ನಗೆಯು ಗೆಲುವಿನ ಮರ್ಮ...

7

ನಗೆಯು ಗೆಲುವಿನ ಮರ್ಮ...

Published:
Updated:
ನಗೆಯು ಗೆಲುವಿನ ಮರ್ಮ...

`ಕನ್ನಡದಲ್ಲಿ ಈಗ ಎರಡು ಪ್ರಕಾರದ ಚಿತ್ರಗಳು ಮಾತ್ರ ಗೆಲುವು ಕಾಣುತ್ತವೆ. ಅದ್ಭುತ ಆ್ಯಕ್ಷನ್ ಇರಬೇಕು. ಇಲ್ಲವೇ ಆರಂಭದಿಂದ ಅಂತ್ಯದವರೆಗೂ ನಗಿಸುವಂತಹ ಹಾಸ್ಯ ಇರಬೇಕು. ಬುದ್ಧಿ ಹೇಳುವ, ಸಂದೇಶ ನೀಡುವ ಸಿನಿಮಾಗಳನ್ನೆಲ್ಲಾ ಜನ ನೋಡುತ್ತಾರೆ ಎನ್ನುವ ನಂಬಿಕೆ ಹೊರಟು ಹೋಗಿದೆ~ ಎಂದರು ಜಗ್ಗೇಶ್.ಅವರೀಗ `ಕೂಲ್ ಗಣೇಶ~ನಾಗಿದ್ದಾರೆ. ಬದುಕಿನಲ್ಲಿ ಬಂದದ್ದೆಲ್ಲವನ್ನೂ `ಕೂಲ್~ ಆಗಿಯೇ ಸ್ವೀಕರಿಸುವುದು ಗಣೇಶನ ಗುಣ. ಅದಕ್ಕೊಂದಿಷ್ಟು ನಗೆ ಹೂರಣ ಬೆರೆಸಿದ್ದಾರೆ ನಿರ್ದೇಶಕ ವಸಂತ್. ಜಗ್ಗೇಶ್ ನಿಜ ಬದುಕಿನಲ್ಲಿಯೂ ಹೀಗೆಯೇ ಇದ್ದವರು. ಕಷ್ಟ ಸುಖ ಎರಡನ್ನೂ ಕೂಲ್ ಆಗಿಯೇ ಸ್ವೀಕರಿಸಿದವರು. ಹೀಗಾಗಿ ಶೀರ್ಷಿಕೆ ಅವರಿಗೆ ಹೊಂದಿಕೊಳ್ಳುತ್ತದೆ ಎನ್ನುವುದು ವಸಂತ್ ಅಭಿಪ್ರಾಯ. ಜಗ್ಗೇಶ್ ಗರಡಿಯಲ್ಲಿ ಬೆಳೆದ ಅವರು ಈ ಹಿಂದೆ `ಮಿಸ್ಟರ್ ಬಕ್ರ~ ನಿರ್ದೇಶಿಸಿದ್ದರು.ಆಸೆ, ಭಾವನೆಗಳಿಲ್ಲದೆ ಬದುಕುವ ಪಾತ್ರ ಜಗ್ಗೇಶ್ ಅವರದು. ಪ್ರೇಕ್ಷಕನ ಕಾಸಿಗೆ ಒಂದಿಷ್ಟೂ ಮೋಸವಾಗದಂತೆ ಭರ್ತಿ ಮನರಂಜನೆ ಚಿತ್ರದಲ್ಲಿದೆ ಎಂಬ ಭರವಸೆಯನ್ನು ಅವರು ನೀಡಿದರು. ಅವರ ಅಕ್ಕನ ಮಗ ಜೀವನ್ ಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ.ಚಿತ್ರಕ್ಕೆ ಕ್ಲಾಪ್ ಮಾಡಿದ ನಟ ದುನಿಯಾ ವಿಜಯ್ ಜಗ್ಗೇಶ್‌ಗೆ ಕನ್ನಡದ ಚಾರ್ಲಿ ಚಾಪ್ಲಿನ್ ಎಂಬ ಬಿರುದು ನೀಡಿದರು. ಜಗ್ಗೇಶ್ ಜೊತೆ ನಟಿಸುವುದು ಅವರ ಆಸೆ. ಅದಕ್ಕೆ ತಯಾರಿಯೂ ನಡೆಯುತ್ತಿದೆ ಎಂದರು. ನಾಯಕಿ ಪಾರ್ವತಿ ನಿರ್ವಾನ್ ಗೈರುಹಾಜರಾಗಿದ್ದರು. ವಿನಯ್‌ಚಂದ್ರ ಸಂಗೀತ ಹೆಣೆಯುತ್ತಿದ್ದಾರೆ.ಮಗನಿಗಾಗಿ ನಿರ್ದೇಶನ

ಸಿನಿಮಾ ನಿರ್ದೇಶನ ಮಗನಿಗಾಗಿ ತೆಗೆದುಕೊಂಡ ನಿರ್ಧಾರ ಎಂದರು ಜಗ್ಗೇಶ್. ಮಗನಿಗಾಗಿ `ಗುರು~ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ತಯಾರಾಗಿರುವ ಜಗ್ಗೇಶ್ ಅದಕ್ಕಾಗಿ ಹೊತ್ತು ತಂದಿರುವುದು ತಮಿಳುನಾಡು ಮಾಜಿಮುಖ್ಯಮಂತ್ರಿ ಕರುಣಾನಿಧಿ ಬರೆದ ಕಥೆಯೊಂದನ್ನು. ಕಥೆಯಲ್ಲಿ ವೇಗವಿದೆ, ನವಿರು ಪ್ರೀತಿಯಿದೆ, ಅನಿರೀಕ್ಷಿತವಾಗಿ ತಿರುವು ನೀಡುವ ಅಪರಾಧ ಲೋಕದ ಚಿತ್ರಣವಿದೆ ಎನ್ನುವುದು ಅವರು ನೀಡುವ ವಿವರಣೆ.ಚಿತ್ರರಂಗದಲ್ಲಿ ತನಗೊಂದು ನೆಲೆ ಕಂಡುಕೊಳ್ಳಲಾಗದೆ ಮಗ ಗುರುರಾಜ್ ಮಾನಸಿಕವಾಗಿ ನೊಂದಿದ್ದ. ಆತನಿಗಾಗಿ ಸಿನಿಮಾ ನಿರ್ಮಿಸುವುದಷ್ಟೆ ನನ್ನ ಉದ್ದೇಶವಾಗಿತ್ತು. ಆದರೆ ಮಗನ ಹಟಕ್ಕೆ ಮಣಿದು ನಿರ್ದೇಶನದತ್ತ ಮನಸ್ಸು ಮಾಡಿದೆ ಎಂದರು.ತನಗಾಗಿ ಇಂಥದೊಂದು ನಿರ್ಧಾರವನ್ನು ಮುಂಚೆಯೇ ಏಕೆ ತೆಗೆದುಕೊಳ್ಳಲಿಲ್ಲ ಎಂದು ಕೇಳಿದ ಗುರುರಾಜ್‌ಗೆ ಜಗ್ಗೇಶ್ ತಮ್ಮ ಬದುಕಿನ ಅನುಭವವನ್ನಿಟ್ಟುಕೊಂಡು ಪಾಠ ಮಾಡಿದರಂತೆ. `30 ವರ್ಷದಿಂದ ಗಾಡ್‌ಫಾದರ್ ಇಲ್ಲದೆ, ಅವಮಾನ, ಕಷ್ಟಗಳನ್ನು ಸಹಿಸಿಕೊಂಡು ಅವರಿವರ ಕೈಯಲ್ಲಿ ಸಾಣೆ ಹಿಡಿಸಿಕೊಂಡು ಹರಿತವಾದ ಆಯುಧವಾಗಿ ಬಂದವನು ನಾನು.ನೀನೂ ಅದೇ ರೀತಿ ಬರಬೇಕೆನ್ನುವುದು ನನ್ನಾಸೆಯಾಗಿತ್ತು. ಈಗ ಕಷ್ಟಗಳ ಅರಿವಾಗಿದೆ. ಪರಿಪಕ್ವವಾದ ವ್ಯಕ್ತಿಯಾಗಿ ಬೆಳೆದಿದ್ದೀಯ. ನಿನ್ನನ್ನು ಪ್ರಪಂಚಕ್ಕೆ ನನ್ನ ಮಗನಾಗಿ ತೋರಿಸಲು ಇದು ಸೂಕ್ತವಾದ ಸಮಯ ಎಂದಿದ್ದರಂತೆ~ ಅವರು.ನಾನು ನನ್ನ ಬದುಕಿಗೆ ಭಾಷೆ ನೆಲದ ಗಡಿ ಹಾಕಿಕೊಂಡು ಬದುಕಿದ್ದೇನೆ. ಆದರೆ ಮಗನಿಗೆ ಅದೇ ರೀತಿ ಇರಲು ಒತ್ತಾಯಿಸುವುದಿಲ್ಲ. ಕಲಾವಿದನಾಗಿ ಯಾವ ಭಾಷೆಯ ಸಿನಿಮಾ ಸಮುದ್ರದಲ್ಲಿ ಬೇಕಾದರೂ ಈಜಲು ಆತ ಸ್ವತಂತ್ರ ಎಂದರು ಜಗ್ಗೇಶ್.ತೆಳ್ಳಗಾದ ಜಗ್ಗೇಶ್

ಜಗ್ಗೇಶ್ ತೂಕ ಇಳಿಸಿಕೊಂಡು ತೆಳ್ಳಗಾಗುತ್ತಿದ್ದಾರೆ. ಈಗಾಗಲೇ ಅವರು ಇಳಿಸಿಕೊಂಡಿರುವ ತೂಕ ಸುಮಾರು 14 ಕೆ.ಜಿ. ಇನ್ನೂ ಎಂಟು ಕೆ.ಜಿ. ತೂಕ ಇಳಿಸಿಕೊಳ್ಳುವುದು ಜಗ್ಗೇಶ್ ಗುರಿ. ಅದಕ್ಕಾಗಿ ಅವರು ದಿನಕ್ಕೆ ಕನಿಷ್ಠ ಎರಡು ಗಂಟೆ ದೇಹವನ್ನು ಕಸರತ್ತಿಗೆ ಒಡ್ಡಿಕೊಳ್ಳುತ್ತಿದ್ದಾರಂತೆ. ಅಂದಹಾಗೆ, ಅವರಿಗೆ ತೆಳ್ಳಗಾಗುವಂತೆ ಒತ್ತಾಯ ಮಾಡಿದ್ದು ನಟ ದುನಿಯಾ ವಿಜಯ್.ವಿಜಯ್ ದೂರವಾಣಿಯಲ್ಲಿ ಮಾತನಾಡುವಾಗಲೆಲ್ಲಾ ಜಗ್ಗೇಶ್‌ಗೆ ನೀವು ತೆಳ್ಳಗಾಗಬೇಕು ಎಂದು ಹೇಳುತ್ತಿದ್ದರಂತೆ. ಕೊನೆಗೆ ಅದು ಅವರಿಂದಾಗಿಯೇ ಕಾರ್ಯರೂಪಕ್ಕೂ ಬಂದಿತ್ತಂತೆ. ಜಗ್ಗೇಶ್ ಈಗ ಮನೆಯ ಮಹಡಿಯಲ್ಲಿಯೇ ಜಿಮ್ ನಿರ್ಮಿಸಿಕೊಂಡಿದ್ದಾರೆ. ಪರಿಣಿತ ತರಬೇತುದಾರನನ್ನು ನೇಮಿಸಿಕೊಂಡಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry