ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗೆಬಳಗದ ಭರ್ಜರಿ ಹಾಸ್ಯ

ಚಿತ್ರ: ವಿಕ್ಟರಿ
Last Updated 24 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನಿರ್ಮಾಣ: ಎಸ್.ಆರ್.ಎಸ್. ಮೀಡಿಯಾ ವಿಷನ್
ನಿರ್ದೇಶಕ: ನಂದಕಿಶೋರ್
ತಾರಾಗಣ: ಶರಣ್, ಅಸ್ಮಿತಾ ಸೂದ್, ತಬಲಾ ನಾಣಿ, ಸಾಧು ಕೋಕಿಲ, ಅವಿನಾಶ್, ರವಿಶಂಕರ್, ಗಿರಿಜಾ ಲೋಕೇಶ್, ರಮೇಶ್ ಭಟ್, ಕೀರ್ತಿರಾಜ್, ಅರಸು ಮತ್ತಿತರರು.


`ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು...'- ಇದು `ವಿಕ್ಟರಿ' ಚಿತ್ರದ ಜನಪ್ರಿಯ ಗೀತೆ. ಕುಡಿತವನ್ನು ತಮಾಷೆಯಾಗಿ ಸಮರ್ಥಿಸುವ ಈ ಹಾಡಿನಲ್ಲಿ ದುಃಖಕ್ಕಿಂತ ಸಂಭ್ರಮವೇ ಹೆಚ್ಚಾಗಿ ಕಾಣುತ್ತದೆ. `ವಿಕ್ಟರಿ' ಸಿನಿಮಾ ಕೂಡ ಇದೇ ಮಾದರಿಯದು. ಪ್ರೀತಿ, ಮದುವೆ, ಸಂಕಟ, ರೌಡಿಸಂ, ಎಲ್ಲವನ್ನೂ ಹಾಸ್ಯದ ಕಣ್ಣಿನಲ್ಲಿ ನೋಡುವ ಚಿತ್ರವಿದು. ಚಿತ್ರಮಂದಿರದಿಂದ ಹೊರಬಂದ ಬಳಿಕವೂ ಸಿನಿಮಾ ಗುಂಗು ಪ್ರೇಕ್ಷಕನನ್ನು `ನಿಜವಾಗ್ಲು ಬಾರು, ಗಂಡ್‌ಮಕ್ಳ ತವರು' ಸಾಲನ್ನು ಮೆಲುಕು ಹಾಕಿಸುತ್ತಾ ನಗುವಿನ ಮತ್ತಲ್ಲಿ ತೇಲಿಸಬಲ್ಲದು.

`ರ‌್ಯಾಂಬೋ'ದಲ್ಲಿ ಶರಣ್, ತಬಲಾ ನಾಣಿ ಜುಗಲ್‌ಬಂದಿಯಲ್ಲಿ ನಗೆಹೂರಣವಿತ್ತು. ಇಲ್ಲಿ ನಗೆಬಳಗ ವಿಸ್ತರಣೆಗೊಂಡಿದೆ. ನಾಣಿಯೂ ಇದ್ದಾರೆ, ಜೊತೆಯಲ್ಲಿ ಸಾಧು ಕೋಕಿಲ ನಡೆದಿದ್ದಾರೆ. ಖಳನಾಯಕರಾಗಿ ಅಬ್ಬರಿಸುತ್ತಿದ್ದ ರವಿಶಂಕರ್ ಕೂಡ ನಗೆ ಹಬ್ಬದಲ್ಲಿ ಭಾಗಿ. ಹತ್ತಾರು ಕಲಾವಿದರು, ದೃಶ್ಯಗಳ ನಡುವೆ ಚಿತ್ರ ಬಿಡಿ ಬಿಡಿಯಾಗಿ ಹಂಚಿ ಹೋದರೂ ಇದು ನಾಯಕ ಕೇಂದ್ರಿತ ಕಥೆ. ಆದರೆ ಹಿಂದಿನ ಚಿತ್ರದಂತೆಯೇ ಶರಣ್ ತಮ್ಮನ್ನು ವಿಜೃಂಭಿಸಿಕೊಳ್ಳುವ ಸಾಹಸಕ್ಕೆ ಕೈಹಾಕಿಲ್ಲ. `ರ‌್ಯಾಂಬೋ'ದಲ್ಲಿ ಇದ್ದಂತೆ ಮದುವೆ, ವಿರಹದ ಸಂಕಟವಿದೆ. ಸ್ವಯಂಕೃತ ಎಡವಟ್ಟುಗಳಲ್ಲಿ ಸಿಲುಕಿಕೊಳ್ಳುವ ನಾಯಕನಿದ್ದಾನೆ. ಖಳನಾಯಕರ ಆಟವಿದೆ. ಇದೆಲ್ಲವನ್ನೂ ಹಾಸ್ಯದ ಮಳೆಯಲ್ಲಿ ತೋಯಿಸುವ ವಿಚಾರದಲ್ಲಿ `ವಿಕ್ಟರಿ' ಒಂದು ಹೆಜ್ಜೆ ಮುಂದೆ. ಅಲ್ಲಿ ಕಾರು ಬ್ರೋಕರ್ ಆಗಿದ್ದ ನಾಯಕನಿಗಿಲ್ಲಿ ಮ್ಯಾರೇಜ್ ಬ್ರೋಕರ್ ಕಾಯಕ.

ಹಾಗೆಂದು ಸಿನಿಮಾ ಹೊಸ ಸಂಗತಿಗಳನ್ನೇನೂ ಹೇಳುತ್ತಿಲ್ಲ. `ರ‌್ಯಾಂಬೋ'ದಲ್ಲಿ ಹಾಸ್ಯದೊಟ್ಟಿಗೆ ಕೌತುಕದ ಎಳೆಯೂ ಇತ್ತು. ಆ ಎಳೆಯ ಸುಳಿಯೊಳಗೆ ಮಜವಿತ್ತು. `ವಿಕ್ಟರಿ'ಯಲ್ಲಿ ಅಂಥ ಕುತೂಹಲದ ಅಂಶಗಳಿಲ್ಲ. ಆರಂಭದಲ್ಲೇ ಅಂತ್ಯದ ಸ್ವರೂಪ ಊಹೆಗೆ ನಿಲುಕುತ್ತದೆ. `ರ‌್ಯಾಂಬೋ' ನಿರ್ದೇಶಿಸಿದ್ದ ಶ್ರೀನಾಥ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಒದಗಿಸಿದ್ದಾರೆ. ಅದನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿರುವ ನಿರ್ದೇಶಕ ನಂದಕಿಶೋರ್ ಮೊದಲ ಚಿತ್ರದಲ್ಲಿಯೇ ಕಸುಬುದಾರಿಕೆ ಮೆರೆದಿದ್ದಾರೆ. ಸರಳ ಕಥೆಯನ್ನು ಪರಿಪೂರ್ಣ ಮನರಂಜನೆಯಾಗಿ ಕಟ್ಟಿಕೊಡುವುದು ಅವರಿಗಿದ್ದ ಸವಾಲು. ತೆಳುವಾದ ಎಳೆಗೆ ಬಿಡಿ ಕಥನಗಳನ್ನು ಪೋಣಿಸಿ ನಗೆಯ ಹಾರ ತಯಾರಿಸಲಾಗಿದೆ.

ಹಾಸ್ಯರಸ ತುಂಬಿಸುವಾಗ ಅಲ್ಲಿ ಬಾಲಿಶತನ, ತುಂಟತನಕ್ಕೆ ಜಾಗವಿರಲೇಬೇಕು. ಸಾಯುವ ಪ್ರಯತ್ನ ಕೂಡ ತಮಾಷೆಯಾಗಿ ಕಾಣುವುದು ಬಾಲಿಶತನಕ್ಕೆ ಉದಾಹರಣೆಯಾಗಿದೆ. `ಅಕ್ಕಾ ನಿನ್ ಮಗ್ಳು ನಂಗ್ ಚಿಕ್ಕೋಳಾಗಲ್ವಾ...' ಹಾಡು ತುಂಟತನದ ಪ್ರತೀಕ.

ದ್ವಂದ್ವಾರ್ಥಗಳಿಗೆ ಜಾಗ ಒದಗಿಸಿದರೂ ಅಂಕೆ ಮೀರದ ಸಂಭಾಷಣೆಯಲ್ಲಿ ತಾಜಾತನವಿದೆ (ಸಂಭಾಷಣೆ-ಪ್ರಶಾಂತ್). ದೃಶ್ಯರೂಪದ ಹಾಸ್ಯಕ್ಕೆ ಈ ಮಾತು ಅನ್ವಯವಾಗುವುದಿಲ್ಲ. ಅಲ್ಲಲ್ಲಿ ಎದುರಾಗುವ ಗತಕಾಲದ ಹಾಸ್ಯ ತುಣುಕುಗಳು ನಗೆಗಡಲಿಗೆ ಹಾಕಿದ ಅಣೆಕಟ್ಟುಗಳು. ನಾಯಕನ ಸುತ್ತಲೇ ಕಥೆ ಸುತ್ತುತ್ತಿದೆ ಎನಿಸುವಾಗ ಅದನ್ನು ಬೇರೆ ದಿಕ್ಕಿಗೆ ಹೊರಳಿಸಿರುವುದು ಶರಣ್ ಪ್ರತಿರೂಪ ಪಾತ್ರದ ಸೃಷ್ಟಿ. ವಿಜಯದ ಸಂಕೇತ ಸೂಚಿಸುವ ಎರಡು ಬೆರಳುಗಳ ಶೀರ್ಷಿಕೆ, ಶರಣ್‌ರ ದ್ವಿಪಾತ್ರದ ಸೂಚಕವೂ ಹೌದು, ನಗೆಯ ಗೆಲುವಿನ ಸಂಭ್ರಮದ ಚಿಹ್ನೆಯೂ ಹೌದು.

ಕಲಾವಿದರ ಆಯ್ಕೆಯಲ್ಲಿ ಮತ್ತು ಅವರನ್ನು ಚಿತ್ರಕ್ಕೆ ಪೂರಕವಾಗಿ ದುಡಿಸಿಕೊಳ್ಳುವಲ್ಲಿ ನಂದಕಿಶೋರ್ ಗೆದ್ದಿದ್ದಾರೆ. ಗಿರಿಜಾ ಲೋಕೇಶ್ ವಿಶಿಷ್ಟ ಗೆಟಪ್, ರವಿಶಂಕರ್‌ಗೆ ತೊಡಿಸಿದ ಹಾಸ್ಯದ ಉಡುಗೆ ಯಶಸ್ವಿ ಪ್ರಯೋಗಗಳು. ದೊಡ್ಡ ಬಳಗದ ನಡುವೆ ನಾಯಕಿ ಅಸ್ಮಿತಾ ಸೂದ್ ಅಭಿನಯ ಕೊಂಚ ಮಂಕು. ಅರ್ಜುನ್ ಜನ್ಯ ಸಂಗೀತದಲ್ಲಿ ಕ್ವಾಟ್ರು ಬಾಟ್ಲಿಯ ತೇಲಿಸುವ ಗುಣವೂ ಇದೆ, `ಕಣ್ಣ ಮಿಂಚೆ ಜಾಹೀರಾತು' ಎಂಬ ಮಾಧುರ್ಯವೂ ಇದೆ. ಚಂದ್ರಶೇಖರ್ ಛಾಯಾಗ್ರಹಣ ಚಿತ್ರದ ಮತ್ತೊಂದು ಗುಣಾತ್ಮಕ ಅಂಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT