ನಗು ನನಗೂ ರಕ್ಷೆ... ಪರಿಹಾರ ಬಯಸಿ ಬಂದವರಿಗೂ ಶ್ರೀರಕ್ಷೆ

7

ನಗು ನನಗೂ ರಕ್ಷೆ... ಪರಿಹಾರ ಬಯಸಿ ಬಂದವರಿಗೂ ಶ್ರೀರಕ್ಷೆ

Published:
Updated:
ನಗು ನನಗೂ ರಕ್ಷೆ... ಪರಿಹಾರ ಬಯಸಿ ಬಂದವರಿಗೂ ಶ್ರೀರಕ್ಷೆ

ಮಂಗಳೂರು: `ನಗು ನನ್ನಲ್ಲಿರುವ ಪ್ರಮುಖ ಅಸ್ತ್ರ. ನಗು ನನಗೂ ರಕ್ಷೆ;  ಸಮಸ್ಯೆಯ ಮೂಟೆ ಹೊತ್ತು ನನ್ನ ಬಳಿಗೆ ಬಂದವರಿಗೂ ಶ್ರೀರಕ್ಷೆ~!....- ಇದು ನಿಯೋಜಿತ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ತಮ್ಮ ನಗುವಿನ ರಹಸ್ಯದ ಬಗ್ಗೆ ಸ್ವತಃ ನೀಡುವ ವಿವರಣೆ!ಆ ನಗುವೇ ಇದೀಗ ಅವರನ್ನು ರಾಜ್ಯದ ಮುಖ್ಯಮಂತ್ರಿ ಪಟ್ಟದವರೆಗೆ ಏರಿಸಿದೆ ಎಂದರೂ ಅತಿಶಯೋಕ್ತಿಯಲ್ಲ.`ಯಾವುದೇ ಜವಾಬ್ದಾರಿ ಸ್ಥಾನದಲ್ಲಿರುವವರು ತಾವೂ ನಗಬೇಕು; ಇತರರನ್ನೂ ನಗಿಸಬೇಕು. ಆಗ ಸಮಾಜ ನಗುವಿನ ಭಾಗಕ್ಕೆ ಹೋಗಬಹುದು. ಸಾಮಾಜಿಕ ವ್ಯವಸ್ಥೆಯ ಜತೆ ಸೇರಿಕೊಂಡಾಗ ಉದ್ವೇಗ, ಆವೇಶ, ಪ್ರತಿರೋಧಾತ್ಮಕ ವಿಚಾರದಿಂದ ದೂರ ಇರಬೇಕಾದುದು ಅವಶ್ಯ. ವೈಯುಕ್ತಿಕ ಬದುಕಿನಲ್ಲಿ ನೂರಾರು ಅಡೆತಡೆ ಬಂದಾಗ ಅದನ್ನು ಮರೆತು ನಗುವಿನ ಮೂಲಕ ಸಾರ್ವಜನಿಕರ ಜತೆ ಸೇರುವ ಪ್ರಯತ್ನ ಮಾಡಿದ್ದೇನೆ. ಅದರಲ್ಲಿ ಯಶಸ್ವಿಯೂ ಆಗಿದ್ದೇನೆ~...`ಅಹವಾಲು ಹಿಡಿದು ಬಂದವರನ್ನು ನಗು ಮುಖದಲ್ಲಿ ಸ್ವಾಗತಿಸುತ್ತೇನೆ. ನನ್ನ ಜೀವನದಲ್ಲಿ ಅದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ~ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಡಿ.ವಿ.ಎಸ್. ಹೇಳಿಕೊಂಡಿದ್ದರು.ಸುಳ್ಯ ತಾಲ್ಲೂಕಿನ ಮಂಡೆಕೋಲು ಎಂಬ ಕುಗ್ರಾಮದಲ್ಲಿ ಹುಟ್ಟಿ ಬಂದ ಡಿ.ವಿ.ಎಸ್. ರಾಜಕೀಯ ಶಕ್ತಿಯಾಗಿ ಬೆಳೆದ ಹಿನ್ನೆಲೆಗೆ ದೊಡ್ಡ ಸಾಧನೆಯೇ ಇದೆ. ಕೇರಳ-ಕರ್ನಾಟಕದ ಗಡಿ ಭಾಗವಾದ ಮಂಡೆಕೋಲು ಮಳೆಗಾಲದಲ್ಲಿ ಅಕ್ಷರಶಃ ದ್ವೀಪವಾಗಿ ಪರಿವರ್ತನೆಯಾಗುತ್ತದೆ. ಹತ್ತಿರದ ಪೇಟೆ ಸುಳ್ಯದ ಸಂಪರ್ಕಕ್ಕೆ ತೂಗುಸೇತುವೆಯೇ ಗತಿ. ಕೃಷಿ ಆಧಾರಿತ ಬದುಕಿಗೆ ಒಗ್ಗಿಗೊಂಡ ಈ ಗ್ರಾಮದ ದೇವರಗುಂಡ ಮನೆತನದ ವೆಂಕಪ್ಪ ಗೌಡ- ಕಮಲ ದಂಪತಿಯ ಇಬ್ಬರು ಪುತ್ರಿಯರ, ನಾಲ್ವರು ಪುತ್ರರಲ್ಲಿ ಸದಾನಂದ ಗೌಡ ಮೂರನೆಯವರು. ಅಕ್ಕ, ಅಣ್ಣ, ಡಿ.ವಿ.ಎಸ್. ಮತ್ತು ತಮ್ಮಂದಿರು ಮತ್ತು ತಂಗಿ ಅವರ ಕುಟುಂಬ.ವೆಂಕಪ್ಪ ಗೌಡ ಕುಟುಂಬಕ್ಕೆ ಹೇಳಿಕೊಳ್ಳುವಂತಹ ಆಸ್ತಿ, ಕೃಷಿ ಭೂಮಿ ಇರಲಿಲ್ಲ. ಇದ್ದ ಸ್ವಲ್ಪ ಭೂಮಿಯಲ್ಲೇ ಕೃಷಿ ಮಾಡಿ ಕಷ್ಟದಲ್ಲಿ ಜೀವನ ಸಾಗಿಸಿ, ಮಕ್ಕಳನ್ನು ಸಾಕ್ದ್ದಿದರು. ವೆಂಕಪ್ಪ ಗೌಡ ಅವರು ರಸ್ತೆ ದುರಸ್ತಿಯ ಗ್ಯಾಂಗ್ ವರ್ಕರ್ ಸಹ ಆಗಿದ್ದರು. ಬೆಳಿಗ್ಗೆ ಮನೆಯಿಂದ ಹೊರಟರೆ ಕೆಲಸ ಮಗಿಸಿ ರಾತ್ರಿ ಮರಳುತ್ತಿದ್ದರು.ಅವರ ಈ ದುಡಿಮೆಯ ಆದಾಯವೇ ಮನೆಗೆ ಪ್ರಮುಖ ಆಧಾರವಾಗಿತ್ತು. ದಂಪತಿ ಪರಿಶ್ರಮದಿಂದಲೇ ಮಕ್ಕಳನ್ನು ಸಲಹಿದರು. ಮಕ್ಕಳೆಲ್ಲರಿಗೂ ವಿದ್ಯೆ ಕೊಡಿಸಬೇಕು ಎನ್ನುವುದು ಅವರ ಕನಸಾಗಿತ್ತು.`ಅಂದಿನ ದಿನಗಳಲ್ಲಿ ಭಾರೀ ಕಷ್ಟದಲ್ಲಿಯೇ ಶಾಲೆಗೆ ಹೋಗುತ್ತಿದ್ದೆವು. ಐದನೇ ತರಗತಿವರೆಗೆ ಪಂಜಿಕಲ್ಲು ಎಂಬಲ್ಲಿ(ಗಡಿ ಭಾಗದ ಕೇರಳದ ಶಾಲೆ) ಕಲಿತು ನಂತರ ಸುಳ್ಯದಲ್ಲಿ ಹೈಸ್ಕೂಲ್ ಸೇರಿದ್ದೆ. ನಮ್ಮನ್ನು ಸಮಾಜ ಗುರುತಿಸುವಂತಹ ವ್ಯಕ್ತಿಯಾಗಿಸಬೇಕು. ಸಾರ್ವಜನಿಕ ಶಕ್ತಿಯಾಗಿ ಬೆಳೆಸಬೇಕು ಎಂಬ ಉದ್ದೇಶದಲ್ಲಿ ನಮಗೆ ಶಿಕ್ಷಣ ಕೊಡಿಸಿದ್ದರಿಂದ ನಾವು ಹಂತ ಹಂತವಾಗಿ ಮೇಲೆ ಹೋಗುವಂತಾಯಿತ.ಶಾಲಾ ದಿನಗಳಲ್ಲಿ ಮನೆಯಲ್ಲಿ ವಾರಕ್ಕೆ ಒಂದು ರೂಪಾಯಿ ಕೊಡುತ್ತಿದ್ದರು. ಅದರಲ್ಲಿ 90 ಪೈಸೆ ಶಾಲೆಗೆ ಹೋಗಿಬರಲು ಖರ್ಚಾಗುತ್ತಿತ್ತು. 10 ಪೈಸೆಯಷ್ಟೇ ಉಳಿಯುತ್ತಿತ್ತು~ ಎಂದು ಡಿ.ವಿ.ಎಸ್ ತಮ್ಮ ಬಾಲ್ಯವನ್ನು ಹಲವು ಸಂದರ್ಭಗಳಲ್ಲಿ ನೆನಪಿಸಿಕೊಂಡದ್ದಿದೆ. ಬೆಳೆಯುವ ಹಂತದಲ್ಲೇ ಸದಾನಂದ ಅವರಲ್ಲಿ ನಾಯಕತ್ವದ ಗುಣಗಳಿದ್ದವು ಎನ್ನುವುದನ್ನು ಸಹಪಾಠಿಗಳೇ ಹೇಳುತ್ತಾರೆ.ಒಂಬತ್ತನೇ ತರಗತಿಯಲ್ಲಿ ಶಾಲಾ ಉಪ ನಾಯಕ (ಎಎಸ್‌ಪಿಎಲ್), 10ನೇ ತರಗತಿಯಲ್ಲಿ ಎಸ್‌ಪಿಎಲ್ (ಶಾಲಾ ವಿದ್ಯಾರ್ಥಿ ನಾಯಕ) ಆಗುವ ಅವಕಾಶ ಅವರಿಗೆ ಸಿಕ್ಕಿತ್ತು. ಆ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದ ಅವರು ಆಗಲೇ ಅಚ್ಚುಮೆಚ್ಚಿನ ವಿದ್ಯಾರ್ಥಿ ನಾಯಕ ಆಗಿದ್ದರು ಎನ್ನುವುದು ಹಳೆಯ ಮಿತ್ರರ ನೆನಪು.

ಶಾಲೆಯಲ್ಲಿ `ಶಾಸ್ತ್ರಿ~: ಡಿ.ವಿ.ಸದಾನಂದ ಗೌಡ ಅವರನ್ನು ಆಪ್ತ ಬಳಗ `ಡಿ.ವಿ~ ಎಂದೇ ಗುರುತಿಸುವುದು. ಆದರೆ, ಹೈಸ್ಕೂಲಿನಲ್ಲಿ ನನ್ನನ್ನು ಎಲ್ಲರೂ `ಶಾಸ್ತ್ರಿ~ ಎಂದೇ ಕರೆಯುತ್ತಿದ್ದರು. ಆಗ ನಾನು ಕುಳ್ಳಗಿದ್ದೆ. ನಿತ್ಯ `ಖದ್ದರ್~ ಟೋಪಿ ಧರಿಸುತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ಡಿ.ವಿ. ಹೇಳಿಕೊಂಡಿದ್ದರು.`ಸಂಘ ಸಂಸ್ಕಾರದ ಪ್ರೇರಣೆ~: ಸಂಘ-ಸಂಸ್ಕಾರದಲ್ಲಿ ಬೆಳೆದವರು ಡಿವಿಎಸ್. ಶಾಲಾ ದಿನಗಳಲ್ಲೇ ಅವರ ಆರ್‌ಎಸ್‌ಎಸ್ ಶಾಖೆಗೆ ನಿತ್ಯ ಹೋಗುತ್ತಿದ್ದರು. ಆರ್‌ಎಸ್‌ಎಸ್ ಸಂಪರ್ಕ- ಸಂಘದ ಸಂಸ್ಕಾರ ಅವರ ಜೀವನದಲ್ಲಿ ಮಹತ್ತರ ಬದಲಾವಣೆ ಕಾರಣವಾಗಿದೆ.ಆ ದಿನಗಳಲ್ಲಿ ಜನಸಂಘದ ಅಧ್ಯಕ್ಷರಾಗಿದ್ದ ಕರಿಯಪ್ಪು ಗೌಡ ಮತ್ತು ಕಾರ್ಯದರ್ಶಿಯಾಗಿದ್ದ ಡಾ. ಕುಸುಮಾಧರ ಗೌಡ(ಸದ್ಯ ಅಮೆರಿಕಾದಲ್ಲಿದ್ದಾರೆ) ಜತೆ ಡಿವಿಎಸ್ ಜನಸಂಘದ ಚಟುವಟಿಕೆಗೆ ಓಡಾಡುತ್ತಿದ್ದರು. ಅವರ ಜೀಪಿನಲ್ಲಿ ಕುಳಿತು ಭಿತ್ತಿಪತ್ರ ಅಂಟಿಸಲು ತೆರಳುತ್ತಿದ್ದರು. ಮರಗಳಿಗೆ ಹತ್ತಿ, ಗೋಡೆಗೆ ಪೋಸ್ಟರ್ ಅಂಟಿಸುತ್ತಾ ಬೆಳೆದ ಅವರಿಗೆ ಮನೆಯವರ ಪೂರ್ಣ ಪ್ರೋತ್ಸಾಹವೂ ಇತ್ತು ಎನ್ನುವುದು ಗಮನಾರ್ಹ.ಸಾಧನೆ ಹಾದಿಯಲ್ಲಿ...: ಸಣ್ಣ ಪ್ರಾಯದಲ್ಲೇ ಡಿವಿಎಸ್, ಹುಟ್ಟೂರಿನ ಮಂಡೆಕೋಲು ಸೊಸೈಟಿಯಲ್ಲಿ ಅಧ್ಯಕ್ಷರಾಗಿ 6 ವರ್ಷ ಆಡಳಿತ ನಡೆಸಿದ್ದರು. 28ರ ಹರೆಯದಲ್ಲಿ ಪಿಎಲ್‌ಡಿ (ಭೂ ಅಭಿವೃದ್ಧಿ) ಬ್ಯಾಂಕ್‌ನ ಅಧ್ಯಕ್ಷರಾದರು. ಈ ಅವಧಿಯಲ್ಲಿ ಇಡೀ ರಾಜ್ಯದಲ್ಲೇ ಸಾಲ ವಸೂಲಿಯಲ್ಲಿ ಪಿಎಲ್‌ಡಿ ಬ್ಯಾಂಕ್ ನಂಬರ್ ವನ್ ಆಗಿತ್ತು ಎನ್ನುವುದು ಡಿವಿಎಸ್ ಅವರ ಅವಧಿಯ ದೊಡ್ಡ ಸಾಧನೆ. ಕ್ಯಾಂಪ್ಕೊ ನಿರ್ದೇಶಕ, ಎಸ್‌ಕೆಡಿಸಿಸಿ (ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್) ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೂ ಡಿವಿಎಸ್ ಅವರ ಬೆಳವಣಿಗೆಗೆ ಪೂರಕವಾಯಿತು. ಜವಾಬ್ದಾರಿಯನ್ನು ಬದ್ಧತೆಯಿಂದ ನಿಭಾಯಿಸುವುದನ್ನು ಡಿವಿಎಸ್ ಆಗಲೇ ಅರಗಿಸಿಕೊಂಡಿದ್ದರು.ಎಪಿಪಿ ಹುದ್ದೆ: 1977ರಲ್ಲಿ ಸಕ್ರಿಯ ರಾಜಕಾರಣಕ್ಕೆ ಇಳಿದ ಡಿವಿಎಸ್, ಅದಕ್ಕೂ ಮೊದಲು ಸರ್ಕಾರಿ ಹುದ್ದೆಯಲ್ಲಿದ್ದರು ಎನ್ನುವುದೇ ವಿಶೇಷ. ಕಾನೂನು ಪದವಿ ಬಳಿಕ ಪುತ್ತೂರಿನಲ್ಲಿ ಯು.ಪಿ.ಶಿವರಾಮೇ ಗೌಡ ಅವರ ಕಚೇರಿಯಲ್ಲಿ `ಜೂನಿಯರ್~ ಆಗಿ ವಕೀಲ ವೃತ್ತಿಗೆ ಸೇರಿದ ಡಿವಿಎಸ್, 3 ವರ್ಷ ಬಳಿಕ ಸಹಾಯಕ ಸರ್ಕಾರಿ ಅಭಿಯೋಜಕ (ಎಪಿಪಿ) ಆದರು. ಶಿರಸಿ ಸಿಜೆಎಂ ಕೋರ್ಟ್ ಸೇರಿದರು. ಎಪಿಪಿ ಆಗಿ ಒಂದೂವರೆ ವರ್ಷ ಕೆಲಸ ಮಾಡಿದರು.1980ರಲ್ಲಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಜನತಾ ಪರಿವಾರದಿಂದ ಹೊರಬಂದು ಭಾರತೀಯ ಜನತಾ ಪಕ್ಷ ಸ್ಥಾಪಿಸಿದ್ದರು. ಆ ದಿನಗಳಲ್ಲಿ ಪುತ್ತೂರಿನ ಸ್ಥಳೀಯ ಮುಖಂಡ ಎಂಎಲ್‌ಸಿ ಆಗಿದ್ದ ವಿನಯಚಂದ್ರ ಅವರು ಡಿವಿಎಸ್ ಅವರನ್ನು ಮತ್ತೆ ಪುತ್ತೂರಿಗೆ ಬರುವಂತೆ ಮಾಡಿದರು.ರಾಜಕೀಯ ಪ್ರವೇಶ: `ಪುತ್ತೂರಿಗೆ ಬನ್ನಿ, ಬಿಜೆಪಿ ಬೆಳೆಸೋಣ, ಜತೆಗೆ ಸುಳ್ಯದಲ್ಲಿ ವಕೀಲ ವೃತ್ತಿಯನ್ನೂ ನಿರ್ವಹಿಸಬಹುದು~ ಎಂಬ ವಿನಯಚಂದ್ರ ಅವರ ಸಲಹೆ ಕೇಳಿ ಡಿವಿಎಸ್, ಎಪಿಪಿ ಕೆಲಸಕ್ಕೆ ರಾಜೀನಾಮೆ ನೀಡಿದರು. ನಂತರ ಸುಳ್ಯದಲ್ಲಿ ಬಿಜೆಪಿಯ ಮೊದಲ ಅಧ್ಯಕ್ಷನಾಗಿ ನಿಯುಕ್ತರಾದರು. ಪುತ್ತೂರಿನಲ್ಲಿ ರಾಜಕೀಯ ನಡೆ ಆರಂಭಿಸಿದ ಡಿವಿಎಸ್, ಈಗ ರಾಜ್ಯದ ಅತ್ಯುನ್ನತ ಪದವಿಯಲ್ಲಿದ್ದಾರೆ. ಇದರ ಹಿಂದೆ ಅವರ ರಾಜಕೀಯ ಗುರು, ಹಿರಿಯ ಆರ್‌ಎಸ್‌ಎಸ್ ಮುಖಂಡ ಪುತ್ತೂರಿನ ರಾಮ ಭಟ್ ಅವರ ಪ್ರೋತ್ಸಾಹ, ಸ್ಫೂರ್ತಿಯೂ ಇದೆ. `ರಾಮ ಭಟ್ ಒಬ್ಬ ಆದರ್ಶ ವ್ಯಕ್ತಿ. ಅವರ ನಡವಳಿಕೆ, ಪ್ರಚೋದನೆ, ನಿನಗೆ ಭವಿಷ್ಯ ಇದೆ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರಿಂದ ಈ ಮಟ್ಟಕ್ಕೆ ಬೆಳೆದೆ~ ಎಂದು ಡೀವಿ ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ.ಸೋಲಿನಲ್ಲೇ ಆರಂಭ: 1984ರಲ್ಲಿ ಡಿವಿಎಸ್ ಮೊದಲ ಬಾರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದರು. ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದ ಇಲ್ಲಿ ಅವರು ಮೊದಲ ಯತ್ನದಲ್ಲಿ 41 ಸಾವಿರ ಮತ ಪಡೆದರೂ ಕೇವಲ 1,060 ಮತಗಳಿಂದ ಸೋಲು ಅನುಭವಿಸಬೇಕಾಯಿತು. ಮತ್ತೆ ಅದೇ ಕ್ಷೇತ್ರದಿಂದ ಆರಿಸಿ ಬರಬೇಕು ಎಂಬ ಗುರಿ ಅವರಲ್ಲಿತ್ತು. ಹೀಗಾಗಿ ಆ ದಿನಗಳಲ್ಲಿ ಸುಳ್ಯದಲ್ಲಿ ವಕೀಲಿ ವೃತ್ತಿ ಮಾಡಿಕೊಂಡಿದ್ದರೂ ವಾರದ ಪ್ರತಿ ಮಂಗಳವಾರ ಮತ್ತು ಶನಿವಾರ ಪುತ್ತೂರಿನ ಗ್ರಾಮಗಳಿಗೆ ತೆರಳಿ ಕೆಲಸ ಮಾಡುತ್ತಿದ್ದರು. 1994ರಲ್ಲಿ ಮತ್ತೆ ಪುತ್ತೂರಿನಿಂದ ಸ್ಪರ್ಧಿಸಿದ ಅವರು ಕೇವಲ 404 ಮತಗಳ ಅಂತರದಿಂದ  ಆರಿಸಿ ಬಂದರು.ಶಾಸಕನಾಗಿ ಹೋರಾಟ: `ಶಾಸಕನಾಗಿದ್ದ 10 ವರ್ಷದ ಅವಧಿಯಲ್ಲಿ ಜನರಿಗೆ ನೀಡಿದ ಭರವಸೆಗಳಿಗೆ ಪೂರಕವಾಗಿ ಸ್ಪಂದಿಸಿದ್ದೇನೆ~ ಎಂಬ ವಿಶ್ವಾಸದ ನುಡಿ ಅವರದ್ದು.  ಸಾವಿರಾರು ಮಂದಿಗೆ ಆಶ್ರಯ ಯೋಜನೆ, 5 ಸಾವಿರಕ್ಕೂ ಹೆಚ್ಚು ಮಂದಿಗೆ ಹಕ್ಕುಪತ್ರ ವಿತರಿಸಿದ ಸಾಧನೆ ತಮ್ಮದು ಎನ್ನುವ ಡಿ.ವಿ.ಎಸ್, 1998ರಲ್ಲಿ ಕರಾವಳಿ ಅಡಿಕೆ ರೈತರು ಸಂಕಷ್ಟದಲ್ಲಿದ್ದಾಗ 50 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸೇರಿಸಿ ಪ್ರತಿಭಟನೆಗಿಳಿದಿದ್ದರು. ನಂತರ ಸರ್ಕಾರ ಬೆಂಬಲ ಬೆಲೆ ಘೊಷಿಸಿತ್ತು. ಎಂಆರ್‌ಪಿಎಲ್ ಪುತ್ತೂರಿನಲ್ಲಿ ಪೈಪ್‌ಲೈನ್ ಅಳವಡಿಸಲು ಮುಂದಾಗ ಸ್ಥಳೀಯರನ್ನು ಸೇರಿಸಿ ಭಾರೀ ಪ್ರತಿಭಟನೆ ನಡೆಸಿ, ಹೋರಾಟದಲ್ಲಿ ಯಶಸ್ವಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry