ನಗೆಯ ಹಿಂದಿನ ನೋವು

7

ನಗೆಯ ಹಿಂದಿನ ನೋವು

Published:
Updated:
ನಗೆಯ ಹಿಂದಿನ ನೋವು

ಇದು ತುಂಡುಡುಗೆಯ ಹುಡುಗಿಯರ ಚಮಕ್ ಚಲೋ!

ಚಿಯರ್ ಬೆಡಗಿಯರ ಲೋಕವೇ ವಿಚಿತ್ರವಾದುದು. ಯಾರದ್ದೋ ಖುಷಿಗಾಗಿ ಕುಣಿತ, ಯಾರಿಂದಲೋ ಮೂದಲಿಕೆ, ವಂಚನೆ. ಜೊತೆಗೆ ಬಡತನ, ಹಣದ ವ್ಯಾಮೋಹ, ಹತಾಶೆ, ಆತಂಕ, ಭಯ, ನೋವು. ಕೊನೆಗೊಂದು ವಿವಾದ. ಕುಲುಕಿ, ಬಳುಕಿ ಮೋಹಕ ನಗೆ ತುಳುಕಿಸುತ್ತಾ ಕ್ರೀಡಾಂಗಣದಲ್ಲಿ ಮಾದಕತೆ ಉಕ್ಕಿಸುವ ಈ ಬೆಡಗಿಯರ ಲೋಕ ಕುತೂಹಲಗಳ ಗಣಿ!ಚಿನ್ನಸ್ವಾಮಿ ಕ್ರೀಡಾಂಗಣದ ಮಾಧ್ಯಮ ಕೊಠಡಿಯ ಲಿಫ್ಟ್ ಸಮೀಪ `ಸ್ಮೋಕಿಂಗ್ ಜೋನ್~ ಇದೆ. ಐಪಿಎಲ್ ಪಂದ್ಯದ ವಿರಾಮದ ವೇಳೆಗೆ ದಡಬಡನೇ ಓಡಿ ಬಂದ ನಾಲ್ಕು ಮಂದಿ ಚಿಯರ್ ಹುಡುಗಿಯರು ಸಿಗರೇಟು ಎಳೆಯಲು ಶುರು ಮಾಡಿದರು. ಒಬ್ಬಳಂತೂ ಐದು ನಿಮಿಷದ ಅವಧಿಯಲ್ಲಿ ಎರಡು ಸಿಗರೇಟು ಸೇದಿ ಮುಗಿಸಿದಳು. ಅಷ್ಟರಲ್ಲಿ ಅಲ್ಲಿಗೆ ಬಂದ ಭದ್ರತಾ ಸಿಬ್ಬಂದಿಯೊಬ್ಬ ಅವರನ್ನು ಮತ್ತೆ ಕ್ರೀಡಾಂಗಣಕ್ಕೆ ಕರೆದುಕೊಂಡು ಹೋದ. ಸಿಡುಕುತ್ತಲೇ ಅವರು ಅಂಗಳದೊಳಗೆ ಹೆಜ್ಜೆ ಹಾಕಿದರು.ಅಲ್ಲಿದ್ದವರ ನೋಟದಲ್ಲಿ ಕುತೂಹಲ ಹಾಗೂ ಅಚ್ಚರಿ. ಕೊಂಕು ಮಾತುಗಳೂ ಬಂದವು. ಆದರೆ ಆ ಹುಡುಗಿಯರ ಒತ್ತಡ, ಹತಾಶೆ?ಹಣದ ಬೆನ್ನಟ್ಟಿ ದೂರದ ದೇಶಗಳಿಂದ ಬಂದಿರುವ ಇವರು ಒಂದರ್ಥದಲ್ಲಿ ಜೀತದಾಳುಗಳು. ಯಾರದೋ ಬೌಂಡರಿಗೆ, ಇನ್ಯಾರದೋ ವಿಕೆಟ್‌ಗೆ ಹೆಜ್ಜೆ ಹಾಕಬೇಕು. ದುಗುಡ ಮುಚ್ಚಿಟ್ಟು ನಗುತ್ತಲೇ ಇರಬೇಕು. ಸಂಘಟಕರ ಮಾತು ತಪ್ಪಬಾರದು. ಆದರೆ ಬದುಕು ತಂದಿಡುವ ನೋವು, ಒತ್ತಡ, ಹತಾಶೆಯನ್ನು ವ್ಯಕ್ತಪಡಿಸುವ ಬಗೆ? ಇದು ಕ್ರಮೇಣ ಅವರ ವರ್ತನೆಯನ್ನೇ, ಅವರ ಜಾಯಮಾನವನ್ನೇ ಬದಲಾಯಿಸಿಬಿಡುವ ಸಾಧ್ಯತೆ ಇಲ್ಲದಿಲ್ಲ.`ವರ್ತನೆ ಬೇಸರ ತಂದಿದೆ~


`ಉಕ್ರೇನ್ ದೇಶದ ಪೋಲ್ಟಾವಾ ನಗರದಲ್ಲಿ ನನ್ನ ಮನೆ ಇದೆ. ರಾಜಧಾನಿ ಕೀವ್‌ನಲ್ಲಿ ನಾನು ರೂಪದರ್ಶಿಯಾಗಿದ್ದೆ. ಆದರೆ ಅಲ್ಲಿ ಶೋಷಣೆಯೇ ಜಾಸ್ತಿ. ಅವರು ಕೊಡುತ್ತಿದ್ದ ಹಣ ಪ್ರಸಾಧನಗಳಿಗೂ ಸಾಕಾಗುತ್ತಿರಲ್ಲಿಲ್ಲ. ಒಬ್ಬ ಏಜೆಂಟ್ ಮೂಲಕ ಐಪಿಎಲ್‌ನಲ್ಲಿ ಚಿಯರ್ ಲೀಡರ್ಸ್ ಆಗಿ ನಿಯೋಜಿತಳಾದೆ. ಈಗ ಇಲ್ಲಿದ್ದೇನೆ. ಆದರೆ ಇಲ್ಲಿನ ಜನರ ವರ್ತನೆ, ನಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿ ವಿಚಿತ್ರವಾಗಿದೆ. ನನ್ನೂರಿಗಿಂತ ಹೆಚ್ಚಿನ ಹಣ ಸಿಗುತ್ತದೆ ನಿಜ ಆದರೆ ಮುಂದೆ ಇಂತಹ ಜವಾಬ್ದಾರಿ ಒಪ್ಪಿಕೊಳ್ಳುವುದಿಲ್ಲ~ ಎನ್ನುತ್ತಾಳೆ ಉಕ್ರೇನ್‌ನ ಒಬ್ಬ ಚಿಯರ್ ಹುಡುಗಿ.`ಮೈಮಾರಿಕೊಳ್ಳುವವರಿಗೂ, ಎಲ್ಲರ ಎದುರು ಅರೆ ಬೆತ್ತಲೆ ಕುಣಿಯುವವರಿಗೂ ವ್ಯತ್ಯಾಸವೇನಿದೆ?~ಎಂದು ಪ್ರಶ್ನಿಸುತ್ತಾರೆ 19 ಹರೆಯದ ಆ ಬೆಡಗಿ.ಅರ್ಥಪೂರ್ಣ ಮಾತು. ಪಂದ್ಯ ನಡೆಯುವಾಗ ವಿಕ್ಷಿಪ್ತ ಮನಸ್ಸಿನ ಪ್ರೇಕ್ಷಕರು ಕೈಗೆ ಸಿಕ್ಕ ವಸ್ತುಗಳನ್ನು ಚಿಯರ್ ಲೀಡರ್ಸ್ ಮೇಲೆಸೆದ ನಿದರ್ಶನಗಳಿವೆ. ಅಶ್ಲೀಲ ಪದಗಳಿಂದ ಛೇಡಿಸಿದ್ದೂ ಇದೆ.`ನಾವು ಬೌಂಡರಿ ಬಳಿಯ ಸ್ಟೇಜ್‌ನಲ್ಲಿ ನೃತ್ಯ ಮಾಡಬೇಕು. ಆಗ ನಮ್ಮನ್ನು ಹಂಗಿಸುವ ಮಾತು ಕೇಳಿಬರುತ್ತಲೇ ಇರುತ್ತದೆ. ನಾವು ಇಲ್ಲಿ ದುಡಿಯಲು ಬಂದಿದ್ದೇವೆ. ಮನರಂಜನೆ ನೀಡುವುದು ನಮ್ಮ ಉದ್ಯೋಗ. ಅಸಹನೀಯ ವಾತಾವರಣದಲ್ಲಿ ನಾವು ಖುಷಿಯಿಂದ ಕೆಲಸ ಮಾಡುವುದು ಹೇಗೆ? ಅನಾರೋಗ್ಯದಲ್ಲೂ ನರ್ತಿಸಬೇಕಾದ ಅನಿವಾರ್ಯತೆ. ಆದರೆ ನಮ್ಮನ್ನು ಜನ ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ~ -ಇದು ಬೆಲ್ಜಿಯಂನ ಚಿಯರ್ ಹುಡುಗಿಯ ನೋವಿನ ನುಡಿ.ಅದಷ್ಟೇ ಅಲ್ಲ, ರಾಯಲ್ ಚಾಲೆಂಜರ್ಸ್ ಹಾಗೂ ನೈಟ್ ರೈಡರ್ಸ್ ನಡುವಿನ ಐಪಿಎಲ್ ಪಂದ್ಯಕ್ಕೂ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣದ ಬೌಂಡರಿ ಗೆರೆ ಬಳಿ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡಿತ್ತು.ಅದು ಚಿಯರ್ ಲೀಡರ್ಸ್ ನೃತ್ಯ ಮಾಡುವ ಸ್ಥಳ! ದಟ್ಟ ಹೊಗೆಯಿಂದ ಎಲ್ಲರೂ ಆತಂಕಕ್ಕೊಳಗಾಗಿದ್ದರು. ಅಕಸ್ಮಾತ್ ಈ ಹುಡುಗಿಯರಿಗೆ ಏನಾದರೂ ಆಗಿದ್ದರೆ?ನಾವು ಸೆಕ್ಸ್ ನಟಿಯರಲ್ಲ

`ನಮ್ಮನ್ನು ಸೆಕ್ಸ್ ನಟಿಯರಂತೆ ನಡೆಸಿಕೊಳ್ಳುತ್ತಾರೆ. ಪಾರ್ಟಿಗಳಲ್ಲಿ ಕೆಲ ಆಟಗಾರರು ನಮ್ಮಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ~ ಎಂದು ದಕ್ಷಿಣ ಆಫ್ರಿಕಾದ ಚಿಯರ್ ಲೀಡರ್ ಗ್ಯಾಬ್ರಿಯೆಲಾ ಪಾಸ್ಕುವಲೊಟ್ಟೊ ಒಮ್ಮೆ ಬೇಸರದಿಂದ ಹೇಳಿದ್ದರು. ಅದಕ್ಕೆ ಕಾರಣ ಅವರನ್ನು ನಡೆಸಿಕೊಂಡ ರೀತಿ. ಆಟಗಾರರ ವರ್ತನೆ ಹಾಗೂ ರಾತ್ರಿ ನಡೆಯುತ್ತಿದ್ದ ಪಾರ್ಟಿಗಳ ಬಗ್ಗೆ ಬ್ಲಾಗ್‌ನಲ್ಲಿ ಬರೆದಿದ್ದಕ್ಕೆ ಅವರನ್ನು ಐಪಿಎಲ್ ತಂಡದ ಸಂಘಟಕರು ಕಿತ್ತು ಹಾಕಿದ್ದರು.ಕೆಲ ವರ್ಷಗಳ ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್‌ನ ಚಿಯರ್ ಲೀಡರ್‌ಗಳಾದ ಎಲಿಷಾ ನ್ಯೂಟನ್ ಹಾಗೂ ಶೆರಿನ್ ಆ್ಯಂಡರ್ಸನ್ `ತಮ್ಮ ಮೇಲೆ ಜನಾಂಗೀಯ ನಿಂದನೆ ನಡೆಯುತ್ತಿದೆ~ ಎಂದು ದೂರು ನೀಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅದಕ್ಕೆ ಕಾರಣ `ಕಪ್ಪು ಹುಡುಗಿಯರು ಕುಣಿಯುವುದನ್ನು ಯಾರು ನೋಡುತ್ತಾರೆ. ನಮಗೆ ಬಿಳಿ ಹಾಗೂ ಸುಂದರ ಹುಡುಗಿಯರೇ ಬೇಕು~ ಎಂದು ಸಂಘಟಕರೊಬ್ಬರು ಮಾಡಿದ್ದ ಟೀಕೆ.`ನಾರಿಯರನ್ನು ಪೂಜಿಸುವ ದೇಶದಲ್ಲಿ ಬಹಿರಂಗವಾಗಿ ಅಶ್ಲೀಲ ನೃತ್ಯ ಮಾಡಿಸುತ್ತಾರೆ. ಸಭ್ಯರ ಆಟ ಕ್ರಿಕೆಟ್ ಕ್ರೀಡೆಯಲ್ಲಿ ಅಳವಡಿಸಿರುವುದು ಎಷ್ಟು ಸರಿ? ಚಿಯರ್ ಲೀಡರ್‌ಗಳು ತಮ್ಮ ಕೆಲಸ ಮಾಡುತ್ತಾರೆ. ಆದರೆ ಪ್ರೇಕ್ಷಕರು ಚಿಯರ್ ಲೀಡರ್ಸ್ ನೋಡಬೇಕೊ? ಕ್ರಿಕೆಟ್ ವೀಕ್ಷಿಸಬೇಕೊ?~ ಎಂಬುದು ಕೆಲ ಕ್ರಿಕೆಟ್ ಪ್ರೇಮಿಗಳಳ ಪ್ರಶ್ನೆ.ಚಿಯರ್ ಲೀಡರ್ಸ್‌ನ ಅಶ್ಲೀಲ ನೃತ್ಯ ಹಾಗೂ ಕ್ರೀಡಾಂಗಣಗಳಲ್ಲಿ ಮದ್ಯ ಸರಬರಾಜು ಮಾಡುತ್ತಿರುವ ಬಗ್ಗೆ ಜೈಪುರ, ಮುಂಬೈ, ನವದೆಹಲಿಯಲ್ಲಿ ವಿರೋಧವೂ ವ್ಯಕ್ತವಾಗಿದೆ. ಈಗ ಬಾರ್ ಡ್ಯಾನ್ಸರ್‌ಗಳಿಗೆ ನಿಷೇಧ ಹೇರಿದ್ದಾರೆ. ಚಿಯರ್ ಗರ್ಲ್ಸ್ ಮೇಲೂ ಆ ಕ್ರಮಕೈಗೊಳ್ಳಬೇಕು ಎಂಬುದು ಅಲ್ಲಿನವರ ವಾದ.ಸೀರೆಯುಟ್ಟ ಚಿಯರ್ ಬೆಡಗಿಯರು...

ಈ ಬಾರಿ ಕೆಲ ತಂಡಗಳು ತಮ್ಮ ಚಿಯರ್ ಲೀಡರ್ಸ್‌ಗೆ ಸೀರೆ ಉಡಿಸಿ ಕುಣಿಸುತ್ತಿವೆ. ಅದಕ್ಕೆ ಸಾಕ್ಷಿ ನೈಟ್ ರೈಡರ್ಸ್ ಹಾಗೂ ಪುಣೆ ವಾರಿಯರ್ಸ್ ಚಿಯರ್ ಲೀಡರ್ಸ್. ಪಂದ್ಯಗಳ ವೇಳೆ ಇವರು ಸಾಂಪ್ರದಾಯಿಕ ಉಡುಗೆ ತೊಟ್ಟು ಭರತನಾಟ್ಯದ ಶೈಲಿಯಲ್ಲಿ ನೃತ್ಯ ಮಾಡುತ್ತಿರುತ್ತಾರೆ. ಜೊತೆಗೆ ಇವರೆಲ್ಲಾ ದೇಸಿ ಹುಡುಗಿಯರು. ಆದರೆ ಆರ್‌ಸಿಬಿಯ ವೈಟ್ ಮಿಶ್ಚೀಫ್ ಚಿಯರ್ ಗರ್ಲ್ಸ್ ಅದಕ್ಕೆ ತದ್ವಿರುದ್ಧ. ಮಾದಕ ಉಡುಗೆ ತೊಡುವ ಆರ್‌ಸಿಬಿ ಹುಡುಗಿಯರು ಗಾಳಿಯಲ್ಲಿ ಕಿಸ್ ತೇಲಿಸುತ್ತಾ ಪ್ರೇಕ್ಷಕರನ್ನು ಹುರಿದುಂಬಿಸುತ್ತಿರುತ್ತಾರೆ.ಇಲ್ಲಿನ ಸಂಸ್ಕೃತಿ ಇಷ್ಟ


ಕೆಲ ಚಿಯರ್ ಲೀಡರ್ ಆಗೋದು ಕೆಲವರಿಗೆ ಪ್ರವೃತ್ತಿ. ಕೆಲವರು ಶಿಕ್ಷಕಿಯರಾಗಿದ್ದರೆ, ಇನ್ನು ಕೆಲವರು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಚ್ಚರಿ ಎಂದರೆ ವಿದ್ಯಾರ್ಥಿಗಳೂ ಇದ್ದಾರೆ. ಇವರೆಲ್ಲರಿಗೂ ಸುಲಭವಾಗಿ ದುಡ್ಡು ಮಾಡಿಕೊಳ್ಳಲು ಐಪಿಎಲ್ ಒಂದು ವೇದಿಕೆ.

 

ದಕ್ಷಿಣ ಆಫ್ರಿಕಾ, ಉಕ್ರೇನ್, ರಷ್ಯಾ, ಬೆಲ್ಜಿಯಂ, ಐರ್ಲೆಂಡ್, ನಾರ್ವೆಯಿಂದಲೂ ಇಲ್ಲಿಗೆ ಬಂದವರಿದ್ದಾರೆ. ಇವರಲ್ಲಿ ಹೆಚ್ಚಿನವರು 19ರಿಂದ 23ರ ಹರೆಯದವರು. ಕೆಲ ದೇಶಗಳಲ್ಲಿ ಕ್ರಿಕೆಟ್‌ನ ಗಂಧಗಾಳಿ ಕೂಡ ಇಲ್ಲ. ಆದರೆ ಅಲ್ಲಿಯವರು ಬಂದು ಇಲ್ಲಿನ ಕ್ರಿಕೆಟ್ ಟೂರ್ನಿಯಲ್ಲಿ ಹೆಜ್ಜೆ ಹಾಕುತ್ತಾರೆ! `ಇಲ್ಲಿನ ಸಂಸ್ಕೃತಿ, ಸಂಪ್ರದಾಯ ನಮಗಿಷ್ಟ.ಹಾಗಾಗಿಯೇ ಇಲ್ಲಿಗೆ ಬರಲು ಖುಷಿಯಾಗುತ್ತದೆ~ ಎನ್ನುತ್ತಾರೆ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿರುವ ಉಕ್ರೇನ್‌ನ ಯೂಲಿಯಾ ಯಹೊಲೇವಾ. `ಐಪಿಎಲ್ ಟೂರ್ನಿ ಎಂಬುದು ನಮಗೊಂದು ಹಬ್ಬ~ ಎಂದು ಒಕ್ಸಾನಾ ಹೇಳುತ್ತಾರೆ. ನತಾಲಿಯಾ, ಡರಿನಾ, ಇವಾನಾ, ಯುಲಿಯಾ, ತಾನ್ಯಾ, ಅನಾ ಇವರೆಲ್ಲಾ ಭಾರತದ ಸಂಸ್ಕೃತಿ ಇಷ್ಟಪಡುತ್ತಾರೆ. ಖ್ಯಾತ ಕ್ರಿಕೆಟಿಗ ಜಾಕ್ ಕಾಲಿಸ್ ಅವರ ಸಹೋದರಿ ಕೂಡ ಚಿಯರ್ ಲೀಡರ್ಸ್ ಎನ್ನುವುದು ವಿಶೇಷ.ಇವರಲ್ಲಿ ಆರ್ಥಿಕವಾಗಿ ಹಿಂದುಳಿದ ದೇಶಗಳಿಂದ ಬಂದವರೇ ಹೆಚ್ಚು. ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಇಂಥವರು ಹಣದಾಸೆಗೆ ಯಾವುದೇ ದೇಶಕ್ಕೆ ತೆರಳಿ ಕೆಲಸ ಮಾಡಲು ಸಿದ್ಧ. ಈಗ ಇದೊಂದು ವ್ಯವಹಾರ. ಏಜೆಂಟ್‌ಗಳ ಮೂಲಕ ಈ ವ್ಯವಹಾರ ನಡೆಯುತ್ತದೆ. ಐಪಿಎಲ್ ಮುಗಿಯುತ್ತಿದ್ದಂತೆ ಇವರು ಮತ್ಯಾವುದೋ ದೇಶದಲ್ಲಿ ನಡೆಯುವ ಟೂರ್ನಿಗೊ ಅಥವಾ ರೂಪದರ್ಶಿಯಾಗಿ ಕೆಲಸ ಮಾಡಲೋ ತೆರಳುತ್ತಾರೆ.`ಸ್ವಲ್ಪ ದಪ್ಪವಾದರೆ ಕೆಲಸದಿಂದ ತೆಗೆದುಹಾಕುತ್ತಾರೆ. ವಯಸ್ಸಾಯಿತು ಬೇಡ ಎನ್ನುತ್ತಾರೆ. ನಮ್ಮದೊಂದು ವಿಚಿತ್ರ ಜೀವನ. ಆಟಗಾರರ ಪಾರ್ಟಿಗೂ ಹೋಗಬೇಕು, ಆದರೆ ಅಲ್ಲಿ ನಾವು ಸರಿಯಾಗಿ ಏನನ್ನೂ ತಿನ್ನುವಂತಿಲ್ಲ, ಕುಡಿಯುವಂತಿಲ್ಲ~ ಎಂಬುದು ಕೇಪ್‌ಟೌನ್‌ನ ಚಿಯರ್ ಲೀಡರ್ ಒಬ್ಬರ ಕೊರಗು.`ನಾನು ಚಿಯರ್ ಹುಡುಗಿಯರನ್ನೇ ನೋಡಲು ಕಷ್ಟಪಟ್ಟು ಟಿಕೆಟ್ ಖರೀದಿಸಿ ಕ್ರೀಡಾಂಗಣಕ್ಕೆ ತೆರಳಿದ್ದೆ~ ಎನ್ನುವ ಅಭಿಮಾನಿಗಳೂ ಇದ್ದಾರೆ. ಆದರೆ ಈ ಹುಡುಗಿಯರು ಒಂದರ್ಥದಲ್ಲಿ ಬೆಳಕು ನೀಡುತ್ತಾ ಕರಗಿ ಹೋಗುವ ಮೇಣದ ಬತ್ತಿಗಳಂತೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry