ನಗೆಯ ಗೆಳೆಯರು

7

ನಗೆಯ ಗೆಳೆಯರು

Published:
Updated:

ಚಿತ್ರ: ಸ್ನೇಹಿತರುನಿರ್ಮಾಪಕ: ಆರ್. ಸೌಂದರ್ಯ ಜಗದೀಶ್

ನಿರ್ದೇಶಕ: ಕೆ. ರಾಮ್ ನಾರಾಯಣ್

ತಾರಾಗಣ: ವಿಜಯ ರಾಘವೇಂದ್ರ, ತರುಣ್ ಚಂದ್ರ, ಸೃಜನ್ ಲೋಕೇಶ್, ರವಿಶಂಕರ್, ತೂಗುದೀಪ ದರ್ಶನ್, ಪ್ರಣೀತಾ, ನಿಖಿತಾ ತುಕ್ರಾಲ್ ಮತ್ತಿತರರು.

`ಕೋಕೋ~, `ನಮ್ಮಣ್ಣ ಡಾನ್~, `ಗೋವಿಂದಾಯ ನಮಃ~, `ಭಗವಂತ ಕೈ ಕೊಟ್ಟ~, `ಕಿಲಾಡಿ ಕಿಟ್ಟಿ~, `ಬ್ರೇಕಿಂಗ್ ನ್ಯೂಸ್~, `ರ‌್ಯಾಂಬೊ~ದಂತೆ ಈ ವರ್ಷ ಹಾಸ್ಯದ ಹಣೆಪಟ್ಟಿ ಹೊತ್ತ ಮತ್ತೊಂದು ಚಿತ್ರ `ಸ್ನೇಹಿತರು~. ಹದಬೆಂದ ನಗೆಪಾಕ ಇಲ್ಲಿನ ವಿಶೇಷ. ಹಾಸ್ಯ ಕಲಾವಿದರ ದೊಡ್ಡ ದಂಡು ಈ ಪಾಕ ತಯಾರಿಸಿದೆ. ಇವರಿಗೆ ನೆರಳಾಗಿರುವುದು ದರ್ಶನ್, ನಿಖಿತಾ.ನಾಲ್ವರು ಖಾಸಾ ಗೆಳೆಯರು ಮಾಡುವ ಅವಾಂತರಗಳೇ ಕತೆಯ ತಿರುಳು. ಒಂದು ತಪ್ಪನ್ನು ತಿದ್ದಲು ಹೋಗಿ, ಮತ್ತೊಂದು ತಪ್ಪಿನ ಆರಂಭ. ಆ ತಪ್ಪುಗಳು ಕೈ ಮೀರತೊಡಗಿದಂತೆ ಕತೆಗೆ ವಿಶಿಷ್ಟ ತಿರುವು. ಈ ನಾಲ್ವರು ರೌಡಿ `ಬಂಡೆ~ಯ ಕೈಗೆ ಸಿಲುಕಿ ನಲುಗುತ್ತಿದ್ದಾಗಲೇ ಅವನ ಒಲವಿನ ಬಯಕೆ ಅರಿವಿಗೆ ಬರುತ್ತದೆ. ಆತ ಪ್ರೀತಿಸುತ್ತಿರುವ ಹುಡುಗಿ ಒಬ್ಬ ಶಿಕ್ಷಕಿ. ಅನಾಥ ಮಗುವಿಗೆ ಪಾಠ ಹೇಳುತ್ತಿರುವವಳು.ಅನಾಥ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಭಾವಿಸಿ ಎನ್ನುವುದು ಚಿತ್ರದ ಸಂದೇಶ. ಆದರೆ ಆ ಅನಾಥನೋ ಅಪ್ಪಟ ತುಂಟ. ಆತನಿಂದಲೇ ತಾಪತ್ರಯಗಳ ಆರಂಭ. ಅವನನ್ನು ಸಲಹುತ್ತಿರುವುದು ಒಬ್ಬ ಪೊಲೀಸ್ ಅಧಿಕಾರಿ. ಅಲ್ಲಿಗೆ ಇದು ಕಳ್ಳ ಪೊಲೀಸ್ ಕತೆಯೂ ಹೌದು. ಬಂಡೆಯ ಕನಸಿನ ಹುಡುಗಿ ಅರ್ಥಾತ್ ಶಿಕ್ಷಕಿ ತಮ್ಮವಳೇ ಆಗಲಿ ಎಂಬುದು ನಾಲ್ವರು ಗೆಳೆಯರ ಬಯಕೆ. ಆದರೆ ಅವಳು ಅರಸುವುದು ಬೇರೆಯವನನ್ನು. ಆತನಾರು ಎಂಬುದನ್ನು ಅರಿಯುವುದರೊಂದಿಗೆ ಚಿತ್ರಕ್ಕೆ ಶುಭಂ.ಅಬ್ಬರದ ಮಾತುಗಳ ದರ್ಶನ್‌ಗೆ ಸಲೀಸಾಗಿ ಪ್ರೇಕ್ಷಕರು ಮಾರುಹೋಗುತ್ತಾರೆ. ಅತಿಥಿ ಪಾತ್ರದಲ್ಲಿ ಬಂದ ನಾಯಕ ನಟನಂತೆ ಅವರು ತೋರುತ್ತಾರೆ. ಸಹಜವಾಗಿಯೇ ಅವರ ಎದುರು ವಿಜಯ ರಾಘವೇಂದ್ರ, ತರುಣ್, ಸೃಜನ್ ತುಸು ಮಬ್ಬು. ಸೌಂಡೇಶನಾಗಿ ರವಿಶಂಕರರದು ಗಮನ ಸೆಳೆವ ಅಭಿನಯ. ಮುಗ್ಧತೆ ಮರೆಯಾದ ಬಾಲನಟ ಮಾ. ಸ್ನೇಹಿತ್ ಚಿತ್ರದುದ್ದಕ್ಕೂ ಇದ್ದಾರೆ. ಅವರಿಗೆಂದೇ ಮೀಸಲಿಟ್ಟ ಹಾಡನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ನಿಖಿತಾ ಐಟಂ ಹಾಡಿನ ಮಿಂಚಾದರೆ ಪ್ರಣೀತಾ ಹಾಡಿ ಕುಣಿವ ಮೇಡಂ. ಇನ್ನು ಹಾಸ್ಯದ ತತ್ತಿಯಿಂದ ಹೊರಬರುವ ಮರಿಗಳಂತೆ ತೋರುವುದು ರಮೇಶ್ ಭಟ್, ಗಿರಿಜಾ ಲೋಕೇಶ್, ಸಾಧು ಕೋಕಿಲ, ಧರ್ಮ, ಶೋಭರಾಜ್, ರಮೇಶ್ ಪಂಡಿತ್, ಮಿಮಿಕ್ರಿ ದಯಾನಂದ್, ಬಿರಾದಾರ್, ಟೆನ್ನಿಸ್ ಕೃಷ್ಣ, ಬುಲೆಟ್ ಪ್ರಕಾಶ್, ವಿಜಯಸಾರಥಿ ಮತ್ತಿತರರ ಬಳಗ.`ತಿಂಡಿ ಆಯ್ತಾ ಸಾರ್~ `ಥರ್ಟಿ ಫಾರ್ಟಿ ಸೈಟು~ ಹಾಡುಗಳು ವಿ. ಹರಿಕೃಷ್ಣರ ಪ್ರಯೋಗಶೀಲ ಮನಸ್ಸಿಗೆ ಸಾಕ್ಷಿ. `ಬಡಪಾಯಿ ಹೃದಯ~ ಹಾಡಿನಲ್ಲಿ ಮಾಧುರ್ಯವಿದೆ. ಇನ್ನೂ ಹೆಚ್ಚಿನ ನಗೆಗೀತೆಗಳನ್ನು ನೀಡುವುದು ಅವರಿಂದ ಸಾಧ್ಯವಿತ್ತು. ಐಟಂ ಹಾಡನ್ನಾದರೂ ಹಾಸ್ಯಮಯವಾಗಿಸಬಹುದಿತ್ತು. ಹಾಸ್ಯ ಚಿತ್ರಕ್ಕೆ `ಸ್ನೇಹಿತರು~ ಹೆಸರು ಕೊಂಚ ಪೇಲವ. ಬೇರೆ ಶೀರ್ಷಿಕೆಯನ್ನು ಚಿತ್ರ ತಂಡ ಯೋಚಿಸಬಹುದಿತ್ತು. ಎಂ.ಆರ್. ಶ್ರೀನಿವಾಸ್ ಅವರ ಕ್ಯಾಮೆರಾ ಹಾಗೂ ಎಂ.ಗಣೇಶರ ಸಂಕಲನ ಅಚ್ಚುಕಟ್ಟು. ಕೆಲವು ಹಾಡುಗಳ ನೃತ್ಯ ನಿರ್ದೇಶನ ಚಂದಕಿಂತ ಚಂದ. ದರ್ಶನ್ ಅಭಿಮಾನಿಗಳಿಗೆ, ಪ್ರಣೀತಾ, ನಿಖಿತಾರನ್ನು ನೋಡ ಬಯಸುವವರಿಗೆ, ನಗೆಯ ಬುಗ್ಗೆಯಲ್ಲಿ ಮೀಯುವವರಿಗೆ ಚಿತ್ರ ಹೇಳಿ ಮಾಡಿಸಿದಂತಿದೆ. ನಿರ್ದೇಶಕರ ಚೊಚ್ಚಲ ಪ್ರಯತ್ನ ಗೆದ್ದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry