶಾರ್ಟ್ ಅಂಡ್ ಸ್ವೀಟಾಗಿ ಬೇಕು ಎಂದು ಕೇಳುತ್ತಾರೆ. ಆದ್ದರಿಂದ, ಹನಿಗವಿತೆಗಳು ಇಂದು ಪ್ರಸಿದ್ಧವಾಗುತ್ತಿವೆ~ ಎಂದರು.



`ಯಾವುದೇ ಒಂದು ಕೃತಿಯನ್ನು ಬರೆಯುವುದೆಂದರೆ, ಅಷ್ಟು ಸುಲಭವಲ್ಲ. ಕೃತಿ ಅಂತಿಮವಾಗಿ ಓದುಗನಿಗೆ ಹಿಡಿಸಬೇಕು. ಹೀಗಾದಾಗ ಮಾತ್ರ ಕೃತಿಗೆ ಮೌಲ್ಯ ದೊರೆಯುತ್ತದೆ~ ಎಂದು ಅವರು ನುಡಿದರು.



`ನಾನು ಮೊದಲು ಬರೆದ ಸಾಹಿತ್ಯ ಪ್ರಕಾರ ನಾಟಕ. ನಂತರ ಹನಿಗವನಗಳನ್ನು ಬರೆಯಲು ಆರಂಭಿಸಿದೆ. ನನ್ನ ಬರವಣಿಗೆಗೆ ಸ್ನೇಹಿತರು ಪ್ರೋತ್ಸಾಹ ನೀಡಿದರು. ಹೀಗಾಗಿ ನಾನೊಬ್ಬ ಹನಿಗವಿಯಾಗಲು ಸಾಧ್ಯವಾಯಿತು~ ಎಂದರು.



`ನಾನು ಬರೆದ ಮೊದಲ ನಾಟಕವನ್ನು ಸುಮ್ಮನೆ ತೆಲುಗು ಅನುವಾದವೆಂದು ಬರೆದಿದ್ದೆ. ಆದರೆ, ಅದಕ್ಕೆ ಮೂಲಕೃತಿ ಇರಲಿಲ್ಲ. ನಾನೇ ಬಹುಮಾನ ಬರಲಿ ಎಂದು ಆ ರೀತಿ ಬರೆದಿದ್ದೆ. ಕೊನೆಗೆ ಆ ಕೃತಿಗೇ ಬಹುಮಾನ ಬಂದು ತುಂಬ ಸಂತೋಷವಾಗಿತ್ತು~ ಎಂದರು.



`ಯು.ಆರ್.ಅನಂತಮೂರ್ತಿ ಅವರ ಪ್ರಕಾರ ಸಂಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಒಂದು ರೀತಿಯ ಉಡಾಫೆಯ ಅವಶ್ಯಕತೆಯಿದೆ. ಹಾಗೆಯೇ ನನ್ನಲ್ಲೂ ಒಂದು ಉಡಾಫೆಯಿದೆ. ನಾನು ವೈಎನ್‌ಕೆ ಅವರ ಶಿಷ್ಯ. ಆದ್ದರಿಂದ ಅವರ ಪ್ರಭಾವ ನನ್ನ ಮೇಲಿದೆ~ ಎಂದು ಹೇಳಿದರು.



ತಮ್ಮ ಹೆಸರಿನ ಬಗ್ಗೆ ಹೇಳಿದ ಅವರು, `ಡುಂಡಿ ಅಂದರೆ ಗಣೇಶನ ಹೆಸರು. ಅಲ್ಲದೇ ಗಣೇಶನೇ ನನ್ನ ಸ್ಫೂರ್ತಿಯಾಗಿದ್ದಾನೆ. ಏಕೆಂದರೆ, ಗಣೇಶ ಬೇರೆ ದೇವರಂತಲ್ಲ. ಎಷ್ಟೇ ಹಾಸ್ಯ ಮಾಡಿದರೂ ಇದುವರೆಗೂ ಕೋಪಗೊಳ್ಳದ ದೇವರೆಂದರೆ, ಅದು ಗಣೇಶ ಮಾತ್ರ. ಡುಂಡಿರಾಜ್ ಹೆಸರಿನ ಬಗ್ಗೆ ನನಗೆ ಪ್ರೀತಿ ಇದೆ~ ಎಂದು ಅವರು ನುಡಿದರು.



ಮಾತುಕ(ವಿ)ತೆಯ ಒಂದಿಷ್ಟು ಝಲಕ್


`ಕೃತಿ ಬರೆಯುವುದು ಎಂದರೆ,

ಅದು ಹೆರಿಗೆಯ ಹಾಗೆ...   ಏನಂತಿ?

ಹಾಗಾದರೆ, ನೀವು ಸಾಹಿತಿಯಲ್ಲ... ಬಾಣಂತಿ~

`ಹೆಣ್ಣುಮಕ್ಕಳಿಗೆ ಗಂಡ ಸದಾ ತಮ್ಮನೇ ಹೊಗಳುತ್ತಿರಬೇಕು ಎಂಬ ಆಸೆ ಇರುತ್ತದೆ. ಆಗ, ಗಂಡ ಏನಾದರೂ ಬೇರೆಯವರನ್ನು ಅವಳ ಮುಂದೆ ಹೊಗಳಿದರೆ, ಭೂಮಿ ಸ್ಫೋಟವಾಗುತ್ತದೆ

ಸದ್ದಿಲ್ಲದೆ~

`ಆಹಾ, ಸುಂದರ ಯುವತಿ,

ನೀ ಆಗಬಾರದೆ, ನನ್ನ ಹೆಂಡತಿಯ ಸವತಿ~

`ತೆಗೆಯಿರಿ ಇದು ಯಾವ ಸೀಮೆಯ ಒಪ್ಪಂದ?

ನಮ್ಮ ಬೀಜಗಳೇನು ಇವರಪ್ಪಂದ~

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry