ನಗೆ ಚೇತನದಲ್ಲಿ ಹಾಸ್ಯ ಕಚಗುಳಿ

7

ನಗೆ ಚೇತನದಲ್ಲಿ ಹಾಸ್ಯ ಕಚಗುಳಿ

Published:
Updated:
ನಗೆ ಚೇತನದಲ್ಲಿ ಹಾಸ್ಯ ಕಚಗುಳಿ

ಬೆಂಗಳೂರು: ಹಾಸ್ಯ ಕಲಾವಿದರೊಬ್ಬರನ್ನು ಕಾಫಿಗೆ ಕರೆದುಕೊಂಡು ಹೋದ ಅಭಿಮಾನಿಯೊಬ್ಬ ಆ ಕಲಾವಿದನ ಕಪ್‌ಗೆ ಹೆಚ್ಚು ಕಾಫಿ ಹಾಕುತ್ತಾನೆ. ಕಾರಣ ಅದು ಅವರ ಮೇಲಿಟ್ಟಿರುವ ಅಭಿಮಾನವಲ್ಲ; ಬದಲಾಗಿ ಆ ಕಾಫಿ ಸುಮಾರಾಗಿರುತ್ತೆ...!  -ಇಂಥ ಹಲವಾರು ಕಚಗುಳಿ ಇಡುವ ಹಾಸ್ಯ ಸಂಗತಿಗಳನ್ನು ಹಾಸ್ಯ ಕಲಾವಿದ ನಾಗರಾಜ ಕೋಟೆ ಮತ್ತು ತಂಡವು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನಗೆ ಚೇತನ’ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿತು.ವಿಶ್ವ ಆರೋಗ್ಯ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಈ ಹಾಸ್ಯ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರು ಮತ್ತು ರೋಗಿಗಳು ಭಾಗವಹಿಸಿದ್ದರು. ಕೋಟೆ ಅವರು ತಾವು ಹಿಂದೆ ಹಲವು ವೇದಿಕೆಗಳಲ್ಲಿ ಹೇಳಿದ ಹಾಸ್ಯ ಸಂಗತಿಗಳನ್ನೇ ಇಲ್ಲಿ ಹೇಳಿದರೂ ಸಹ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.ಪರಪ್ಪನ ಜೈಲಿನಲ್ಲಿ ಹಾಸ್ಯ ಕಾರ್ಯಕ್ರಮವನ್ನು ನೀಡಿದ್ದ ಕೋಟೆ ಅವರಿಗೆ ಕೆಲ ದಿನಗಳಲ್ಲಿಯೇ ರಾಜ್ಯೋತ್ಸವ ಪ್ರಶಸ್ತಿಯೂ ಬಂತು. ಈ ಸಂತಸವನ್ನು ಹಂಚಿಕೊಳ್ಳಲೆಂದು ಜೈಲಿನ ಸೂಪರಿಂಟೆಂಡೆಂಟ್‌ಗೆ ಫೋನಾಯಿಸಿದರೆ ಬಂದ ಉತ್ತರ ಏನು ಗೊತ್ತೇ? ‘ನಮ್ಮ ಜೈಲಿಗೆ ಬಂದಿದ್ದರಿಂದಲೇ ನಿಮಗೆ ಪ್ರಶಸ್ತಿ ಬಂತು. ಆದ್ದರಿಂದ ಆಗಾಗ ಬರ್ತಾ ಇರಿ...!’ ಇಂಥ ಹಲವು ಹಾಸ್ಯದ ತುಣುಕುಗಳನ್ನು ಹೇಳಿದರು.ಇದಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಖ್ಯಾತ ಹಾಸ್ಯನಟ ಉಮೇಶ್ ಅವರು, ‘ಹಾಸ್ಯ ಕಲಾವಿದನೊಬ್ಬ ಜನರಿಗೆ ರಂಜನೆ ನೀಡುವುದನ್ನು ತನ್ನ ವೃತ್ತಿಯಾಗಿ ಸ್ವೀಕರಿಸಿರುವುದರಿಂದ ದುಃಖವನ್ನೂ ಮರೆಯಬೇಕಾಗುತ್ತದೆ. ಕಲಾವಿದರು ಎಲ್ಲರನ್ನೂ ನಗಿಸಿ ತಾವೊಬ್ಬರೇ ಅಳುತ್ತಾರೆ’ ಎಂದರು.ತಮ್ಮ ಕಿರಿಯ ಮಗ ತೀರಿಕೊಂಡದ್ದನ್ನು ಸ್ಮರಿಸಿದ ಅವರು, ‘ಮಗನ ಅಂತ್ಯಸಂಸ್ಕಾರಕ್ಕೂ ದುಡ್ಡಿಲ್ಲದಿರುವಾಗ ಹೇಗೋ ಹೊಂದಿಸಿಕೊಂಡು ಅಂತ್ಯಸಂಸ್ಕಾರ ಮಾಡಿದ್ದಾಯಿತು. ಅಂಥ ದುಃಖದ ಘಳಿಗೆಯಲ್ಲಿದ್ದಾಗಲೂ ಮರುದಿನ ಬೆಳಿಗ್ಗೆಯೇ ತಯಾರಾಗಿ ಶೂಟಿಂಗ್‌ಗೆ ಕರೆದೊಯ್ಯಲು ಬರುವ ವಾಹನವನ್ನು ಕಾಯುತ್ತಾ ನಿಂತಿದ್ದೆ’ ಎಂದು ಕಲಾವಿದರ ಇನ್ನೊಂದು ಜೀವನವನ್ನು ತೆರೆದಿಟ್ಟರು.ಇಂಥ ಘಟನೆಯನ್ನು ಹೇಳಿಯೂ ಸಹ ತಮ್ಮ ಸೀತಾಪತಿ ಪಾತ್ರದ ‘ಅಯ್ಯೋ ಇವ್ರೂ  ನನ್ನನ್ನ ಅಪಾರ್ಥ ಮಾಡ್ಕೊಂಡ್ರಲ್ಲ. ಇದನ್ನೆಲ್ಲ ನನ್ ಹೆಂಡ್ತಿ ಹತ್ರ ಹೇಳೋಣ ಅಂದ್ರೆ ಅವ್ಳ್ ಬೇರೆ ಊರಲ್ವಿಲ್ಲ’ ಎಂದು ಚಿತ್ರವೊಂದರ ಹಾಸ್ಯ ಮಾತುಗಳನ್ನು ಹೇಳಿದರು.ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ‘ಈ ವರ್ಷದ ವಿಶ್ವ ಆರೋಗ್ಯ ದಿನವನ್ನು ದೇಹದಲ್ಲಿನ ಬ್ಯಾಕ್ಟೀರಿಯಾಗಳ ಬಗ್ಗೆ ಎಚ್ಚರ ಮೂಡಿಸುವುದನ್ನು ಧ್ಯೇಯವನ್ನಾಗಿ ಸ್ವೀಕರಿಸಲಾಗಿದೆ. ಮನುಷ್ಯನ ದೇಹವು ಅಧಿಕ ರಕ್ತದೊತ್ತಡ, ಖಿನ್ನತೆ ಮತ್ತಿತರ ಸಮಸ್ಯೆಗಳಿಂದ ಜರ್ಝರಿತವಾಗಲಿದ್ದು, ಈ ಸಮಸ್ಯೆಗಳಿಗೆ ನಗುವೇ ಪರಿಹಾರ’ ಎಂದರು. ಚಿತ್ರನಟಿ ರೂಪಿಕಾ, ಉದ್ಯಮಿ ಕೆ.ಆರ್.ರಂಗನಾಥ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry