ನಗ್ನ ಸತ್ಯದ ಬಿಡಿಚಿತ್ರಗಳು

7

ನಗ್ನ ಸತ್ಯದ ಬಿಡಿಚಿತ್ರಗಳು

Published:
Updated:
ನಗ್ನ ಸತ್ಯದ ಬಿಡಿಚಿತ್ರಗಳು

ಅರ್ಹತೆ, ಪ್ರತಿಭೆಗೆ ಪರ್ಯಾಯವೆಂದೇ ಆಗಿಬಿಟ್ಟಿರುವ ಸಾಫ್ಟ್‌ವೇರ್ ಬುದ್ಧಿವಂತರು, ಈ ನಾಡಿನ ಸಂವಿಧಾನದ ಮೂಲಭೂತ ತತ್ವವೇ ಆಗಿರುವ ಸಾಮಾಜಿಕ ನ್ಯಾಯವನ್ನೇ ಬಹಿರಂಗವಾಗಿ ನಿರಾಕರಿಸುವ ಸಾಫ್ಟ್‌ವೇರ್ ದೊರೆಗಳು ವಾಸಿಸುವ ಬೆಂಗಳೂರೆಂಬುದು ಒಂದು ಮಹಾನಗರ. ಅತ್ಯಾಧುನಿಕವಾಗಿರುವ ಈ ಮಹಾನಗರಕ್ಕೆ ಹೈಟೆಕ್ ನಗರವೆಂದೂ, ಸಿಲಿಕಾನ್ ಸಿಟಿ ಎಂಬ ಗುಣವಾಚಕಗಳೂ ಇವೆ. ಈ ಮಹಾನಗರದ ಒಟ್ಟು ಜನಸಂಖ್ಯೆ 1 ಕೋಟಿಗೂ ಹೆಚ್ಚು.ಈ ನಾಗರಿಕರಿಗೆ ಬೇಕಾದ ಹಣ್ಣು, ತರಕಾರಿ, ಮಾಂಸ, ಮೀನು, ಹೂ ಇತ್ಯಾದಿ ಅಗತ್ಯ ವಸ್ತುಗಳ ಪೂರೈಕೆಗೆಂದು ಇರುವ ಕೆ.ಆರ್.ಮಾರುಕಟ್ಟೆ, ರಸಲ್ ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆಗಳಲ್ಲಿ ನಿತ್ಯವೂ ಬೀಳುವ ಕಸದ ರಾಶಿ. (ಕೆ.ಆರ್. ಮಾರುಕಟ್ಟೆಯಲ್ಲಿ ದಿನವೊಂದಕ್ಕೆ 80 ಟನ್‌ಗಿಂತಲೂ ಹೆಚ್ಚಿನ ಕಸ ಬೀಳುತ್ತದೆ.) ಸುಮಾರು 4 ರಿಂದ 5 ಸಾವಿರ ಟನ್. ಇದರ ಜತೆ ರಸ್ತೆ, ಓಣಿ, ಮೋರಿಗಳಲ್ಲಿನ ಕಸ, ಸತ್ತ ನಾಯಿ,ಬೆಕ್ಕು,ದನಗಳ ಕಳೇಬರ,ತರಕಾರಿ-ಹಣ್ಣುಗಳ ಸಿಪ್ಪೆ ಇತ್ಯಾದಿ ಮನೆ ಕಸ, ತುಂಬಿತುಳುಕುವ ಮ್ಯಾನ್‌ಹೋಲ್, ಕಕ್ಕಸು ಗುಂಡಿಗಳು ..ಹೀಗೆ ಇನ್ನು ಒಂದಷ್ಟು ಸಾವಿರ ಟನ್ ಕಸ-ಹೊಲಸು ನಿತ್ಯ ನಗರದಲ್ಲಿ ಜಮೆಯಾಗುತ್ತದೆ.ಇವೆಲ್ಲವನ್ನೂ ಬಾಚಿ ಸ್ವಚ್ಛಮಾಡುವವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಕೆಲಸ ಮಾಡುವ ಕಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರು. ಕೆಲವೇ ಕೆಲವು ಸಾವಿರ ಕಾಯಂ ನೌಕರರಿದ್ದರೆ ಹಲವಾರು ಸಾವಿರ ಗುತ್ತಿಗೆ ನೌಕರರಿದ್ದಾರೆ. ಇವರಲ್ಲಿ ಬಹುಪಾಲು (ಶೇ.90ಕ್ಕಿಂತಲೂ ಹೆಚ್ಚಿನವರು) ಅನಕ್ಷರಸ್ಥ, ಅಸ್ಪೃಶ್ಯ ದಲಿತ ಸಮುದಾಯದವರು. ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲ ಬಡತನ ರೇಖೆಯ ಮೇಲೋ, ಕೆಳಗೋ ಎಂಬುದನ್ನು ಹೇಳುವ ಅಗತ್ಯವಿಲ್ಲ.ಜೀತಗಾರಿಕೆ, ಜಾತೀಯತೆ, ಅಸ್ಪೃಶ್ಯತೆಗೆ ಸರ್ಕಾರಿ ಸಂಸ್ಥೆಗಳು ಹೊರತಲ್ಲ:ಸ್ವಚ್ಛತೆಯಂತಹ ನಿತ್ಯ ಮಾಡಲೇಬೇಕಾದ, ಅಗತ್ಯ ಕೆಲಸವನ್ನು ಗುತ್ತಿಗೆಗೆ ನೀಡಬಾರದೆಂಬುದು ಹಾಗೂ ಗುತ್ತಿಗೆ ನೌಕರರಿಗೆ ಕನಿಷ್ಠವೇತನ, ಸುರಕ್ಷಾ ಸಲಕರಣೆಗಳು, ವೈದ್ಯಕೀಯ ಸವಲತ್ತುಗಳು, ಕುಡಿಯುವ ನೀರು ಇತ್ಯಾದಿಗಳನ್ನು ಕೊಡಲೇಬೇಕೆಂಬುದು ಈ ನಾಡಿನ `ಗುತ್ತಿಗೆ ಕಾರ್ಮಿಕ ನಿಯಂತ್ರಣ ಮತ್ತು ರದ್ದತಿ ಕಾಯ್ದೆಯ ನಿಯಮ'ಗಳು ಹೇಳುತ್ತವೆ. ಕೈಯಲ್ಲಿ ಮಲಬಾಚುವುದನ್ನು Manual scavenging and dry lartrine prohibition act ನಲ್ಲಿ ನಿಷೇಧಿಸಿ ಹಲವಾರು ದಶಕಗಳೇ ಆಗಿವೆ. ಆದರೆ ಸರ್ಕಾರಿ ಸಂಸ್ಥೆಯಾದ ಮಹಾ ನಗರ ಪಾಲಿಕೆ ಹಾಗೂ ಒಳಚರಂಡಿ ಮಂಡಳಿಗಳು ಹಲವಾರು ದಶಕಗಳಿಂದ ಸ್ವಚ್ಛತೆಯ ಕೆಲಸವನ್ನು ಗುತ್ತಿಗೆ ನೀಡಿರುವುದಲ್ಲದೇ ಕನಿಷ್ಠ ವೇತನ, ಸುರಕ್ಷಾ ಸಲಕರಣೆಗಳು ಸೇರಿದಂತೆ ಯಾವ್ಯಾವ ಸವಲತ್ತುಗಳನ್ನು ನೀಡದೇ ಕಾರ್ಮಿಕರಿಂದ ಜೀತಗಾರಿಕೆ ಮಾಡಿಸುತ್ತಿವೆ. ನಿಷೇಧ ಮಾಡಿರುವ ಮಲಬಾಚುವ ಕೆಲಸವನ್ನು ದಲಿತ ಕಾರ್ಮಿಕರಿಂದ ಮಾಡಿಸುತ್ತಿವೆ.ಮಾಡಿಸುವುದಿಲ್ಲವೆಂದು ಸುಳ್ಳು ಹೇಳುತ್ತವೆ. 30 ಸಾವಿರಕ್ಕಿಂತಲೂ ಹೆಚ್ಚಿನ ಕಾರ್ಮಿಕರು ಮಾಡಬೇಕಾಗಿರುವ ಕೆಲಸವನ್ನು (ಸರ್ಕಾರವೇ ಸ್ಥಾಪಿಸಿ, ಸಮ್ಮತಿಸಿರುವ ಐ.ಪಿ.ಡಿ. ಸಾಲಪ್ಪ ವರದಿ ಪ್ರಕಾರ ಪ್ರತಿ 500 ಜನರಿಗೆ ಒಬ್ಬರು ಪೌರಕಾರ್ಮಿಕರು ಇರಬೇಕು) ಸುಮಾರು 15 ಸಾವಿರದಷ್ಟು ನೌಕರರಿಂದ ಮಾಡಿಸಿಕೊಳ್ಳುತ್ತಿದೆ. ಇದಲ್ಲದೇ ಕಾರ್ಪೋರೇಟ್ ಸಂಸ್ಥೆಗಳು, ರೈಲ್ವೆ ಇಲಾಖೆ, ಖಾಸಗಿ ಆಸ್ಪತ್ರೆಗಳು, ಬಹುರಾಷ್ಟ್ರೀಯ ಸಂಸ್ಥೆಗಳೂ ಸೇರಿ ಇತರ ಖಾಸಗಿ ವಲಯದಲ್ಲಿ 1 ಲಕ್ಷಕ್ಕೂ ಹೆಚ್ಚಿನ ಪೌರಕಾರ್ಮಿಕರು ಇದ್ದಾರೆ. ಇವರೆಲ್ಲರೂ ದಲಿತರೇ ಆಗಿದ್ದು, ಜಾತಿಗೂ ವೃತ್ತಿಗೂ ಸಂಬಂಧ ಕಲ್ಪಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ.ನಾಗರಿಕರು ಆಚರಿಸುವ ಜಾತೀಯತೆ, ಅಸ್ಪೃಶ್ಯತೆ:

ಬಹುಪಾಲು ಪೌರಕಾರ್ಮಿಕರು ಕುಡಿಯುವ ನೀರು ಸಿಗದ ಕಾರಣಕ್ಕೆ ಎಲೆ ಅಡಿಕೆ, ಕಡ್ಡಿಪುಡಿ ಜಿಗಿದು ಬಾಯಲ್ಲಿಟ್ಟುಕೊಳ್ಳುತ್ತಾರೆ. ಮನೆಗಳಲ್ಲಿ ಅವರಿಗೆ ನೀರು ಕೊಡುವವರು ಅತಿ ವಿರಳ. ಕೊಟ್ಟರೂ ಬಚ್ಚಲು ಚೊಂಬುಗಳಲ್ಲಿ ಕೊಡುವುದು, ಬೊಗಸೆಗೆ ಸುರಿಯುವುದು ಸಾಮಾನ್ಯ.*ಪೌರಕಾರ್ಮಿಕರು ವಾಸಿಸುವುದೇ ಸ್ಲಮ್‌ಗಳಲ್ಲಿ. ಮಹಾನಗರದಲ್ಲಿ ಸುಮಾರು 400 ಸ್ಲಮ್‌ಗಳಿವೆ. ಎಲ್ಲ ಸ್ಲಮ್‌ಗಳಲ್ಲೂ ಅಸ್ಪೃಶ್ಯ ದಲಿತರು ವಾಸ ಮಾಡುತ್ತಾರೆ. ಅವರಷ್ಟೇ ಇರುವ ಎ.ಕೆ.ಕಾಲೊನಿಗಳೂ ಇವೆ. ಕೂಲಿನಗರ, ಅರುಂಧತಿ ನಗರ, ಬಾಪೂಜಿ ನಗರ, ಗೋರಿಪಾಳ್ಯ... ಹೆಸರುಗಳಿಂದಲೇ ಅವನ್ನು ಗುರುತಿಸಬಹುದು. 4 ಈ ಸ್ಲಮ್‌ಗಳಲ್ಲಿ ಮಾತ್ರ ಅಂಬೇಡ್ಕರ್ ಚಿತ್ರವಿರುವ ಬೋರ್ಡ್‌ಗಳು, ಪ್ರತಿಮೆಗಳು ಧೈರ್ಯವಾಗಿ ರಾರಾಜಿಸುತ್ತವೆ. ಹಾಗೆಯೇ ಹೀರಾಚಂದ್, ಮಾಣಿಕ್‌ಚಂದ್ ಪಾನ್ ಬ್ರೋಕರ್ ಗಿರವಿ ಅಂಗಡಿಗಳು ಸ್ಲಮ್‌ನ ಮುಖ್ಯ ದ್ವಾರಗಳಲ್ಲೇ ಇರುತ್ತವೆ. ಅಂಗಡಿಯ ಸೇಠುಗಳು ಮಾತ್ರ ಯಾವ ಅಸ್ಪೃಶ್ಯತೆಯ ಮುಲಾಜಿಗೂ ಒಳಗಾಗದೇ ದಲಿತರ ತಟ್ಟೆ, ಚೊಂಬು, ಲೋಟ, ಬಿಂದಿಗೆ, ಗುಂಡಿ, ತಾಳಿ, ಮೂಗುತಿಗಳನ್ನು ಅಡವಿಟ್ಟುಕೊಂಡು ಸಾಲ ನೀಡುತ್ತಾರೆ. ಬಡ್ಡಿಕೊಡುವುದಕ್ಕೆ ಸುಸ್ತಾದವರ ವಸ್ತುಗಳನ್ನು ಮುಟ್ಟುಚಿಟ್ಟುಗಳಿಲ್ಲದೇ ಬಳಸಿಕೊಳ್ಳುತ್ತಾರೆ.* ಕೊನೆಯದಾಗಿ, ಉತ್ತಮ ಶಿಕ್ಷಣ, ನೌಕರಿ ಹೊಂದಿರುವ ದಲಿತರತ್ತ ಬರೋಣ. ಇವರೇನಾದರೂ ಬಸವನಗುಡಿ, ಮಲ್ಲೇಶ್ವರ, ರಾಜಾಜಿನಗರ, ಜಯನಗರದಂತಹ ಏರಿಯಾಗಳಲ್ಲಿ ಮನೆ ಬಾಡಿಗೆ ಪಡೆಯಲು ಹೋದರೆ `ವೆಜ್ಜಾ ನಾನ್‌ವೆಜ್ಜಾ', `ನಾವು ವೈಶ್ಯರು ಮತ್ತು ಬ್ರಾಹ್ಮಣರಿಗೆ ಮಾತ್ರ ಕೊಡುವುದು', `ಯಾವ ಜಾತಿ ನಿಮ್ಮದು' ಎಂದು ನಾಗರಿಕರು ಸಾಮಾನ್ಯವಾಗಿ ಕೇಳುತ್ತಾರೆ. ಸುಶಿಕ್ಷಿತ ದಲಿತರೇನಾದರೂ ಶಿಷ್ಟಭಾಷೆಯಲ್ಲಿ ನಾವು ಪರಿಶಿಷ್ಟ ಜಾತಿ, ಸ್ಕೆಡ್ಯೂಲ್ಡ್ ಕ್ಯಾಸ್ಟ್ ಎಂದೊ ಅಥವಾ ಪರಿಶಿಷ್ಟ ಶೈಲಿಯಲ್ಲಿ `ವಲ್ಮಾದಿಗರು' ಎಂದರೆ ಮಹಾನಗರದ ನಾಗರಿಕ, ಸುಸಂಸ್ಕೃತರ ಮನೆಯ ಬಾಗಿಲುಗಳೂ ಧಡಾರನೆ ಮುಚ್ಚಿಕೊಳ್ಳುತ್ತವೆ.* ಊಟದ ಸಮಯದಲ್ಲಿ ಕಚೇರಿಗಳಲ್ಲಿ ಕೆಲಸ ಮಾಡುವ ದಲಿತ, ಶೂದ್ರ ಸಮುದಾಯದ ಮಾಂಸ ತಿನ್ನುವ ಮಹಿಳೆಯರ ಪ್ರತ್ಯೇಕ ಗುಂಪುಗಳಿರುತ್ತವೆ. ನಾನ್‌ವೆಜ್ ತಂದಿದ್ದರೆ ಕುಸುಕುಸು ಮಾತನಾಡಿಕೊಂಡೋ, ಸನ್ನೆಗಳಲ್ಲೋ ಸೂಚನೆ ನೀಡುತ್ತಾರೆ.* ಮನೆಯ ಸಮಾರಂಭಗಳಿಗೆ ಕರೆಯುವಾಗ `ಪೂರ್ತಿ ವೆಜಿಟೇರಿಯನ್ ಊಟ, ಅಡುಗೆಯವರು ಬ್ರಾಹ್ಮಣರು' ಎಂದು ವಿಶೇಷ ಸೂಚನೆ ನೀಡುತ್ತಾರೆ. ಸುಶಿಕ್ಷಿತ ದಲಿತರ ಮನೆಗಳಿಗೆ ಬರುವವರು `ಹೊರಗೆಲ್ಲೂ ತಿನ್ನುವ ಅಭ್ಯಾಸವೇ ಇಲ್ಲ. ಬರಿ ಹಾಲು ಮಾತ್ರ ಸಾಕು', `ಮಜ್ಜಿಗೆ ಆಗಬಹುದು, ಉಪ್ಪೇನೂ ಬೇಡ' ಎನ್ನುತ್ತಾರೆ. ಸುಸಂಸ್ಕೃತ ಶೂದ್ರರ ಮನೆಗೆ ಶ್ರಾದ್ಧ ಮಾಡಲು ಬರುವ ಪುರೋಹಿತರು ಆಹಾರ ಬಿಲ್‌ಕುಲ್ ಸೇವಿಸುವುದಿಲ್ಲ. ಶೂದ್ರರು ನೀಡುವ ಕಚ್ಚಾ ಆಹಾರ ಪದಾರ್ಥಗಳು, ಪೇಪರಿನ ನೋಟು, ಲೋಹದ ನಾಣ್ಯವನ್ನು ಮಾತ್ರ ಪಡೆಯುತ್ತಾರೆ.ಪ್ರತಿಷ್ಠಿತ ಸುಶಿಕ್ಷಿತ ಬಡಾವಣೆಗಳಲ್ಲಿ ವಾಸ ಮಾಡುವ ದಲಿತರು ತಮ್ಮ ಜಾತಿಗಳನ್ನು ಮುಚ್ಚಿಟ್ಟುಕೊಳ್ಳುತ್ತಾರೆ.ಮುಚ್ಚಿಟ್ಟುಕೊಳ್ಳಲು ಪಾಲಿಸುವ ನಿಯಮಗಳೆಂದರೆ-*ಮಾಂಸ, ಮೀನು ಮಾಡುವುದಿಲ್ಲ. ಮೊಟ್ಟೆ ಮಾಡಿದರೂ ಹುರಿಯದೆ, ಆಮ್ಲೆಟ್ ಮಾಡದೆ ಬೇಯಿಸಿಕೊಂಡು ತಿನ್ನುತ್ತಾರೆ. ಬಿರಿಯಾನಿಯಂತಹದನ್ನು ಹೊರಗಿನಿಂದ ತಂದು ಸದ್ದಿಲ್ಲದೇ, ಕಾಣದೇ ತಿಂದು ಮೊಟ್ಟೆ ಓಡುಗಳನ್ನೋ, ಇಲ್ಲ ಮೂಳೆ ತುಂಡುಗಳನ್ನೋ ಕೇರ್‌ಫುಲ್ ಆಗಿ ಪ್ಯಾಕ್ ಮಾಡಿ ಸಾಧ್ಯವಾದರೆ ತಾವೇ ಕಸದ ಬುಟ್ಟಿಗೆ ಹಾಕಿ ಬರುತ್ತಾರೆ.* ಮಾತನಾಡುವಾಗ ಉಚ್ಛಾರಣೆಯ (ವಿಶೇಷವಾಗಿ ಅಕಾರ- ಹಕಾರದ) ಬಗ್ಗೆ ವಿಪರೀತ ಎಚ್ಚರಿಕೆ ವಹಿಸುತ್ತಾರೆ.4 ಸುಶಿಕ್ಷಿತರ ವರ್ತನೆಯನ್ನು ಅಳವಡಿಸಿಕೊಳ್ಳುತ್ತಾರೆ. *ನೆಂಟರನ್ನು ಟಜಿ ಮಾಡುತ್ತಾರೆ. ಬಂದರೂ ಊರಿನಲ್ಲಿ ನಮ್ಮ ಲ್ಯಾಂಡ್ಸ್ ನೋಡಿಕೊಳ್ಳುವವರು ಎನ್ನುತ್ತಾರೆ.4 `ಥೂ ಉಪವಾಸನಾದ್ರೂ ಇದ್ದೇನೂ, ವಲ್ಮಾದಿಗರ ಮನೇಲಿ ಕೆಲ್ಸ ಮಾಡಲ್ಲ' ಎಂದು ಮನೆಗೆಲಸಕ್ಕೆ ಬರುವವರು ಹೇಳಿದರೆ ಉಗುಳು ನುಂಗಿಕೊಳ್ಳುತ್ತಾರೆ.4ಇಂಗಿನ ನಾತಕ್ಕೆ ಸೆಡ್ಡುಹೊಡೆಯುವ ಬೆಳ್ಳುಳ್ಳಿ ಒಗ್ಗರಣೆಯ ವಾಸನೆ ಬಂದಾಗ ನೆರೆ ಮನೆಯ ಬ್ರಾಹ್ಮಣರು ಬಂದು `ಏನು, ಏನದು ಬೆಳ್ಳುಳ್ಳಿ ವಾಸನೆ. ಮಾಂಸ ಮಾಡುತ್ತೀರ?' ಎಂದು ರಾಜಾರೋಷವಾಗಿ ಕೇಳಿದರೆ, `ಶೀತಕ್ಕೆ ರಸಂ ಮಾಡಿದ್ದೇವೆ' ಎಂದು ವಿನೀತರಾಗಿ ಹೇಳುತ್ತಾರೆ.*ಬೇರೆ ಜಾತಿಯವರ ಮನೆಗೆ ದಲಿತರು ಹೋದಾಗ ಅವರನ್ನು ಮನೆಯ ಯಾವ ಭಾಗದವರೆಗೆ ಕರೆತರಬೇಕು, ತಿನ್ನಲು ಹೇಗೆ ಕೊಡಬೇಕೆಂದು ಕಣ್ಣನೋಟ, ಸೂಕ್ಷ್ಮಸನ್ನೆಗಳಲ್ಲೇ ಸೂಚಿತವಾಗುತ್ತದೆ.ಕಾನೂನಿನ ಮುಂದೆ ಎಲ್ಲರೂ ಸಮಾನರೆಂಬ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರೆದುರಿಗೆ ಕಟಕಟೆಯಲ್ಲಿ ಸಾಕ್ಷಿಗಳ ಕೈಲಿ `ದೇವರ ಮೇಲೆ ಪ್ರಮಾಣ ಮಾಡಿ ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನಲ್ಲದೇ ಬೇರೇನೂ ಹೇಳುವುದಿಲ್ಲ' ಎಂದು ಹೇಳಿಸುತ್ತಾರೆ. ದೇವರ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಅಂಬೇಡ್ಕರ್ ರಚಿಸಿದ ಈ ನಾಡಿನ ಸಂವಿಧಾನದ ಮೇಲೆ ಅಥವಾ ಗಾಂಧೀಜಿಯವರ `ನನ್ನ ಆತ್ಮಕತೆ ಅಥವಾ ಸತ್ಯಾನ್ವೇಷಣೆ'ಯ ಮೇಲೆ ಕೈಯಿಟ್ಟು `ನಾನು ಈ ಮೇಲೆ ಹೇಳಿರುವುದೆಲ್ಲ ಸತ್ಯ, ಸತ್ಯವಲ್ಲದೇ ಮತ್ತೇನೂ ಅಲ್ಲ. ಹಾಗೂ ಇದು ಎಂದೋ...... ಒಂದು ದಿನ ಅಪ್ಪಟ ಸುಳ್ಳಾಗಲಿ' ಎಂಬ ಆಶಯದೊಂದಿಗೆ ಪ್ರಮಾಣ ಮಾಡಿ ಹೇಳುತ್ತೇನೆ.ಸಂವಾದಕ್ಕೆ ಆಹ್ವಾನ

ಜಾತಿಯನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಪ್ರಾರಂಭಿಸಲಾಗಿರುವ ಜಾತಿ ಸಂವಾದದಲ್ಲಿ ಭಾಗವಹಿಸಲು ಓದುಗರಿಗೆ ಮುಕ್ತ ಅವಕಾಶ ಇದೆ. ಬೇರೆಬೇರೆ ಸಮುದಾಯಗಳಿಗೆ ಸೇರಿರುವ ಮತ್ತು ಭಿನ್ನ ವಿಚಾರಧಾರೆಗಳನ್ನು ಹೊಂದಿರುವವರು ಸ್ವಂತ ಅನುಭವ ಇಲ್ಲವೆ ಕಣ್ಣಾರೆ ಕಂಡದ್ದನ್ನು ಆದರಿಸಿ ಪ್ರತಿಕ್ರಿಯಿಸಬಹುದು. ಓದುಗರಿಗೆ ಅನುಕೂಲವಾಗಲೆಂದು ನಾವು ಪ್ರತಿವಾರ ಕೆಲವು ಮುಖ್ಯ ಪ್ರಶ್ನೆಗಳನ್ನು ಮುಂದಿಡುತ್ತೇವೆ. ಇದರ ಮೂಲಕವೇ ಸಂವಾದವನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಉದ್ದೇಶ. ಈ ವಾರದ ಪ್ರಶ್ನೆಗಳು ಹೀಗಿವೆ:

-ಜಾತಿ ನಿರ್ಮೂಲನೆಗೆ ಅಂತರ್ಜಾತಿ ವಿವಾಹಗಳು ಪರಿಹಾರವಾಗಬಲ್ಲದೇ? ಅಂತರ್ಜಾತಿ ವಿವಾಹಗಳ ವಿಷಯದಲ್ಲಿ ನಿಮ್ಮ ಅನುಭವಗಳೇನು?

4ನಿಮ್ಮ ಪ್ರತಿಕ್ರಿಯೆಯನ್ನು ಅಂಚೆ ಅಥವಾ ಇಮೇಲ್ ಮೂಲಕ ಡಿಸೆಂಬರ್ 28 ರ ಒಳಗೆ ಕಳುಹಿಸಬಹುದು. ವಿಳಾಸ: `ಸಂಪಾದಕರು, `ಜಾತಿ ಸಂವಾದ' ವಿಭಾಗ, 75 ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು -560001' ಇಮೇಲ್; jathisamvada@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry